ಸೋಮವಾರ, ಮೇ 23, 2022
30 °C
ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಸಮಸ್ಯೆಗಳ ಮಹಾಪೂರ!

ವರ್ಗಾವಣೆ ಮೊರೆ, ಕಿರುಕುಳ ವಿರುದ್ಧ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಗಾವಣೆ ಮೊರೆ, ಕಿರುಕುಳ ವಿರುದ್ಧ ರಕ್ಷಣೆ

ಬೆಂಗಳೂರು: ಬಹುಪಾಲು ಮಂದಿಗೆ ತಮ್ಮವರನ್ನು ನಿರ್ದಿಷ್ಟ ಸ್ಥಳಕ್ಕೆ ವರ್ಗಾವಣೆ ಮಾಡಿಸುವ ತವಕ. ಒಂದಷ್ಟು ಜನರಿಗೆ ನಿಗಮ, ಮಂಡಳಿಗಳಲ್ಲಿ ಗೂಟದ ಕಾರು ಹಿಡಿಯುವ ಬಯಕೆ. ಉಳಿದವರಿಗೆ ಕಿರುಕುಳ, ದೌರ್ಜನ್ಯದಿಂದ ಪಾರಾಗುವುದು, ವೈದ್ಯಕೀಯ ಚಿಕಿತ್ಸೆಗೆ ನೆರವು, ಪಿಂಚಣಿ, ಸರ್ಕಾರಿ ನೌಕರಿ ಮತ್ತಿತರ ಸವಲತ್ತು ಪಡೆಯುವ ಧಾವಂತ.ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆಸಿದ ಮೊದಲ ಅಧಿಕೃತ ಜನತಾ ದರ್ಶನದಲ್ಲಿ ಕಂಡು ಬಂದ ದೃಶ್ಯ. ರಾಜ್ಯದ ವಿವಿಧೆಡೆಯಿಂದ ಬಂದಿದ್ದ 500ಕ್ಕೂ ಹೆಚ್ಚು ಮಂದಿ ಜನತಾ ದರ್ಶನದಲ್ಲಿ ಪಾಲ್ಗೊಂಡು, ಮುಖ್ಯಮಂತ್ರಿಯವರ ಬಳಿ ಸಮಸ್ಯೆ ಹೇಳಿಕೊಂಡು ಪರಿಹಾರ ಪಡೆಯುವ ಪ್ರಯತ್ನ ಮಾಡಿದರು. ವೈಯಕ್ತಿಕ ತೊಂದರೆ ಹೇಳಿಕೊಂಡವರಿಗೆ ತಕ್ಷಣವೇ ಪರಿಹಾರ ದೊರಕಿಸುವ ಪ್ರಯತ್ನ ಮಾಡಿದ ಮುಖ್ಯಮಂತ್ರಿ, ಉಳಿದವರಿಂದ ಅರ್ಜಿ ಪಡೆದು, ಪರಿಶೀಲಿಸುವ ಭರವಸೆ ನೀಡಿ ಕಳುಹಿಸಿದರು.ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಜನತಾ ದರ್ಶನ ಆರಂಭಿಸಿದ ಮುಖ್ಯಮಂತ್ರಿಯವರು, 12.30ರವರೆಗೂ ಸಾರ್ವಜನಿಕರ ಅಹವಾಲು ಆಲಿಸಿದರು. ತುರ್ತು ಪರಿಹಾರ ದೊರಕಿಸುವ ಅನಿವಾರ್ಯತೆ ಕಂಡುಬಂದ ತಕ್ಷಣವೇ ಅಲ್ಲಿಂದಲೇ ಸಂಬಂಧಿಸಿದ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಅರ್ಜಿದಾರರ ಸಮಸ್ಯೆ ಪರಿಹರಿಸುವಂತೆ ಆದೇಶ ನೀಡಿದರು. ಕೆಲವು ಪ್ರಕರಣಗಳಲ್ಲಿ ಪರಿಹಾರ ದೊರಕಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆಯನ್ನೂ ನೀಡಿದರು.ವರ್ಗಾವಣಿ ಅರ್ಜಿ ಮಹಾಪೂರ: ಜನತಾ ದರ್ಶನಕ್ಕೆ ಬಂದಿದ್ದವರಲ್ಲಿ ಸುಮಾರು ಅರ್ಧದಷ್ಟು ಮಂದಿ ತಮಗೆ ಬೇಕಾದ ಸರ್ಕಾರಿ ಅಧಿಕಾರಿಗಳನ್ನು ನಿರ್ದಿಷ್ಟ ಹುದ್ದೆಗೆ ವರ್ಗಾವಣೆ ಮಾಡುವಂತೆ ಕೋರಿ ಅರ್ಜಿಗಳನ್ನು ಸಲ್ಲಿಸಿದರು. ಕೆಲವರು ಸಚಿವರು, ಶಾಸಕರ ಶಿಫಾರಸು ಪತ್ರಗಳನ್ನೂ ಹಿಡಿದು ಬಂದಿದ್ದರು. ಸರ್ಕಾರಿ ಅಧಿಕಾರಿಗಳ ಕುಟುಂಬದ ಸದಸ್ಯರೇ ಕೆಲವರು ಜನತಾ ದರ್ಶನಕ್ಕೆ ಬಂದು ತಮ್ಮವರನ್ನು ವರ್ಗಾವಣೆ ಮಾಡಿ ಎಂದು ಮನವಿ ಮಾಡಿದರು.ವರ್ಗಾವಣೆ ಅರ್ಜಿ ಹಿಡಿದು ಬಂದವರಲ್ಲಿ ಮೈಸೂರು ಜಿಲ್ಲೆಯವರು ಹೆಚ್ಚು ಸಂಖ್ಯೆಯಲ್ಲಿದ್ದರು. ಅವರನ್ನು ನೋಡುತ್ತಲೇ ಸಿದ್ದರಾಮಯ್ಯ ಅವರು, `ನೀನ್ಯಾಕೋ ಇಲ್ಲಿಗೆ ಬಂದಿದ್ದೀಯಾ?' ಎಂದು ಪ್ರಶ್ನಿಸಿದರು. `ಸುಮ್ನೆ ಬಂದಿದೀನಣ್ಣಾ. ಇದೊಂದು ವರ್ಗಾವಣೆ ಆಗಬೇಕಿತ್ತು' ಎಂದು ಅರ್ಜಿ ಸಲ್ಲಿಸಿದರು. ವರ್ಗಾವಣೆ ಅರ್ಜಿಗಳನ್ನು ಪಡೆದ ಮುಖ್ಯಮಂತ್ರಿ, `ನೋಡೋಣ' ಎಂದಷ್ಟೇ ಹೇಳಿದರು.ಸರ್ಕಾರಿ ನೌಕರಿ ನೀಡುವಂತೆಯೂ ಹಲವರು ಮುಖ್ಯಮಂತ್ರಿಯವರಿಗೆ ಅಹವಾಲು ಸಲ್ಲಿಸಿದರು. ವಯೋಮಿತಿ ಮತ್ತು ವಿದ್ಯಾರ್ಹತೆಯನ್ನು ಪರಿಶೀಲಿಸಿದ ಸಿದ್ದರಾಮಯ್ಯ, ಕೆಲವರಿಗೆ ಮನವಿಯನ್ನು ಪರಿಶೀಲಿಸುವ ಭರವಸೆ ನೀಡಿದರು. ವಯೋಮಿತಿ ಮೀರಿದವರು ಮತ್ತು ಶೈಕ್ಷಣಿಕ ಅರ್ಹತೆಯೇ ಇಲ್ಲದವರಿಗೆ ಸ್ವಯಂ ಉದ್ಯೋಗಕ್ಕೆ ಸಾಲ ನೀಡುವ ಭರವಸೆ ಇತ್ತರು.ಕಾಂಗ್ರೆಸ್ ಪಕ್ಷದ ಮುಖಂಡರ ಶಿಫಾರಸು ಪತ್ರಗಳನ್ನು ತಂದಿದ್ದ ಕೆಲವರು ನಿಗಮ, ಮಂಡಳಿಗಳಿಗೆ ತಮ್ಮನ್ನು ನೇಮಿಸುವಂತೆ ಒತ್ತಾಯಿಸಿದರು. `ನಿಗಮ, ಮಂಡಳಿಗಳ ನೇಮಕ ಸ್ವಲ್ಪ ತಡವಾಗುತ್ತೆ. ಆಗ ನೋಡೋಣ' ಎಂದು ಸಿದ್ದರಾಮಯ್ಯ ಕಾರ್ಯಕರ್ತರನ್ನು ಸಮಾಧಾನಿಸಿದರು.ಅಂಗವಿಕಲರಿಗೆ ಸ್ಪಂದನೆ: ಜನತಾ ದರ್ಶನಕ್ಕೆ ಬಂದಿದ್ದ ಅಂಗವಿಕಲರಿಗೆ ಸ್ಥಳದಲ್ಲೇ ಪರಿಹಾರ ದೊರಕಿಸಲು ಮುಖ್ಯಮಂತ್ರಿಯವರು ಪ್ರಯತ್ನ ಮಾಡಿದರು. ನಗರದ ಸುಮಂತ್ ಮತ್ತು ಗೌರಮ್ಮ ಎಂಬ ಅಂಧ ದಂಪತಿ ಉದ್ಯೋಗ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಅವರು, ಸ್ಥಳದಲ್ಲಿದ್ದ ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.ಪದವಿ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಕಾಲೇಜು ಶಿಕ್ಷಣ ಇಲಾಖೆ ನಡೆಸುತ್ತಿರುವ ಪ್ರಕ್ರಿಯೆಯಲ್ಲಿ ಅಂಗವಿಕಲರಿಗೆ ಮೀಸಲಾತಿ ನೀಡಿಲ್ಲ ಎಂಬುದನ್ನು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಟಿ.ಎನ್.ರಮೇಶ್ ಎಂಬುವರು ಮುಖ್ಯಮಂತ್ರಿಯವರ ಗಮನಕ್ಕೆ ತಂದರು. ಶುಕ್ರವಾರವೇ ಕೊನೆಯ ದಿನವಾಗಿದ್ದು, ತಮ್ಮ ಮನವಿಗೆ ಸ್ಪಂದಿಸದಿದ್ದರೆ ಇಡೀ ವರ್ಷ ಅನ್ನಕ್ಕಾಗಿ ಪರದಾಡಬೇಕಾಗುತ್ತದೆ ಎಂದು ಗೋಳಿಟ್ಟರು.ಸಿದ್ದರಾಮಯ್ಯ ತಕ್ಷಣವೇ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಜೊತೆ ದೂರವಾಣಿ ಜೊತೆ ಮಾತನಾಡಿ, ರಮೇಶ್‌ಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ನ್ಯಾಯ ದೊರಕಿಸುವಂತೆ ನಿರ್ದೇಶನ ನೀಡಿದರು. ಸಾಮಾಜಿಕ ಭದ್ರತೆ ಯೋಜನೆಗಳ ಅಡಿಯಲ್ಲಿ ಪಿಂಚಣಿ ಮಂಜೂರಾತಿ, ಅಂಗವಿಕಲರ ಮಾಸಾಶನ, ವೈದ್ಯಕೀಯ ಚಿಕಿತ್ಸೆಗೆ ನೆರವು ಕೋರಿ ಸಲ್ಲಿಸಿದ ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಿ, ತಕ್ಷಣವೇ ಪರಿಹಾರ ದೊರಕಿಸುವಂತೆ ಸೂಚಿಸಿದರು.ಜನತಾ ದರ್ಶನ ಮುಗಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಯವರು, `ಇದು ಸರ್ಕಾರಿ ನೌಕರರ ಸಾಮಾನ್ಯ ವರ್ಗಾವಣೆ ಅವಧಿ. ಹೀಗಾಗಿ ಜನತಾ ದರ್ಶನಕ್ಕೆ ಬಂದ ಬಹುತೇಕರು ವರ್ಗಾವಣೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.ವೈಯಕ್ತಿಕ ತೊಂದರೆಗಳನ್ನು ಹೇಳಿಕೊಳ್ಳಲು ಬಂದವರಿಗೆ ತಕ್ಷಣ ಪರಿಹಾರ ಒದಗಿಸುವ ಪ್ರಯತ್ನ ನಡೆದಿದೆ. ಮುಂದಿನ ದಿನಗಳಲ್ಲಿ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಜನತಾ ದರ್ಶನದಲ್ಲಿ ಇರುತ್ತಾರೆ. ಹೆಚ್ಚು ಅರ್ಜಿಗಳನ್ನು ತಕ್ಷಣ ವಿಲೇವಾರಿ ಮಾಡಲು ಯತ್ನಿಸಲಾಗುವುದು' ಎಂದರು.ಅಧಿಕಾರಿಗಳಿಗೆ ಸೂಚನೆ: ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮುಖ್ಯಮಂತ್ರಿಯವರು ಜನತಾ ದರ್ಶನ ನಡೆಸುವುದರಿಂದ ಆ ದಿನಗಳಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12.30ರವರೆಗೂ ದೂರವಾಣಿ ಸಂಪರ್ಕಕ್ಕೆ ಲಭ್ಯ ಇರುವಂತೆ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರಾಜ್ಯ ಸರ್ಕಾರ ಶುಕ್ರವಾರ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಕ್ಷಣೆಗೆ ತಾಕೀತು

40 ಎಕರೆ ಜಮೀನಿದ್ದರೂ ರಾಜಕೀಯ ಪುಡಾರಿಗಳ ದೌರ್ಜನ್ಯದಿಂದಾಗಿ ಹತ್ತು ವರ್ಷದಿಂದ ಬೆಳೆ ಬೆಳೆಯಲಾಗದ ಸ್ಥಿತಿಯಲ್ಲಿದ್ದ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ರೈತ ಗೋವಿಂದ ರೆಡ್ಡಿ ಅವರು ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಪಾಲ್ಗೊಂಡ ಬಳಿಕ ತುಸು ನಿಟ್ಟುಸಿರು ಬಿಡುವಂತಾಯಿತು.ಸಿದ್ದರಾಮಯ್ಯ ಅವರನ್ನು ಕಾಣುತ್ತಲೇ ಕಣ್ಣೀರಿಟ್ಟ ಗೋವಿಂದ ರೆಡ್ಡಿ, ತಮ್ಮ ಜಮೀನು ಕಬಳಿಸಲು ಸ್ಥಳೀಯ ರಾಜಕೀಯ ಪುಢಾರಿಗಳು ನಿರಂತರವಾಗಿ ಕಿರುಕುಳ ನೀಡುತ್ತಿರುವುದನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಕೃಷಿಗಾಗಿ ಮಾಡಿರುವ ಸಾಲ ಬೆಳೆಯುತ್ತಲೇ ಇದ್ದು, ಕೃಷಿ ಮಾಡುವುದಕ್ಕೂ ರಕ್ಷಣೆ ಬೇಕಾಗಿದೆ ಎಂದು ಅಂಗಲಾಚಿದರು.ತಕ್ಷಣವೇ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್.ರೆಡ್ಡಿ ಅವರನ್ನು ಸಂಪರ್ಕಿಸಿದ ಮುಖ್ಯಮಂತ್ರಿ, ಗೋವಿಂದ ರೆಡ್ಡಿ ಅವರಿಗೆ ರಕ್ಷಣೆ ನೀಡಲು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡುವಂತೆ ಸೂಚಿಸಿದರು. ಸ್ಥಳದಲ್ಲಿದ್ದ ಹಿರಿಯ ಪೊಲೀಸ್ ಅಧಿಕಾರಿಗಳು ಪೊಲೀಸ್ ಜೀಪ್ ಒಂದರಲ್ಲಿ ರೆಡ್ಡಿ ಅವರನ್ನು ಎಡಿಜಿಪಿ ಕಚೇರಿಗೆ ಕಳುಹಿಸಿಕೊಟ್ಟರು.ಇನ್ನೊಂದು ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಹಲಗೂರು ಹೋಬಳಿಯ ದೊಡ್ಡಯಲಚಹಳ್ಳಿಯ ದೊಡ್ಡಮ್ಮ ಎಂಬ ವೃದ್ಧೆ ತನ್ನ ಒಂದೂವರೆ ಎಕರೆ ಜಮೀನನ್ನು ಕೆಲವರು ಕಬಳಿಸಲು ಯತ್ನಿಸುತ್ತಿರುವ ಬಗ್ಗೆ ದೂರಿದರು. ತಕ್ಷಣವೇ ಮಂಡ್ಯ ಎಸ್‌ಪಿ ಜೊತೆ ದೂರವಾಣಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವೃದ್ಧೆಗೆ ರಕ್ಷಣೆ ಒದಗಿಸಿ, ಜಮೀನು ಕಬಳಿಸಲು ಪ್ರಯತ್ನಿಸುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.ಜಮೀನು ಕಬಳಿಕೆ ಯತ್ನ, ದೌರ್ಜನ್ಯ, ಪ್ರಾಣ ಬೆದರಿಕೆ ಆರೋಪಗಳಿಗೆ ಸಂಬಂಧಿಸಿದಂತೆ ಶುಕ್ರವಾರದ ಜನತಾ ದರ್ಶನದಲ್ಲಿ 12 ದೂರುಗಳು ಸಲ್ಲಿಕೆಯಾಗಿವೆ. ಈ ಎಲ್ಲಾ ದೂರುಗಳನ್ನೂ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿ ಸಂಬಂಧಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ರವಾನಿಸುವಂತೆ ಗೃಹ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಹುದ್ದೆ ಭರ್ತಿಗೆ ಪಟ್ಟು

ಇದ್ದ ಕಂಡಕ್ಟರ್ ಕೆಲಸವನ್ನೂ ಬಿಟ್ಟು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಪರೀಕ್ಷೆಗೆ ತಯಾರಿ ನಡೆಸಿದ್ದ ಯುವಕನೊಬ್ಬ ವಯೋಮಿತಿ ಮೀರುತ್ತಿದೆ ಎಂಬ ಕಾರಣಕ್ಕಾಗಿ ತಕ್ಷಣವೇ ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಪಟ್ಟುಹಿಡಿದ ಪ್ರಸಂಗ ಜನತಾ ದರ್ಶನದಲ್ಲಿ ನಡೆಯಿತು.ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಅಸ್ಕಿ ಗ್ರಾಮದ ಭೀಮನಗೌಡ ಬಿರಾದಾರ ಪಿಎಸ್‌ಐ ನೇಮಕಾತಿ ಆರಂಭಿಸುವಂತೆ ಪಟ್ಟು ಹಿಡಿದವರು. ಮುಖ್ಯಮಂತ್ರಿಯವರಿಗೆ ಅರ್ಜಿ ಸಲ್ಲಿಸಿದ ಅವರು, `ಇದ್ದ ಕೆಲಸವನ್ನೂ ಬಿಟ್ಟು ಪಿಎಸ್‌ಐ ಪರೀಕ್ಷೆಗೆ ತಯಾರಿ ನಡೆಸಿದ್ದೇನೆ. ನಾಲ್ಕು ವರ್ಷವಾದರೂ ನೇಮಕ ಪ್ರಕ್ರಿಯೆ ಆರಂಭವಾಗಿಲ್ಲ. ಜುಲೈ ತಿಂಗಳಲ್ಲಿ ನನ್ನ ವಯೋಮಿತಿ ಮೀರುತ್ತದೆ. ತಕ್ಷಣವೇ ಪ್ರಕ್ರಿಯೆ ಆರಂಭಿಸಿ ನನಗೆ ನ್ಯಾಯ ಕೊಡಿ' ಎಂದು ಏರು ದನಿಯಲ್ಲಿ ಆಗ್ರಹಿಸಿದರು.`ಈ ಸಮಸ್ಯೆಗೆ ನಾನು ಕಾರಣ ಅಲ್ಲ. ಪರಿಹಾರ ದೊರಕಿಸಲು ಪ್ರಯತ್ನಿಸುತ್ತೇನೆ' ಎಂದ ಸಿದ್ದರಾಮಯ್ಯ, ಯುವಕನಿಗೆ ಮನವರಿಕೆ ಮಾಡಲು ಯತ್ನಿಸಿದರು. ಆದರೂ, ಆತ ಏರು ದನಿಯಲ್ಲಿ ಕೂಗಾಡುತ್ತಲೇ ಇದ್ದ. ಒಂದು ಹಂತದಲ್ಲಿ ಅಸಮಾಧಾನಗೊಂಡ ಸಿದ್ದರಾಮಯ್ಯ, ಗದರಿದರು. ಬಳಿಕ ತಣ್ಣಗಾದ ಯುವಕನಿಗೆ, ತಾಳ್ಮೆಯಿಂದ ಸಮಾಧಾನ ಹೇಳಿ ಕಳುಹಿಸಿದರು. ವಯೋಮಿತಿ ಮೀರುತ್ತಿರುವವರ ರಕ್ಷಣಗೆ ನಿಲ್ಲಬಹುದಾದ ಸಾಧ್ಯತೆ ಕುರಿತು ಪರಿಶೀಲಿಸುವ ಭರವಸೆಯನ್ನೂ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.