ಸೋಮವಾರ, ಮೇ 23, 2022
26 °C
ವರುಣಾ ಗ್ರಾಮದಲ್ಲಿ ಐಜಿಪಿ ಜನಸಂಪರ್ಕ ಸಭೆ

ವರುಣಾ ಕ್ಷೇತ್ರದಲ್ಲಿ ಪೊಲೀಸರ ವೈಫಲ್ಯ: ದೂರು ನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವರುಣಾ ಕೆರೆಗೆ ತಡೆಗೋಡೆ ಹಾಕಿ, ರಸ್ತೆ ಡುಬ್ಬಗಳನ್ನು ಹಾಕಿ ಅಪಘಾತಗಳನ್ನು ತಗ್ಗಿಸಿ, ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಿ, ಗ್ರಾಮಗಳಲ್ಲಿ ಕದ್ದುಮುಚ್ಚಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟವನ್ನು ಬಯಲಿಗೆಳೆಯಿರಿ, ಪೊಲೀಸ್ ಠಾಣೆಯಲ್ಲಿ ಲಂಚ ತಪ್ಪಿಸಿ, ಕೋಟ್ಯಂತರ ರೂಪಾಯಿ ವಂಚಿಸಿದ ಗ್ರೀನ್ ಬಡ್ಸ್ ನಕಲಿ ಕಂಪೆನಿಯವರನ್ನು ಬಂಧಿಸಿ, ಜಮೀನು ಒತ್ತುವರಿ ತೆರವುಗೊಳಿಸಿ, ವರುಣಾ ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಮಾಡಿ...-ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಗದ್ದುಗೆಗೆ ಏರಿಸಿದ ವರುಣಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಿ.ನರಸೀಪುರ ರಸ್ತೆಯ ವರುಣಾ ಗ್ರಾಮದಲ್ಲಿ ಜಿಲ್ಲಾ ಪೊಲೀಸರು ಗುರುವಾರ ನಡೆಸಿದ ಮೊದಲ ಜನಸಂಪರ್ಕ ಸಭೆಯಲ್ಲಿ ಕೇಳಿಬಂದ ಜನರ ದುಃಖ ದುಮ್ಮಾನ, ದೂರುಗಳಿವು.`ತಿ. ನರಸೀಪುರ ರಸ್ತೆಯಲ್ಲಿ 3 ನಿಮಿಷಕ್ಕೆ ಒಮ್ಮೆ ಖಾಸಗಿ ಬಸ್‌ಗಳು ಸಂಚರಿಸುತ್ತವೆ. ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ. ವರುಣಾ ಕೆರೆಗೆ ವಾಹನಗಳು ಬೀಳುವುದು ಸಾಮಾನ್ಯವಾಗಿದೆ. ಇದನ್ನು ತಡೆಗಟ್ಟಲು ಕೆರೆ ಏರಿ ಮೇಲೆ ತಡೆಗೋಡೆ ಹಾಕಬೇಕು. ವಾಹನಗಳ ವೇಗ ತಗ್ಗಿಸಲು ರಸ್ತೆ ಡುಬ್ಬಗಳನ್ನು ಹಾಕಬೇಕು' ಎಂದು ಪಿಲ್ಲಹಳ್ಳಿ ಶಿವಣ್ಣ ಸಲಹೆ ನೀಡಿದರು.ವಾಜಮಂಗಲ ಗ್ರಾಮ ಪಂಚಾಯಿತಿ ಸದಸ್ಯ ದೊಡ್ಡೇಗೌಡ ತಮ್ಮ ಅಹವಾಲು ಸಲ್ಲಿಸಿ `ನರಸೀಪುರ ರಸ್ತೆಯಲ್ಲಿ ಮರಳು ಲಾರಿಗಳ ಓಡಾಟ ಹೆಚ್ಚಾಗಿದೆ. ಕೆಲವರು ರಾತ್ರೋರಾತ್ರಿ ಹಳ್ಳಿಗಳ ಮೇಲೆ ಕಳ್ಳಮಾರ್ಗದಲ್ಲಿ ಹೋಗುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ನೆಮ್ಮದಿಯಾಗಿ ಮಲಗಲು ಸಾಧ್ಯವಾಗುತ್ತಿಲ್ಲ. ಇದನ್ನು ಪೊಲೀಸರು ತಡೆಗಟ್ಟಬೇಕು' ಎಂದರು.ಪೊಲೀಸರಿಂದ ದಬ್ಬಾಳಿಕೆ: `ನರಸೀಪುರದಲ್ಲಿ ಪೊಲೀಸರು ಮರಳು ದಂದೆಕೋರರ ಜೊತೆ ಸೇರಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಗುಂಜಾನರಸಿಂಹಸ್ವಾಮಿ ದೇವಸ್ಥಾನ ಸುಂದರ ಪರಿಸರವಾಗಿದ್ದು, ಇದರ ಬಳಿ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿದೆ. ಮರಳು ದಂದೆ ತಡೆಗಟ್ಟಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಬೇಕು' ಎಂದು ತಿ. ನರಸೀಪುರದ ರಾಚಪ್ಪ ಒತ್ತಾಯಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ದಕ್ಷಿಣ ವಲಯ ಐಜಿಪಿ ಡಾ.ಕೆ. ರಾಮಚಂದ್ರರಾವ್ `ಕಾನೂನು ಪ್ರಕಾರವಾಗಿ ಮರಳು ಸಾಗಣೆ ಮಾಡಿದರೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಅನಧಿಕೃತವಾಗಿ ಮರಳು ಸಾಗಿಸಿದರೆ ಕೂಡಲೇ ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದರು.`ಖಾಸಗಿ ಆಗ್ರೊ ಕಂಪೆನಿಯವರು ಜನರಿಂದ ಹಣ ಸಂಗ್ರಹಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಹಣ ನೀಡದೆ ಪರಾರಿಯಾಗಿದ್ದಾರೆ. ಕಂಪೆನಿಗೆ 3 ಲಕ್ಷ ಸದಸ್ಯರು, 30 ಸಾವಿರ ಏಜೆಂಟರು ಹಣ ತೊಡಗಿಸಿದ್ದರು. ಇದೀಗ ಎಲ್ಲರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕೂಡಲೇ ತಲೆಮರೆಸಿಕೊಂಡವರನ್ನು ಬಂಧಿಸಬೇಕು' ಎಂದು ರಂಗಸಮುದ್ರದ ಶೇಖರ್ ಒತ್ತಾಯಿಸಿದರು.ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, `2008 ನೇ ಸಾಲಿನ ಸಾರ್ವತ್ರಿಕ ಚುನಾವಣೆ ವೇಳೆ ಪಕ್ಷದವರು ಅಕ್ರಮ ಮದ್ಯ-ಹಣ ಹಂಚುತ್ತಿದ್ದಾಗ ಅದನ್ನು ಪ್ರಶ್ನಿಸಿದ್ದೆ. ಆ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ರೇವಣಸಿದ್ದಯ್ಯ ಅವರ ಮೇಲೆ ಒತ್ತಡ ತಂದು ನನ್ನ ವಿರುದ್ಧವೇ 506 `ಬಿ' ಕೇಸು ದಾಖಲು ಮಾಡಿದರು. ಅನ್ಯಾಯದ ವಿರುದ್ಧ ಹೋರಾಟ ಮಾಡಿದ ನಾನು ಇದೀಗ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇನೆ. ಇದು ಯಾವ ನ್ಯಾಯ ಸ್ವಾಮಿ?' ಎಂದು ಪ್ರಶ್ನಿಸಿದರು. ಇನ್ನು ಮುಂದೆ  ಹೋರಾಟಗಾರರಿಗೆ ಸುಳ್ಳು ಕೇಸು ಹಾಕುವುದನ್ನು ನಿಲ್ಲಿಸಬೇಕು' ಎಂದು ಒತ್ತಾಯಿಸಿದರು.`ಮೈಸೂರು-ಚಿಕ್ಕಅಂಕನಹಳ್ಳಿ ರಸ್ತೆಯಲ್ಲಿ ಮಮತಾ ನಟರಾಜ್ ಎಂಬುವರು ಖಾಸಗಿ ಬಡಾವಣೆ ನಿರ್ಮಿಸಿದ್ದು 8 ಮೀಟರ್ ರಸ್ತೆಯನ್ನು ಅತಿಕ್ರಮಣ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧವೇ ಕ್ರಿಮಿನಲ್ ಕೇಸು ದಾಖಲು ಮಾಡಿದ್ದಾರೆ. ನನಗೆ ನ್ಯಾಯ ದೊರಕಿಸಿಕೊಡಿ' ಎಂದು ನಿವೃತ್ತ ಸರ್ಕಾರಿ ಉದ್ಯೋಗಿ ಎನ್. ಸಿದ್ದಯ್ಯ ಕಣ್ಣೀರಿಟ್ಟರು.ಜಿಲ್ಲಾ ಎಸ್ಪಿ ಅಭಿನವ ಖರೆ, ಎಎಸ್ಪಿ ಆರ್.ಬಿ. ಮೋಹನ್‌ರೆಡ್ಡಿ, ಡಿವೈಎಸ್ಪಿ ಟಿ. ಸಿದ್ದಪ್ಪ, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವಪ್ಪ, ವರುಣಾ ಮಹೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಕೀಳನಪುರ ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವಪ್ಪ, ದಕ್ಷಿಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ನೇಮಿರಾಜು, ಎಸ್‌ಐ ವೆಂಕಟೇಶಯ್ಯ ಉಪಸ್ಥಿತರಿದ್ದರು.`ಸಿದ್ದರಾಮಯ್ಯ ವಿರುದ್ಧ ಕುತಂತ್ರ ಸಲ್ಲದು'

ಮೈಸೂರು: `ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಭಿವೃದ್ಧಿ ವೇಗಕ್ಕೆ ತಡೆಯೊಡ್ಡುವ ಉದ್ದೇಶದಿಂದ ಸಮನ್ವಯ ಅಮಿತಿ ರಚಿಸಲು ಕೆಲವರು ಮುಂದಾಗಿದ್ದಾರೆ. ಇದರಿಂದ ಸರ್ಕಾರದಲ್ಲೇ ಒಡಕು ಉಂಟಾಗಿ ಮುಂದಿನ ಚುನಾವಣೆಯಲ್ಲಿ ಭಾರಿ ಹಾನಿ ಆಗಲಿದೆ' ಎಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆ ಸಂಚಾಲಕ ಹಂ. ಲಕ್ಕೇಗೌಡ ಹೇಳಿದರು.ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಮೇಲೆ ರಾಜ್ಯದಲ್ಲಿ ಅಭಿವೃದ್ಧಿ ಸಂಚಲನ ಉಂಟಾಗಿದೆ. `ಅಹಿಂದ' ಪರಿಕಲ್ಪನೆ ಗಟ್ಟಿಗೊಳ್ಳುತ್ತಿದೆ. ಆದರೆ, ಮಂತ್ರಿಗಿರಿ ಸಿಗದ ಕೆಲವರು ಮೂಲ ಕಾಂಗ್ರೆಸ್ಸಿಗರು ಮತ್ತು ವಲಸಿಗರು ಎಂದು ಭೇದ ಮಾಡುತ್ತಿದ್ದಾರೆ. ಸಮನ್ವಯ ಸಮಿತಿಯನ್ನು ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿಯೂ ರಚಿಸಿ ಸಿದ್ದರಾಮಯ್ಯ ಅವರಿಗೆ ಮೂಗುದಾರ ಹಾಕುತ್ತೇವೆ ಎಂದೆಲ್ಲ ಮಾಧ್ಯಮಗಳಲ್ಲಿ ಹೇಳಿಕೊಳ್ಳುವುದು ಸರಿಯಲ್ಲ ಎಂದರು.

ಹಿಂದೆ ನಡೆದ ಭ್ರಷ್ಟಾಚಾರ, ಅಕ್ರಮಗಳನ್ನು ಕೆಣಕಬಾರದು. ತನಿಖೆಗೆ ಒಳಪಡಿಸಬಾರದು ಎಂಬ ಉದ್ದೇಶದಿಂದ ಈ ಸಮನ್ವಯ ಸಮಿತಿ ರಚನೆ ಮಾಡುವ ಹುನ್ನಾರ ನಡೆದಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್ ಅವರು ಮುಖ್ಯಮಂತ್ರಿ ಹುದ್ದೆಗೆ ಯೋಗ್ಯರಾಗಿದ್ದಾರೆ. ಆದರೆ, ಅವರು ಚುನಾವಣೆಯಲ್ಲಿ ಪರಾಭವಗೊಂಡಿದ್ದರಿಂದ ಹಿನ್ನಡೆಯಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರನ್ನು ದೂರುವುದು ಎಷ್ಟು ಸರಿ? ಪರಮೇಶ್ವರ್ ಅವರ ಹೆಸರು ಮುಂದಿಟ್ಟುಕೊಂಡು ಕೆಲವರು ಸಮನ್ವಯ ಸಮಿತಿ ರಚನೆ ಅಥವಾ ಉಪ ಮುಖ್ಯಮಂತ್ರಿ ಹುದ್ದೆಗೆ ಕುತಂತ್ರ ನಡೆಸಿದ್ದಾರೆ. ಈ ರೀತಿಯ ಹುದ್ದೆಗಳು ಕಾಂಗ್ರೆಸ್‌ನ ಆಡಳಿತ ಅವಧಿಯಲ್ಲಿ ಎಂದೂ ಇರಲಿಲ್ಲ. ಈಗ ಏಕೆ ಬೇಕು? ಎಂದು ಅವರು ಪ್ರಶ್ನಿಸಿದರು.ಮೂಲ ಕಾಂಗ್ರೆಸ್ಸಿಗರು ಎಂದು ಹೇಳಿಕೊಳ್ಳುವವರು ಈ ರೀತಿ ದ್ವಂದ್ವ ಸೃಷ್ಟಿಸಿ ಪಕ್ಷಕ್ಕೆ ಹಾನಿ ತರಬಾರದು. ಇದರಲ್ಲಿ ಮೇಲ್ವರ್ಗದ ಕೆಲ ನಾಯಕರ ಕೈವಾಡವೂ ಇದೆ. ಹೈಕಮಾಂಡ್ ಇದನ್ನೆಲ್ಲ ಪರಿಶೀಲಿಸಿ ಅಭಿವೃದ್ಧಿಗೆ ಮಾತ್ರ ಮನ್ನಣೆ ನೀಡಬೇಕು ಎಂದು ಕೋರಿದರು.ವೇದಿಕೆಯ ಸದಸ್ಯರಾದ ಎಂ.ಜಿ. ಹರೀಶ್‌ಕುಮಾರ್, ಕೆ.ಎಂ. ಸುಬ್ಬೇಗೌಡ, ಬಿ.ಎಚ್. ಗೋವಿಂದೇಗೌಡ, ಜಿಲ್ಲಾ ನ್ಯಾಯಬೆಲೆ ಅಂಗಡಿಗಳ ಒಕ್ಕೂಟದ ಅಧ್ಯಕ್ಷ ಹಿನಕಲ್ ಮಾಯಪ್ಪ ಇದ್ದರು.

`ವರುಣಾ ಕ್ಷೇತ್ರಕ್ಕೆ ಶೀಘ್ರವೇ ಪೊಲೀಸ್ ಠಾಣೆ'

ತಿ.ನರಸೀಪುರ ರಸ್ತೆಯಲ್ಲಿ ಅಕ್ರಮ ಮರಳು ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ವರುಣಾ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿದೆ. ಜೂಜಾಟ ನಡೆಯುತ್ತಿದೆ. ಇವೆಲ್ಲಕ್ಕೆ ಕಡಿವಾಣ ಹಾಕಬೇಕಾದರೆ ವರುಣಾ ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಹಾಕಬೇಕು ಎಂದು ಸಭೆಯಲ್ಲಿ ಭಾಗವಹಿಸಿದ್ದ ಹಲವರು ಒತ್ತಾಯಿಸಿದರು.`ಮುಖ್ಯಮಂತ್ರಿ ತವರು ಕ್ಷೇತ್ರ ಇದೇ ಆಗಿರುವುದರಿಂದ ಎಲ್ಲೆಲ್ಲಿ ಠಾಣೆಗಳು ಆಗಬೇಕು ಎಂಬುದನ್ನು ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಿ' ಎಂದು ಜಿಲ್ಲಾ ಪಂಚಾಯತ್ ಸದಸ್ಯ ಸಿದ್ದೇಗೌಡ ಹೇಳಿದರು.`ವರುಣಾ ಗ್ರಾಮದಲ್ಲಿ ಪೊಲೀಸ್ ಠಾಣೆಗಾಗಿಯೇ ಗ್ರಾಮ ಪಂಚಾಯಿತಿ ವತಿಯಿಂದ 10 ಗುಂಟೆ ಜಮೀನನ್ನು ಮೀಸಲಿಡಲಾಗಿದೆ. ಇದನ್ನು ಇಲಾಖೆ ಸದುಪಯೋಗ ಮಾಡಿಕೊಳ್ಳಬಹುದು' ಎಂದು ವರುಣಾ ಗ್ರಾಮ ಪಂಚಾಯಿತಿ ಸದಸ್ಯ ಡಿ.ಪಿ. ಶ್ರೀಧರ್ ತಿಳಿಸಿದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ಎಸ್ಪಿ ಅಭಿನವ ಖರೆ `ವರುಣಾ ಗ್ರಾಮ ಇಲ್ಲವೇ ಮೇಗಳಾಪುರದಲ್ಲಿ ಹೊಸ ಠಾಣೆ ಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. 2-3 ತಿಂಗಳಲ್ಲಿ ಮೇಗಳಾಪುರ ಹೊರಠಾಣೆ ಮೇಲ್ದರ್ಜೆಗೆ ಏರಿಸಲಾಗುವುದು. ಇಲ್ಲವೇ, ಹೊಸ ಠಾಣೆಗೆ ಅನುಮತಿ ದೊರಕಲಿದೆ' ಎಂದು ಭರವಸೆ ನೀಡಿದರು.`ದೂರು ತೆಗೆದುಕೊಳ್ಳಲು ರೂ 50-100 ಲಂಚ'

`ಯಾವುದೇ ಸಮಸ್ಯೆ ಕುರಿತು ದೂರು ನೀಡಲು ಹೋದರೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೂ 50-100 ಲಂಚ ನೀಡಲೇಬೇಕು. ಇಲ್ಲವಾದಲ್ಲಿ ದೂರು ಸ್ವೀಕರಿಸುವುದಿಲ್ಲ. ಗ್ರಾಮ ಪಂಚಾಯಿತಿ ಇಲ್ಲವೇ ತಾಲ್ಲೂಕು ಪಂಚಾಯಿತಿ ಸದಸ್ಯರ ಒತ್ತಾಯದ ಮೇರೆಗೆ ದೂರು ಸ್ವೀಕರಿಸುತ್ತಿದ್ದಾರೆ. ಇದರಿಂದ ಸಾಮಾನ್ಯ ಜನತೆಗೆ ನ್ಯಾಯ ದೊರಕುತ್ತಿಲ್ಲ' ಎಂದು ವರುಣಾ ಗ್ರಾಮದ ಕುಮಾರ ಅಧಿಕಾರಿಗಳ ಎದುರು ಬಹಿರಂಗವಾಗಿಯೇ ದೂರಿದರು. ಇದರಿಂದ ವೇದಿಕೆಯಲ್ಲಿದ್ದ ಪೊಲೀಸ್ ಅಧಿಕಾರಿಗಳಿಗೆ ಮುಜುಗರವಾಯಿತು.

`ಜನಸಂಪರ್ಕ ಸಭೆ ಮುಂದುವರಿಕೆ'

`ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಜನಸಂಪರ್ಕ ಸಭೆಯನ್ನು ನಡೆಸಲಾಗಿದೆ. ಮುಂದೆ ಎಲ್ಲೆಡೆ ಜನಸಂಪರ್ಕ ಸಭೆಗಳನ್ನು ನಡೆಸಿ ಜನರಿಂದ ದೂರು, ಅರ್ಜಿಗಳನ್ನು ಸ್ವೀಕರಿಸಲಾಗುವುದು. ಜನರ ಸಹಕಾರ ಇಲ್ಲದೆ ಪೊಲೀಸರು ಯಾವುದೇ ಕೆಲಸ ಮಾಡಲು ಆಗುವುದಿಲ್ಲ. ಹಾಗಾಗಿ, ಜನರು ಪೊಲೀಸರಿಗೆ ಸಹಕಾರ ನೀಡಬೇಕು'

-ಡಾ.ಕೆ. ರಾಮಚಂದ್ರರಾವ್,

ಐಜಿಪಿ, ದಕ್ಷಿಣ ವಲಯ`ನಕಲಿ ಕಂಪೆನಿಗಳಲ್ಲಿ ಹಣ ತೊಡಗಿಸಬೇಡಿ'

`ಶೇ 11ಕ್ಕಿಂತ ಹೆಚ್ಚಿನ ಬಡ್ಡಿ ನೀಡುವ ಕಂಪೆನಿಗಳೆಲ್ಲಾ ನಕಲಿ ಕಂಪೆನಿಗಳು. ಹಣದ ಆಸೆಗೆ ನಕಲಿ ಕಂಪೆನಿಗಳಿಗೆ ಹೆಚ್ಚಿನ ಹಣ ತೊಡಗಿಸಿ ಮೋಸ ಹೋಗಬೇಡಿ. ಮರಳು ದಂಧೆ ಕಡಿವಾಣ ಹಾಕಲು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ರಸ್ತೆ ಡುಬ್ಬಗಳನ್ನು ಹಾಕಿ ಅಪಘಾತ ಪ್ರಮಾಣ ತಗ್ಗಿಸಲಾಗುವುದು. ಅಬಕಾರಿ ಇಲಾಖೆ ಸಹಾಯದೊಂದಿಗೆ ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು'

-ಅಭಿನವ ಖರೆ,

ಜಿಲ್ಲಾ ಎಸ್ಪಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.