ಜಲಪಾತಗಳ ತವರೂರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ ಸಾತೊಡ್ಡಿ ಜಲಪಾತ. ದಬ್ಬೆಸಾಲು ಹೊಳೆ ಇಲ್ಲಿ ಕ್ಲ್ಲಲು ಬಂಡೆಗಳ ಮಧ್ಯದಿಂದ 50 ಅಡಿ ಕೆಳಗೆ ಧುಮ್ಮಿಕ್ಕುವ ಕಾರಣ ಇದನ್ನು ದಬ್ಬೆಸಾಲು ಜಲಪಾತ ಎಂದೂ ಕರೆಯುತ್ತಾರೆ.

ವಾಹನ ನಿಲುಗಡೆ ಪ್ರದೇಶದಿಂದ ಸುಮಾರು 1 ಕಿ.ಮೀ. ಕಾಡು ಹಾದಿಯ ತಂಪಾದ ಪರಿಸರದಲ್ಲಿ ನಡಿಗೆಯೇ ಒಂದು ರೋಮಾಂಚಕ ಅನುಭವ ನೀಡುತ್ತದೆ. ಎಲ್ಲಿ ನೋಡಿದರೂ ಕಣ್ಣಿಗೆ ರಾಚುವ ವನಸಿರಿ, ಹಸಿರು ಸೀರೆಯುಟ್ಟಂತೆ ಮೈದುಂಬಿಕೊಂಡು ಕಂಗೊಳಿಸುವ ಬೆಟ್ಟಗಳ ಸಾಲು, ಮುಗಿಲೆತ್ತರಕ್ಕೆ ಪೈಪೋಟಿಯಂತೆ ಬೆಳೆದು ನಿಂತ ಹೆಮ್ಮರಗಳು, ಬಲಕ್ಕೆ ಕಾಳಿನದಿಯ ಹಿನ್ನೀರು.

ಇವುಗಳ ಮಧ್ಯೆ ಶ್ರುತಿ ಬೆರೆಸಿದಂತೆ ನೀರಿನ ಜುಳು ಜುಳು ಸದ್ದಿಗೆ ಜೀರುಂಡೆಗಳ ಗುಂಯ್ಗುಟ್ಟುವ ದನಿ, ಹಕ್ಕಿಗಳ ಚಿಲಿಪಿಲಿ ಗಾನವನ್ನು ಆಲಿಸುತ್ತ ನಡೆದರೆ ದಾರಿ ಸವೆದದ್ದೇ ಗೊತ್ತಾಗುವುದಿಲ್ಲ. ಜಲಪಾತದ ಸದ್ದು ಕಿವಿಗೆ ಹಿತವಾಗಿ ಹತ್ತಿರವಾದಂತೆ ಮೈಮನ ರೋಮಾಂಚನಗೊಳ್ಳುತ್ತದೆ.

ಜಲಪಾತದ ಜಲರಾಶಿಯ ವೈಭವ ಮುತ್ತಿನ ರಾಶಿಗಳಂತೆ ನೋಡುಗರನ್ನು ಪುಳಕಿತಗೊಳಿಸುತ್ತದೆ. ಸುತ್ತಮುತ್ತ ದಟ್ಟ ಅರಣ್ಯ, ಗಿಡ, ಮರ, ಬಳ್ಳಿ ಹೂವುಗಳ ಮೇಲೆ ಬೀಳುವ ಸೂರ್ಯನ ರಶ್ಮಿಯು ಕಲೆಗಾರನ ಕುಂಚಗಳಿಂದ ಕ್ಯಾನ್ವಾಸ್ ಮೇಲೆ ಚಿತ್ತಾರಗಳನ್ನು ಬಿಡಿಸಿದಂತೆ ಮೋಹಕವಾಗಿ ಕಂಗೊಳಿಸುತ್ತದೆ.

ವನ್ಯಜೀವಿಗಳ ತಾಣ, ಸಹ್ಯಾದ್ರಿ ಪರ್ವತಶ್ರೇಣಿ, ಸದಾ ಹರಿಯುವ ನದಿಗಳು, ರಮಣೀಯ ಜಲಪಾತಗಳು, ನಾನಾ ಜಾತಿಯ ಪ್ರಾಣಿ-ಪಕ್ಷಿಗಳು ಇವುಗಳ ಬಗ್ಗೆ ಕುರಿತು ಅಧ್ಯಯನ ನಡೆಸಲು ವಿದ್ಯಾರ್ಥಿಗಳಿಗೆ ಅನುಕೂಲವಾದ ಸ್ಥಳ, ಪ್ರವಾಸಿಗರಿಗೆ ಇದು ಒಂದು ಪ್ರಕೃತಿ ಚಿಕಿತ್ಸಾಲಯ.

ನಿಸರ್ಗದ ಮಧ್ಯೆ ಹಾಲು ನೊರೆಯಂತೆ ಭೋರ್ಗರೆದು ಮೇಲಿಂದ ಧುಮುಕುವ ನೀರು ಸಣ್ಣ ತಿರುವುಗಳಲ್ಲಿ ಕಲ್ಲು ಬಂಡೆಗಳ ಮಧ್ಯೆ ಹರಿದು ದಾಟಿ ಸಾಗುವಾಗ ಆಗಿರುವ ಬಂಡೆಗಳ ಬದಲಾವಣೆಗಳಂತೂ ನೋಡುಗರನ್ನು ವಿಸ್ಮಯಗೊಳಿಸುತ್ತದೆ. ಹರಿವ ನೀರಿನ ರಭಸಕ್ಕೆ ಬಂಡೆಗಳು ಸ್ವಾಭಾವಿಕವಾಗಿ ಸವೆದು ಅದ್ಭುತ ಕಲಾ ಲೋಕ ಸೃಷ್ಟಿಸಿವೆ.

ಸಾಮಾನ್ಯವಾಗಿ ಜಲಪಾತಗಳಿಗೆ ಜೀವಬರುವುದು ಮಳೆಗಾಲದಲ್ಲಿ. ಆದರೆ ಸಾತೊಡ್ಡಿಯಲ್ಲಿ ಮಾತ್ರ ವರ್ಷದುದ್ದಕ್ಕೂ ನೀರು ಬೀಳುತ್ತಲೇ ಇರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಉಂಬಳ (ಜಿಗಣೆ) ಕಾಟ. ಆದ್ದರಿಂದ ಈಗ ನೋಡುವುದೇ ಅನುಕೂಲಕರ.

ಇಷ್ಟೆಲ್ಲ ಸೊಬಗಿದ್ದರೂ ಪ್ರವಾಸೋದ್ಯಮ ಇಲಾಖೆ ಇತ್ತ ಹೆಚ್ಚು ಗಮನ ನೀಡಿಲ್ಲ. ಹೀಗಾಗಿ ಜಲಪಾತಕ್ಕೆ ಪ್ರವಾಸ ಮಾಡುವುದೆಂದರೆ ಪ್ರಯಾಸವೇ ಸರಿ. ಕಾರಣ ರಸ್ತೆಗಳು ಸರಿಯಾಗಿಲ್ಲ. ಕಾರಿನಲ್ಲಿ ಪಯಣಿಸಿದರೂ ಎತ್ತಿನ ಬಂಡಿಯಲ್ಲಿ ಪ್ರಯಾಣಿಸಿದ ಅನುಭವ ಆಗುತ್ತದೆ.

ಅದರಲ್ಲೂ ಗಣೇಶಗುಡಿಯಿಂದ ಸುಮಾರು 6 ಕಿ.ಮೀ. ದೂರ ಕಚ್ಚಾ ರಸ್ತೆಯಲ್ಲಿ ವಾಹನಗಳು ಸಾಗುವುದೇ ಕಷ್ಟಕರ. ಇಲ್ಲಿ ಪ್ರವಾಸಿಗರಿಗೆ ಯಾವ ತರಹದ ಅನುಕೂಲಗಳಿಲ್ಲ.

ಊಟ, ತಿಂಡಿ ಬೇಕಾದರೆ ಸ್ಥಳೀಯ ಭಟ್ಟರ ಮನೆಯಲ್ಲಿ ಮೊದಲೇ ತಿಳಿಸಬೇಕು. ಇಲ್ಲವಾದರೆ ತೆಗೆದುಕೊಂಡು ಹೋಗುವುದು ಒಳ್ಳೆಯದು.ಈ ಅವ್ಯವಸ್ಥೆ ಏನೇ ಇರಲಿ. ಜಲಪಾತ ಮಾತ್ರ ನಯನ ಮನೋಹರ. ಹೇಗೂ ಶಾಲೆಗೆ ರಜೆ. ಅದಕ್ಕಾಗಿ ಸೌಂದರ್ಯದ ಸೊಬಗ ಸವಿಯ ಬನ್ನಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.