ಗುರುವಾರ , ಮೇ 13, 2021
40 °C
ನಗರ ಸಂಚಾರ

ವಾಹನ ನಿಲುಗಡೆ ತಾಣವಾದ ಫುಟ್‌ಪಾತ್!

ವಿನಾಯಕ ಭಟ್ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ನಿಲುಗಡೆ ತಾಣವಾದ ಫುಟ್‌ಪಾತ್!

ಬೆಳಗಾವಿ: ನಗರದ ಹಲವು ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳು ವಾಹನ ನಿಲುಗಡೆಯ ತಾಣವಾಗಿ ಪರಿಣಮಿಸಿದೆ. ಇನ್ನು ಕೆಲವೆಡೆ ಫುಟ್‌ಪಾತ್‌ಗಳನ್ನು ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವುದರಿಂದ ಪಾದಚಾರಿಗಳು ಸಂಚರಿಸಲು ನಿತ್ಯ ಪರದಾಡುವಂತಾಗಿದೆ.ಫುಟ್‌ಪಾತ್ ಅತಿಕ್ರಮಣ ಮಾಡುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯು ಯಾವುದೇ ರೀತಿಯ ಕಠಿಣ ಕ್ರಮ ಕೈಗೊಳ್ಳದೇ ಇರುವುದರಿಂದ ಕೆಲವು ಜನರು ಫುಟ್‌ಪಾತ್‌ಗಳನ್ನೇ ತಮ್ಮ ವಾಹನಗಳಿಗೆ ನಿಲುಗಡೆಯ ತಾಣವನ್ನಾಗಿ ಮಾಡಿಕೊಂಡಿದ್ದಾರೆ. ವ್ಯಾಪಾರಿಗಳು, ಅಂಗಡಿ ಮಾಲೀಕರು ತಮ್ಮ ದ್ವಿಚಕ್ರ ವಾಹನಗಳನ್ನು ಅಂಗಡಿಯ ಎದುರಿನ ಫುಟ್‌ಪಾತ್‌ಗಳ ಮೇಲೆ ನಿರ್ಭೀತಿಯಿಂದ ನಿಲ್ಲಿಸುತ್ತಿದ್ದಾರೆ.ಇದರಿಂದಾಗಿ ಪಾದಚಾರಿಗಳು ಅನಿವಾರ್ಯವಾಗಿ ವಾಹನ ದಟ್ಟಣೆ ಇರುವ ರಸ್ತೆಯಲ್ಲಿ ಜೀವದ ಹಂಗನ್ನು ತೊರೆದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆಯೂ ಬೃಹದಾಕಾರವಾಗಿ ಬೆಳೆಯುತ್ತಿದೆ.ನಗರದ ಪ್ರಮುಖ ಬೀದಿಗಳಲ್ಲಿ ತ್ಯಾಜ್ಯಗಳನ್ನು ಎಸೆಯುತ್ತಿರುವುದರಿಂದ ಜನರು ಫುಟ್‌ಪಾತ್‌ಗಳನ್ನು ಬಳಸದೇ ರಸ್ತೆಯ ಮೇಲೆಯೇ ನಡೆಯುತ್ತಿದ್ದಾರೆ. ನಗರದಲ್ಲಿ ಬಹುತೇಕ ಕಡೆ ಒಳಚರಂಡಿಯ ಮೇಲೆ ಫುಟ್‌ಪಾತ್ ನಿರ್ಮಿಸಲಾಗಿದ್ದು, ಅಲ್ಲಲ್ಲಿ ಗುಂಡಿ ಬಾಯ್ತೆರೆದುಕೊಂಡು ಇರುವುದರಿಂದ ಫುಟ್‌ಪಾತ್ ಮೇಲೆ ಸಂಚರಿಸಲು ಜನರು ಭಯ ಪಡುವಂತಾಗಿದೆ. ಹಲವರು ಬಿದ್ದು ಗಾಯಗೊಂಡಿರುವ ನಿದರ್ಶನಗಳಿವೆ.ಸಾವಿರಾರು ಜನರು, ವಿದ್ಯಾರ್ಥಿಗಳು ನಿತ್ಯ ಸಂಚರಿಸುವ ಕಾಲೇಜು ರಸ್ತೆಯ ಫುಟ್‌ಪಾತ್ ಮೇಲೆ ವಿಶೇಷವಾಗಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ರಸ್ತೆ ಮೇಲೆ ಸಂಚರಿಸುವಂತಾಗಿದೆ. ಕಾಂಗ್ರೆಸ್ ರಸ್ತೆಯಲ್ಲಿ ವ್ಯಾಪಾರಿಗಳು ತಾತ್ಕಾಲಿಕ ಅಂಗಡಿಗಳನ್ನು ತೆರೆಯುವುದರಿಂದ ಸಾರ್ವಜನಿಕರ ಬಳಕೆಗೆ ಫುಟ್‌ಪಾತ್ ಲಭಿಸದಂತಾಗಿದೆ.ಪೊಲೀಸ್ ಇಲಾಖೆಯು ಈ ಹಿಂದೆ ಫುಟ್‌ಪಾತ್‌ಗಳನ್ನು ತೆರವುಗೊಳಿಸಲು ಮುಂದಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಅವರು, ಫುಟ್‌ಪಾತ್ ಮೇಲೆ ನಿಲುಗಡೆ ಮಾಡುವ ವಾಹನಗಳಿಗೆ ದಂಡ ವಿಧಿಸಲು ಸೂಚಿಸಿದ್ದರು. ಹೀಗಾಗಿ ಕೆಲವು ದಿನಗಳ ಕಾಲ ಫುಟ್‌ಪಾತ್ ಪಾದಚಾರಿಗಳ ಬಳಕೆಗೆ ಲಭಿಸುತ್ತಿದ್ದವು. ಆದರೆ, ಬಳಿಕ ಪುನಃ ಮತ್ತೆ ಫುಟ್‌ಪಾತ್‌ಗಳು ವಾಹನ ನಿಲುಗಡೆಗೆ ಬಳಕೆಯಾಗತೊಡಗಿದವು.`ಫುಟ್‌ಪಾತ್‌ಗಳು ಪಾದಚಾರಿಗಳಿಗೆ ಮಾತ್ರ ಬಳಕೆಯಾಗುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಇದು ಅನುಕೂಲವಾಗಲಿದೆ. ಪಾಲಿಕೆಯು ಪಾದಚಾರಿಗಳ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಳ್ಳಬೇಕು' ಎನ್ನುತ್ತಾರೆ ವಿದ್ಯಾರ್ಥಿ ಅಮಿತ್ ದೇಶಪಾಂಡೆ.`ನಗರದ ರಸ್ತೆಗಳ ಫುಟ್‌ಪಾತ್‌ಗಳ ಮೇಲೆ ವಾಹನ ನಿಲುಗಡೆ ಮಾಡುವವರಿಗೆ ಸಂಚಾರ ಪೊಲೀಸರು  ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದರೆ ಮಾತ್ರ ಫುಟ್‌ಪಾತ್‌ಗಳು ಪಾದಚಾರಿಗಳ ಸಂಚಾರಕ್ಕೆ ಮುಕ್ತವಾಗಿ ದೊರೆಯಲು ಸಾಧ್ಯ' ಎಂದು ಎ.ಎಂ. ಪಟೇಲ್ ಅಭಿಪ್ರಾಯಪಡುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.