ಸೋಮವಾರ, ಜನವರಿ 20, 2020
18 °C

ವಿದ್ಯುತ್: ಮತ್ತೆ ದರ ಏರಿಕೆ ಬಿಸಿ?

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್ ದರವನ್ನು ಯೂನಿಟ್‌ಗೆ 50 ಪೈಸೆ ಹೆಚ್ಚಳ ಮಾಡುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಸಲ್ಲಿಸಲು ಎಸ್ಕಾಂಗಳು ಸಜ್ಜಾಗಿದ್ದು, ಅನಿಯಮಿತ ವಿದ್ಯುತ್ ಪೂರೈಕೆಯಿಂದ ಕಂಗೆಟ್ಟಿರುವ ಗ್ರಾಹಕರಿಗೆ ಸದ್ಯದಲ್ಲೇ ದರ ಏರಿಕೆಯ ಬಿಸಿಯೂ ತಟ್ಟಲಿದೆ.ವಿದ್ಯುತ್ ಖರೀದಿಗೆ ಮಾಡುತ್ತಿರುವ ವೆಚ್ಚ, ಕಂಪೆನಿಗಳ ಆದಾಯ ಮತ್ತು ವೆಚ್ಚವನ್ನು ಆಧಾರವಾಗಿಟ್ಟುಕೊಂಡು ದರ ಏರಿಕೆಯ ಪ್ರಸ್ತಾವವನ್ನು ಸಿದ್ಧಪಡಿಸಲಾಗಿದೆ. 2-3 ದಿನಗಳಲ್ಲಿ ಅಧಿಕೃತವಾಗಿ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಇಂಧನ ಇಲಾಖೆಯ ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.`ಆಗೀಗ ದರ ಏರಿಕೆ ಪ್ರಸ್ತಾವ ಸಲ್ಲಿಸುವ ಬದಲು, ಆದಾಯ ಮತ್ತು ವೆಚ್ಚವನ್ನು ನೋಡಿಕೊಂಡು ಪ್ರತಿ ವರ್ಷ ಕಡ್ಡಾಯವಾಗಿ ಆಯೋಗಕ್ಕೆ ದರ ಏರಿಕೆಯ ಪ್ರಸ್ತಾವ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಆ ಪ್ರಕಾರ ಪ್ರಸ್ತಾವ ಸಲ್ಲಿಸುತ್ತೇವೆ~ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.`ಕೇಂದ್ರ ವಿದ್ಯುತ್ ಮೇಲ್ಮನವಿ ಪ್ರಾಧಿಕಾರ ಸಹ ಪ್ರತಿ ವರ್ಷ ಏಪ್ರಿಲ್‌ಗೂ ಮೊದಲು ವಿದ್ಯುತ್ ದರ ಪರಿಷ್ಕರಿಸುವಂತೆ ಆದೇಶಿಸಿದೆ. ಇದರ ಅರ್ಥ ದರ ಹೆಚ್ಚಳ ಮಾಡಲೇಬೇಕು ಎಂದಲ್ಲ, ದರವನ್ನು ಕಡಿಮೆಯೂ ಮಾಡಬಹುದು. ಆದರೆ ಎಸ್ಕಾಂಗಳ ಪರಿಸ್ಥಿತಿ ನೋಡಿದರೆ ಕಡಿಮೆಯಾಗುವ ಪ್ರಶ್ನೆ ಬರುವುದಿಲ್ಲ. ಕಂಪೆನಿಗಳ ಅಸ್ತಿತ್ವವನ್ನೂ ನೋಡಬೇಕಾಗುತ್ತದೆ~ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧಿಕಾರಿಯೊಬ್ಬರು ವಿವರಿಸಿದರು.ಕಳೆದ ಅಕ್ಟೋಬರ್ 28ರಂದು ಯೂನಿಟ್‌ಗೆ ಸರಾಸರಿ 28 ಪೈಸೆ ಹೆಚ್ಚಳ ಮಾಡಲಾಗಿತ್ತು. ದರ ಹೆಚ್ಚಳವಾಗಿ ಇನ್ನೂ ಮೂರು ತಿಂಗಳಾಗಿಲ್ಲ, ಆಗಲೇ ಮತ್ತೊಮ್ಮೆ ದರ ಹೆಚ್ಚಳಕ್ಕೆ ಪ್ರಸ್ತಾವ ಸಿದ್ಧವಾಗಿದೆ.ವಿದ್ಯುತ್ ಖರೀದಿಗಾಗಿ ಕಂಪೆನಿಗಳು ಒಂದೆಡೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದರೆ, ಮತ್ತೊಂದೆಡೆ ಸರ್ಕಾರದಿಂದ ಕಂಪೆನಿಗಳಿಗೆ ಸಹಾಯಧನ ರೂಪದಲ್ಲಿ ಬರಬೇಕಾದ ಏಳು ಸಾವಿರ ಕೋಟಿ ರೂಪಾಯಿಗೂ ಅಧಿಕ ಹಣ ಬಾಕಿ ಇದೆ.

 

ಈಚೆಗೆ ನಡೆದ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಎಸ್ಕಾಂಗಳಿಗೆ ಮತ್ತು ಕರ್ನಾಟಕ ವಿದ್ಯುತ್ ನಿಗಮಕ್ಕೆ ಸರ್ಕಾರದಿಂದ ಪಾವತಿಯಾಗಬೇಕಾದ ಸಹಾಯಧನ ಬಾಕಿ ಮೊತ್ತವನ್ನು ಕೇಳಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಬೆಚ್ಚಿಬಿದ್ದ ಪ್ರಸಂಗ ನಡೆದಿತ್ತು.`ಆದಾಯ ಮತ್ತು ವೆಚ್ಚದ ನಡುವೆ ಇರುವ ಕೊರತೆಯನ್ನು ಸರಿದೂಗಿಸುವುದು ಹೇಗೆ ಎಂಬ ಪ್ರಶ್ನೆ ಬಂದಾಗ ಅಧಿಕಾರಿಗಳು ಸಣ್ಣ ಧ್ವನಿಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ್ದರು. ತಕ್ಷಣವೇ ಇದಕ್ಕೆ ಮುಖ್ಯಮಂತ್ರಿಗಳು ಸಮ್ಮತಿಸಿದರು~ ಎಂದು ಮೂಲಗಳು ತಿಳಿಸಿವೆ.ಕಳೆದ ಒಂದೂವರೆ ವರ್ಷದಿಂದ ವಿದ್ಯುತ್ ಖರೀದಿಗಾಗಿ ಸುಮಾರು ಐದು ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಕೆಲ ಕಂಪೆನಿಗಳು ಸಾಲ ಮಾಡಿ ವಿದ್ಯುತ್ ಖರೀದಿ ಮಾಡಿದ್ದು, ಅದನ್ನು ಭರಿಸಲು ಈಗ ದರ ಏರಿಕೆಯ ಮೊರೆ ಹೋಗಿವೆ. ವಿದ್ಯುತ್ ಖರೀದಿಗೆ ಮಾಡಿರುವ ವೆಚ್ಚವನ್ನು ಅಂತಿಮವಾಗಿ ಗ್ರಾಹಕರಿಗೆ ವರ್ಗಾಯಿಸಲಾಗುತ್ತಿದೆ.ಬೆಸ್ಕಾಂ ಸೇರಿದಂತೆ ಎಲ್ಲ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದು, ಅದನ್ನು ಸರಿದೂಗಿಸುವ ದೃಷ್ಟಿಯಿಂದ ದರ ಏರಿಕೆ ಅನಿವಾರ್ಯ. ಬಹುತೇಕ ವರ್ಷಪೂರ್ತಿ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಮತ್ತೊಂದೆಡೆ ಸರ್ಕಾರದಿಂದ ಬರಬೇಕಾಗಿರುವ ಸಬ್ಸಿಡಿ ಹಣ ಸಕಾಲಕ್ಕೆ ಪಾವತಿಯಾಗುತ್ತಿಲ್ಲ. ಹೀಗಾಗಿ ದರ ಹೆಚ್ಚಳ ಮಾಡದಿದ್ದರೆ ಕಂಪೆನಿಗಳನ್ನು ನಡೆಸುವುದೇ ಕಷ್ಟವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.ಆಯೋಗಕ್ಕೆ ದರ ಪ್ರಸ್ತಾವ ಸಲ್ಲಿಕೆಯಾದ ನಂತರ ಅದನ್ನು ಸಾರ್ವಜನಿಕರ ಮಾಹಿತಿಗಾಗಿ ಮಾಧ್ಯಮಗಳಲ್ಲಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಇದಾದ ನಂತರ ಕಂಪೆನಿಗಳ ಕೇಂದ್ರ ಕಚೇರಿಗಳು ಇರುವ ಕಡೆ ಸಾರ್ವಜನಿಕರ ಅಹವಾಲು ಆಲಿಕೆ ಸಭೆಗಳು ನಡೆಯಲಿವೆ. ಏಪ್ರಿಲ್‌ಗೂ ಮೊದಲೇ ಈ ಎಲ್ಲ ಪ್ರಕ್ರಿಯೆಗಳು ಮುಗಿಯಬೇಕು. ಈಗಿನ ಲೆಕ್ಕಾಚಾರದ ಪ್ರಕಾರ ಮಾರ್ಚ್ ಕೊನೆಯ ವಾರ ಇಲ್ಲವೆ ಏಪ್ರಿಲ್ ಆರಂಭದಲ್ಲೇ ಆಯೋಗವು ವಿದ್ಯುತ್ ದರ ಏರಿಕೆಯ ಆದೇಶ ಹೊರಡಿಸಲಿದೆ.ಗುಜರಾತ್: 10 ವರ್ಷದಿಂದ ಏರಿಕೆಯೇ ಇಲ್ಲ!

`ಕಳೆದ ಹತ್ತು ವರ್ಷಗಳಿಂದ ಗುಜರಾತ್‌ನಲ್ಲಿ ವಿದ್ಯುತ್ ದರ ಏರಿಕೆ ಆಗಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಪ್ರತಿ ವರ್ಷ ದರ ಏರಿಕೆ ಆಗುತ್ತಿದೆ. ಅಲ್ಲಿ ದರ ಹೆಚ್ಚಳ ಮತ್ತು ವಿದ್ಯುತ್ ಕಡಿತ ಮಾಡದೆ ಇಲಾಖೆಯನ್ನು ಅತ್ಯುತ್ತಮವಾಗಿ ನಿರ್ವಹಿಸಲಾಗುತ್ತಿದೆ. ಇಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ~ ಎಂಬ ಪ್ರಶ್ನೆ ಇಲಾಖೆಯ ಅಧಿಕಾರಿಗಳಿಂದಲೇ ಕೇಳಿಬರುತ್ತಿದೆ.

ಪ್ರತಿಕ್ರಿಯಿಸಿ (+)