ಬುಧವಾರ, ಜೂನ್ 23, 2021
22 °C

ವಿದ್ಯುತ್ ಕೊರತೆ ತಂದ ಸಂಕಟ

ಪ್ರಜಾವಾಣಿ ವಾರ್ತೆ ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಸಿಗೆ ಆರಂಭದಲ್ಲೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅನಿಯಮಿತ ವಿದ್ಯುತ್ ಕಡಿತದ ಪ್ರಮಾಣ ಹೆಚ್ಚಾಗಿರುವುದರಿಂದ ರೈತರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಜನ ತೊಂದರೆ ಅನುಭವಿಸುವಂತಾಗಿದೆ.ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶದಲ್ಲಿ ಅನಿಯಮಿತ ವಿದ್ಯುತ್ ಕಡಿತ ಹೆಚ್ಚಾಗಿದ್ದು, ಇದರ ನೇರ ಪರಿಣಾಮ ಕುಡಿಯುವ ನೀರಿಗೆ ತಟ್ಟಿದೆ. ಬಯಲುಸೀಮೆ, ಹಳೆ ಮೈಸೂರು ಭಾಗದಲ್ಲಿ ಪದೇ ಪದೇ ಕರೆಂಟ್ ಕೈಕೊಡುತ್ತಿರುವುದರಿಂದ ಕೊಡ ನೀರಿಗೂ ಪರದಾಡುವಂತಾಗಿದೆ.ಬಿಸಿಲಿನ ತಾಪದಿಂದ ವಿದ್ಯುತ್ ಬೇಡಿಕೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಅನುಗುಣವಾಗಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಏಪ್ರಿಲ್‌ವರೆಗೂ ಈಗಿರುವ ಪರಿಸ್ಥಿತಿಯೇ ಮುಂದುವರಿಯಲಿದೆ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.ಕೊರತೆಯನ್ನು ನೀಗಿಸುವ ದೃಷ್ಟಿಯಿಂದ ನಿತ್ಯ 800 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಎಲ್ಲ ಮೂಲಗಳಿಂದ ಸೇರಿ ಸರಾಸರಿ ನಿತ್ಯ 170ರಿಂದ 175 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೂ ಅನಿಯಮಿತ ಲೋಡ್‌ಶೆಡ್ಡಿಂಗ್‌ಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ.ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವಿದ್ಯುತ್ ಬೇಡಿಕೆ ಪ್ರಮಾಣ 12ರಿಂದ 15 ದಶಲಕ್ಷ ಯೂನಿಟ್ ಹೆಚ್ಚಾಗಿದೆ. ಆದರೆ ಉತ್ಪಾದನೆಯಲ್ಲಿ ಮಾತ್ರ ಹೆಚ್ಚಳವಾಗಿಲ್ಲ. ಈ ಮಧ್ಯೆ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ತಾಂತ್ರಿಕ ಕಾರಣಗಳಿಂದ ಒಂದಲ್ಲ ಒಂದು ಘಟಕ ಸ್ಥಗಿತಗೊಳ್ಳುತ್ತಲೇ ಇದೆ.ಕಳೆದ ವಾರ ಬಳ್ಳಾರಿ ಸ್ಥಾವರದ ಮೊದಲ ಘಟಕ ಮೂರು ದಿನ ಸ್ಥಗಿತವಾಗಿತ್ತು. ಅದು ಪುನರಾರಂಭವಾಗುತ್ತಿದ್ದಂತೆಯೇ ಆರ್‌ಟಿಪಿಎಸ್‌ನ 6ನೇ ಘಟಕ ಕೈಕೊಟ್ಟಿದೆ. ಶಾಖೋತ್ಪನ್ನ ಘಟಕಗಳು ಈ ರೀತಿ ಸ್ಥಗಿತಗೊಂಡಾಗ ವೇಳಾಪಟ್ಟಿ ಪ್ರಕಾರ ಪೂರೈಕೆ ಆಗದಿರಬಹುದು. ವ್ಯತ್ಯಯ ಆಗಿರಬಹುದು. ಆದರೆ ಸರಾಸರಿ ಆರು ಗಂಟೆ ತ್ರೀಫೇಸ್ ವಿದ್ಯುತ್ ನೀಡುತ್ತಿದ್ದೇವೆ ಎಂಬುದು ಅಧಿಕಾರಿಗಳ ಸಮರ್ಥನೆ. ರಾಜಧಾನಿಯಲ್ಲಿ ಲೋಡ್ ಶೆಡ್ಡಿಂಗ್ ಅಧಿಕೃತವಾಗಿ ಇಲ್ಲ. ಆದರೆ, ಬಹುತೇಕ ಬಡಾವಣೆಗಳಲ್ಲಿ ದಿನಕ್ಕೆ ಎರಡು-ಮೂರು ಸಲ ವಿದ್ಯುತ್ ಕಣ್ಣಾಮುಚ್ಚಾಲೆ ನಡೆದೇ ಇದೆ.ಗ್ರಾಮೀಣ ಪ್ರದೇಶದಲ್ಲಿ ಹಗಲು ವೇಳೆ ಎರಡು ಗಂಟೆ, ರಾತ್ರಿ ವೇಳೆ ನಾಲ್ಕು ಗಂಟೆ ಕಾಲ ಮೂರು ಫೇಸ್ ವಿದ್ಯುತ್ ಹಾಗೂ ರಾತ್ರಿ ಹೊತ್ತು ಉಳಿದ ವೇಳೆಯಲ್ಲಿ ಸಿಂಗಲ್‌ಫೇಸ್ ವಿದ್ಯುತ್ ನೀಡಲಾಗುತ್ತಿದೆ. ಸಂಜೆ 6 ರಿಂದ ಬೆಳಿಗ್ಗೆ 6 ಗಂಟೆವರೆಗೆ ವಿದ್ಯುತ್ ಕಡಿತ ಮಾಡುತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇದರ ಪಾಲನೆ ಆಗುತ್ತಿಲ್ಲ ಎನ್ನುತ್ತಾರೆ ತುಮಕೂರಿನ ನಿವಾಸಿ ಬಿ.ನಾಗರಾಜ್.`ಪರೀಕ್ಷಾ ಸಮಯವಾದ್ದರಿಂದ ಮಕ್ಕಳಿಗೆ ತೊಂದರೆಯಾಗಿದೆ. ಯಾವಾಗ ಕರೆಂಟ್ ಇರುತ್ತದೆ, ಇರುವುದಿಲ್ಲ ಎಂಬುದೇ ಗೊತ್ತಾಗುವುದಿಲ್ಲ. ರಾತ್ರಿ ವೇಳೆ ವಿದ್ಯುತ್ ಕಡಿತ ಮಾಡುವುದಿಲ್ಲ ಎಂದು ಸರ್ಕಾರ ನೀಡಿದ್ದ ಭರವಸೆ ಸುಳ್ಳಾಗಿದೆ. ರಾತ್ರಿ ಹೊತ್ತು 2-3 ಬಾರಿ ಕಡಿತ ಆಗುತ್ತಿದೆ~ ಎಂದು ಕೋಲಾರ ಜಿಲ್ಲೆ ವಡಗೂರಿನ ಮುನೇಗೌಡ ದೂರಿದರು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಯಚೂರು ಸೇರಿದಂತೆ ಹೆಚ್ಚಿನ ಜಿಲ್ಲೆಗಳಲ್ಲಿ ಅನಿಯಮಿತವಾಗಿ 2-3 ಗಂಟೆ ಕಾಲ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಆದರೆ ಹುಬ್ಬಳ್ಳಿ, ಬೆಳಗಾವಿ, ವಿಜಾಪುರ ಸೇರಿದಂತೆ ಕೆಲ ನಗರಗಳಲ್ಲಿ ವಿದ್ಯುತ್ ಸಮಸ್ಯೆ ಅಷ್ಟಾಗಿ ಕಾಡುತ್ತಿಲ್ಲ. ಆ ಭಾಗದಲ್ಲಿ ಹೆಚ್ಚೆಂದರೆ ಅರ್ಧ ಗಂಟೆ ಮಾತ್ರ ವಿದ್ಯುತ್ ತೆಗೆಯಲಾಗುತ್ತಿದೆ.ಕೊಳವೆ ಬಾವಿಗಳ ಮೇಲೆ ಅವಲಂಬನೆಯಾಗಿರುವ ರೈತರು ವಿದ್ಯುತ್ ಅಭಾವದಿಂದ ಕಂಗಾಲಾಗಿದ್ದಾರೆ. ಹಗಲು ವೇಳೆ ಎರಡು ಗಂಟೆ ತ್ರಿಫೇಸ್ ವಿದ್ಯುತ್ ನೀಡುತ್ತೇವೆ ಎನ್ನುತ್ತಾರೆ. ಆದರೆ ಅರ್ಧ ಗಂಟೆಗೊಮ್ಮೆ `ಟ್ರಿಪ್~ ಆಗುತ್ತದೆ. ಇನ್ನು ರಾತ್ರಿ ವೇಳೆ ನಾಲ್ಕು ಗಂಟೆ ಕೊಡುತ್ತೇವೆ ಎನ್ನುತ್ತಾರೆ. ಆದರೆ ವೋಲ್ವೆಜ್ ಇರುವುದಿಲ್ಲ. ವಿದ್ಯುತ್ ದೀಪಕ್ಕಿಂತ ಮೇಣದ ಬತ್ತಿಯೇ ಹೆಚ್ಚು ಪ್ರಕಾಶಮಾನವಾಗಿ ಬೆಳಗುತ್ತದೆ ಎಂದು ಸಂತೇಕಲ್ಲಹಳ್ಳಿಯ ರೈತ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.ಇಲ್ಲಿ ಕೆಲ ನಿದರ್ಶನಗಳನ್ನು ಮಾತ್ರ ನೀಡಲಾಗಿದೆ. ಇದೇ ರೀತಿ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹಲವರು ಅಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕೆರೆ ಕುಂಟೆಗಳಲ್ಲಿ ನೀರಿಲ್ಲ. ಜಾನುವಾರುಗಳಿಗೆ, ಕುಡಿಯುವ ನೀರಿಗೆ ಕೊಳವೆ ಬಾವಿಗಳನ್ನೇ ಅವಲಂಬಿಸಬೇಕಾಗಿದೆ. ಆದರೆ ವಿದ್ಯುತ್ ಇಲ್ಲದ ಕಾರಣ ನೀರಿಗೂ ಹಾಹಾಕಾರ ಉಂಟಾಗಿದೆ. ಬೆಳೆಗಳಿಗಂತೂ ನೀರೇ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.`ಟ್ರಾನ್ಸ್‌ಫಾರ್ಮರ್‌ಗಳ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳದೆ, ಒಂದೇ ಟ್ರಾನ್ಸ್‌ಫಾರ್ಮರ್‌ನಿಂದ ಹೆಚ್ಚಿನ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ವೋಲ್ಟೆಜ್ ಸಮಸ್ಯೆ ಉಂಟಾಗುತ್ತಿದೆ. ಒಮ್ಮೆಗೇ ಎಲ್ಲ ಪಂಪ್‌ಸೆಟ್‌ಗಳು ಚಾಲನೆಗೊಂಡಾಗ `ಟ್ರಿಪ್~ ಆಗುತ್ತವೆ~ ಎನ್ನುತ್ತಾರೆ ರೈತರು.ನೀರಿನ ಪ್ರಮಾಣ: ಪ್ರಮುಖ ಜಲಾಶಯಗಳಾದ ಲಿಂಗನಮಕ್ಕಿ, ಮಾಣಿ ಮತ್ತು ಸೂಪಾದಲ್ಲಿ ಶೇ 50ರಷ್ಟು ನೀರಿದೆ. ಜೂನ್‌ವರೆಗೂ ಸರಾಸರಿ ನಿತ್ಯ 40 ದಶಲಕ್ಷ ಯೂನಿಟ್ ಜಲವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ ಎಂದು ಕರ್ನಾಟಕ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ಆರ್.ಕಾಂಬ್ಳೆ ತಿಳಿಸಿದರು.ಆರ್‌ಟಿಪಿಎಸ್‌ನಲ್ಲಿ ಮೂರು ದಿನಕ್ಕೆ ಆಗುವಷ್ಟು ಕಲ್ಲಿದ್ದಲು ಲಭ್ಯವಿದೆ. ಮೊದಲಿಗೆ ಹೋಲಿಸಿದರೆ ಉತ್ಪಾದನೆ ಪ್ರಮಾಣ ಚೆನ್ನಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಉತ್ಪಾದನೆಯಾಗುವ ವಿಶ್ವಾಸವಿದೆ. ಜೂನ್ ನಂತರ ಆರ್‌ಟಿಪಿಎಸ್‌ನ ಮೊದಲ ಎರಡು ಘಟಕಗಳ ನವೀಕರಣ ಕಾರ್ಯ ಆರಂಭವಾಗಲಿದೆ ಎಂದು ವಿವರಿಸಿದರು.ವಿದ್ಯುತ್ ಖರೀದಿ:  ಈ ವರ್ಷದ ಜೂನ್‌ನಿಂದ ಮುಂದಿನ ಜೂನ್‌ವರೆಗೂ ನಿತ್ಯ ಒಂದು ಸಾವಿರ ಮೆಗಾವಾಟ್ ವಿದ್ಯುತ್ ಖರೀದಿಸಲು ನಿರ್ಧರಿಸಲಾಗಿದೆ. ಒಂದು ವರ್ಷ ಕಾಲ ನಿರಂತರವಾಗಿ ಖರೀದಿ ಮಾಡುವುದರಿಂದ ಕಡಿಮೆ ದರಕ್ಕೆ ಲಭ್ಯವಾಗುತ್ತದೆ. ಮಳೆಗಾಲದಲ್ಲಿ ಜಲಾಶಯಗಳ ನೀರನ್ನು ಬಳಸದೆ ಸಂಗ್ರಹಿಸಿ ಇಟ್ಟುಕೊಂಡರೆ ಬೇಸಿಗೆಯಲ್ಲಿ ಅನುಕೂಲವಾಗುತ್ತದೆ. ಮುಂಜಾಗ್ರತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.