ಬುಧವಾರ, ಮಾರ್ಚ್ 29, 2023
32 °C

ವಾಷಿಂಗ್ ಮೆಷಿನ್ ನಿರ್ವಹಣೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ ಮೆಷಿನ್ ನಿರ್ವಹಣೆ ಹೇಗೆ?

ಮನೆಯ ಹಿತ್ತಿಲಿನಲ್ಲಿ  ಗಿಡ ಮರಗಳ ನಡುವೆ ಇರುವ ಒಗೆಯುವ ಕಲ್ಲಿನಲ್ಲಿ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಾ ಆರಾಮವಾಗಿ ಬಟ್ಟೆ ಒಗೆಯುವ ಅನುಭವ ಇಂದು ವಿರಳ.ಬಹು ಮಹಡಿ ಕಟ್ಟಡಗಳಲ್ಲಿರುವ ಆಪಾರ್ಟ್‌ಮೆಂಟ್ ಮತ್ತು ಬೆಂಕಿಪೊಟ್ಟಣದಂತಿರುವ ಮನೆಗಳಲ್ಲಿ ಹಿತ್ತಲು, ಅಂಗಳಗಳು ಅಪರೂಪವಾಗಿದ್ದು ಒಗೆಯುವ ಕಲ್ಲು ಮತ್ತು ಬಟ್ಟೆ ಒಣಗಿ ಹಾಕಲು ಜಾಗವೇ ಇಲ್ಲದಂತಾಗಿದೆ. ಅಷ್ಟೇ ಅಲ್ಲದೆ ಸಮಯದ ಅಭಾವ ಮತ್ತು ಸರಿಯಾದ ಮನೆಗೆಲಸದವರು ಸಿಗದೇ ಇರುವುದರಿಂದ ಹೆಚ್ಚು ಹೆಚ್ಚು ಮಹಿಳೆಯರು ಇಂದು ಬಟ್ಟೆ ಒಗೆಯುವ ಯಂತ್ರವನ್ನು ಅವಲಂಬಿಸಬೇಕಾಗಿದೆ.ಇಂತಹ ಒಂದು ಉಪಯುಕ್ತ ಯಂತ್ರದ ನಿರ್ವಹಣೆಯ ಬಗ್ಗೆ ಇಲ್ಲಿದೆ ಹಲವು ಸೂಚನೆಗಳು.  

*ಯಂತ್ರವು ಅಲುಗಾಡದೆ ನೆಲದ ಮೇಲೆ ದೃಢವಾಗಿ ನಿಲ್ಲುವಂತೆ ನೋಡಿಕೊಳ್ಳಿ.

*ಯಂತ್ರಕ್ಕೆ ಅಳವಡಿಸಲಾಗಿರುವ ರಬ್ಬರ್ ನಳಿಕೆ ಮತ್ತು ಇತರ ಜೋಡಣೆಗಳನ್ನು ಪರೀಕ್ಷಿಸಿ.ಯಾವುದೇ ಕೊಳವೆಗಳ ಮೇಲೆ ಬಿರುಕು ಮತ್ತು ಹೊಪ್ಪಳೆಗಳು ಉಂಟಾಗಿ ನೀರು ತೊಟ್ಟಿಕ್ಕುತ್ತಿಲ್ಲವೆಂಬುದನ್ನು ಖಾತ್ರಿಪಡಿಸಿಕೊಳ್ಳಿ.  ಯಂತ್ರದ ನಿರ್ವಹಣೆಯ ಭಾಗವಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ  ರಬ್ಬರ್ ನಳಿಕೆ ಮತ್ತು ಇತರ ಜೋಡಣೆಗಳನ್ನು ಬದಲಾಯಿಸುವುದು ಒಳ್ಳೆಯದು.

*ಬಟ್ಟೆಯ ಕೊಳೆಯನ್ನು ತೊಳೆಯುವ ಯಂತ್ರವನ್ನು ಸಹ ತೊಳೆದು ಶುಭ್ರವಾಗಿಡುವುದು ಅತ್ಯವಶ್ಯಕ. ಮೊದಲಿಗೆ ಯಂತ್ರದ ಒಳಗಿರುವ ಬಟ್ಟೆ ಒಗೆಯುವ ತೊಟ್ಟಿಯನ್ನು ಸ್ವಚ್ಛಗೊಳಿಸಿ.  ಯಂತ್ರವನ್ನು ‘ಹಾಟ್’ ಗುರುತಿಗೆ ಇಟ್ಟು ಹೆಚ್ಚು ಕೊಳೆ ಬಟ್ಟೆಯನ್ನು ಒಗೆಯಲು ಸೌಲಭ್ಯವಿದ್ದರೆ ಅದನ್ನು ಆಯ್ಕೆ ಮಾಡಿಕೊಳ್ಳಿ. ಅರ್ಧ ತೊಟ್ಟಿಯಷ್ಟು ನೀರನ್ನು ತುಂಬಿ ಮೂರು ಬಟ್ಟಲು ಬಿಳಿ ವಿನಿಗರ್ ಮತ್ತು ಅರ್ಧ ಬಟ್ಟಲು ಅಡುಗೆ ಸೋಡವನ್ನು ಹಾಕಿ.  ತೊಟ್ಟಿಯು ಖಾಲಿಯಾಗುತ್ತ ಬಂದಂತೆ ಯಂತ್ರದ ಚಲನೆಯನ್ನು ಸ್ಪಿನ್‌ಗೆ ಹೆಚ್ಚಿಸಿ. ಒಂದು ಸುತ್ತು ಪೂರ್ಣವಾದ ನಂತರ ಯಂತ್ರವನ್ನು ಕೋಲ್ಡ್ ಗುರುತಿಗೆ ಇಟ್ಟು ಮತ್ತೊಂದು ಸುತ್ತು ಚಲಾಯಿಸಿ.  ವಿನಿಗರ್ ಇಲ್ಲದಿದ್ದರೆ ಲಿಂಬೆ ರಸವನ್ನು ಬಳಸಬಹುದು.

*ಒಗೆಯಬೇಕಾದ ಬಟ್ಟೆಯನ್ನು ಯಂತ್ರದ ಮುಂಭಾಗದಿಂದ  ತುಂಬ ಬೇಕಾಗಿದ್ದಲ್ಲಿ, ಯಂತ್ರವು ಖಾಲಿಯಿದ್ದಾಗ ಶುಭ್ರಗೊಳಿಸಲು ಸಾಧ್ಯವಾಗುವುದಿಲ್ಲ.  ಅಂತಹ ಸಂದರ್ಭದಲ್ಲಿ ಮೈ ಒರೆಸಲು ಬಳಸುವ, ಹಳೆಯದಾದರೂ ಶುಭ್ರವಾದ ಒಂದೆರಡು ಟವೆಲ್‌ಗಳನ್ನು ಹಾಕಿ ಅದರ ಮೇಲೆ ವಿನಿಗರ್, ಅಡಿಗೆ ಸೋಡ ಹಾಕಿ ನಂತರ ಯಂತ್ರವನ್ನು ಚಾಲೂಗೊಳಿಸುವ ಮೂಲಕ ಶುಭ್ರಗೊಳಿಸಬಹುದು.

*ಯಂತ್ರದಲ್ಲಿನ ಕೊಳೆ ಸಂಗ್ರಹವಾಗುವ ಭಾಗಗಳನ್ನು ವೇಗವಾಗಿ ನೀರು ಹರಿಸುವುದರ ಮೂಲಕ ಶುಭ್ರಗೊಳಿಸಿ ಹಾಗೂ ಅವುಗಳನ್ನು ನೀರಿನಲ್ಲಿ ನೆನೆಯಲಿಡಿ.  ಅವುಗಳು ನೆನೆಯುತ್ತಿರುವಾಗ  ಅವುಗಳ ಸುತ್ತ ಮತ್ತು ಯಂತ್ರದ ಮೇಲ್ಭಾಗ ಮತ್ತು ತೊಟ್ಟಿಗಳ ಮಧ್ಯೆ ಸಂಗ್ರಹವಾಗಿರುವ ಗರಣೆಯಂತ ಕೊಳೆಯನ್ನು  ಸ್ವಚ್ಛಗೊಳಿಸಿ.  ಕೊಳೆ ಸಂಗ್ರಹವಾಗುವ ಭಾಗಗಳನ್ನು ಯಂತ್ರದಿಂದ ಹೊರಗೆ ತೆಗೆಯಲಾಗದಿದ್ದರೆ ಅದರಲ್ಲಿ ಬಿಸಿ ನೀರನ್ನು ಸುರಿಯುವುದರ ಮೂಲಕ ಶುಭ್ರಗೊಳಿಸಿ.

*ಡಿಟರ್ಜೆಂಟ್ ಮತ್ತು ಬಟ್ಟೆಯನ್ನು ಮೃದುಗೊಳಿಸಲು ಬಳಸುವ ರಾಸಾಯನಿಕವನ್ನು ಆದಷ್ಟು ಕಡಿಮೆ ಮತ್ತು ನೀರಿನ ಜೊತೆ ಸೇರಿಸಿ ಬಳಸಿ.  ರಾಸಾಯನಿಕದ ಬದಲು ಭಟ್ಟಿಯಿಳಿಸಿದ ವಿನಿಗರ್ ಅನ್ನು ಬಳಸಬಹುದು.ಡಿಟರ್ಜೆಂಟ್‌ಅನ್ನು  ಪುಡಿಗಿಂತ ದ್ರಾವಣದ ರೂಪದಲ್ಲಿ ಬಳಸುವುದು ಒಳ್ಳೆಯದು. 

*ಯಂತ್ರವನ್ನು ಕೊಳೆಯಾದ ಕಾಲು ಚೀಲ ಮಕ್ಕಳ ಬಟ್ಟೆ ಮುಂತಾದ ಹೆಚ್ಚು ಕೊಳೆಯಾದ ಬಟ್ಟೆಯನ್ನು ಒಗೆಯಲು ಸತತವಾಗಿ ಉಪಯೋಗಿಸಿದಾಗ ಕೊಳೆಯು ಘನ ರೂಪದಲ್ಲಿ ಸಂಗ್ರಹವಾಗಿ ದುರ್ವಾಸನೆಯನ್ನು ಬೀರತೊಡಗುತ್ತದೆ.ಮೊದಲು ದುರ್ವಾಸನೆಯ ಮೂಲವನ್ನು ಕಂಡುಹಿಡಿಯಿರಿ.  ದುರ್ಗಂಧವು ಕೊಳೆತ ಮೊಟ್ಟೆಯನ್ನು ಹೋಲುತ್ತಿದ್ದರೆ ನೀರನ್ನು ಸೋಸಲು ಕೊಟ್ಟಿರುವ ಭಾಗವನ್ನು ಬದಲಾಯಿಸಿ.  ಯಂತ್ರದಿಂದಲೇ ವಾಸನೆ ಬರುತ್ತಿದ್ದರೆ ವಿನಿಗರ್ ಮತ್ತು ಅಡಿಗೆ ಸೋಡ ಬಳಸಿ ಮೇಲೆ ವಿವರಿಸಿರುವಂತೆ ಶುಭ್ರಗೊಳಿಸಿ.

*ಬಟ್ಟೆ ಒಗೆಯುವ ಯಂತ್ರದ ನಿರ್ವಹಣೆಯಲ್ಲಿ ಪರಿಣಿತರಾದ ತಂತ್ರಜ್ಞರಿಂದ ಯಂತ್ರದ ಮುಂಭಾಗದ ಮುಚ್ಚಳವನ್ನು ತೆಗೆಸಿ ಒಳ ಭಾಗವನ್ನು ಶುಭ್ರಗೊಳಿಸಿಕೊಂಡರೆ ಯಂತ್ರದ ಆಯಸ್ಸನ್ನು ಹೆಚ್ಚಿಸಬಹುದು.  ಮುಂಭಾಗದಿಂದ ಬಟ್ಟೆಯನ್ನು ತುಂಬುವಂತಹ ಯಂತ್ರವಾಗಿದ್ದಲ್ಲಿ ಮುಂಭಾಗದ ಹಲಗೆಯಂತಹ ಭಾಗವನ್ನು ನೀವೆ ತೆಗೆಯಲು ಪ್ರಯತ್ನಿಸಬೇಡಿ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.