ಶುಕ್ರವಾರ, ಜೂನ್ 18, 2021
23 °C
ಜೂನಿಯರ್ ಮಹಿಳಾ ಹಾಕಿ

ವಿಜಯದ ನಗೆ ಬೀರಿದ ಕರ್ನಾಟಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬುಧವಾರ ಬೆಳಿಗ್ಗೆಯ ಅಹ್ಲಾದಕರ ವಾತಾವರಣದಲ್ಲಿ ಆತಿಥೇಯ ಕರ್ನಾಟಕದ  ತಂಡವು ಚಾಮುಂಡಿ ವಿಹಾರದ ಆಸ್ಟ್ರೋ ಟರ್ಫ್‌ನಲ್ಲಿ ನಡೆಯುತ್ತಿರುವ 4ನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ‘ಎ‘ ಡಿವಿಷನ್ ಹಾಕಿ ಟೂರ್ನಿಯಲ್ಲಿ ವಿಜಯದ ನಗೆ ಬೀರಿತು.ಬಿ ಗುಂಪಿನ ಎರಡನೇ ಲೀಗ್ ಪಂದ್ಯದಲ್ಲಿ ಸಂಘಟಿತ ಹೋರಾಟ ಪ್ರದರ್ಶಿಸಿದ ಆತಿಥೇಯ ತಂಡವು 4–1ರಿಂದ ಭೋಪಾಲ್ ತಂಡದ ವಿರುದ್ಧ ಜಯ ಗಳಿಸಿತು. ಮಂಗಳವಾರ ಮಧ್ಯಪ್ರದೇಶ ವಿರುದ್ಧ ಸೋತಿದ್ದ ಸಂಧ್ಯಾ ನೇತೃತ್ವದ ಕರ್ನಾಟಕ ತಂಡಕ್ಕೆ, ಇಂದಿನ ಪಂದ್ಯದ ಮೊದಲಾರ್ಧದಲ್ಲಿ ಭೋಪಾಲ್ ತಂಡವು ಸಮಬಲದ ಪೈಪೋಟಿ ನೀಡಿತು. ಉಭಯ ತಂಡಗಳೂ 34 ನಿಮಿಷಗಳವರೆಗೆ ಒಂದೂ ಗೋಲು ಗಳಿಸಿರಲಿಲ್ಲ.ಪ್ರಥಮಾರ್ಧದ ವಿರಾಮಕ್ಕೆ ಒಂದು ನಿಮಿಷ ಬಾಕಿಯಿದ್ದಾಗ ಗೋಲುಪೆಟ್ಟಿಗೆ ಎಡಬದಿಯಿಂದ ಮೂವರು ರಕ್ಷಣಾ ಆಟಗಾರ್ತಿಯರು ಮತ್ತು ಗೋಲ್‌ಕೀಪರ್ ತಲೆಯ ಮೇಲಿಂದ ಗೋಲುಪೆಟ್ಟಿಗೆ ಚೆಂಡನ್ನು ಕಳಿಸಿದ ಎನ್. ರಮ್ಯಾ ತಂಡದ ಖಾತೆ ತೆರೆದರು. ವಿರಾಮದ ನಂತರ ಮಿಂಚಿದ ಸಿ.ಜಿ. ಸುಷ್ಮಾ (43ನಿ) ನಾಯಕಿ ಎಚ್‌.ಪಿ. ಸಂಧ್ಯಾ (47ನಿ) ಮತ್ತು ನಿಹಾ (50ನಿ) ಏಳು ನಿಮಿಷಗಳ ಅಂತರದಲ್ಲಿ ತಲಾ ಒಂದು ಗೋಲು ಹೊಡೆದು ತಂಡಕ್ಕೆ  4–0 ಅಂತರದ ಮುನ್ನಡೆ ನೀಡಿದರು.ಇಷ್ಟಾದರೂ ಛಲ ಬಿಡದ ಭೋಪಾಲ್ ಆಟ ಗಾರ್ತಿಯರು ಆಕ್ರಮಣಕಾರಿ ಆಟ ಪ್ರದರ್ಶಿಸುವು ದನ್ನು ಮುಂದುವರೆಸಿದ್ದರು. ಆದರೆ ಕರ್ನಾಟಕದ ಗೋಲ್‌ಕೀಪರ್ ನಿಶಾ ತಮ್ಮ ಚುರುಕಿನ ಪ್ರದರ್ಶನದಿಂದ  ಎದುರಾಳಿಗಳಿಗೆ ಅಡ್ಡವಾದರು. ಮೂರು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸುವಲ್ಲಿ ಭೋಪಾಲ್ ಆಟಗಾರ್ತಿಯರು ವಿಫಲರಾದರು. ಆದರೆ, 56ನೇ ನಿಮಿಷದಲ್ಲಿ ಪೂಜಾ ಯಾದವ್ ಒಂದು ಗೋಲು ಹೊಡೆದರು.

ಪಂದ್ಯ ಮುಗಿಯುವ ಕೊನೆಯಲ್ಲಿ ಕರ್ನಾಟಕದ ನಾಯಕಿ ಸಂಧ್ಯಾ ಮತ್ತೊಂದು ಬಾರಿ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಹೊಡೆದರು. ಆದರೆ ಚೆಂಡು ಗುರಿ ಮುಟ್ಟುವುದರೊಳಗೆ ಪಂದ್ಯದ ಮುಕ್ತಾಯದ ಸೂಚನೆ ನೀಡಲಾಗಿದ್ದರಿಂದ ಆ ಗೋಲನ್ನು ಪರಿಗಣಿಸ ಲಿಲ್ಲ. ನಾಳೆ ಸಂಜೆ 4 ಗಂಟೆಗೆ ನಡೆಯಲಿರುವ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕವು ದೆಹಲಿ ತಂಡವನ್ನು ಎದುರಿಸಲಿದೆ.ಬೆಳಿಗ್ಗೆ ನಡೆದ ‘ಡಿ’ ಗುಂಪಿನ  ಪಂದ್ಯದಲ್ಲಿ ಒಡಿಶಾ ತಂಡವು 3–0 (2–0)ಯಿಂದ ಪಂಜಾಬ್ ವಿರುದ್ಧ ಜಯ ಗಳಿಸಿತು. ಎರಡು ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಿನಲ್ಲಿ ಪರಿವರ್ತಿಸಿದ ಒಡಿಶಾ ತಂಡವು ಗೆಲುವಿ ನ ನಗೆ ಬೀರಿದರೆ, ಉತ್ತಮ ಆಟಗಾರ್ತಿಯರು ಇದ್ದ ಪಂಜಾಬ್ ತಂಡ ಸೆಮಿಫೈನಲ್‌ಗೆ ಸಾಗುವ ಅವಕಾಶ ವನ್ನು ಕಳೆದುಕೊಂಡಿತು. ಅಂಬಿಕಾ ಟೋಪೊ (9), ಅಶ್ಮಿತಾ ಬಾರ್ಲಾ (33ನಿ) ಪೆನಾಲ್ಟಿ ಕಾರ್ನರ್‌ ಗಳನ್ನು ಗೋಲುಗಳನ್ನು ಪರಿವರ್ತಿಸಿದರು. ಸರೋಜಿನಿ ಎಕ್ಕಾ (54ನಿ) ಒಂದು ಗೋಲಿನ ಕಾಣಿಕೆ ನೀಡಿದರು.ಮಧ್ಯಪ್ರದೇಶಕ್ಕೆ ಜಯ: ಕಳೆದ ಬಾರಿಯ ರನ್ನರ್ಸ್ ಅಪ್ ಮಧ್ಯ ಪ್ರದೇಶ ತಂಡವು ಸಂಜೆ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ 5–0(2–0)ಯಿಂದ ದೆಹಲಿ ವಿರುದ್ಧ ಜಯಿಸಿತು.  ‘ಡಿ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮುಂಬೈ ಹಾಕಿ ಅಸೋಸಿಯೇಷನ್ ಲಿಮಿಟೆಡ್ ತಂಡವು 7–0 (2–0)ಯಿಂದ ಬಿಹಾರ ವಿರುದ್ಧ ಜಯಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.