ಶನಿವಾರ, ಜನವರಿ 18, 2020
26 °C
ತಹಸಿಲ್ದಾರ್‌ ಮತ್ತು ಡಿವೈಎಸ್‌ಪಿಗೆ ಕಾಂಗ್ರೆಸ್‌ನಿಂದ ದೂರು

ವಿಡಿಯೊ ಚಿತ್ರೀಕರಣ: ಕಾಂಗ್ರೆಸ್‌ನಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿರಾಜಪೇಟೆ: ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ಚಲನವಲನವನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ ಉಪಾಧ್ಯಕ್ಷ  ಚಂದ್ರಶೇಖರ್‌ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.ಪಟ್ಟಣದ ಪಕ್ಷದ ಕಚೇರಿಯಿಂದ ಮೆರವಣಿಗೆ ಹೊರಟ ಕಾಂಗ್ರೆಸ್‌ ಕಾರ್ಯಕರ್ತರು ಪಟ್ಟಣ ಪಂಚಾಯಿತಿ ಕಚೇರಿಯ ಮುಂದೆ

ಘೋಷಣೆಗಳನ್ನು ಕೂಗಿದರು. ಪ್ರತಿಭಟನಾ ಮೆರವಣೆಗೆ ನಡೆಸಿ ಡಿವೈಎಸ್‌ಪಿ ಗೆ ಕಚೇರಿಗೆ ತೆರಳಿದರು.  ಕಾಂಗ್ರೆಸ್‌ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಟಿ. ಪ್ರದೀಪ್‌ರವರು  ಚಂದ್ರಶೇಖರ್‌ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿವೈಎಸ್‌ಪಿ ರವಿಕುಮಾರ್‌ ಅವರನ್ನು ಒತ್ತಾಯಿಸಿದರು. ಡಿವೈಎಸ್‌ಪಿ ರವಿಕುಮಾರ್‌, ದೂರು ಪರಿಶೀಲಿಸಿ ಚಂದ್ರಶೇಖರ್‌ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ನಂತರ, ತಾಲ್ಲೂಕು ಕಚೇರಿಗೆ ತೆರಳಿ, ತಹಶೀಲ್ದಾರ್‌ ಕೃಷ್ಣ ಅವರನ್ನು ಭೇಟಿ ಮಾಡಿದ ಕಾರ್ಯಕರ್ತರು ಚಂದ್ರಶೇಖರ್‌ ಅವರ ಸದಸ್ಯತ್ವವನ್ನು ರದ್ದುಪಡಿಸುವಂತೆ ಒತ್ತಾಯಿಸಿದರು.ಸ್ಥಾನಿಕ ಕಾಂಗ್ರೆಸ್‌ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀಣಾ ಅಚ್ಚಯ್ಯ ಮಾತನಾಡಿ, ಉಪಾಧ್ಯಕ್ಷರ ಕಾರ್ಯ ಖಂಡನಾರ್ಹ. ಮಹಿಳಾ ಸದಸ್ಯರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.ಸ್ಥಾನಿಕ ಕಾಂಗ್ರೆಸ್‌ ಸಮಿತಿಯ ಸದಸ್ಯೆ ಪದ್ಮಿನಿ ಪೊನ್ನಪ್ಪ ಮಾತನಾಡಿ, ಇದೊಂದು ನಾಚಿಕೆಗೇಡಿನ ಸಂಗತಿ. ಮಹಿಳಾ ಸದಸ್ಯರಿಗೆ ಸೂಕ್ತ ರಕ್ಷಣೆ ಕೊಡಬೇಕು. ದೇಚಮ್ಮ ಭಯದಲ್ಲಿ ಕಾರ್ಯನಿರ್ವಹಿಸುವುದರ ಬದಲು ಕಾಂಗ್ರೆಸ್‌ ಪಕ್ಷಕ್ಕೆ ಬಂದರೆ ಸ್ವಾಗತಿಸುವುದಾಗಿ ಹೇಳಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಸೇವಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಚಿಲ್ಲವಂಡ ಕಾವೇರಪ್ಪ,  ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ರಾಣು ಮಂದಣ್ಣ, ಪಂಚಾಯಿತಿಯ ಮಹಿಳಾ ಸದಸ್ಯರಾದ ಶೀಭಾ ಪೃಥ್ವಿನಾಥ್‌, ನಾಗಮ್ಮ, ಮಾಜಿ ಅಧ್ಯಕ್ಷ ವಿ.ಕೆ. ಸತೀಶ್‌, ಸಿ.ಕೆ. ಪೃಥ್ವಿನಾಥ್‌. ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಕರುಣ್‌ ಕಾಳಯ್ಯ ಮುಂತಾದವರಿದ್ದರು.ಬಿಗಿ ಪೊಲೀಸ್‌ ಬಂದೋಬಸ್ತು: ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಪಟ್ಟಣದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತು ಮಾಡಲಾಗಿತ್ತು. ಆರಂಭದಲ್ಲಿ ಪೊಲೀಸರು  ಪಥಸಂಚಲನ ನಡೆಸಿದರು. ನಂತರ ಪ್ರತಿಭಟನಾ ಮೆರವಣಿಗೆಯಲ್ಲಿ ಪೊಲೀಸ್‌ ಅಧಿಕಾರಿಗಳು, ಎರಡು ಜಿಲ್ಲಾ ಸಶಸ್ತ್ರ ಪೊಲೀಸ್‌ ಪಡೆಯ ವಾಹನಗಳೊಂದಿಗೆ ಅಧಿಕ ಸಂಖ್ಯೆಯಲ್ಲಿ ಪೊಲೀಸರು ಬಂದೋಬಸ್ತು ಕಾರ್ಯ ಕೈಗೊಂಡಿದ್ದರು.ಬಂದ್‌ ಮಾಡದಂತೆ ಬಿಜೆಪಿ ಮನವಿ: ಇಂದು ಬೆಳಿಗ್ಗೆ 10ಗಂಟೆಯಿಂದಲೇ ಬಿಜೆಪಿಯ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷ ಬಂದ್‌ಗೆ ಕರೆ ನೀಡಿರುವುದರ ವಿರುದ್ಧ ವರ್ತಕರಲ್ಲಿ ಬಂದ್‌ ಮಾಡದಂತೆ ವಿನಂತಿಸುತ್ತಿದ್ದರು. ಪೊಲೀಸ್‌ ರಕ್ಷಣೆ ಒದಗಿಸುವ ಭರವಸೆ ನೀಡಿ ವರ್ತಕರ ಮನವೊಲಿಸುವುದು ಕಂಡು ಬಂತು.ನಂತರ ಹೇಳಿಕೆ ನೀಡಿದ ವಿರಾಜಪೇಟೆ ಕ್ಷೇತ್ರ ಬಿಜೆಪಿ ಅಧ್ಯಕ್ಷರಾದ ಪಟ್ರಪಂಡ ರಘುನಾಣಯ್ಯ, ಪಕ್ಷದ ಆಂತರಿಕ ವಿಚಾರದಲ್ಲಿ ಕಾಂಗ್ರೆಸ್‌ ತಲೆ ಹಾಕಿದೆ. ರಾಜಕೀಯ ಲಾಭ ಪಡೆಯಲು ಕರೆ ನೀಡಿದ್ದ ಬಂದ್‌ ಸಂಪೂರ್ಣ ವಿಫಲಗೊಂಡಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)