ಮಂಗಳವಾರ, ಏಪ್ರಿಲ್ 20, 2021
32 °C

ವಿಡಿಯೊ ಬೇಡ ಆಡಿಯೊ ಸಾಕು: ಲೋಕಪಾಲ ಸಭೆಯಲ್ಲಿ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಪಾಲ ಮಸೂದೆ ಸಿದ್ಧಪಡಿಸಲು ರಚನೆಯಾಗಿರುವ ಜಂಟಿ ಸಮಿತಿ ಶನಿವಾರ ನಡೆಸಿದ  ಮೊತ್ತಮೊದಲ ಐತಿಹಾಸಿಕ ಸಭೆಯಲ್ಲಿ ಮಸೂದೆ ರಚನಾ ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ ಕೈಬಿಟ್ಟು ಧ್ವನಿಮುದ್ರಣ ಮಾತ್ರ ಮಾಡಲು ಒಮ್ಮತದಿಂದ ನಿರ್ಧರಿಸಲಾಯಿತು.

ಸಮಿತಿ ಅಧ್ಯಕ್ಷರಾದ ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ನಾರ್ಥ್ ಬ್ಲಾಕ್ ಕಚೇರಿಯಲ್ಲಿ ಬೆಳಿಗ್ಗೆ ಸಭೆ ಆರಂಭವಾಗುತ್ತಿದ್ದಂತೆ, ಸಭೆಯ ಸಂಪೂರ್ಣ ಕಲಾಪವನ್ನು ವಿಡಿಯೊ ಚಿತ್ರೀಕರಿಸುವ ಕುರಿತು ಸದಸ್ಯರ ನಡುವೆ ಚರ್ಚೆ ನಡೆಯಿತು.

ಸರ್ಕಾರಿ ಪರ ಸಚಿವರು ಇದಕ್ಕೆ ಉತ್ಸಾಹ ತೋರಲಿಲ್ಲ. ‘ವಿಡಿಯೊ ಚಿತ್ರೀಕರಣಕ್ಕೆ ನಮ್ಮ ವಿರೋಧವೇನೂ ಇಲ್ಲ. ಆದರೆ ಚಿತ್ರೀಕರಣ ನಡೆಸಿದರೆ ಕೆಲವು ಸದಸ್ಯರು ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ’ ಎಂದರು.

‘ಸಂಸದೀಯ ಸಮಿತಿಗಳಲ್ಲಿ ಸದಸ್ಯರು  ಪಕ್ಷ ಭಾವನೆ ಮೀರಿ ತೆರೆದ ಮನಸ್ಸಿನಿಂದ ಮಾತನಾಡುತ್ತಾರೆ. ಆದರೆ ಸಂಸತ್ತಿನಲ್ಲಿ ಸದಾ ಪಕ್ಷ ಭಾವನೆ ಚೌಕಟ್ಟಿನಲ್ಲೇ ಮಾತನಾಡುತ್ತಾರೆ’ ಎಂಬುದನ್ನು ಈ ಸಂದರ್ಭದಲ್ಲಿ ಪ್ರಣವ್  ಮುಖರ್ಜಿ ಸಭೆಯ ಗಮನಕ್ಕೆ ತಂದಾಗ ಎಲ್ಲರೂ ಒಮ್ಮತದಿಂದ ಸಭೆಗಳ ಕಲಾಪದ ವಿಡಿಯೊ ಚಿತ್ರೀಕರಣ ಬಿಟ್ಟು ಧ್ವನಿ ಮುದ್ರಿಕೆ ಮಾತ್ರ ಮಾಡಿಕೊಳ್ಳಲು ಒಪ್ಪಿಕೊಂಡರು.

ಈ ಮುನ್ನ, ಸಭೆಗಳ ಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ಬಹಿರಂಗ ಮಾಡಬೇಕೆಂಬುದು ಹಜಾರೆ ಬಳಗದ ಒತ್ತಾಯವಾಗಿತ್ತು. ಆದರೆ ಸರ್ಕಾರ, ಸಭೆಯ ನಿರ್ಣಯಗಳನ್ನು ಸುದ್ದಿಗೋಷ್ಠಿಗಳ ಮೂಲಕ ಮಾತ್ರ ಬಹಿರಂಗಗೊಳಿಸಲು ಒಪ್ಪಿಕೊಂಡಿದೆ.ಇದಕ್ಕೆ ಮುನ್ನ ನಾಗರಿಕ ಪ್ರತಿನಿಧಿಗಳಾಗಿರುವ ಐವರು ಸದಸ್ಯರು ತಮ್ಮ ಆಸ್ತಿಪಾಸ್ತಿ ಮತ್ತು ಋಣಭಾರ ಕುರಿತ ವಿವರವನ್ನು ಪ್ರಣವ್ ಅವರಿಗೆ ಸಲ್ಲಿಸಿದರು.

ಪ್ರಣವ್ ಮಾತನಾಡಿ, ‘ಪರಿಣಾಮಕಾರಿ ಲೋಕಪಾಲ ಮಸೂದೆಯನ್ನು ಜಾರಿಗೆ ತರಲು ನಾವು ನಿರ್ಧರಿಸಿದ್ದೇವೆ. ಆದರೆ ಅದು ಸಂವಿಧಾನದ ಚೌಕಟ್ಟಿನಲ್ಲಿರಬೇಕು’ ಎಂದರು.

ನಂತರ ಅಣ್ಣಾ ಹಜಾರೆ ಅವರು ಪ್ರಬಲ ಲೋಕಪಾಲ ಮಸೂದೆಯ ಅಗತ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು. ಈ ಸಂಬಂಧ ಸಾರ್ವಜನಿಕ ಚರ್ಚೆಯೂ ಸೇರಿದಂತೆ ದೇಶದಾದ್ಯಂತ ವ್ಯಾಪಕ ಚರ್ಚೆ ನಡೆಸಬೇಕೆಂದು ಪ್ರತಿಪಾದಿಸಿದರು.ಶಾಂತಿಭೂಷಣ್ ‘ಜನ ಲೋಕಪಾಲ ಮಸೂದೆ’ಯ ಕರಡು ಪ್ರತಿಯನ್ನು ಪ್ರಣವ್ ಅವರಿಗೆ ಸಲ್ಲಿಸಿದ ನಂತರ, ಈ ಮಸೂದೆಯ ಪ್ರಸ್ತಾವಗಳೇ ನೂತನ ಮಸೂದೆಗೆ ಆಧಾರವಾಗಬೇಕು ಎಂದು ಸಿವಿಲ್ ಸೊಸೈಟಿ ಸದಸ್ಯರು ಒತ್ತಾಯಿಸಿದರು.ಸರ್ಕಾರಿ ಪರ ಸದಸ್ಯರು ಇದನ್ನು ತಳ್ಳಿಹಾಕಿ. ‘ಲೋಕಪಾಲ ಮಸೂದೆಯ ಆಯಾಮಗಳ ಬಗ್ಗೆ ಹಲವಾರು ಸಂಘಟನೆಗಳ ಪ್ರಮುಖರು ಹಾಗೂ ವ್ಯಕ್ತಿಗಳು ಸರ್ಕಾರಕ್ಕೆ ಪ್ರಸ್ತಾವಗಳನ್ನು ಸಲ್ಲಿಸಿದ್ದಾರೆ. ಈ ಎಲ್ಲಾ ಪ್ರಸ್ತಾವಗಳನ್ನೂ ಕ್ರೋಡೀಕರಿಸಿ ಐವರು ಸರ್ಕಾರೇತರ ಸದಸ್ಯರಿಗೆ ಕಳುಹಿಸಿಕೊಡುತ್ತೇವೆ. ಆ ಸದಸ್ಯರು ಹೀಗೆ ಸಲ್ಲಿಕೆಯಾದ ಪ್ರಸ್ತಾವಗಳನ್ನು ತಮ್ಮ ಪ್ರತಿಕ್ರಿಯೆಯೊಂದಿಗೆ ಮೇ 2ಕ್ಕೆ ಮುನ್ನ ಸರ್ಕಾರಕ್ಕೆ ನೀಡಲಿದ್ದಾರೆ ಎಂದು ವಿವರಿಸಿದರು.

ಜಂಟಿ ಸಮಿತಿ ಸದಸ್ಯರು ಹಾಗೂ ಸಾಮಾಜಿಕ ಸಂಘ ಸಂಸ್ಥೆಗಳ ಪ್ರಮುಖರ ಸಮ್ಮುಖದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಬೇಕೆಂಬ ಸಲಹೆ ಕೇಳಿಬಂತು. ಆಗ ಸಚಿವರೊಬ್ಬರು ಕರಡು ರಚನೆ ಗಡುವು ಹತ್ತಿರದಲ್ಲೇ ಇದ್ದು, ಹೆಚ್ಚು ಕಾಲಾವಕಾಶ ಇಲ್ಲ ಎಂಬುದನ್ನು ಗಮನಕ್ಕೆ ತಂದರು. ಸಭೆಯು ಒಂದೂವರೆ ಗಂಟೆ ಕಾಲ ನಡೆಯಿತು.ಮೇ2: ಮತ್ತೆ ಸಭೆ

ನವದೆಹಲಿ (ಪಿಟಿಐ): ನಾಗರಿಕ ಪ್ರತಿನಿಧಿಗಳ ಸದಸ್ಯರು ಈ ಹಿಂದೆ ರಚಿಸಿದ್ದ ಲೋಕಪಾಲ ಮಸೂದೆ ಕರಡಿನಲ್ಲಿದ್ದ ಕೆಲ ಪ್ರಸ್ತಾವಗಳನ್ನು ಸರ್ಕಾರ ತೀವ್ರವಾಗಿ ಆಕ್ಷೇಪಿಸಿತ್ತು. ಶನಿವಾರ ಸಲ್ಲಿಸಿರುವ ಪರಿಷ್ಕೃತ ಕರಡು ಆವೃತ್ತಿ ಬಗ್ಗೆ ಸರ್ಕಾರ ಸಮಾಧಾನ ಹೊಂದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಲೋಕಪಾಲ ಆಯ್ಕೆ ಮಂಡಲಿಯಲ್ಲಿ ರಾಜ್ಯಸಭೆಯ ಸಭಾಪತಿ ಮತ್ತು ಲೋಕಸಭೆಯ ಸ್ಪೀಕರ್ ಅವರು ಇರಬೇಕು ಎಂಬ ಪ್ರಸ್ತಾವವನ್ನು ಹಳೆಯ ಕರಡು ಒಳಗೊಂಡಿತ್ತು. ಪರಿಷ್ಕೃತ ಕರಡಿನಲ್ಲಿ ಅವರ ಬದಲಿಗೆ ಪ್ರಧಾನ ಮಂತ್ರಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಸೇರಿಸಲಾಗಿದೆ.ಮೇ 2ರಂದು ಸಮಿತಿಯ 2ನೇ ಸಭೆ ನಡೆಯಲಿದ್ದು, ಹೊಸ ಮಸೂದೆ ರಚನೆ ಸಂಬಂಧ ದೇಶದಾದ್ಯಂತ ಸಾರ್ವಜನಿಕರೊಂದಿಗೆ ಯಾವ ರೀತಿಯಲ್ಲಿ ಸಮಾಲೋಚನೆ ನಡೆಸಬೇಕೆಂಬ ಬಗ್ಗೆ ಹಾಗೂ ಮಸೂದೆಯನ್ನು ಯಾವ ಮೂಲತತ್ವದಮೇಲೆ ರಚಿಸಬೇಕೆಂಬ ಕುರಿತು ಅಂದು ನಿರ್ಧರಿಸಲಾಗುವುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.