ಗುರುವಾರ , ಮೇ 13, 2021
17 °C
ಬೈಯಪ್ಪನಹಳ್ಳಿ ಮೆಟ್ರೊ ಡಿಪೋ

ವಾಣಿಜ್ಯ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆ ಜಾರಿಗೆ ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿಯಲ್ಲಿ 10.15 ಎಕರೆ ಪ್ರದೇಶದಲ್ಲಿ ಮಾಡಲು ಉದ್ದೇಶಿಸಿರುವ ವಾಣಿಜ್ಯ ಪ್ರದೇಶ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ.ನಿಗಮವು ಬೈಯಪ್ಪನಹಳ್ಳಿ ನಿಲ್ದಾಣದ ಸುತ್ತ ಸಮಗ್ರ ಆಸ್ತಿ ಅಭಿವೃದ್ಧಿ ಕಾರ್ಯ ಮಾಡಲು ಯೋಜನೆ ರೂಪಿಸಿತ್ತು. ಖಾಸಗಿ ಸಹಭಾಗಿತ್ವದಲ್ಲಿ `ಪ್ರಯಾಣಿಕರ ಜೀವನಶೈಲಿ ನಿಲ್ದಾಣ' (ಕಮ್ಯೂಟರ್ ಲೈಫ್ ಸ್ಟೈಲ್ ಸ್ಟೇಷನ್)' ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲಾಗಿತ್ತು. ನಿಲ್ದಾಣದ ಸುತ್ತ 10.15 ಎಕರೆ ಜಾಗ ಇದೆ. ಇದನ್ನು 4.52 ಎಕರೆ ಹಾಗೂ 5.63 ಎಕರೆಗಳನ್ನಾಗಿ ವಿಂಗಡಿಸಲಾಗಿತ್ತು.  ಆರಂಭಿಕ ಹಂತದ ಯೋಜನೆಯ ಪ್ರಕಾರ ಸಮಾವೇಶ ಸಭಾಂಗಣ ಹಾಗೂ ಪ್ರದರ್ಶನ ಸಭಾಂಗಣಗಳನ್ನು ನಿರ್ಮಿಸಲು ಬೇಡಿಕೆ ಇತ್ತು. ಇದನ್ನು ದೆಹಲಿಯ `ಭಾರತ ಹ್ಯಾಬಿಟ್ಯಾಟ್ ಸೆಂಟರ್' ಮಾದರಿಯಲ್ಲೇ ನಿರ್ಮಿಸಲು ಯೋಜಿಸಲಾಗಿತ್ತು. `ತ್ರಿ ಸ್ಟಾರ್ ಹೋಟೆಲ್, ವಾಣಿಜ್ಯ ಸಂಸ್ಥೆಗಳ ಕಚೇರಿಗಳು, ರೆಸ್ಟೋರೆಂಟ್, ಕಾಫಿ ಶಾಪ್‌ಗಳು, ಮಲ್ಟಿಫ್ಲೆಕ್ಸ್‌ಗಳನ್ನು ನಿರ್ಮಿಸುವ ಯೋಜನೆಯೂ ಇತ್ತು' ಎಂದು ಮೂಲಗಳು ತಿಳಿಸಿವೆ.`ಇದರೊಂದಿಗೆ ಸಮಾವೇಶ ಹಾಗೂ ಆತಿಥ್ಯ ಕೇಂದ್ರ ಸ್ಥಾಪನೆ ಮಾಡಲು ಉದ್ದೇಶಿಸಲಾಗಿತ್ತು. 1,500 ಮಂದಿ ಕುಳಿತುಕೊಳ್ಳುವ ಸಮಾವೇಶ ಸಭಾಂಗಣ ಹಾಗೂ 7,850 ಮಂದಿ ಸಾಮರ್ಥ್ಯದ ಮೂರು ಸಭಾಂಗಣಗಳನ್ನು ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.ಕಲಾ ಕೇಂದ್ರವೂ ಇದರಲ್ಲಿ ನಿರ್ಮಾಣವಾಗಲಿತ್ತು' ಎಂದು ಮೂಲಗಳು ತಿಳಿಸಿವೆ.  `ರೈಲು ಸಂಚಾರ ಒಂದರಿಂದಲೇ ಅಧಿಕ ಆದಾಯ ಬರುವುದಿಲ್ಲ. ಹೀಗಾಗಿ ಆದಾಯ ಸಂಗ್ರಹಕ್ಕೆ ನಮ್ಮ ಮೆಟ್ರೊದಲ್ಲಿ ಇಂತಹ ವ್ಯವಸ್ಥೆಗಳು ಅಗತ್ಯ. ಆದರೆ, ಈ ಯೋಜನೆಯ ಮೊತ್ತವನ್ನೂ ಅಂತಿಮಗೊಳಿಸಿರಲಿಲ್ಲ' ಎಂದು ಮೂಲಗಳು ಹೇಳಿವೆ. ಈ ಯೋಜನೆಯ ಬಗ್ಗೆ ಇಬ್ಬರು ಬಿಡ್ಡುದಾರರು ಆಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಎರಡನೇ ಹಂತದ ಯೋಜನೆಯ ಕಾರಣಕ್ಕೆ ಈ ಯೋಜನೆಯನ್ನು ಸದ್ಯಕ್ಕೆ ಬದಿಗೆ ಸರಿಸಿ ಎರಡನೇ ಹಂತದ ಯೋಜನೆಯ ಪೂರಕ ಚಟುವಟಿಕೆಗಳಿಗೆ ಈ ಜಾಗವನ್ನು ಬಳಸಿಕೊಳ್ಳಲು ನಿಗಮವು ತೀರ್ಮಾನಿಸಿದೆ.ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಪ್ರತಿಕ್ರಿಯಿಸಿ, `ಈಗ ಬಿಡ್‌ಗಳನ್ನು ಕೈಬಿಡಲಾಗಿದೆ. ರಂಭದಲ್ಲಿ ಎರಡನೇ ಹಂತದ ಯೋಜನೆಯ ಬಗ್ಗೆ ಹೆಚ್ಚಿನ ಗಮನ ಇರಲಿಲ್ಲ. ಈಗ ಅದು ಆದ್ಯತೆಯ ವಿಷಯ ಆಗಿದೆ. ಹೀಗಾಗಿ ಈ ಜಾಗವನ್ನು ಎರಡನೇ ಹಂತದ ಕಾಮಗಾರಿಗಳಿಗಾಗಿ ಬಳಸಿಕೊಳ್ಳಲಾಗುವುದು' ಎಂದರು. `ಈ ಜಾಗವನ್ನು ಕಾಮಗಾರಿ ಸ್ಥಳವನ್ನಾಗಿ 3-4 ವರ್ಷಗಳ ಕಾಲ ಬಳಸಿಕೊಳ್ಳಲಾಗುವುದು. ಎರಡನೇ ಹಂತದ ಯೋಜನೆ ಪೂರ್ಣಗೊಂಡ ಬಳಿಕ ಈ ಜಾಗದ ಹಣೆಬರಹ ಏನಾಗಲಿದೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ' ಎಂದರು.ಇನ್ನೊಂದೆಡೆ, ಹಳೆ ಮದ್ರಾಸ್ ರಸ್ತೆ ಸಮೀಪ ಸ್ವಾಮಿ ವಿವೇಕಾನಂದ ನಿಲ್ದಾಣದ ಬಳಿಯ 1.4 ಎಕರೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಟವರ್ ನಿರ್ಮಾಣದ ಪ್ರಸ್ತಾವವನ್ನು ಸದ್ಯಕ್ಕೆ ಕೈಬಿಡಲು ನಿಗಮವು ನಿರ್ಧರಿಸಿದೆ. `ಈ ಯೋಜನೆಯ ಬಿಡ್ ಅನ್ನು ತಿರಸ್ಕರಿಸಲಾಗಿದೆ.ನಿಗಮವೇ ಇಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಮಾಡಲಿದೆ. ಇಲ್ಲಿ ನಿಗಮದ ಕಾರ್ಪೊರೇಟ್ ಕಚೇರಿಯನ್ನು ನಿರ್ಮಿಸುವ ಯೋಜನೆಯೂ ಇದೆ' ಎಂದು ಶಿವಶೈಲಂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.