ಭಾನುವಾರ, ಮೇ 22, 2022
21 °C

ವಿಧಾನ ಮಂಡಲದ ಪಾವಿತ್ರ್ಯ ಕಾಪಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ವಿಧಾನಮಂಡಲಕ್ಕೆ ಈಗ ವಜ್ರಮಹೋತ್ಸವದ ಸಂಭ್ರಮ. ಮೊದಲ ವಿಧಾನಸಭೆಯ ಪ್ರಥಮ ಅಧಿವೇಶನ 1952ರ ಜೂನ್ 18 ರಂದು ಬೆಂಗಳೂರಿನ ಈಗಿನ ಹೈಕೋರ್ಟ್ ಕಟ್ಟಡದಲ್ಲಿ ಜರುಗಿತು.ಆಗ ಅದು ಸಾರ್ವಜನಿಕ ಕಚೇರಿಗಳ ಕಟ್ಟಡವಾಗಿತ್ತು. ಯಾವುದೇ ಸಂಸ್ಥೆ ಅಥವಾ ಸದನ 60 ವರ್ಷ ಪೂರೈಸುವುದು ಪಕ್ವತೆಯ ಸಂಕೇತ. ವಿಧಾನಮಂಡಲಕ್ಕೆ ಅದರದೇ ಆದ ಪಾವಿತ್ರ್ಯವಿದೆ. ಘನತೆ, ಗಾಂಭೀರ್ಯ ಮೆರೆದ ಹಿರಿಮೆ ಇದೆ. ನೂರಾರು ಚಿಂತನೆಗಳು, ಸಮಾಜ ಸುಧಾರಣಾ ಯೋಜನೆಗಳ ವಿಕಸನಕ್ಕೆ ಇದೊಂದು ವೇದಿಕೆಯಾಗಿದೆ.ಆದರೆ ವಿಕಾಸದ ನಿಯಮ ರಾಜ್ಯ ವಿಧಾನಮಂಡಲದ ಪಾಲಿಗೆ ತಿರುಗುಮುರುಗು ಆದಂತಿದೆ. ಆರಂಭದ ದಿನಗಳಲ್ಲಿ ಅತ್ಯುತ್ತಮ ಸಂಸದೀಯ ಪಟುಗಳನ್ನು ಹೊಂದಿದ್ದ ಮೇಲ್ಮನೆ ಮತ್ತು ಕೆಳಮನೆಗಳ ಕಲಾಪದ ಗುಣಮಟ್ಟ ಈಚಿನ ವರ್ಷಗಳಲ್ಲಿ ಕ್ಷೀಣದೆಸೆಗೆ ತಿರುಗಿದೆ. ನಡಾವಳಿ ಹಳಿ ತಪ್ಪಿದಂತೆ ಭಾಸವಾಗುತ್ತಿದೆ.ಶಾಸನಸಭೆಯ ಮುಖ್ಯ ಕೆಲಸ ಶಾಸನ ರಚನೆ. ಜನಹಿತ ಕಾಯುವ ಪರಿಣಾಮಕಾರಿ ಶಾಸನ ರಚನೆಯಾಗುವಂತೆ ನೋಡಿಕೊಳ್ಳಬೇಕಾದ ಸದಸ್ಯರ ವರ್ತನೆ ಗಮನಿಸಿದರೆ ಅದರ ಬಗ್ಗೆ ಅವರಿಗೆ ಆಸಕ್ತಿಯೇ ಇಲ್ಲವೇನೊ ಎಂಬ ಅನುಮಾನ ಮೂಡುತ್ತದೆ.ಮಸೂದೆಗಳು ಚರ್ಚೆಯೇ ಇಲ್ಲದೆ ಸದನದ ಅಂಕಿತ ಪಡೆದ ನಿದರ್ಶನಗಳು ಲೆಕ್ಕವಿಲ್ಲದಷ್ಟು. ಎಷ್ಟೋ ಸದಸ್ಯರು ತಾವು ಅಂಗೀಕರಿಸುವ ಮಸೂದೆಗಳನ್ನೇ ಓದಿರುವುದಿಲ್ಲ. ಧರಣಿ, ಪ್ರತಿಭಟನೆ, ಗದ್ದಲಗಳೇ ಸದನದ ಬಹುಪಾಲು ಸಮಯವನ್ನು ನುಂಗಿಹಾಕುತ್ತಿವೆ. ಆರೋಪ, ಪ್ರತ್ಯಾರೋಪ, ಹಗರಣಗಳೇ ಸುದ್ದಿಯ ಕೇಂದ್ರಬಿಂದು. ರಾಜಕೀಯ ಮೇಲಾಟದಲ್ಲಿ ಮೂಲ ಉದ್ದೇಶವೇ ಹಿಂದಕ್ಕೆ ಸರಿದರೆ ಹೇಗೆ?ಜನಪರ ಚಿಂತನೆಯ ಅರ್ಥಪೂರ್ಣ ಚರ್ಚೆಗೂ ಹಾಗೂ ಉತ್ತಮ ಸಂಸದೀಯ ನಡವಳಿಕೆಗೂ ಕರ್ನಾಟಕದ ಶಾಸನಸಭೆಗಳು ಹೆಸರಾಗಿದ್ದವು. ಆದರೆ ಅದೇ ಮಾತನ್ನು ಈಗ ಹೇಳಲಾಗದು. ಅತಿರೇಕದ ವರ್ತನೆಗಳು ತಮಿಳುನಾಡು, ಬಿಹಾರ, ಉತ್ತರಪ್ರದೇಶಗಳಿಗಷ್ಟೇ ಸೀಮಿತ ಎಂದು ರಾಜ್ಯದ ಜನ ಭಾವಿಸಿದ್ದರು.ಜನರ ನಂಬಿಕೆಯನ್ನು ಹುಸಿಗೊಳಿಸುವಂತಹ ವರ್ತನೆಗಳು ರಾಜ್ಯ ಶಾಸನಸಭೆಯಲ್ಲಿ ನಡೆದುಹೋಗಿವೆ. ಜನಪ್ರತಿನಿಧಿಗಳ ಶೈಕ್ಷಣಿಕ ಮಟ್ಟದಲ್ಲಿ ಏರಿಕೆ ಕಂಡುಬಂದರೂ ಕಲಾಪದ ಗುಣಮಟ್ಟದಲ್ಲಿ ಅದು ಪ್ರತಿಫಲಿಸದಿರುವುದು ದುರದೃಷ್ಟಕರ.

 

ಹಣ ಗಳಿಸುವ ಅಥವಾ ಗಳಿಸಿದ ಹಣ-ಆಸ್ತಿಯನ್ನು ರಕ್ಷಿಸಿಕೊಳ್ಳುವ ಉದ್ದೇಶ ಹೊಂದಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬರುತ್ತಿರುವುದೂ ಇದಕ್ಕೆ ಒಂದು ಕಾರಣ ಆಗಿರಬಹುದು. ಸದನದ ಘನತೆ ಕಾಪಾಡಬೇಕಾದ ಸಭಾಧ್ಯಕ್ಷರ ಸ್ಥಾನದ ಗೌರವಕ್ಕೂ ಚ್ಯುತಿ ಬಂದಿದೆ. ಪಕ್ಷಾಂತರ ಪ್ರಕರಣಗಳ ಇತ್ಯರ್ಥದಲ್ಲಿ ಬಹಳಷ್ಟು ಸಭಾಧ್ಯಕ್ಷರು ಎಡವಿ ಅಪಖ್ಯಾತಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಕರ್ನಾಟಕ ಕೂಡ ಹೊರತಲ್ಲ. ಸದನದ ವಿಶ್ವಾಸ ಕುಂದಿಸುವ ಇಂತಹ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದನದ ನಡಾವಳಿ ಮತ್ತು ನಿಯಮಗಳನ್ನು ಪರಿಷ್ಕರಿಸಲು ಇದು ಸಕಾಲ.ಇದಕ್ಕೆ ಪೂರಕವಾಗಿ ಚುನಾವಣಾ ಸುಧಾರಣೆಗಳೂ ಜಾರಿಗೆ ಬಂದರೆ ಸಂಸದೀಯ ವ್ಯವಸ್ಥೆಗೆ ಹಿಡಿದ ಗೆದ್ದಲು ನಿವಾರಣೆಯಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.