ಭಾನುವಾರ, ಮೇ 16, 2021
21 °C

ವಿದ್ಯಾರ್ಥಿಗಳ ಪರದಾಟ: ಹೆಚ್ಚಿದ ಪೋಷಕರ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿಗಳ ಪರದಾಟ: ಹೆಚ್ಚಿದ ಪೋಷಕರ ಆತಂಕ

ಬೆಂಗಳೂರು: ಶಾಲಾ ವಾಹನಗಳ ಸುರಕ್ಷತೆಯ ಮಾರ್ಗಸೂಚಿ ಜಾರಿಯಲ್ಲಿ ಪೊಲೀಸರು ಕಿರುಕುಳ ಹೆಚ್ಚಾಗಿದೆ ಎಂದು ಆರೋಪಿಸಿ ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ ಬುಧವಾರದಿಂದ ಕರೆ ನೀಡಿರುವ ಮೂರು ದಿನ ಮುಷ್ಕರದಿಂದಾಗಿ ನಗರದ ವಿದ್ಯಾರ್ಥಿಗಳಿಗೆ ತೀವ್ರ ಅನನುಕೂಲ ಉಂಟಾಯಿತು. ಸ್ವಂತ ವಾಹನ ಉಳ್ಳವರು ಮಕ್ಕಳನ್ನು ತಮ್ಮ ವಾಹನಗಳಲ್ಲಿ ಶಾಲೆಗೆ ಬಿಟ್ಟರೆ, ಉಳಿದವರು ಆಟೊ ಹಾಗೂ ಬಸ್‌ಗಳ ಮೊರೆ ಹೋಗಬೇಕಾಯಿತು.ಶಾಲಾ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಮಾರ್ಗಸೂಚಿ ನಿಯಮಗಳನ್ನು ರೂಪಿಸಿದೆ. ಮಾರ್ಗಸೂಚಿ ನಿಯಮಗಳು ಮೇ 1ರಿಂದ ಜಾರಿಗೆ ಬಂದಿವೆ. ಆದರೆ, ಈ ನಿಯಮಗಳನ್ನು ಜಾರಿಗೊಳಿಸುವಲ್ಲಿ ಪೊಲೀಸರ ಕಿರುಕುಳ ಹೆಚ್ಚಾಗಿದೆ ಎಂದು ಶಾಲಾ ವಾಹನಗಳ ಚಾಲಕರು ಆರೋಪಿಸಿದ್ದಾರೆ. ಈವರೆಗೆ ಶಾಲಾ ವಾಹನಗಳ ಮಾರ್ಗಸೂಚಿ ಉಲ್ಲಂಘಿಸಿದ 1,150 ಪ್ರಕರಣಗಳನ್ನು ನಗರ ಸಂಚಾರ ವಿಭಾಗದ ಪೊಲೀಸರು ದಾಖಲಿಸಿಕೊಂಡಿದ್ದಾರೆ.ಮುಷ್ಕರದಿಂದಾಗಿ ವಿದ್ಯಾರ್ಥಿಗಳು ಶಾಲೆಗೆ ಬಂದು ಹೋಗಲು ತೀವ್ರ ತೊಂದರೆಯಾಯಿತು. ಪ್ರತಿದಿನ ಬೆಳಗ್ಗೆ ಮನೆಯ ಮುಂದೆ ಬಂದು ನಿಲ್ಲುತ್ತಿದ್ದ ಶಾಲಾ ವಾಹನಗಳು ಬರದೇ ಪೋಷಕರು ಪರದಾಡುವಂತಾಯಿತು. ಶಾಲೆಗಳ ಮಾಲೀಕತ್ವದ ಶಾಲಾ ವಾಹನಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಆದರೆ, ಖಾಸಗಿ ಶಾಲಾ ವಾಹನಗಳು ಬುಧವಾರ ರಸ್ತೆಗಿಳಿಯಲಿಲ್ಲ.`ಶಾಲೆಗಳ ಮಾಲೀಕತ್ವದ ಶಾಲಾ ವಾಹನಗಳಲ್ಲಿ ಮಕ್ಕಳನ್ನು ಕಳುಹಿಸುವುದು ಸುರಕ್ಷಿತವೇನೋ ಹೌದು. ಆದರೆ, ಅದಕ್ಕಾಗಿ ಹತ್ತಾರು ಸಾವಿರ ಕಟ್ಟುವುದು ಕಷ್ಟವಾಗುತ್ತದೆ. ಖಾಸಗಿ ಶಾಲಾ ವಾಹನಗಳಲ್ಲಾದರೆ ತಿಂಗಳಿಗೆ ್ಙ 500ರಿಂದ 1 ಸಾವಿರದವರೆಗೆ ತೆಗೆದುಕೊಳ್ಳುತ್ತಾರೆ. ಹೀಗಾಗಿ ಈ ವಾಹನಗಳಿಗೇ ಮಕ್ಕಳನ್ನು ಕಳಿಸುತ್ತಿದ್ದೆವು. ಆದರೆ, ಮುಷ್ಕರದ ಕಾರಣದಿಂದ ಈಗ ಆಟೊ ಮೊರೆ ಹೋಗಬೇಕಾಗಿದೆ' ಎಂದು ಮಹಾಲಕ್ಷ್ಮೀ ಬಡಾವಣೆಯ ನಿವಾಸಿ ಇಂದಿರಾ ಅಸಮಾಧಾನ ವ್ಯಕ್ತಪಡಿಸಿದರು.ರಾಜಾಜಿನಗರದ ಖಾಸಗಿ ಶಾಲೆಯೊಂದರಲ್ಲಿ ಮೂರನೇ ತರಗತಿ ಓದುತ್ತಿರುವ ತಮ್ಮ ಮಗನನ್ನು ಶಾಲೆಗೆ ಬಿಡಲು ಆಟೊದಲ್ಲಿ ಬಂದಿದ್ದ ಅವರು, `ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಹೊಸದಾಗಿ ಮಾರ್ಗಸೂಚಿ ರೂಪಿಸಿರುವುದು ಒಳ್ಳೆಯದೇ. ಆದರೆ, ಇದರಿಂದ ತಮಗೆ ನಷ್ಟವಾಗುತ್ತದೆ ಎಂದು ಖಾಸಗಿ ಶಾಲಾ ವಾಹನಗಳ ಮಾಲೀಕರು ಹೇಳುತ್ತಿದ್ದಾರೆ. ಹೀಗಾಗಿ  ಸರ್ಕಾರ ಈ ವಿಷಯದಲ್ಲಿ ಆದಷ್ಟು ಬೇಗ ಮಧ್ಯಪ್ರವೇಶಿಸಿ ಇರುವ ಸಮಸ್ಯೆಯನ್ನು ಪರಿಹರಿಸಬೇಕು' ಎಂದು ಒತ್ತಾಯಿಸಿದರು.`ನಗರದಲ್ಲಿ ಸುಮಾರು 25 ಸಾವಿರ ಶಾಲಾ ವಾಹನಗಳಿವೆ. ನಮ್ಮ ಒಕ್ಕೂಟದಲ್ಲಿ ನೋಂದಣಿಯಾಗಿರುವ 16 ಸಾವಿರ ಶಾಲಾ ವಾಹನಗಳು ಬುಧವಾರ ಕಾರ್ಯ ನಿರ್ವಹಿಸಿಲ್ಲ. ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದರೆ ವಾಹನಗಳ ನಿರ್ವಹಣೆ ಕಷ್ಟವಾಗುತ್ತದೆ. 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಬಳಸುವಂತಿಲ್ಲ ಎಂದು ಮಾರ್ಗಸೂಚಿ ಹೇಳುತ್ತದೆ. ಆದರೆ, ನಮ್ಮಲ್ಲಿರುವ ಬಹುಪಾಲು ವಾಹನಗಳು 15 ವರ್ಷಕ್ಕಿಂತ ಹಳೆಯದಾಗಿವೆ. ಹೀಗಾಗಿ ಮಾರ್ಗಸೂಚಿ ಜಾರಿ ಕಷ್ಟವಾಗುತ್ತಿದೆ' ಎಂದು ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘದ ಅಧ್ಯಕ್ಷ ಪಿ.ಎಸ್.ಷಣ್ಮುಗಂ ಹೇಳಿದರು.`ಮುಷ್ಕರ ನಡೆಸಿ ವಿದ್ಯಾರ್ಥಿಗಳಿಗೆ ತೊಂದರೆ ಉಂಟುಮಾಡುವುದು ನಮ್ಮ ಉದ್ದೇಶವಲ್ಲ. ಸರ್ಕಾರದ ನಿಯಮಗಳ ಪ್ರಕಾರ ನಮ್ಮ ಬಹುಪಾಲು ವಾಹನಗಳು ರಸ್ತೆಗಿಳಿಯುವಂತಿಲ್ಲ. ಹಾಗಿದ್ದೂ ರಸ್ತೆಗಿಳಿದರೆ ಪೊಲೀಸರು ಪ್ರಕರಣ ದಾಖಲಿಸಿ ದಂಡ ಕಟ್ಟುವಂತೆ ನ್ಯಾಯಾಲಯಕ್ಕೆ ಕಳಿಸುತ್ತಾರೆ. ಹೀಗಾಗಿ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತುಕತೆಗೆ ಪ್ರಯತ್ನಿಸಿದ್ದೇವೆ. ಅವರು ಗುರುವಾರ ನಮ್ಮಂದಿಗೆ ಚರ್ಚೆ ನಡೆಸುವ ಭರವಸೆ ಸಿಕ್ಕಿದೆ. ನಮ್ಮ ಸಮಸ್ಯೆಗಳನ್ನು ಸಾರಿಗೆ ಸಚಿವರ ಗಮನಕ್ಕೆ ತರಲಿದ್ದೇವೆ' ಎಂದರು.ಶಾಲೆಗಳಿಗೆ ಹೊರೆ

`ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಶಾಲೆಗಳೇ ವಾಹನಗಳ ಸೇವೆ ನೀಡಬೇಕು ಎಂದು ಪೋಷಕರು ಬಯಸುತ್ತಾರೆ. ಆದರೆ, ಕಡಿಮೆ ವೆಚ್ಚದಲ್ಲಿ ಶಾಲಾ ವಾಹನಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಲ್ಲದೇ ಎಲ್ಲ ಶಾಲೆಗಳ ಆಡಳಿತ ಮಂಡಳಿಗಳೂ ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ತಮ್ಮದೇ ಮಾಲೀಕತ್ವದ ವಾಹನಗಳನ್ನು ಒದಗಿಸುವುದು ಸಾಧ್ಯವಿಲ್ಲ. ಶಾಲೆಗಳಿಗೆ ಯಾವ ವಾಹನಗಳ ಮೂಲಕ ವಿದ್ಯಾರ್ಥಿಗಳನ್ನು ಕಳಿಸಬೇಕು ಎಂಬುದು ಪೋಷಕರಿಗೆ ಬಿಟ್ಟ ವಿಷಯ'

ಎ.ಮರಿಯಪ್ಪ, ಕಾರ್ಯದರ್ಶಿ, ಕರ್ನಾಟಕ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ


>ನಿಯಮ ಪಾಲನೆ ಅನಿವಾರ್ಯ

`ಮೇ ಆರಂಭದಿಂದ ಇಲ್ಲಿಯವರೆಗೆ ಮಾರ್ಗಸೂಚಿ ಉಲ್ಲಂಘನೆಯ ಒಟ್ಟು 1,150 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಬಹುಪಾಲು ಪ್ರಕರಣಗಳಲ್ಲಿ ವಾಹನದ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನು ತುಂಬಿರುವುದು ಕಂಡುಬಂದಿದೆ. ಈ ಪ್ರಕರಣಗಳಲ್ಲಿ ನ್ಯಾಯಾಲಯ ದಂಡ ವಿಧಿಸುತ್ತದೆ. ಮೊದಲ ಬಾರಿ ಮಾರ್ಗಸೂಚಿ ಉಲ್ಲಂಘನೆಗೆ ್ಙ2 ಸಾವಿರದವರೆಗೆ ದಂಡ ವಿಧಿಸಲು ಅವಕಾಶವಿದೆ. ನಂತರದಲ್ಲಿ ನಿಯಮ ಉಲ್ಲಂಘನೆ ಮಾಡುವ ಚಾಲಕ ಪರವಾನಗಿಯನ್ನು ರದ್ದು ಪಡಿಸಲು ಪ್ರಾದೇಶಿಕ ಸಂಚಾರ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಮಾರ್ಗಸೂಚಿ ಪಾಲನೆ ಅನಿವಾರ್ಯ'

-ಡಾ.ಎಂ.ಎ.ಸಲೀಂ, ಹೆಚ್ಚುವರಿ ಪೊಲೀಸ್ ಕಮಿಷನರ್, ನಗರ ಸಂಚಾರ ವಿಭಾಗಪೊಲೀಸರ ಕಿರುಕುಳಕ್ಕೆ ಕಡಿವಾಣ ಬೀಳಲಿ

`ಸಂಚಾರ ಪೊಲೀಸರು ಒಂದು ಬಾರಿ ವಾಹನವನ್ನು ಹಿಡಿದರೆ ನೂರೆಂಟು ನ್ಯೂನತೆಗಳನ್ನು ಗುರುತಿಸುತ್ತಾರೆ. ಪ್ರಕರಣ ದಾಖಲಾದರೆ ್ಙ 1ರಿಂದ 2 ಸಾವಿರದವರೆಗೆ ದಂಡ ಕಟ್ಟಬೇಕಾಗುತ್ತದೆ. ಇಲ್ಲವಾದರೆ ಪೊಲೀಸರಿಗೆ ್ಙ 100ರಿಂದ 200 ವರೆಗೆ ಲಂಚ ಕೊಡಬೇಕು. ಇಂತಹ ಪರಿಸ್ಥಿತಿಯಲ್ಲಿ ಶಾಲಾ ವಾಹನಗಳನ್ನು ಓಡಿಸುವುದು ಕಷ್ಟವಾಗುತ್ತದೆ. ಸ್ವಂತ ವಾಹನಗಳನ್ನು ಹೊಂದಿರುವವರು ಹೇಗೋ ನಿರ್ವಹಣೆ ಮಾಡುತ್ತಾರೆ. ಆದರೆ, ಕೇವಲ ಚಾಲಕರಾಗಿ ಕೆಲಸ ಮಾಡುವುದು ಕಷ್ಟಸಾಧ್ಯ'

- ಎನ್.ಡಿ.ಅಯ್ಯಪ್ಪ,ಮುಷ್ಕರ ಬೇಗ ಮುಗಿಯಲಿ

`ಒಂದು ದಿನದ ಮುಷ್ಕರದಿಂದಲೇ ಸಾಕಷ್ಟು ತೊಂದರೆಯಾಗಿದೆ. ಮಕ್ಕಳನ್ನು ಆಟೊಗಳಲ್ಲಿ ಶಾಲೆಗೆ ಕರೆದುಕೊಂಡು ಹೋಗುವಂತಾಗಿದೆ. ಆಟೊ ಚಾಲಕರು ಕರೆದ ಕಡೆಗೆ ಬರುವುದಿಲ್ಲ. ಅಲ್ಲದೇ ದುಪ್ಪಟ್ಟು ದರ ಕೇಳುತ್ತಾರೆ. ಮುಷ್ಕರದ ಮೊದಲ ದಿನವೇ  ್ಙ 300 ಆಟೊಗಳಿಗೆ ತೆತ್ತಿದ್ದಾಯಿತು. ಹೀಗಾಗಿ ಸರ್ಕಾರ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಮಾತುಕತೆ ನಡೆಸಬೇಕು. ವಾಹನ ಚಾಲಕರೂ ಮುಷ್ಕರ ಹಿಂತೆಗೆದುಕೊಳ್ಳಬೇಕು'

- ಸರೋಜಾ, ಪೋಷಕರು, ಮಲ್ಲೇಶ್ವರಎರಡು ಪ್ರಮುಖ ಬೇಡಿಕೆಗಳು

`ಶಾಲೆಗಳ ಮಾಲೀಕತ್ವದ ಶಾಲಾ ವಾಹನಗಳಿಗೆ ವರ್ಷಕ್ಕೆ ್ಙ 1,500 ತೆರಿಗೆ ಇದ್ದರೆ, ಖಾಸಗಿ ಶಾಲಾ ವಾಹನಗಳಿಗೆ ವರ್ಷಕ್ಕೆ ್ಙ 22 ಸಾವಿರ ತೆರಿಗೆ ವಿಧಿಸಲಾಗುತ್ತಿದೆ. ತೆರಿಗೆಯ ಈ ಪ್ರಮಾಣವನ್ನು ಸರ್ಕಾರ ತಗ್ಗಿಸಬೇಕು. 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಮಾರ್ಗಸೂಚಿಯಿಂದ ವಿನಾಯ್ತಿ ನೀಡಬೇಕು. ಇವೆರಡು ನಮ್ಮ ಪ್ರಮುಖ ಬೇಡಿಕೆಗಳು. ಹಾಗೆಯೇ ಮಾರ್ಗಸೂಚಿ ಜಾರಿಯ ಹೆಸರಿನಲ್ಲಿ ಪೊಲೀಸರ ಕಿರುಕುಳ ನಿಲ್ಲಬೇಕು. ಇನ್ನುಳಿದ ಮಾರ್ಗಸೂಚಿ ನಿಯಮಗಳನ್ನು ಪಾಲಿಸಲು ಸಾವು ಸಿದ್ಧರಿದ್ದೇವೆ'

- ಪಿ.ಎಸ್.ಷಣ್ಮುಗಂ, ಅಧ್ಯಕ್ಷರು, ರಾಜ್ಯ ಸಂಯುಕ್ತ ಶಾಲಾ ಹಾಗೂ ಲಘು ವಾಹನ ಚಾಲಕರ ಸಂಘ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.