ಭಾನುವಾರ, ಜೂನ್ 13, 2021
23 °C

ವರಿಷ್ಠರ ಒತ್ತಡ, ಬಜೆಟ್ ಸುಸೂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಗೆ ಬಜೆಟ್ ಮಂಡಿಸಲು ಹಾದಿ ಸುಗಮ ಮಾಡಿರುವ ಯಡಿಯೂರಪ್ಪ ಬಣ, ನಾಯಕತ್ವ ಬದಲಾವಣೆ ಕುರಿತಾದ ತಮ್ಮ ಬಿಗಿ ನಿಲುವಿನಲ್ಲಿ ಯಾವ ವ್ಯತ್ಯಾಸವೂ ಇಲ್ಲ ಎಂದು ಹೇಳಿದೆ. ಆದರೆ, ಸದ್ಯಕ್ಕೆ ತಮ್ಮ ರೆಸಾರ್ಟ್ ವಾಸ್ತವ್ಯವನ್ನು ರದ್ದು ಮಾಡಿದ್ದು, ಬಜೆಟ್ ಮಂಡನೆ ವೇಳೆ ಸದನದಲ್ಲಿ ಹಾಜರಿರಲು ತೀರ್ಮಾನಿಸಿದೆ.ತಮಗೆ ಸೂಕ್ತ ಸ್ಥಾನಮಾನ ನೀಡಲು 48 ಗಂಟೆಗಳ ಗಡುವು ವಿಧಿಸಿ, ಬೆಂಬಲಿಗ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದ ಯಡಿಯೂರಪ್ಪ ಅವರ ಒತ್ತಡ ತಂತ್ರಕ್ಕೆ ಪಕ್ಷದ ಹೈಕಮಾಂಡ್ ಬಗ್ಗದ ಕಾರಣ ಅವರಿಗೆ  ತೀವ್ರ ಹಿನ್ನಡೆ ಆದಂತಾಗಿದೆ. 
ಇಂದು ಬಜೆಟ್

ಬೆಂಗಳೂರು: ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬುಧವಾರ ಬೆಳಿಗ್ಗೆ 11 ಗಂಟೆಗೆ 2012-13ನೇ ಸಾಲಿನ ಮುಂಗಡ ಪತ್ರವನ್ನು ವಿಧಾನ ಸಭೆಯಲ್ಲಿ ಮಂಡಿಸಲಿದ್ದಾರೆ.ವಿಧಾನ ಸಭೆಯಲ್ಲಿ ಮುಖ್ಯಮಂತ್ರಿಗಳು ಬಜೆಟ್ ಓದಲು ಶುರು ಮಾಡುತ್ತಿದ್ದಂತೆಯೇ ವಿಧಾನ ಪರಿಷತ್‌ನಲ್ಲಿ ಸಭಾ ನಾಯಕರು ಬಜೆಟ್‌ನ ಪ್ರತಿಯನ್ನು ಮಂಡಿಸಲಿದ್ದಾರೆ.

ಸಂಘ ಪರಿವಾರದ ಪ್ರಮುಖರು ಮತ್ತು ಪಕ್ಷದ ರಾಷ್ಟ್ರೀಯ ಮುಖಂಡರ ಸೂಚನೆ ಮೇರೆಗೆ ಯಡಿಯೂರಪ್ಪ ಅವರು ರೆಸಾರ್ಟ್ ವಾಸ್ತವ್ಯವನ್ನು ಅಂತ್ಯಗೊಳಿಸಲು  ತೀರ್ಮಾ ನಿಸಿದ್ದಾರೆ. ವರಿಷ್ಠರ ಜತೆ ಮಾತುಕತೆ ನಡೆಸಲು ಯಡಿಯೂರಪ್ಪ ಅವರಲ್ಲದೆ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶೋಭಾ ಕರಂದ್ಲಾಜೆ ಸೇರಿದಂತೆ ಇನ್ನೂ ಕೆಲ ಪ್ರಮುಖರು ಒಂದೆರಡು ದಿನಗಳಲ್ಲಿ ದೆಹಲಿಗೆ ತೆರಳಲಿದ್ದಾರೆ.`ರಾಜ್ಯಸಭಾ ಚುನಾವಣೆ ಸಂಬಂಧ ಪಕ್ಷದ ರಾಷ್ಟ್ರೀಯ ಮುಖಂಡರ ನಡುವೆ ಮನಸ್ತಾಪ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾವು ಬೆಂಗಳೂರಿಗೆ ಬಂದು ಮಾತುಕತೆ ನಡೆಸಲು ಸಾಧ್ಯವಾಗುತ್ತಿಲ್ಲ. ನೀವೇ ದೆಹಲಿಗೆ ಬನ್ನಿ~ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಮುಖಂಡ ಅರುಣ್ ಜೇಟ್ಲಿ ಅವರು ಯಡಿಯೂರಪ್ಪ ಅವರನ್ನು ಕೋರಿದರು.ಇದಕ್ಕೆ ಪ್ರಾರಂಭದಲ್ಲಿ ಅವರು ಒಪ್ಪಿರಲಿಲ್ಲ. ನಂತರ ಆರ್‌ಎಸ್‌ಎಸ್ ಪ್ರಮುಖರು ಮಧ್ಯಸ್ಥಿಕೆ ವಹಿಸಿ ಅವರನ್ನು ಒಪ್ಪಿಸಿದ್ದು, ಆದಷ್ಟು ಬೇಗ ಅವರು ದೆಹಲಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಕುರಿತು ರೆಸಾರ್ಟ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಬೆಂಬಲಿಗರ ಸಭೆಯಲ್ಲಿ ಚರ್ಚಿಸಲಾಗಿದೆ. ಶಾಸಕರು ಒಪ್ಪಿದ ನಂತರವೇ ಯಡಿಯೂರಪ್ಪ ಅವರು ಮಾತುಕತೆ ಸಲುವಾಗಿ ದೆಹಲಿಗೆ ತೆರಳಲು ತೀರ್ಮಾನಿಸಿದರು ಎಂದು ಗೊತ್ತಾಗಿದೆ.ಬಜೆಟ್ ಅಧಿವೇಶನದಲ್ಲಿ ಭಾಗವಹಿಸಲು ನಿರ್ಧರಿಸಿದ ನಂತರ ಕೆಲವರು ರಾತ್ರಿಯೇ ರೆಸಾರ್ಟ್ ಖಾಲಿ ಮಾಡಿದರು. ಇನ್ನು ಕೆಲವರು ಬುಧವಾರ ರೆಸಾರ್ಟ್‌ನಿಂದ ನೇರವಾಗಿ ವಿಧಾನಸಭೆ ಅಧಿವೇಶನಕ್ಕೆ ಬಸ್‌ನಲ್ಲಿ ಬರಲು ತೀರ್ಮಾನಿಸಿದರು. `ಇನ್ನು ಮುಂದೆ ರೆಸಾರ್ಟ್ ರಾಜಕಾರಣ ಬೇಡ. ಅಗತ್ಯ ಬಿದ್ದಾಗ ರೇಸ್‌ಕೋರ್ಸ್ ರಸ್ತೆಯ ನಮ್ಮ ಮನೆಯಲ್ಲೇ ಸೇರೋಣ~ ಎಂದು ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ತಿಳಿಸಿದ್ದಾರೆ. 

ಬಜೆಟ್ ಮಂಡನೆಯ ಮುನ್ನಾ ದಿನವಾದ ಮಂಗಳವಾರ ಸಿಎಂ ಡಿ.ವಿ.ಸದಾನಂದಗೌಡ ಕಳೆದ ಸಾಲಿನ ಬಜೆಟ್ ಅಂಶಗಳತ್ತ ಕಣ್ಣಾಡಿಸಿದರು.  -ಪ್ರಜಾವಾಣಿ ಚಿತ್ರ

`ಯಡಿಯೂರಪ್ಪ ಜತೆ ವರಿಷ್ಠರು ನಿರಂತರ ಸಂಪರ್ಕದಲ್ಲಿದ್ದು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ಸಂಖ್ಯಾಬಲ ಸೇರಿದಂತೆ ಯಡಿಯೂ ರಪ್ಪನವರ ಶಕ್ತಿ ಪಕ್ಷಕ್ಕೆ ಮನವರಿಕೆಯಾಗಿದೆ. ಸದ್ಯದಲ್ಲೇ ಎಲ್ಲವನ್ನೂ ಬಗೆಹರಿಸಲಾಗುವುದು ಎಂದು ವರಿಷ್ಠರು ಹೇಳಿದ್ದಾರೆ~ ಎಂದು ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ತಿಳಿಸಿದರು.ಆದರೆ, ಅಧಿವೇಶನ ಮುಗಿಯುವವರೆಗೂ ಈ ನಿಟ್ಟಿನಲ್ಲಿ ವರಿಷ್ಠರು ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. `ಅಧಿವೇಶನ ನಂತರ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು. ಹೊಸ ನಾಯಕನನ್ನು ಆಯ್ಕೆ ಮಾಡಬೇಕು~ ಎಂಬ ತಮ್ಮ ಬೇಡಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ ಎಂದರು.ಯಡಿಯೂರಪ್ಪ ಅವರೇ ಹೇಳಿರುವಂತೆ ಅವರಿಗೆ 65 ಶಾಸಕರ ಬೆಂಬಲ ಇದೆ. ಅಗತ್ಯ ಬಿದ್ದರೆ ಅವರು ಸಹಿಯುಳ್ಳ ಪಟ್ಟಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಈ ಮಾಹಿತಿಯನ್ನು ಪಕ್ಷದ ಹೈಕಮಾಂಡ್‌ಗೂ ರವಾನಿಸಲಾಗಿದೆ.ಬಿಎಸ್‌ವೈಗೆ ಸೂಚನೆ: ಎಲ್ಲ ಶಾಸಕರನ್ನು ರೆಸಾರ್ಟ್‌ನಿಂದ `ಬಿಡುಗಡೆ~ ಮಾಡುವಂತೆ ಮಾತುಕತೆಗೂ ಮುನ್ನ ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚನೆ ನೀಡಿದ್ದರು. ಮೊದಲು ಬಜೆಟ್ ಅಧಿವೇಶನದಲ್ಲಿ ಭಾಗವಹಿಸಬೇಕು.ನಂತರ ರಾಜ್ಯಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಬಿ.ಜೆ.ಪುಟ್ಟಸ್ವಾಮಿ ಅವರಿಗೆ ನಾಮಪತ್ರ ವಾಪಸ್ ಪಡೆಯಲು ಸೂಚಿಸಬೇಕು ಎಂದೂ ಯಡಿಯೂರಪ್ಪ ಅವರಿಗೆ ವರಿಷ್ಠರು ಕಟ್ಟಾಜ್ಞೆ ಮಾಡಿದ್ದಾರೆ.ಸಾಮೂಹಿಕ ರಾಜೀನಾಮೆ: ಒಂದು ವೇಳೆ ವರಿಷ್ಠರು ಯಡಿಯೂರಪ್ಪನವರ ಬೇಡಿಕೆಗೆ ಸ್ಪಂದಿಸದಿದ್ದರೆ 41 ಮಂದಿ ಶಾಸಕರು ರಾಜೀನಾಮೆ ನೀಡಲು ನಿರ್ಧರಿಸಿದ್ದರು ಎನ್ನಲಾಗಿದೆ. ಬಜೆಟ್ ಅಧಿವೇಶನಕ್ಕೆ ಒಂದು ಗಂಟೆ ಮೊದಲು ಸ್ಪೀಕರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಲು ತೀರ್ಮಾನಿಸಿದ್ದರು. ಆದರೆ, ಅಂತಹ ದುಡುಕಿನ ತೀರ್ಮಾನ ತೆಗೆದುಕೊಳ್ಳುವುದು ಬೇಡ ಎಂದು ವರಿಷ್ಠರು ಸಮಾಧಾನಪಡಿಸಿದ ನಂತರ ಅದನ್ನು ಸದ್ಯಕ್ಕೆ ಕೈಬಿಡಲಾಗಿದೆ.ಇದಕ್ಕೂ ಮುನ್ನ ಯಡಿಯೂರಪ್ಪ ಅವರು ಶಾಸಕರ ಜತೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. 65 ಶಾಸಕರ ಪೈಕಿ 41 ಮಂದಿ  ರಾಜೀನಾಮೆಗೆ ಒಲವು ತೋರಿಸಿದ್ದರು. ಅವರನ್ನು ಉದ್ದೇಶಿಸಿ ಯಡಿಯೂರಪ್ಪ ಅವರು, `ನನ್ನ ಪ್ರಾಣ ಒತ್ತೆ ಇಟ್ಟಾದರೂ ನಿಮ್ಮನ್ನು ಗೆಲ್ಲಿಸುತ್ತೇನೆ~ ಎಂದು ಅಭಯ ನೀಡಿದರು ಎನ್ನಲಾಗಿದೆ.ಶಕ್ತಿ ಪ್ರದರ್ಶನ: `ಯಡಿಯೂರಪ್ಪ ಪರ ಹೆಚ್ಚು ಶಾಸಕರು ಇಲ್ಲ~ ಎಂದು ಕುಹಕವಾಡುತ್ತಿದ್ದವರಿಗೆ ತಿರುಗೇಟು ನೀಡುವ ಉದ್ದೇಶದಿಂದ ರೆಸಾರ್ಟ್‌ಗೆ ಬಂದಿದ್ದಾಗಿ ಹೇಳಿದ ಸಚಿವ ಬಸವರಾಜ ಬೊಮ್ಮಾಯಿ, `ರೆಸಾರ್ಟ್‌ಗೆ ಬರುವುದಕ್ಕೆ ಯಡಿಯೂರಪ್ಪ ಅವರಿಗೆ ಇಷ್ಟ ಇರಲಿಲ್ಲ. ಶಾಸಕರ ಒತ್ತಾಯಕ್ಕೆ ಮಣಿದು ಒಪ್ಪಿದರು. ಈಗ ಬೆಂಬಲಿಗ ಶಾಸಕರ ಸಂಖ್ಯೆ 65ಕ್ಕೂ ಹೆಚ್ಚು ಇರುವುದು ಗೊತ್ತಾಗಿದೆ. ಇದನ್ನು ಅರ್ಥ ಮಾಡಿಕೊಂಡು ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು~ ಎಂದು ಆಗ್ರಹಪಡಿಸಿದರು.`ಪಕ್ಷದ ಹೈಕಮಾಂಡ್, ಯಡಿಯೂರಪ್ಪ ಜತೆ ನಿರಂತರ ಸಂಪರ್ಕದಲ್ಲಿದೆ. ಸದಾನಂದಗೌಡರೇ ಬಜೆಟ್ ಮಂಡಿಸಲು ಯಡಿಯೂರಪ್ಪ ಒಪ್ಪಿದ್ದು, ಬಜೆಟ್ ಮಂಡಿಸಿದ ಬಳಿಕ ವರಿಷ್ಠರು ಶಾಸಕರ ಅಭಿಪ್ರಾಯ ಸಂಗ್ರಹಿಸಬೇಕು. ಅದರ ಆಧಾರದ ಮೇಲೆ ಸೂಕ್ತ ತೀರ್ಮಾನಕ್ಕೆ ಬರಬೇಕು ಎಂಬುದು ತಮ್ಮ ಒತ್ತಾಯ ಎಂದೂ ಬೊಮ್ಮಾಯಿ ವಿವರಿಸಿದರು.ಸತೀಶ್ ಜತೆ ಚರ್ಚೆ: ಅಧಿವೇಶನದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದ ಜಗದೀಶ ಶೆಟ್ಟರ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಅವರನ್ನು ಭೇಟಿ ಮಾಡಿ ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದರು. ಭಿನ್ನಮತ ಬೇಡ ಎನ್ನುವ ಮನವಿಯನ್ನು ಸತೀಶ್ ಮಾಡಿದರು ಎನ್ನಲಾಗಿದೆ.ಆಚಾರ್ಯ ಸಂತಾಪ: ಅಧಿವೇಶನ ಬಹಿಷ್ಕರಿಸಿದ ಶಾಸಕರು ರೆಸಾರ್ಟ್‌ನಲ್ಲೇ ಡಾ.ವಿ.ಎಸ್.ಆಚಾರ್ಯ ಅವರಿಗೆ ಸಂತಾಪ ಸೂಚಿಸಿದರು.

`ಸ್ಥಾನ ತ್ಯಜಿಸಲು ಸಿದ್ಧ~

ನಂಜನಗೂಡು:  ಬಿ.ಎಸ್.ಯಡಿಯೂ ರಪ್ಪ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ನೀಡಲು ಹೈಕಮಾಂಡ್ ನಿರ್ಧರಿಸಿದರೆ  ಸ್ಥಾನ ಬಿಟ್ಟುಕೊಡಲು ಸಿದ್ಧ~ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಮಂಗಳವಾರ ಹೇಳಿದರು. ಪಟ್ಟಣ ಹೊರ ವಲಯದ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನದ ಬಳಿ ಕೋಟಿಲಿಂಗ ಸ್ಥಾಪನೆ ಸಂಬಂಧ ಸ್ಥಳ ಪರಿಶೀಲನೆಗೆ ಆಗಮಿಸಿದ್ದ  ಅವರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ತಿಳಿಸಿದರು.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.