ಬುಧವಾರ, ಜೂನ್ 3, 2020
27 °C

ವಾರ್ಡ್‌ಗಳ ಅಭಿವೃದ್ಧಿಗೆ ಎಸ್‌ಎಫ್‌ಸಿ ಅನುದಾನ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾರ್ಡ್‌ಗಳ ಅಭಿವೃದ್ಧಿಗೆ ಎಸ್‌ಎಫ್‌ಸಿ ಅನುದಾನ ಬಳಕೆ

ಕೊಳ್ಳೇಗಾಲ: ಎಸ್.ಎಫ್.ಸಿ ಅನುದಾನ ಪಟ್ಟಣದ ಎಲ್ಲ ವಾರ್ಡ್‌ಗಳ ಅಭಿವೃದ್ಧಿಗೆ ಬಳಕೆ ಮಾಡಲು ಇಂದಿಲ್ಲಿ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.1ಕೋಟಿ 17 ಲಕ್ಷ ಎಸ್.ಎಫ್.ಸಿ ಅನುದಾನ ಬಳಕೆ ಬಗ್ಗೆ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಸೋಮವಾರ ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷೆ ಮಂಗಳಗೌರಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ನಗರಸಭೆ ಸಾಮಾನ್ಯ ಸಭೆಯಲ್ಲಿ ಕೆಲವು ಸದಸ್ಯರು ಡಾ.ರಾಜ್‌ಕುಮಾರ್ ರಸ್ತೆ ಅಗಲೀಕರಣಕ್ಕೆ ಸಂಪೂರ್ಣ ಹಣವನ್ನು ಬಳಸಿ ಜೋಡಿ ರಸ್ತೆ ನಿರ್ಮಾಣ ಮಾಡುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಜಿ.ಎನ್.ನಂಜುಂಡಸ್ವಾಮಿ ಮಾತನಾಡಿ, ಜೋಡಿ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ದೊರಕಿಸುವುದಾಗಿ ವಾರ್ಡ್‌ಗಳಲ್ಲಿ ನಾಗರಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ಬಗ್ಗೆ ಆಧ್ಯತೆಯ ಮೇರೆ ಎಲ್ಲಾ ವಾರ್ಡ್‌ಗಳಿಗೂ ಎಸ್.ಎಫ್.ಸಿ ಹಣವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.ಬಸ್‌ನಿಲ್ದಾಣದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ 1.60 ಎಕರೆ ಜಮೀನನ್ನು ನೀಡುವ ಬಗ್ಗೆ ಬಹುತೇಕ ಸದಸ್ಯರು ತಮ್ಮ ವಿರೋಧ ವ್ಯಕ್ತಪಡಿಸಿ ಖಾಸಗಿ ಬಸ್‌ಗಳ ನಿಲುಗಡೆಗೆ ಸ್ಥಳದ ಅವಶ್ಯಕತೆ ಇರುವುದರಿಂದ ಕೆ.ಎಸ್.ಆರ್.ಟಿ.ಸಿಗೆ ಬೇರೆಡೆ ಸ್ಥಳಾವಕಾಶ ನೀಡಲು ಸೂಚಿಸಿದರು.ಜನತೆಗೆ ಸುಸಜ್ಜಿತ ಬಸ್‌ನಿಲ್ದಾಣದ ಅವಶ್ಯಕತೆ ಇದ್ದು ಈ ಬಗ್ಗೆ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಪಟ್ಟಣದ ಅಭಿವೃದ್ಧಿ ಹಿನ್ನೆಲೆಯಲ್ಲಿ ಸೂಕ್ತಕ್ರಮ ಜರುಗಿಸಲು ಸಭೆ ನಿರ್ಣಯಿಸಿದೆ ಎಂದು ಶಾಸಕರು ಸೂಚಿಸಿ ಒಪ್ಪಿಗೆ ನೀಡಲಾಯಿತು.ಪಟ್ಟಣ ಪೊಲೀಸ್ ಠಾಣೆ ಎದರು 97 ಲಕ್ಷ ಅಂದಾಜು ವೆಚ್ಚದಲ್ಲಿ ನಗರಸಭೆ ಕಟ್ಟಡ ನಿರ್ಮಿಸಲು ಕಳೆದ 3 ವರ್ಷಗಳಿಂದಲೂ ಅಂದಾಜು ಪಟ್ಟಿಯಲ್ಲೇ ಅಧಿಕಾರಿಗಳು ಕಾಲದೂಡುತ್ತಿರುವ ಬಗ್ಗೆ ಶಾಸಕರು ಕಿಡಿಕಾರಿ ತಕ್ಷಣ ಅಂದಾಜುಪಟ್ಟಿಗೆ ಅನುಮೋದನೆ ಪಡೆದು ಕಾಮಗಾರಿ ಪ್ರಾರಂಭಿಸಲು ಸೂಚಿಸಿದರು.ನಗರಸಭೆಯ ಪ್ರಮುಖ ಆದಾಯವಾಗಿರುವ ಕಂದಾಯ ಸಂಗ್ರಹಣೆಯ ಬಗ್ಗೆ ಕೂಡಲೇ ಹೆಚ್ಚಿನ ಗಮನ ಹರಿಸಿ ಈ ತಿಂಗಳು ಹೆಚ್ಚಿನ ಕಂದಾಯ ವಸೂಲಿಗೆ ಕ್ರಮಕೈಗೊಳ್ಳುವಂತೆ ಶಾಸಕರು ಕಂದಾಯ ನಿರೀಕ್ಷಕ ಅಶೋಕ್‌ಗೆ ಸೂಚಿಸಿದರು.ನಾಮಕರಣ: ಪಟ್ಟಣ ವ್ಯಾಪ್ತಿಯ ಶಿರಡಿ ಸಾಯಿಮಂದಿರ ಬಡಾವಣೆಗೆ ಶಿವಕುಮಾರಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡುವ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಪಟ್ಟಣದ ವಿವಿಧೆಡೆ ಬಡಾವಣೆಗಳಿಗೆ ಗಣ್ಯರ, ಮಹಾತ್ಮರ ಹೆಸರುಗಳನ್ನು ಇಡುವ ಬಗ್ಗೆ ನಿವಾಸಿಗಳಿಂದ ಅರ್ಜಿಯನ್ನು ಆಹ್ವಾನಿಸಿ ಈ ಬಗ್ಗೆ ಅ.29ರಂದು ತುರ್ತು ಸಭೆ ನಡೆಸಿ ವಿವಿಧ ಬಡಾವಣೆಗಳ ನಾಮಕರಣದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಯಿತು.ಅಕ್ರಮ ಖಾತೆ ರದ್ದಿಗೆ ಬಿಸಿ ಎರಿದ ಚರ್ಚೆ: ಪಟ್ಟಣದ ಡಾ. ರಾಜ್‌ಕುಮಾರ್ ರಸ್ತೆಯ ಅಸೆಸ್‌ಮೆಂಟ್ ನಂ.698,699, 700 ಹಾಗೂ 700/1ರ ಖಾತೆಗಳನ್ನು ರದ್ದುಪಡಿಸುವ ಬಗ್ಗೆ ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಅಕ್ಮಲ್ ಪಾಷ, ಮುಡಿ ಗುಂಡ ಶಾಂತರಾಜು ಸೇರಿದಂತೆ ಇತರೆ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು. ಈ ಖಾತೆಗಳ ರದ್ದಿಗೆ ಕ್ರಮ ಜರುಗಿಸುವಂತೆ ಈಗಾಗಲೇ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದು ಈ ಬಗ್ಗೆ ಉಪವಿಭಾಗಾಧಿಕಾರಿಗಳು ಕಾನೂನು ರೀತ್ಯಾ ಕ್ರಮಕೈಗೊಳ್ಳಲು ತೀರ್ಮಾನಿಸಲಾಯಿತು. ಅಲ್ಲಿಯ ವರೆಗೆ ಯಾವುದೇ ಕಾರಣಕ್ಕೂ ಈ ಅಕ್ರಮ ಖಾತೆಗಳನ್ನು ಬೇರೆ ಯಾರ ಹೆಸರಿಗೂ ಬದಲಾಯಿಸದಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಸದಸ್ಯರಿಗೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು. ನಗರಸಭೆ ಉಪಾಧ್ಯಕ್ಷ ಜೆ. ಹರ್ಷ, ಪೌರಾಯುಕ್ತ ಎ.ಬಿ.ಬಸವರಾಜು, ಸದಸ್ಯರು ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.