ವಿಜಾಪುರ: ಗಣೇಶನಿಗೆ ಸಂಭ್ರಮದ ವಿದಾಯ

ಮಂಗಳವಾರ, ಮೇ 21, 2019
31 °C

ವಿಜಾಪುರ: ಗಣೇಶನಿಗೆ ಸಂಭ್ರಮದ ವಿದಾಯ

Published:
Updated:

ವಿಜಾಪುರ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಬಹುತೇಕ ಗಣೇಶ ವಿಗ್ರಹಗಳನ್ನು ಬುಧವಾರ ರಾತ್ರಿ ವಿಸರ್ಜಿಸಲಾಯಿತು.ವಿಜಾಪುರ ನಗರದಲ್ಲಿ 250ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಏಳನೇ ದಿನವಾದ ಬುಧವಾರ ಅವುಗಳಲ್ಲಿ ಬಹುತೇಕ ಮೂರ್ತಿಗಳ ವಿಸರ್ಜನೆ ನಡೆಯಿತು. ಗಣೇಶೋತ್ಸವ ಮೆರವಣಿಗೆಗೆ ಎರಡೆರಡು ಕಡೆಗಳಲ್ಲಿ ಸ್ವಾಗತ ಮತ್ತು ಸನ್ಮಾನದ ಭಾಗ್ಯ ಇತ್ತು.ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಸ್ವಾಮಿ ವಿವೇಕಾನಂದ ಸೇನೆ ಹಾಗೂ ಗಜಾನನ ಮಹಾಮಂಡಳದವರು ಸಿದ್ಧೇಶ್ವರ ದೇವಸ್ಥಾನದ ಎದುರು ಸಮಾರಂಭ ನಡೆಸಿದರೆ, ಶಾಸಕ ಅಪ್ಪು ಪಟ್ಟಣಶೆಟ್ಟಿ ನೇತೃತ್ವದ ಗಣೇಶೋತ್ಸವ ಮಹಾಮಂಡಳದವರು ಗಾಂಧಿ ಚೌಕ್‌ನಲ್ಲಿ ಸಭೆ ನಡೆಸಿದರು.ವಿವಿಧ ಬಡಾವಣೆಗಳಲ್ಲಿಯ ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಗಣೇಶ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸುತ್ತಿದ್ದಂತೆ ಈ ಮಂಡಳಿಯವರು ಅವರನ್ನು ಸ್ವಾಗತಿಸುತ್ತಿದ್ದರು. ಆ ಮಂಡಳಿಯ ಅಧ್ಯಕ್ಷರನ್ನು ಸನ್ಮಾನಿಸಿ ಬೀಳ್ಕೊಡುತ್ತಿದ್ದರು.ರಾತ್ರಿ 8 ಗಂಟೆಗೆ ಆರಂಭವಾದ ಈ ಸನ್ಮಾನ ಕಾರ್ಯಕ್ರಮ ಮಧ್ಯರಾತ್ರಿಯವರೆಗೂ ನಡೆಯಿತು.

ಗಣೇಶೋತ್ಸವದ ಸನ್ಮಾನ ಕಾರ್ಯಕ್ರಮ ಉಭಯ ಮುಖಂಡರ ಜಿದ್ದಾಜಿದ್ದಿ ರಾಜಕೀಯ ಕಣವಾಗಿಯೂ ಮಾರ್ಪಟ್ಟಿದ್ದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಗಾಂಧಿಚೌಕ್‌ನಲ್ಲಿ ನಡೆದ ಸಮಾರಂಭದಲ್ಲಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಪರಶುರಾಮ ರಜಪೂತ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಭೀಮಾಶಂಕರ ಹದನೂರ, ಎಸ್ಪಿ ಡಾ.ಡಿ.ಸಿ. ರಾಜಪ್ಪ ಮತ್ತಿತರರು ಪಾಲ್ಗೊಂಡಿದ್ದರು.ಸಿದ್ಧೇಶ್ವರ ದೇವಸ್ಥಾನದ ಎದುರು ನಡೆದ ಸಮಾರಂಭದಲ್ಲಿ ಶ್ರೀಶೈಲ ಗಚ್ಚಿನಮಠ, ಬಸಯ್ಯ ಹಿರೇಮಠ, ರಾಘು ಅಣ್ಣಿಗೇರಿ ಇತರರು ಪಾಲ್ಗೊಂಡಿದ್ದರು.ಅದ್ದೂರಿ ಮೆರವಣಿಗೆ: ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ್ದ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಗಣೇಶ ಮೂರ್ತಿ ಎದುರು ಇಟ್ಟಿದ್ದ ಹಣ್ಣು-ಹಂಪಲು, ಗಣೇಶನಿಗೆ ತೊಡಿಸಿದ್ದ ಆಭರಣ, ಪೂಜಾ ಸಾಮಗ್ರಿಗಳನ್ನು ಭಕ್ತರಿಗೆ ಹರಾಜು ಮೂಲಕ ನೀಡಿ ಗಣೇಶೋತ್ಸವ ಮೆರವಣಿಗೆ ಆರಂಭಿಸಿದರು.ಬ್ರಾಸ್ ಬ್ಯಾಂಡ್, ಡಾಲ್ಬಿ, ಬ್ಯಾಂಜೋ ಹಾಗೂ ಧ್ವನಿವರ್ಧಕಗಳ ಭರಾಟೆ ಹೆಚ್ಚಿತ್ತು. ಹಾಡಿಗೆ ತಕ್ಕಂತೆ ಯುವಕರು ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸುತ್ತಿದ್ದರು. ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸುತ್ತಿದ್ದರು. `ಗಣಪತಿ ಬಪ್ಪಾ ಮೋರಯಾ...~ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಗಣೇಶ ವಿಗ್ರಹಗಳನ್ನು ಇಲ್ಲಿಯ ತಾಜಬಾವಡಿ, ಚಂದಾಬಾವಡಿಗಳಲ್ಲಿ ವಿಸರ್ಜಿಸಲಾಯಿತು.ಅನ್ನ ಸಂತರ್ಪಣೆ: ವಿಜಾಪುರದ ಜೋಳದ ಬಜಾರ ರಸ್ತೆಯ ಶಂಕರ ಗಜಾನನ ಉತ್ಸವ ಸಮಿತಿಯಿಂದ ಗಣೇಶೋತ್ಸವದ ಅಂಗವಾಗಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಶಾಸಕ ಅಪ್ಪು ಪಟ್ಟಣಶೆಟ್ಟಿ, ಉತ್ಸವ ಸಮಿತಿಯ ಅಧ್ಯಕ್ಷ ಪೀರಾ ರೋಜಿನದಾರ, ಮಹಾದೇವ ಹಲಕುಡೆ, ಮಹಾದೇವ ಪಾಟೀಲ, ಆರ್.ಕೆ. ಸುರಪುರ, ಜೆ.ಡಿ. ರಜಪೂತ, ದೀಪಕ ಶಿಂತ್ರೆ, ಉಮೇಶ ವಂದಾಲ ಇತರರು ಪಾಲ್ಗೊಂಡಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry