ಗುರುವಾರ , ಜೂನ್ 17, 2021
26 °C
ಬಂಗಾರಪೇಟೆಯಲ್ಲಿ ಪ್ರಾಯೋಗಿಕ ಜಾರಿ

ವಿದ್ಯುತ್‌ ಬಿಲ್‌ ಸಮಸ್ಯೆ ನಿವಾರಣೆಗೆ ‘ಫೋಟೊ ಬಿಲ್ಲಿಂಗ್‌’

ಮಂಜುನಾಥ ಹೆಬ್ಬಾರ್‌ /ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೋಷಯುಕ್ತ ಬಿಲ್‌ಗಳ ತೊಂದರೆ­ಯನ್ನು ಆರಂಭಿಕ ಹಂತದಲ್ಲೇ ಪರಿಹರಿಸುವ ನಿಟ್ಟಿ­ನಲ್ಲಿ ‘ಫೋಟೊ ಬಿಲ್ಲಿಂಗ್‌’ ಎಂಬ ನೂತನ ವ್ಯವಸ್ಥೆ­ಯನ್ನು ಜಾರಿಗೆ ತರಲು ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಬೆಸ್ಕಾಂ) ನಿರ್ಧರಿಸಿದೆ.ಬಿಲ್‌ ಮೊತ್ತದಲ್ಲಿ ಏರುಪೇರು ಅಥವಾ ಬಳಸಿದ ಯೂನಿಟ್‌ಗಿಂತಲೂ ಹೆಚ್ಚು ಮೌಲ್ಯದ ಬಿಲ್‌ ಜಾರಿಯಾಗುವಂತಹ ಸಮಸ್ಯೆಗಳಿಗೆ ಗ್ರಾಹಕರು ಹಲವು ಬಾರಿ ಗುರಿಯಾಗುತ್ತಾರೆ. ಮೀಟರ್‌ ರೀಡರ್‌ಗಳು ದಾಖಲೆ ಸಂಗ್ರಹಿಸುವಾಗ ಉಂಟಾಗುವ ತಪ್ಪು ಅಥವಾ ನಿರ್ಲಕ್ಷ್ಯ ಇಂತಹ ದೋಷಯುಕ್ತ ಬಿಲ್‌ಗಳಿಗೆ ಪ್ರಮುಖ ಕಾರಣ. ಈ ರೀತಿಯ ಸಮಸ್ಯೆಗಳನ್ನು ಆರಂಭದಲ್ಲೇ ನಿವಾರಿಸಲು ‘ಫೋಟೊ ಬಿಲ್ಲಿಂಗ್‌’ ತಂತ್ರಜ್ಞಾನ ಸಹಾಯ­ವಾಗಲಿದೆ.ಫೋಟೊ ಬಿಲ್ಲಿಂಗ್‌ ವ್ಯವಸ್ಥೆಯಲ್ಲಿ ಗ್ರಾಹಕರ ಮನೆಗೆ ತೆರಳಿ ಅಂಕಿಸಂಖ್ಯೆಗಳನ್ನು ಸಂಗ್ರಹಿಸುವ ಮೀಟರ್‌ ರೀಡರ್‌ಗಳಿಗೆ ವಿಶೇಷ 3 ಎಂಪಿ ಇನ್‌ಬಿಲ್ಟ್‌ ಕ್ಯಾಮೆರಾ ನೀಡಲಾಗುತ್ತದೆ. ಈ ಕ್ಯಾಮೆರಾ ಮೂಲಕ ಮೀಟರ್‌ಗಳ ಛಾಯಾಚಿತ್ರವನ್ನು ರೀಡರ್‌­ಗಳು ಸೆರೆ ಹಿಡಿಯಬೇಕು. ಹೀಗೆ ಸೆರೆ ಹಿಡಿದ ಫೋಟೊ ಜಿಪಿಎಸ್‌ ಮೂಲಕ ಉಪವಿಭಾಗ ಕಚೇರಿ­ಯಲ್ಲಿ ಅಳವಡಿಸಲಾಗಿರುವ ಡಾಟಾ­ಬೇಸ್‌ನಲ್ಲಿ ನೇರ­ವಾಗಿ ಸಂಗ್ರಹವಾಗುತ್ತದೆ.

ನಂತರ ಬಿಲ್‌ ಜಾರಿಗೊಳಿಸುವ ಸಂದರ್ಭದಲ್ಲಿ ಡಾಟಾ­ಬೇಸ್‌­ನಲ್ಲಿರುವ ಮಾಹಿತಿ ಹಾಗೂ ಮೀಟರ್‌ ರೀಡರ್‌ಗಳು ಸಂಗ್ರಹಿಸಿದ ಅಂಕಿ ಅಂಶಗಳನ್ನು ಹೋಲಿಸಿ ಸರಿ-­ಯಾದ ಬಿಲ್‌ ಮುದ್ರಿಸಲಾಗುತ್ತದೆ. ಈ ವ್ಯವಸ್ಥೆ­ಯಿಂದ ಮೀಟರ್‌ ರೀಡರ್‌ಗಳು ಖುದ್ದಾಗಿ ಗ್ರಾಹಕರ ಮನೆಗೆ ಭೇಟಿ ನೀಡಿ ಅಂಕಿ ಅಂಶಗಳನ್ನು ಸಂಗ್ರಹಿಸಿ­ದ್ದಾರೆ ಎಂಬುದು   ಕೂಡಾ ಖಾತರಿಯಾಗುತ್ತದೆ.ಈ ವ್ಯವಸ್ಥೆಯಿಂದ ಗ್ರಾಹಕರಿಗೆ ದೋಷಮುಕ್ತ ಬಿಲ್‌ ದೊರೆಯು­ವುದಷ್ಟೇ ಅಲ್ಲದೆ ಬಿಲ್‌ ಸಂಬಂಧಿತ ಯಾವುದೇ ದೂರುಗಳು ಎದುರಾದಲ್ಲಿ ಉಪವಿಭಾಗದ ಕಚೇರಿಗಳಲ್ಲಿ ಸಂಗ್ರಹವಾಗಿರುವ ಫೋಟೊ ದಾಖಲೆ ಪರಿಶೀಲಿಸಿ ಶೀಘ್ರ ಪರಿಹರಿಸಲು ಸಾಧ್ಯ. ಇಷ್ಟೇ ಅಲ್ಲದೆ ಡಾಟಾ ಬೇಸ್‌ನಲ್ಲಿರುವ ಗ್ರಾಹಕರ ಬಿಲ್ ಮಾಹಿತಿಯನ್ನು ಬೆಸ್ಕಾಂ ಅಧಿಕಾರಿಗಳು ಎನ್‌.ಸಾಫ್ಟ್‌ ಸರ್ವರ್‌ ಮೂಲಕ ಯಾವುದೇ ಕಚೇರಿಯಿಂದಲೂ ಪರಿಕ್ಷಿಸಬಹುದು ಎಂದು ಬೆಸ್ಕಾಂ ನಿರ್ದೇಶಕ (ಹಣಕಾಸು) ಬಿ.ಎಲ್‌.ಗುರುಪ್ರಸಾದ್‌ ಹೇಳುತ್ತಾರೆ.ಈ ವ್ಯವಸ್ಥೆ ಪ್ರಾಯೋಗಿಕವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ಉಪವಿಭಾಗದಲ್ಲಿ ಜನವರಿಯಿಂದ ಜಾರಿಗೆ ಬಂದಿದೆ. ಮುಂದಿನ ದಿನಗಳಲ್ಲಿ ಹಲವು ಉಪವಿಭಾಗಗಳಲ್ಲಿ ಜಾರಿಗೆ ತರಲು ಬೆಸ್ಕಾಂ ಉದ್ದೇಶಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.