ಗುರುವಾರ , ಜೂನ್ 24, 2021
29 °C

ವಿದೇಶಿ ಪತ್ರಿಕೆಗಳಿಗೆ ಬೆರಗಾದ ದೇಸಿ ಹುಡುಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ನಗರದ ಮಹಾರಾಜ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿ ಗಳೆಲ್ಲ ತರಗತಿಗಳಿಗೆ ಹಾಜರಾಗದೆ

ಪತ್ರಿಕೆಗಳನ್ನು ತಿರುವಿ ಹಾಕಿ ಬೆರಗಾದರು!ಹಾಗೆ ತಿರುವಿ ಹಾಕುತ್ತಿದ್ದುದು ಗುರುವಾರದ ಸಂಚಿಕೆಗಳನ್ನಲ್ಲ! ಹಳೆಯ ಪತ್ರಿಕೆಗಳನ್ನು. ಅವುಗಳಲ್ಲಿದ್ದ ಚಿತ್ರಗಳನ್ನು, ಸುದ್ದಿಗಳನ್ನು ತಮ್ಮ ಮೊಬೈಲುಗಳಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹಾಗೆ ಅವರು ಕುತೂಹಲದಿಂದ ನೋಡಿದ, ಓದಿದ ಪತ್ರಿಕೆಗಳು ವಿದೇಶದವು. ನಿಜ, ಮಹಾರಾಜ ಕಾಲೇಜಿನ ಇಂಗ್ಲಿಷ್‌ ವಿಭಾಗ ಆಯೋಜಿಸಿದ್ದ ಅಪರೂಪದ ಈ ಕಾರ್ಯಕ್ರಮದಲ್ಲಿ ಅಮೆರಿಕ, ಜಪಾನ್, ಎಮನ್, ಒಮನ್, ತಾಂಜೇನಿಯಾ, ಖತಾರ್, ಕೆನಡಾ, ಕುವೈತ್, ಸ್ಪೇನ್, ಮಲೇಶಿಯಾ, ಸೌದಿ ಅರೇಬಿಯಾ, ಥಾಯ್ಲೆಂಡ್, ಮಾರಿಷಿಯಸ್, ಶ್ರೀಲಂಕಾ... ಹೀಗೆ 19 ದೇಶಗಳ  ಪತ್ರಿಕೆಗಳು ಪ್ರದರ್ಶನದಲ್ಲಿದ್ದವು.ಪತ್ರಿಕೆಯ ಹೆಸರು, ಸಂಪಾದಕರು ಯಾರು? ಪ್ರಕಾಶಕರು ಯಾರು? ದರ ಎಷ್ಟು? ಭಾರತದಲ್ಲಿ ಎಷ್ಟು ದರವಾಗುತ್ತದೆ? ಯಾವ ಭಾಷೆ... ಹೀಗೆ ಪ್ರತಿ ಪತ್ರಿಕೆಗಳ ವಿವರಗಳನ್ನು ಗೋಡೆಗಳ ಮೇಲೆ ಅಂಟಿಸಲಾಗಿತ್ತು.‘ಚೀನಾಗೆ ಹೋಗಿದ್ದಾಗ ಅಲ್ಲಿಯ ಪತ್ರಿಕೆಗಳನ್ನು ಸಂಗ್ರಹಿಸಿದೆ. ನಂತರ ಗೆಳೆಯರು, ಸಹೋದ್ಯೋಗಿಗಳು ವಿದೇಶದಿಂದ ತಂದ ಪತ್ರಿಕೆಗಳನ್ನು ಸಂಗ್ರಹಿಸಿ ಪ್ರದರ್ಶನ ಆಯೋಜಿಸಿದ್ದೇವೆ. ಇದರಲ್ಲಿ 2000ನಿಂದ 2013ರವರೆಗಿನ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕ, ಮಾಸಪತ್ರಿಕೆಗಳೂ ಇವೆ. ಎಲ್ಲವೂ ಇಂಗ್ಲಿಷಿನಲ್ಲಿಲ್ಲ. ಆಯಾ ದೇಶದ ಸ್ಥಳೀಯ ಭಾಷೆಗಳಲ್ಲಿರುವ ಪತ್ರಿಕೆಗಳನ್ನು ಪ್ರದರ್ಶಿಸಲಾಗಿದೆ.ವಿದ್ಯಾರ್ಥಿಗಳಿಗೆ ತೌಲನಿಕ ಅಧ್ಯಯನ ಸಾಧ್ಯವಾಗಲಿ ಎನ್ನುವ ಉದ್ದೇಶ ಈ ಪ್ರದರ್ಶನದ್ದು. ಹೇಗೂ ಕಾಲೇಜಿನಲ್ಲಿ ಪದ್ಮಜಾ ಪ್ರಸಾದ್ ಅಂತರಕಾಲೇಜು ಸಂಗೀತ ಸ್ಪರ್ಧೆ ಇತ್ತು. ಸ್ಪರ್ಧಿಗಳ ಸಂಗೀತ ಕೇಳುತ್ತ ವಿದೇಶಿ ಪತ್ರಿಕೆಗಳನ್ನು ವಿದ್ಯಾರ್ಥಿಗಳು ಓದಲಿ’ ಎನ್ನುವ ಮಾಹಿತಿಯನ್ನು ಇಂಗ್ಲಿಷ್‌ ವಿಭಾಗದ ಮುಖ್ಯಸ್ಥೆ ಅನಿತಾ ಬ್ರ್ಯಾಗ್ಸ್ ನೀಡಿದರು.‘ಬೇರೆ ಬೇರೆ ದೇಶಗಳಲ್ಲಿಯ ವಿದ್ಯಮಾನಗಳ ಮಾಹಿತಿ ಸಿಕ್ಕಿತು. ಇದರಿಂದ ಜ್ಞಾನ ಹೆಚ್ಚಿತು’ ಎಂದು ಬಿ.ಕಾಂ ಎರಡನೇ ವರ್ಷದ ಸಿಮ್ರಾನ್ ಹೇಳಿದರು. ‘ಈ ಪ್ರದರ್ಶನ ಚೆನ್ನಾಗಿದೆ. ಕನ್ನಡದ ಹಳೆಯ ಪತ್ರಿಕೆಗಳ ಪ್ರದರ್ಶನ ಇದ್ದರೆ ಚೆನ್ನಾಗಿರುತ್ತಿತ್ತು’ ಎಂಬ ಬಯಕೆ ವ್ಯಕ್ತಪಡಿಸಿದರು ಬಿ.ಎ ಮೊದಲ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಐ. ಅರ್ಪಿತಾ.‘ಬೇರೆ ಬೇರೆ ದೇಶಗಳಲ್ಲಿ ಇಂಗ್ಲಿಷ್‌ ಭಾಷೆಯನ್ನು ಹೇಗೆ ಬಳಸುತ್ತಾರೆ ಎನ್ನುವುದು ಗೊತ್ತಾಯಿತು. ಅಲ್ಲಿಯ ರಾಜಕೀಯ ಸ್ಥಿತಿ, ಪತ್ರಿಕೆಗಳ ಆಕಾರ ಪರಿಚಯವಾಯಿತು’ ಎಂದು ಖುಷಿಯಾಗಿ ಹೇಳಿದರು ಮಹಾರಾಜ ಕಾಲೇಜಿನ ಇಂಗ್ಲಿಷ್‌ ಉಪನ್ಯಾಸಕಿ ಡಾ.ರೇಣುಕಾ.ಈ ಪ್ರದರ್ಶನವನ್ನು ವಿವಿಯ ಶೈಕ್ಷಣಿಕ ಸಿಬ್ಬಂದಿ ಕಾಲೇಜಿನ ನಿರ್ದೇಶಕ ಪ್ರೊ.ಲಿಂಗರಾಜ ಗಾಂಧಿ ಉದ್ಘಾಟಿಸಿದರು. ಮಹಾರಾಜ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್‌.ಎನ್. ಗಾಯತ್ರಿ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಡಾ.ಬಿ. ನಾಗರಾಜಮೂರ್ತಿ ಹಾಜರಿದ್ದರು.  ಪ್ರದರ್ಶನ ಶುಕ್ರವಾರವೂ (ಮಾರ್ಚ್ 7) ಮುಂದುವರಿಯಲಿದ್ದು, ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನೋಡಲು ಅವಕಾಶವಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.