ಮಂಗಳವಾರ, ಆಗಸ್ಟ್ 3, 2021
27 °C

ವರದಿಯನ್ವಯ ಕ್ರಮ ಜರುಗಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಮಳೆ ಬಂದು ಸಾರ್ವಜನಿಕರಿಗೆ ತೊಂದರೆಯಾದಾಗ ಬಿ.ಬಿ.ಎಂ.ಪಿ.ಯ ಆಯುಕ್ತರಿಂದ ಹಿಡಿದು ಸಚಿವರು ‘ರಾಜಕಾಲುವೆಯನ್ನು ಎಷ್ಟೇ ಪ್ರಭಾವಶಾಲಿಗಳು ಒತ್ತುವರಿ ಮಾಡಿದ್ದರೂ ಅದನ್ನು ತೆರವುಗೊಳಿಸಿ ಚರಂಡಿಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡುವುದಾಗಿ’ ಹೇಳುತ್ತಲೇ ಇರುತ್ತಾರೆ.ಈ ಮಾತುಗಳನ್ನು ಬೆಂಗಳೂರು ನಗರದ ನಾಗರಿಕರು ಕೇಳಿ ಕೇಳಿ ಕಿವಿಗಳು ತೂತಾಗಿರುತ್ತವೆ.  ರಾಜ್ಯ ಸರ್ಕಾರಕ್ಕೆ ರಾಜಕಾಲುವೆ ಒತ್ತುವರಿ ಬಗ್ಗೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವವರ  ವಿವರಗಳು ಬೇಕಾದರೆ ಕೈಗನ್ನಡಿಯಂತಿರುವ ಎ. ಟಿ. ರಾಮಸ್ವಾಮಿರವರ ವರದಿಯನ್ನು ಸದನದಲ್ಲಿ ಮಂಡಿಸಿ ಆ ವರದಿ ಆಧಾರದ ಮೇಲೆ ಕ್ರಮ ಜರುಗಿಸಬಹುದು. ವಾಸ್ತವವಾಗಿ ನಗರದಲ್ಲಿ ನೂರಾರು ಕಿ.ಮೀ.ಗಳ ರಾಜಕಾಲುವೆ ಅನೇಕ ಕಡೆಗಳಲ್ಲಿ ಅತ್ಯಂತ ಗಣ್ಯರಿಂದ ಒತ್ತುವರಿಯಾಗಿರುತ್ತದೆ.ಮಳೆ ಬಂದು ಅಪಾಯವಾದಾಗ ಆವೇಶದ ಹೇಳಿಕೆಗಳನ್ನು ಕೊಡುವ ಸಂದರ್ಭದಲ್ಲಿ ಇವರ ಹಿಂದೆಯೇ ಇಂತಹ ಜನರು ಅಲ್ಲಿಯೇ ಇರುತ್ತಾರೆ. ಎ. ಟಿ. ರಾಮಸ್ವಾಮಿ ವರದಿಯನ್ನು ಸರ್ಕಾರ ಒಪ್ಪಿಕೊಂಡು ಅಗತ್ಯ ಕ್ರಮ ಕೈಗೊಂಡರೆ ಬೆಂಗಳೂರಿಗೆ ಆಗಬಹುದಾದ ಅಪಾಯಗಳನ್ನು ಶಾಶ್ವತವಾಗಿ ತಪ್ಪಿಸಬಹುದು. ತಂತ್ರಜ್ಞಾನ ಇಷ್ಟೆಲ್ಲಾ ಮುಂದುವರೆದಿದ್ದರೂ ಬಿ.ಬಿ.ಎಂ.ಪಿ. ಕಚೇರಿಯಲ್ಲಿ  ನಗರದ ರಾಜಕಾಲುವೆಯ ನೀಲನಕ್ಷೆ ಸಿದ್ಧವಿರುವುದಿಲ್ಲ. ಮಾತನಾಡುವ ಮೊದಲು ರಾಜಕಾಲುವೆಯ ನೀಲನಕ್ಷೆಯನ್ನು ಸಿದ್ಧಪಡಿಸಿ ಎಲ್ಲೆಲ್ಲಿ ಇದಕ್ಕೆ ತಡೆಗೋಡೆಗಳನ್ನು ನಿರ್ಮಿಸಬೇಕು. ಎಷ್ಟು ಕಡೆಗಳಲ್ಲಿ ಈ ಚರಂಡಿ ನೀರಿನಿಂದ ವಿದ್ಯುತ್ ಉತ್ಪಾದಿಸಬಹುದು. ಅಥವಾ ನೀರನ್ನು ಶುದ್ಧೀಕರಿಸಿ ಬೇರೆ ಬೇರೆ ಉದ್ದೇಶಗಳಿಗೆ ನೀಡಬಹುದು ಎನ್ನುವಂತಹ ಸಮಗ್ರವಾದ ಯೋಜನೆಯನ್ನು ಸಿದ್ಧಪಡಿಸಬೇಕು. ಇಲ್ಲದಿದ್ದರೆ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವಂತೆ ಪ್ರಯೋಜನಕ್ಕೆ ಬರದ ತೇಪೆ ಕೆಲಸಗಳು ನಡೆಯುತ್ತಲೇ ಇರುತ್ತವೆ.ಬಾಪೂಜಿ ನಗರದ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಬಂದಿರುವ ದುಃಸ್ಥಿತಿಯನ್ನು ಕಂಡಾಗ ಮನಸ್ಸಿಗೆ ನೋವಾಗುತ್ತದೆ. ಅಲ್ಲಿನ ಹಿರಿಯ ನಾಗರಿಕರನ್ನು ಚುನಾಯಿತ ಪ್ರತಿನಿಧಿಗಳನ್ನು ಸಭೆ ಸೇರಿಸಿ ಅಗತ್ಯವಾದರೆ ಇಡೀ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಿ ಪುನರ್ ನಿರ್ಮಾಣ ಮಾಡುವುದು ಅತ್ಯಂತ ಸೂಕ್ತವಾಗಿರುತ್ತದೆ. ಕಾಲಕಾಲಕ್ಕೆ ಅನೇಕ ದೇವಾಲಯಗಳು ಪರಿಸ್ಥಿತಿಯ ಹಿನ್ನಲೆಯಲ್ಲಿ ಪುನರ್ ನಿರ್ಮಾಣವಾಗಿರುತ್ತದೆ. ಈ ದೇವಾಲಯದ ವಿಚಾರದಲ್ಲಿ ಬಿ.ಬಿ.ಎಂ.ಪಿ. ನಡೆಸುತ್ತಿರುವ ತಡೆಗೋಡೆ ಕಾಮಗಾರಿಗಳು ತಿಪ್ಪೆ ಸಾರಿಸುವ ಕೆಲಸವಾಗುತ್ತದೇ ಹೊರತು ಯೋಜನಾ ಬದ್ಧವಾದಂತಹ ಕಾಮಗಾರಿಯಾಗುವುದಿಲ್ಲ.ಇದರಿಂದ ದೇವಸ್ಥಾನದ ಅಂದಕ್ಕೂ ಸ್ವಲ್ಪ ಮಟ್ಟಿಗೆ ಭಂಗವಾಗಿರುತ್ತದೆ. ಆದುದರಿಂದ ಬೆಂಗಳೂರು ನಗರದ ಅತ್ಯಂತ ಪುರಾತನವಾದ ಈ ದೇವಾಲಯದ ಪುನರ್ ನಿರ್ಮಾಣ ಕಾರ್ಯದ ಚಿಂತನೆ ನಡೆಸುವುದು ಈಗ ಸಕಾಲಿಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.