ಸೋಮವಾರ, ಮಾರ್ಚ್ 8, 2021
31 °C

ವಿದೇಶಾಂಗ ಸೇವೆ: ಉದ್ಯಮಿಗಳಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದೇಶಾಂಗ ಸೇವೆ: ಉದ್ಯಮಿಗಳಿಗೆ ಆಹ್ವಾನ

ಬೆಂಗಳೂರು: ಉದ್ಯಮ ವಲಯದವರನ್ನೂ ವಿದೇಶಾಂಗ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ತಿಳಿಸಿದರು.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಮಂಗಳವಾರ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿದೇಶಾಂಗ ವ್ಯವಹಾರಗಳ ನಿರ್ವಹಣೆಗೆ ರಾಯಭಾರಿಗಳ ಕೊರತೆ ಇದ್ದು, ಉದ್ಯಮದ ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವುದರಿಂದ ಭಾರತ ಮತ್ತು ಹೊರದೇಶಗಳ ನಡುವಿನ ಆರ್ಥಿಕ ಸಂಬಂಧಗಳ ನಿರ್ವಹಣೆಗೆ ಸಹಾಯವಾಗಲಿದೆ ಎಂದು ಹೇಳಿದರು.ಭಾರತದ ವಿದೇಶಾಂಗ ಸೇವೆಯಲ್ಲಿ (ಐಎಫ್‌ಎಸ್) ಸದ್ಯ 700 ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇತರೆ ದೇಶಗಳ ನಡುವೆ ಆರ್ಥಿಕ ಒಪ್ಪಂದಗಳು ಹೆಚ್ಚಿವೆ. ಈ ಆರ್ಥಿಕ ಒಪ್ಪಂದಗಳ ಸಮರ್ಥ ನಿರ್ವಹಣೆಗೆ ಭಾರತೀಯ ರಾಯಭಾರಿಗಳ ಸಂಖ್ಯೆಯನ್ನು 2018ರ ವೇಳೆಗೆ 1,200ಕ್ಕೆ ಹೆಚ್ಚಿಸುವ ಅಗತ್ಯವಿದೆ ಎಂದು ತಿಳಿಸಿದರು.ಉದ್ಯಮಿಗಳು ವಿದೇಶಾಂಗ ವ್ಯವಹಾರಗಳ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸುವುದರಿಂದ ಹೊರದೇಶಗಳಲ್ಲಿ ಭಾರತದ ಉದ್ಯಮಗಳನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿದೆ. ಕನಿಷ್ಠ ಎರಡು ವರ್ಷ ರಾಯಭಾರಿಗಳಾಗಿ ಸೇವೆ ಸಲ್ಲಿಸಿ ಮತ್ತೆ ತಮ್ಮ ಉದ್ಯಮಗಳತ್ತ ಮರಳಬಹುದು ಎಂದು ಸಲಹೆ ನೀಡಿದರು.`ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದ್ದು, ಇವುಗಳ ಬೆಳವಣಿಗೆಗೆ ಸರ್ಕಾರದಿಂದ ಅಗತ್ಯ ಬೆಂಬಲ ನೀಡಲಾಗುವುದು. ನಮ್ಮಲ್ಲಿ ಹೇರಳವಾದ ಮಾನವ ಸಂಪತ್ತು ಇದ್ದು, ಈ ನಿಟ್ಟಿನಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು' ಎಂದು ಕಿವಿಮಾತು ಹೇಳಿದರು.ಪಾಕಿಸ್ತಾನದಲ್ಲಿ ಸುಸ್ಥಿರ ಆಡಳಿತ ನಿರ್ಮಾಣವಾದಲ್ಲಿ ಎರಡು ದೇಶಗಳ ನಡುವಿನ ವ್ಯವಹಾರಗಳ ಸಂಬಂಧ ವೃದ್ಧಿಯಾಗಲಿದೆ. ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗೂ ಸಹಾಯವಾಗಲಿದೆ. ಈ ಸಂಬಂಧ ಎರಡೂ ದೇಶಗಳಿಂದ ಶಾಂತಿ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮೈಸೂರಿನಲ್ಲಿ ಪಾಸ್‌ಪೋರ್ಟ್ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಬೇಕು ಎಂಬ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಪಾಸ್‌ಪೋರ್ಟ್ ಪಡೆಯುವುದು ಪ್ರತಿಯೊಬ್ಬರ ಹಕ್ಕು. ವಿದೇಶದಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಪಾಸ್‌ಪೋರ್ಟ್ ನೀಡುವ ವ್ಯವಸ್ಥೆ ಜಾರಿಯಲ್ಲಿದೆ. ಜನವಸತಿಗೆ ಸಮೀಪದಲ್ಲಿ ಪಾಸ್‌ಪೋರ್ಟ್ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.