ಗುರುವಾರ , ಮೇ 13, 2021
40 °C

ವಿಜ್ಞಾನಿ ಬಂಧನ: ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ, ದೇಶ, ವಿದೇಶಗಳಿಂದ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಪಶ್ಚಿಮ ಬಂಗಾಳದ ವಿಜ್ಞಾನಿ ಪಾರ್ಥಸಾರಥಿ ರೇ ಮತ್ತು ಪ್ರಾಧ್ಯಾಪಕ ಅಂಬಿಕೇಶ್ ಮಹಾಪಾತ್ರಾ ಅವರ ಬಂಧನ ವಿರೋಧಿಸಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಪತ್ರ ಬರೆದಿರುವ ದೇಶ ಮತ್ತು ವಿದೇಶಗಳ ವಿಜ್ಞಾನಿಗಳು, ಕೂಡಲೇ ಈ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದ್ದಾರೆ.  ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವ್ಯಂಗ್ಯಚಿತ್ರವನ್ನು ಇ-ಮೇಲ್‌ನಲ್ಲಿ ಪ್ರಸಾರ ಮಾಡಿದ್ದಕ್ಕಾಗಿ ಪ್ರಾಧ್ಯಾಪಕ ಅಂಬಿಕೇಶ್ ಮಹಾಪಾತ್ರಾ ಮತ್ತು ಕೊಳೆಗೇರಿಗಳನ್ನು ಒಕ್ಕಲೆಬ್ಬಿಸುವ ಕ್ರಮದ ವಿರುದ್ಧ ಧ್ವನಿ ಎತ್ತಿದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಜೀವ ವಿಜ್ಞಾನಿ ಪಾರ್ಥಸಾರಥಿ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ.ಈ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ನೂರಾರು ವಿಜ್ಞಾನಿಗಳು, ಮಾನವ ಹಕ್ಕುಗಳ ದಮನವಾಗುತ್ತಿರುವ ಬಗ್ಗೆ ಕಳವಳಗೊಂಡಿದ್ದಾರೆ. ಇದು ಮಾನವ ಹಕ್ಕು ಮತ್ತು ಪ್ರಜಾಸತ್ತೆಯ ದಮನ ಎಂದು ಆರೋಪಿಸಿದ್ದಾರೆ.

ಪ್ರಧಾನಿಗೆ ಬರೆದ ಪತ್ರಕ್ಕೆ ಅಮೆರಿಕದ ಪ್ರಾಧ್ಯಾಪಕ ನೋಮ್ ಚೋಮಸ್ಕಿ, ಎಸ್.ಎನ್.ಬೋಸ್, ಮೃಗಾಂಕ್ ಸುರ್, ಅಭಾ ಸುರ್, ಅರುಣಾ ರಾಯ್, ನಿಖಿಲ್ ದೇ ಸೇರಿದಂತೆ ಅಮೆರಿಕ, ಡೆನ್ಮಾರ್ಕ್, ಸಿಂಗಪುರ, ಸ್ವೀಡನ್‌ನ ಅನೇಕ ವಿಜ್ಞಾನಿಗಳು, ಪ್ರಾಧ್ಯಾಪಕರು ಸಹಿ ಹಾಕಿದ್ದಾರೆ.  ರೇ ವಿರುದ್ಧ ಪೊಲೀಸರು ಹೊರಿಸಿರುವ ಸುಳ್ಳು ಆರೋಪಗಳನ್ನು ಕೈಬಿಡಬೇಕು. ಕೊಳೆಗೇರಿ ಒಕ್ಕಲೆಬ್ಬಿಸುವ ಘಟನೆ ಮತ್ತು ಈ ಸಂದರ್ಭದಲ್ಲಿ ನಡೆದ ಮಾನವ ಹಕ್ಕುಗಳ ದಮನದ ಬಗ್ಗೆ ತನಿಖೆ ನಡೆಯಬೇಕು ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವ ಹಕ್ಕು ಎಲ್ಲರಿಗೂ ಇದ್ದು, ಅದನ್ನು ಹತ್ತಿಕ್ಕುವ ಕಾರ್ಯ ಬಿಡಬೇಕು. ವಿವಿಧ ಕ್ಷೇತ್ರಗಳ ಗಣ್ಯರು ಇಂತಹ ಹೋರಾಟಗಳಿಗೆ ಧುಮುಕಿದಾಗ ಸರ್ಕಾರ ಅವರ ಧ್ವನಿಯನ್ನು ಅಡಗಿಸುವ ಕೆಲಸಕ್ಕೆ ಕೈಹಾಕಬಾರದು ಎಂದು ಮನವಿ ಮಾಡಿದ್ದಾರೆ. ಆ ಮೂಲಕ ಪ್ರಜಾಪ್ರಭುತ್ವ ಪರಂಪರೆಯನ್ನು ಎತ್ತಿ ಹಿಡಿಯುವಂತೆ ವಿಜ್ಞಾನಿಗಳು ಕೋರಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.