ಸೋಮವಾರ, ಏಪ್ರಿಲ್ 19, 2021
32 °C

ವಿಜ್ಞಾನ, ತಂತ್ರಜ್ಞಾನ ಸಮಾನ ಅವಕಾಶ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮ ತ್ತೊಂದು “ಅಂತರರಾಷ್ಟ್ರೀಯ ಮಹಿಳಾ ದಿನ” ಬಂದಿದೆ. ಪ್ರತಿ ವರ್ಷದಂತೆ ಈ ವರ್ಷವೂ ಅದಕ್ಕೊಂದು ಘೋಷ ವಾಕ್ಯವಿದೆ. ಈ ವರ್ಷದ ಘೋಷ ವಾಕ್ಯದ ವಿಶೇಷವೆಂದರೆ, ಅದರೊಂದಿಗೆ “ವಿಜ್ಞಾನ ಮತ್ತು ತಂತ್ರಜ್ಞಾನ” ಸೇರಿಕೊಂಡಿರುವುದು.“ಶಿಕ್ಷಣ, ತರಬೇತಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಮಾನ ಲಭ್ಯತೆ-ಮಹಿಳೆಗೆ ಗೌರವಯುತವಾದ ಉದ್ಯೋಗಕ್ಕೆ ಹಾದಿ”. ಇದು ಈ ಬಾರಿಯ ಘೋಷ ವಾಕ್ಯ.ಇಂದು ಅಭಿವೃದ್ಧಿ ಹೊಂದಿದ ಹಾಗೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳೆರಡರಲ್ಲಿಯೂ ಉತ್ಕೃಷ್ಟ ಗುಣಮಟ್ಟದ, ಕೌಶಲ್ಯಪೂರ್ಣವಾದ ಮಾನವ ಸಂಪನ್ಮೂಲದ ಅಗತ್ಯವಿದೆ. ಹಾಗಾಗಿ ಲಭ್ಯವಿರುವ ಮಾನವ ಸಂಪನ್ಮೂಲಗಳೆಲ್ಲವನ್ನೂ ತಮ್ಮ ಅಭಿವೃದ್ಧಿಗೆ ಬಳಸಿಕೊಳ್ಳುವಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಕಾರ್ಯನಿರತವಾಗಿವೆ. ಈ ವರ್ಷದ ಘೋಷ ವಾಕ್ಯದಲ್ಲಿ ಕೇವಲ ಮಹಿಳೆಗೆ ಗೌರವಯುತವಾದ ಉದ್ಯೋಗಕ್ಕೆ ಮಾತ್ರ ಕರೆಯಿಲ್ಲ; ಬದಲಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಉನ್ನತ ಕ್ಷೇತ್ರಗಳಲ್ಲಿ ಮಹಿಳೆಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಆಶಯವೂ ಇದೆ.ಮಹಿಳೆಯ ಸಬಲೀಕರಣದ ಮೊದಲ ಹಂತವಾಗಿ ಆಕೆಗೆ ಶಿಕ್ಷಣ ನೀಡುವ ಪರಿಣಾಮಕಾರಿಯಾದ ಪ್ರಯತ್ನ ನಡೆಯುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಪ್ರವೇಶ ಗಣನೀಯ ಪ್ರಮಾಣದಲ್ಲಿ ಕಂಡುಬರುತ್ತಿದೆ. ಇಂದು ದುಡಿಯುವ ಮಹಿಳೆ ಎಲ್ಲ ರಂಗಗಳಲ್ಲಿಯೂ ಪ್ರವೇಶಿಸಿದ್ದಾಳೆ. ಭಾರತದಲ್ಲಿ ಸರ್ಕಾರದ ನೀತಿಗಳೂ, ಯೋಜನೆಗಳೂ ಮಹಿಳೆಯನ್ನು ಸಮಾನವಾಗಿ ಕಾಣುತ್ತಿವೆ.ಪ್ರಾಥಮಿಕ, ಪ್ರೌಢ ಹಾಗೂ ಸ್ನಾತಕ ಅಧ್ಯಯನಗಳ ಹಂತದಲ್ಲಿಯೂ ಹುಡುಗಿಯರು ಮುಂದಿದ್ದಾರೆ. ಕರ್ನಾಟಕದಲ್ಲಿ ಪ್ರತಿ ಬಾರಿಯೂ ಎಸ್.ಎಸ್.ಎಲ್.ಸಿ. ಪಿ.ಯು.ಸಿ. ಫಲಿತಾಂಶ ಪ್ರಕಟವಾದಾಗ ಹುಡುಗಿಯರ ಉತ್ತೀರ್ಣ ಪ್ರಮಾಣ ಹುಡುಗರಿಗಿಂತ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಅದೇ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉನ್ನತ ಪ್ರಶಸ್ತಿಯಾದ “ಶಾಂತಿ ಸ್ವರೂಪ ಭಟ್ನಾಗರ್‌”ಪ್ರಶಸ್ತಿ ಪ್ರಕಟವಾದಾಗ ಮಹಿಳೆಯರ ಸಂಖ್ಯೆ ತೀರಾ ಕಡಿಮೆ ಇರುವುದು ಕಂಡುಬರುತ್ತದೆ.ಉದಾ: 2009ರಲ್ಲಿ ಒಟ್ಟು ಪ್ರಶಸ್ತಿ ಪುರಸ್ಕೃತರ ಸಂಖ್ಯೆ 133. ಅದರಲ್ಲಿ ಮಹಿಳೆಯರು ಕೇವಲ 17 ಜನ ಮಾತ್ರ. ಹಾಗೆಯೇ ರಾಷ್ಟ್ರದ ಇನ್ನಿತರ ವಿಜ್ಞಾನ ಮತ್ತು ತಂತ್ರಜ್ಞಾನದ ಪುರಸ್ಕಾರಗಳಾಗಲೀ ಫೆಲೋಶಿಫ್‌ಗಳಾಗಲೀ ಮಹಿಳೆಯರಿಗೆ ದೂರವೇ.ಭಾರತದ ರಕ್ಷಣಾ ಮತ್ತು ಸಂಶೋಧನಾ ವಿಭಾಗದಲ್ಲಿರುವ ಸಂಸ್ಥೆಗಳಲ್ಲಿ (ಡಿಆರ್‌ಡಿಓ), ಕೌನ್ಸಿಲ್ ಫಾರ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್‌ಐಆರ್)ನ ಪ್ರಯೋಗಾಲಯಗಳಲ್ಲಿ, ಇಸ್ರೋ, ಭಾರತೀಯ ವಿಜ್ಞಾನ ಮಂದಿರ ಹಾಗೂ ಇನ್ನಿತರ ರಾಷ್ಟ್ರೀಯ ಮತ್ತು ತಂತ್ರಜ್ಞಾನ ಸಂಸ್ಥೆಗಳಲ್ಲಿ ಇರುವ ಮಹಿಳಾ ವಿಜ್ಞಾನಿಗಳ ಪ್ರಮಾಣ ಶೇಕಡಾ 20ಕ್ಕಿಂತಲೂ ಕಡಿಮೆ. ಆದರೆ ಇವೇ ಸಂಸ್ಥೆಗಳ ಕಾರ್ಯಾಲಯದ ಇತರೆ ಕೆಲಸಗಳಲ್ಲಿ ಸಾಕಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಹಾಗಾದರೆ, ಪ್ರೌಢಶಾಲೆ ಮತ್ತು ಪಿ.ಯು.ಸಿ. ಹಂತದಲ್ಲಿ ಉತ್ತಮ ಫಲಿತಾಂಶ ತೋರಿಸಿದ ಬಾಲಕಿಯರ ವಿದ್ಯಾಭ್ಯಾಸ ಮುಂದುವರಿಯಲಿಲ್ಲವೇ? ಪದವಿಯ ನಂತರ ಅವರ್ಯಾರೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಿಲ್ಲವೇ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಇದಕ್ಕೆ ಉತ್ತರವೇನು?.... ಮಹಿಳೆ ನಮ್ಮ ಕಣ್ಣಿಗೆ ಕಾಣುತ್ತಿರುವಂತೆ ಇಂದು ಎಲ್ಲ ಕ್ಷೇತ್ರಗಳಲ್ಲಿ ವೃತ್ತಿನಿರತಳಾಗಿದ್ದಾಳೆ. ರಕ್ಷಣಾದಳ, ರೈಲ್ವೆ, ಪತ್ರಿಕೋದ್ಯಮ, ವಾಯುದಳ ಹೀಗೆ ಮುಂದುವರಿದಿದ್ದಾಳೆ. ಆದರೆ.... ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಬಂದಾಗ “ಅಗೋಚರ ತಡೆ”(ಗ್ಲಾಸ್ ಸೀಲಿಂಗ್)ಯೊಂದು ಗಮನವಿಟ್ಟು ನೋಡಿದಾಗ ಕಂಡುಬರುತ್ತದೆ. ಇದಕ್ಕೆ ಕಾರಣಗಳು ಸ್ವತಃ ಮಹಿಳೆ ಹಾಗೂ ಆಕೆ ಒಗ್ಗೂಡಿಸಿಕೊಂಡಿರುವ ಆತ್ಮಸ್ಥೈರ್ಯ ಮತ್ತು ಸಾಮರ್ಥ್ಯಗಳನ್ನು ಹತ್ತಿಕ್ಕುವ ಸಾಮಾಜಿಕ ವ್ಯವಸ್ಥೆ.ಆನಂದೀ ಬಾಯಿ, ಅಣ್ಣಾಮಣಿ:ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮಹಿಳೆ ಎಂದಾಗ 1886ರಷ್ಟು ಹಿಂದೆಯೇ ತನ್ನ 19ನೆಯ ವಯಸ್ಸಿನಲ್ಲಿಯೇ ಅಮೆರಿಕಾಕ್ಕೆ ಹೋಗಿ ವೈದ್ಯ ವಿಜ್ಞಾನವನ್ನು ಅಧ್ಯಯನ ಮಾಡಿದ ಆನಂದೀ ಬಾಯಿ ಜೋಶಿ ನೆನಪಾಗುತ್ತಾರೆ. 1940ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದಲ್ಲಿ ನೊಬೆಲ್ ಪುರಸ್ಕೃತ ವಿಜ್ಞಾನಿ ಸರ್ ಸಿ.ವಿ.ರಾಮನ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆಗೆ ದಾಖಲಾದವರು ಕೇರಳದ “ಅಣ್ಣಾಮಣಿ”. ಹರಳುಗಳ ರೋಹಿತದ ಗುಣಧರ್ಮಗಳ ಅಧ್ಯಯನ ಮಾಡಿದ ಆಕೆ “5” ಸ್ವತಂತ್ರ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ನಂತರವೂ ಡಾಕ್ಟರೇಟ್ ಪಡೆಯಲಿಲ್ಲ. ಪುಣೆಯ ಹವಾಮಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ನಿವೃತ್ತರಾದ ಆಕೆ ಪ್ರಕಟಿಸಿದ ಸಂಶೋಧನೆಗಳು ಹಲವಾರು, ಆಕೆಗೆ ಸ್ನಾತಕೋತ್ತರ ಪದವಿ ಇರಲಿಲ್ಲ ಎಂಬ ಒಂದೇ ಕಾರಣದಿಂದ ಡಾಕ್ಟರೇಟ್ ಪದವಿಯನ್ನು ನಿರಾಕರಿಸಲಾಯಿತು.ಪತಿ ಪತ್ನಿಯರಿಬ್ಬರೂ ಒಂದೇ ವಿಭಾಗದಲ್ಲಿ “ಫ್ಯಾಕಲ್ಪಿ” ಪಡೆಯುವಂತಿಲ್ಲ ಎಂಬ ಅಲಿಖಿತ ನಿಯಮ ದರ್ಶನ್ ರಂಗನಾಥ್‌ರನ್ನು ಆ ಹುದ್ದೆಯಿಂದ ವಂಚಿಸಿತು. ಆಕೆಯ ಪತಿ ರಂಗನಾಥನ್ ಪಿ.ಪಿ.ಟಿ. ಕಾನ್ಪುರದಲ್ಲಿ ಅದೇ ವಿಭಾಗದಲ್ಲಿ ಇದ್ದರು.  “ಆಕೆಗೆ ಆ ಹುದ್ದೆ ದೊರಕಿದ್ದರೆ ಆಕೆ ಸಾವಯವ ರಸಾಯನಶಾಸ್ತ್ರದಲ್ಲಿ ಮಹತ್ತರವಾದುದನ್ನು ಸಾಧಿಸುತ್ತಿದ್ದಳು. ಈ ನೋವು ನನ್ನನ್ನು ಸದಾ ಬಾಧಿಸುತ್ತದೆ” ಎಂದು ಆಕೆಯ ಪತಿ ರಂಗನಾಥನ್ ಒಂದೆಡೆ ಬರೆದಿದ್ದಾರೆ. ಪ್ರತಿಷ್ಠಿತ ಸರ್ಕಾರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು, ರಾಷ್ಟ್ರೀಯ ವಿಜ್ಞಾನ ಪ್ರಯೋಗಶಾಲೆಗಳು ಮುಂತಾದ ಸಂಸ್ಥೆಗಳಲ್ಲಿ ಮಹಿಳೆ ನಿರ್ದೇಶಕರಂತಹ ಉನ್ನತ ಹುದ್ದೆಗೇರುವ ಅವಕಾಶಗಳು ದೊರೆಯುವುದೇ ಇಲ್ಲ. ಪತಿ ಪತ್ನಿಯರು ಒಂದೇ ಕ್ಷೇತ್ರದಲ್ಲಿ ಇದ್ದಾಗ ಮಹಿಳೆ ಅವಕಾಶ ವಂಚಿತಳಾಗುತ್ತಾಳೆ.ಹಾಗಾದರೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತೀಯ ಮಹಿಳೆಯ ಸಾಧನೆ ಶೂನ್ಯವೇ? ಎಂದರೆ ಖಂಡಿತಾ ಇಲ್ಲ. ತಮ್ಮೆಲ್ಲ ಸಾಂಸಾರಿಕ ತೊಂದರೆಗಳು ಹಾಗೂ ಅಡೆತಡೆಗಳ ನಡುವೆಯೂ ಮಹಿಳೆಯರು ಸಾಧನೆ ಮಾಡಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಪತಿ ಸಂಶೋಧನೆಯಲ್ಲಿ ತೊಡಗಿದ್ದರೆ ನಿತ್ಯದ ಕೌಟುಂಬಿಕ ಜವಾಬ್ದಾರಿಗಳಿಂದ ಅವನು ಸಂಪೂರ್ಣ ವಿಮುಖನಾಗಬಹುದು. ಆದರೆ ಮಹಿಳೆ ಹಾಗಿರಲು ಸಾಧ್ಯವಿಲ್ಲ. ಒಂದು ವೇಳೆ ಆಕೆ ಹಾಗೆ ಮಾಡಿದಲ್ಲಿ ಕೌಟುಂಬಿಕ ಸುಖ ಸಂತೋಷಗಳಲ್ಲಿ ಕೊರತೆ, ಕುಟುಂಬದ ಸದಸ್ಯರ ಅಸಹಕಾರ ಕಂಡುಬರುತ್ತದೆ. ಹೀಗಾಗಿ ನಿರ್ದೇಶಕರಂತಹ ಹುದ್ದೆಯೊಂದಿಗೆ ಹೆಚ್ಚಾಗುವ ಜವಾಬ್ದಾರಿ, ಹಾಕಬೇಕಾದ ಸಮಯ, ಇಲ್ಲವೇ ಮನೆಯಿಂದ ದೂರವಿರಬೇಕಾದ ಪ್ರವಾಸದ ಸನ್ನಿವೇಶಗಳಿಂದಾಗಿ ಮಹಿಳೆ ತಾನಾಗಿಯೇ ಹಿಂದೆಗೆಯುತ್ತಾಳೆ. ಇದ್ದುದರಲ್ಲಿ ತೃಪ್ತಿ ಪಡೆಯುವ ಮಧ್ಯಮ ಹಾದಿಯನ್ನು ಅನುಸರಿಸುತ್ತಾಳೆ. ಇವೆಲ್ಲವನ್ನೂ ಗಮನಿಸಿದಾಗ ಅಂತರರಾಷ್ಟ್ರೀಯ ಮಹಿಳಾ ದಿನದ ಈ ವರ್ಷದ ಘೋಷ ವಾಕ್ಯವನ್ನು ಮತ್ತಷ್ಟು ವಿಶ್ಲೇಷಿಸುವುದು ಅಗತ್ಯವೆನಿಸುತ್ತದೆ. ಪುರುಷ ಪ್ರಧಾನವಾಗಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಮಹಿಳೆಗೇಕೆ? ಎಂದಾಗ ಅದು ಇಂದಿನ ಮತ್ತು ಭವಿಷ್ಯದ ಸಮಾಜದ ಸಮಾನತೆಗಾಗಿ ಎಂದು ಉತ್ತರಿಸಬೇಕಾಗುತ್ತದೆ. ಇಂದು ಕೇವಲ ಮಧ್ಯಮ ಹಾಗೂ ಮೇಲ್ವರ್ಗದವರಿಗೆ ಮಾತ್ರ ನಿಲುಕುತ್ತಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳು ಭಾರತದ ಕೆಳವರ್ಗದ ಮಹಿಳೆಗೂ ದೊರೆಯುವಂತಾದಾಗ, ಮಹಿಳೆಗೆ ಆರೋಗ್ಯಯುತ ಜೀವನ, ಹೆಚ್ಚಾದ ಸಾಮರ್ಥ್ಯ ಮತ್ತು ಹಕ್ಕುಗಳು ದೊರೆಯುತ್ತವೆ.ಮಹಿಳಾಪರವಾದ, ಆಕೆಯ ಜೀವನ ಸುಧಾರಣೆಗೆ ಅವಶ್ಯಕವಾದ ತಂತ್ರಜ್ಞಾನದ ಅಭಿವೃದ್ಧಿ ಸಾಧ್ಯವಾಗುತ್ತದೆ. ತಂತ್ರಜ್ಞಾನ ಕೇವಲ ಸುಶಿಕ್ಷಿತರಿಗಾಗಿ ಮಾತ್ರವಲ್ಲ ಎನ್ನುವುದನ್ನು ನಾವೆಲ್ಲ ನೆನಪಿಡಬೇಕು. ಆದರೆ ಭಾರತದಲ್ಲಿ ಸಧ್ಯದಲ್ಲಿರುವ ಪರಿಸ್ಥಿತಿ ಎಂದರೆ-* ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಹಂತದಲ್ಲಿ ಬಾಲಕಿಯರು ಸಾಕಷ್ಟಿದ್ದರೂ ಉನ್ನತ ಶಿಕ್ಷಣದಲ್ಲಿ ಲಿಂಗ ಅಸಮಾನತೆ ಕಂಡುಬರುತ್ತದೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಹಲವಾರು ಸಂಸ್ಥೆಗಳಲ್ಲಿ ಮಹಿಳೆಯರು ಉದ್ಯೋಗಿಗಳಾಗಿದ್ದರೂ ಸಹ ವಿಶೇಷ ಪರಿಣತಿ ಹಾಗೂ ಪದೋನ್ನತಿಯಂತಹ ವಿಷಯಗಳು ಬಂದಾಗ ಅವರು ಅವಕಾಶ ವಂಚಿತರಾಗುತ್ತಾರೆ.

* ವಿಜ್ಞಾನ ಸಂಸ್ಥೆಗಳಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬಹುದಾದ ಮುಖ್ಯ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ತೀರಾ ಕಡಿಮೆ.

* ನಿಯಮಗಳು ಹಾಗೂ ಕಾರ್ಯ ಯೋಜನೆಗಳು ಈ ನಿಟ್ಟಿನಲ್ಲಿ ಮಹಿಳಾ ಪೂರಕವಾಗಿಲ್ಲ. ಇರುವ ವಿಶೇಷ ಸವಲತ್ತುಗಳು ಅವರಿಗೆ ದೊರೆತಿಲ್ಲ.ಇವೆಲ್ಲವೂ ಈ ವರ್ಷ ಮತ್ತೊಮ್ಮೆ ಚರ್ಚೆಗೆ ಒಳಪಡಬೇಕಾಗಿದೆ. ಮಹಿಳೆಯರೂ ಈ ನಿಟ್ಟಿನಲ್ಲಿ ಪ್ರಯತ್ನ ಕೈಗೊಳ್ಳಬೇಕಾಗಿದೆ. ಸಂಸ್ಥೆಗಳಲ್ಲಿ ಮಹಿಳಾ ಅಧಿಕಾರಿಗಳೇ ತಮ್ಮ ಮಹಿಳಾ ಸಹೋದ್ಯೋಗಿಗಳ ಉನ್ನತಿಗೆ ತಡೆ ಹಾಕುವುದನ್ನು ನಿಲ್ಲಿಸಬೇಕು.ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆ ಮುಂದುವರಿಯಬೇಕಾದರೆ, ಕೇವಲ ಸರ್ಕಾರದ ನಿಯಮಗಳು ಕಾನೂನುಗಳು ಸಾಲುವುದಿಲ್ಲ. ಕೌಟುಂಬಿಕ ನೆಲೆಯಲ್ಲಿ ಆಕೆಗೆ ಸಂಪೂರ್ಣ ಸಹಕಾರದ ಅವಶ್ಯಕತೆ ಇದೆ. ರಾಷ್ಟ್ರೀಯ ಸಂಸ್ಥೆಗಳಲ್ಲಿ ನಡೆಯುವ ಸಂಶೋಧನೆಗಳೂ ತಂತ್ರಜ್ಞಾನಗಳೂ ಮಹಿಳೆಯನ್ನು ಗಮನದಲ್ಲಿಟ್ಟುಕೊಂಡು ರೂಪಿತವಾಗಬೇಕಾಗಿದೆ.1996ರಲ್ಲಿ  ವಿಶ್ವಸಂಸ್ಥೆಯಲ್ಲಿ ಸ್ಥಾಪಿತವಾದ “ಜೆಂಡರ್ ಸಲಹಾ ಮಂಡಳಿ” ಮಹಿಳೆಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ನಿಯಮಗಳನ್ನು ರೂಪಿಸಿದೆ. ಇತ್ತೀಚಿನ ವಿಶ್ವಬ್ಯಾಂಕ್‌ನ ಅಧ್ಯಯನದ ವರದಿಯಂತೆ ಯಾವ ರಾಜ್ಯದಲ್ಲಿ ಮಹಿಳೆ ಹೆಚ್ಚು ಹೆಚ್ಚಾಗಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾಳೆಯೋ ಅಲ್ಲಿ ಬಡತನ ಕಡಿಮೆ ಇದೆ. ಹೊಲಗೆಲಸಗಳನ್ನು ಮಾಡಬಲ್ಲ ಮಹಿಳೆ ತಂತ್ರಜ್ಞಾನವನ್ನೂ ನಿಭಾಯಿಸಬಲ್ಲಳು. ಉದಾ: ಹಿಮಾಚಲ ಪ್ರದೇಶದಲ್ಲಿ ಮಾಧ್ಯಮಿಕ ಶಾಲೆಗೂ ಹೋಗದ ಮಹಿಳೆಯರು ಕೊಳವೆ ಬಾವಿಗಳ ರಿಪೇರಿ ಹಾಗೂ ಕಂಪ್ಯೂಟರ್ ದತ್ತಾಂಶ ನಿರ್ವಹಣೆಯ ಕೆಲಸವನ್ನು ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದಾರೆ.ತಮಿಳುನಾಡಿನ ಹೂವು ಮಾರುವ ಹುಡುಗಿಯರು ಹೂವಿನ ತಾಜಾತನವನ್ನು ರಕ್ಷಿಸುವ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಭೂತಾನಿನ ಕರಕುಶಲ ಕಲೆಯಲ್ಲಿ ತೊಡಗಿರುವ ಮಹಿಳೆಯರು ಆ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆಗೆ ಮುಂದಾಗಿ, ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.ಇವು ಕೇವಲ ಕೆಲವು ಉದಾಹರಣೆಗಳು ಮಾತ್ರ. ಆಕೆಗಿರುವ ಸಾಮರ್ಥ್ಯ ಅಪರಿಮಿತ. ಆಕೆಯನ್ನು ಪ್ರೋತ್ಸಾಹಿಸಲು ಯೋಜನೆಗಳೂ ಸರ್ಕಾರದ ನಿಯಮಾವಳಿಗಳಲ್ಲಿವೆ. ಆದರೆ ಬಳಕೆಯಲ್ಲಿರುವ ಅಲಿಖಿತ ನಿಯಮಗಳು, ದುಡಿಯುವ ಕ್ಷೇತ್ರದಲ್ಲಿ ಕಂಡುಬರುವ ಲಿಂಗ ಅಸಮಾನತೆ, ವೇತನ ತಾರತಮ್ಯ ಹಾಗೂ “ಅಗೋಚರ ಗೋಡೆಗಳು” ಅದೃಶ್ಯವಾದಾಗ ಮಾತ್ರ ಮಹಿಳೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪುರುಷನಿಗೆ ಸರಿ ಸಮನಾಗಿ ಬೆಳೆಯಬಲ್ಲಳು. ಇದರಿಂದ ಈ ಕ್ಷೇತ್ರ ಸಮಾಜದ ಮಹಿಳೆಯರ ಸಂಪನ್ಮೂಲಗಳ ಅಭಿವೃದ್ಧಿಗೆ ಬಳಕೆಯಾಗಬಲ್ಲದು. ಅದಕ್ಕಾಗಿ ಮಹಿಳೆಯೂ ಸೇರಿದಂತೆ ಎಲ್ಲರೂ ಪ್ರಯತ್ನಿಸಿದಾಗ ಮಾತ್ರ, ಈ ಬಾರಿಯ ಘೋಷ ವಾಕ್ಯ ಸಮರ್ಪಕವಾಗಿ ಅನುಷ್ಠಾನವಾಗಬಲ್ಲದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.