ಶನಿವಾರ, ಮೇ 15, 2021
22 °C
ಕಾವ್ಯ ಕಾರಣ

ವಿನೂತನ ಶಿವನ ಸಾಕ್ಷಾತ್ಕಾರದೊಡನೆ

-ಎಂ.ಎಸ್. ವೇದಾ Updated:

ಅಕ್ಷರ ಗಾತ್ರ : | |

ಭಾರತೀಯ ಧರ್ಮ ಮತ್ತು ಭಕ್ತಿ ಪರಂಪರೆಯಲ್ಲಿ ಶಿವನ ಕಲ್ಪನೆ ಅತ್ಯದ್ಭುತವಾದುದು. ಆತ ಕಾಲಾನುಕಾಲಕ್ಕೆ ಭಿನ್ನ ಭಿನ್ನ ತಾತ್ತ್ವಿಕ ನೆಲೆಗಳ ನಿಕಷಗಳನ್ನು ದಾಟಿ ಬಂದು, ಇಂದೂ ಸಹ ನಿತ್ಯನೂತನ ಮಂಗಳ ಸ್ವರೂಪನಾಗಿಯೇ ತೆರೆದುಕೊಳ್ಳುತ್ತಿದ್ದಾನೆ.ಶಿವನೆಂದೂ ಗುಡಿಯೊಳಗಿನ ಜಡ ಎಂದು ಅನ್ನಿಸುವುದೇ ಇಲ್ಲ. ಅವನೆಷ್ಟು ನೇರ, ಸರಳ, ನಿರಾಡಂಬರನೆಂದರೆ ಅವನು ಎಲ್ಲೋ ಇಲ್ಲ. ಇಲ್ಲೇ, ನಮ್ಮಲ್ಲೇ ಇದ್ದಾನೆಂಬಷ್ಟು ಹತ್ತಿರದವನಾಗುವಷ್ಟು ಸ್ಮಶಾನವಾಸಿ, ತಿರುಕ, ಬಡವ, ಬೂದಿಬಡುಕ ಎಂದೆಲ್ಲಾ ಎದುರಿನವರು ಅವನನ್ನು ನಿರಾಕರಿಸಲು ಕೊಡುವ ಕಾರಣಗಳಲ್ಲಿಯೂ ಅವನನ್ನು ಒಪ್ಪಿ, ಅಪ್ಪುವಂತಹ ಗುಣಗಳೇ ಇವೆ. ಏಕೆಂದರೆ ಶಿವ ಪ್ರೀತಿ, ಮಮತೆ, ದಯೆ, ಕಾರುಣ್ಯಗಳ ಸಾಕಾರ ಮೂರ್ತಿ. ಅಂತಹ ಶಿವನನ್ನು ವಿನೂತನವಾಗಿ ಸಾಕ್ಷಾತ್ಕಾರಗೊಳಿಸುವ ಕವಿತೆ `ಜಾತ್ರೆಯಲ್ಲಿ ಶಿವ'.ಸವಿತಾ ನಾಗಭೂಷಣರವರ ಕಾವ್ಯದ ಬಹಳ ದೊಡ್ಡಗುಣಗಳಾದ ನಿರಾಡಂಬರ ಮತ್ತು ಸಾರ್ಥಕ ಸರಳತೆಗಳೆ `ಜಾತ್ರೆಯಲ್ಲಿ ಶಿವ' ಕವಿತೆಯನ್ನು ಮಹತ್ತ್ವಗೊಳಿಸಿವೆ. ಕವಿತೆಯಲ್ಲಿ ಇಬ್ಬರು ಶಿವರಿದ್ದಾರೆ. ಓರ್ವ ಲೌಕಿಕ (ಜಾತ್ರೆಯ) ಶಿವ. ಈ ಮಣ್ಣಿನ ಎಲ್ಲ ಬಗೆಯ ನೋವು, ನಲಿವು, ಜಗದ ಜಂಜಾಟಗಳಲ್ಲಿ ಸತ್ಯವಾಗಿರುವವನು. ಇನ್ನೋರ್ವ `ಪರ'ಶಿವ. ಲೋಕದ ಎಲ್ಲ ಸೂತ್ರಗಳನ್ನೂ ತನ್ನಲ್ಲೇ ಅಡಗಿಸಿಟ್ಟುಕೊಂಡು ಅಲೌಕಿಕನಾದವನು, ನಿತ್ಯನಾದವನು. ಕವಿತೆಯ ಮಹತ್ತ್ವವಿರುವುದು ಆ ಶಿವನನ್ನು ಈ ಶಿವನ ಮೂಲಕ, ಈ ಶಿವನನ್ನು ಆ ಶಿವನ ಮೂಲಕ ಗುರುತಿಸುತ್ತಾ, ಕೊನೆಗೆ ಲೌಕಿಕ ಶಿವ ಮತ್ತು `ಪರ'ಶಿವರಿಬ್ಬರನ್ನೂ ಏಕತ್ರಗೊಳಿಸಿಬಿಡುವ ಚೋದ್ಯದಲ್ಲಿ. ಆ ಚೋದ್ಯ ಅಸಾಮಾನ್ಯದ್ದು, ಅದ್ಭುತವಾದದ್ದು.ಕವಿತೆಯ ಮೊದಲ ಭಾಗ ಲೌಕಿಕಶಿವನನ್ನು ಪರಿಚಯಿಸುತ್ತದೆ. ಬಸ್ಸಿನೊಳಗೆ ಇರುವ ವೇಷಧಾರಿ ಶಿವನ ವರ್ಣನೆ `ಪರ'ಶಿವನ ವರ್ಣನೆಯ ಪರಿಕರಗಳೊಂದಿಗೆಯೇ ನಡೆಯುತ್ತದೆ. ಸಪೂರ, ಮೋಡದ ಮೈಬಣ್ಣ, ಮಿಂಚಿನ ನಗು, ಮುಡಿಯ ಚಂದ್ರ, ಕೊರಳ ಹಾವು, ಹುಲಿಚರ್ಮ...  ಹೀಗೆ ಎಲ್ಲವೂ! ಆದರೆ ಆತ ಲೌಕಿಕಶಿವ. ತೇಗದಮರ, ತಗಡಿನ ಚಂದ್ರ, ಪ್ಲಾಸ್ಟಿಕ್ ಹಾವು, ಮಾಸಿದ ಲುಂಗಿ, ಹವಾಯಿ ಚಪ್ಪಲಿ! ಇಲ್ಲಿ ಬರುವ ತೇಗ, ತಗಡು, ಪ್ಲಾಸ್ಟಿಕ್, ಲುಂಗಿ, ಚಪ್ಪಲಿ ಈ ಎಲ್ಲವೂ ಅವನನ್ನು, ಅವನು ಬದುಕುತ್ತಿರುವ ಆ ಕ್ಷಣದ ಲೌಕಿಕವನ್ನು, ಅದರ ಎಲ್ಲ ಪರಿಮಿತಿಗಳೊಡನೆ ವಿವರಿಸುತ್ತದೆ. ಅವೆಲ್ಲವೂ ಲೌಕಿಕಶಿವನ ವಾಸ್ತವ. ಆ ವಾಸ್ತವದ ಬದುಕಿನೊಂದಿಗೇ ಅವನ ಅಸ್ಮಿತೆಯೂ ತಳಕು ಹಾಕಿಕೊಂಡಿದೆ.ಕುತೂಹಲದ ವಿಚಾರವೆಂದರೆ ಕವಿತೆ `ಪರ'ಶಿವನನ್ನು ಪರಿಚಯಿಸುವ ಗೋಜಿಗೇ ಹೋಗುವುದಿಲ್ಲ. ಲೌಕಿಕಶಿವನ ವರ್ಣನೆಯೊಂದಿಗೇ ಅವನ ಪರಿಚಯವೂ ಆನುಷಂಗಿಕವಾಗಿ ಆಗಿಬಿಡುತ್ತದೆ. ಅಥವಾ ಅಧ್ಯಾಹಾರ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟು ಬಿಡುತ್ತದೆ. ಕ್ಷಣ ಲೌಕಿಕನಂತೆ, ಮರುಕ್ಷಣ `ಪರ'ಶಿವನಂತೆ ಕಾಣಿಸಿಕೊಳ್ಳುತ್ತಾ ಹೋಗುವ ಲೌಕಿಕ ಶಿವ ಅವನೇ ಇವನಾಗಿ, ಇವನೇ ಅವನಾಗಿ, ಎರಡರಲ್ಲಿಯೂ ತಾನೇತಾನಾಗಿ ಕವಿತೆಯುದ್ದಕ್ಕೂ ಆವರಿಸಿಕೊಳ್ಳುತ್ತಾ ಹೋಗಿಬಿಡುತ್ತಾನೆ.`ಡಮರುಗ ನುಡಿಸಿ, ತ್ರಿಶೂಲ ಆಡಿಸಿ, ಕಾಲ್ಗೆಜ್ಜೆ ಗಲಗಲ ಕುಣಿಸಿ, ನಾ... ಶಿವ' ಎಂದು ನುಡಿವ ಅವನಲ್ಲಿ ಯಾವುದೇ ಗೊಂದಲಗಳಾಗಲಿ, ದ್ವಂದ್ವಗಳಾಗಲಿ ಇಲ್ಲವೇ ಇಲ್ಲ.ಅಲ್ಲಿಂದಾಚೆಗೆ ಕವಿತೆಯ ಎರಡನೆಯ ಭಾಗದಲ್ಲಿ ಜಾತ್ರೆಯ ಅಚ್ಚರಿ, ಕುತೂಹಲ, ವ್ಯಾಪಾರ, ಮೋಜು, ಆಟ, ನೋಟ - ಹೀಗೆ ಸಕಲವೂ ತೆರೆದುಕೊಳ್ಳುತ್ತಾ ಹೋಗುತ್ತದೆ. ಅದು ಯಾವುದೋ ಒಂದು ಊರಿನಲ್ಲಿ ನಡೆಯುವ ಜಾತ್ರೆಯೂ ಹೌದು, ದಿನನಿತ್ಯದ ಜಗದ ಜಾತ್ರೆಯೂ ಹೌದು.ಜಾತ್ರೆಯೊಳಗೆ ಲೌಕಿಕಶಿವನ ಚೌಕಾಶಿ, ವ್ಯಾಪಾರ, ಅವರಿವರ ನಡುವಿನ ಒಡನಾಟ - ಹೀಗೆ ಎಲ್ಲವೂ, ಎಲ್ಲೆಲ್ಲೂ ತೆರೆದುಕೊಳ್ಳುತ್ತಾ ಜಾತ್ರೆಯೊಳಗಿನ ಶಿವ, `ಜಾತ್ರೆಯ ಉದ್ದಗಲ ಹಬ್ಬಿ ನಿಂತು' ಇಡೀ ಜಾತ್ರೆಯನ್ನೆ ಆವರಿಸಿಕೊಂಡುಬಿಡುತ್ತಾನೆ.

ಜಾತ್ರೆಯ ಶಿವ `ಪರ'ಶಿವನೇ ಹೌದಲ್ಲವಾ ಎಂದು ಅಂದುಕೊಳ್ಳುವಷ್ಟರಲ್ಲಿ `ಮೋಟು ಬೀಡಿಯ ಸೇದುತ್ತ, ಕಡಲೆಯ ಪುರಿಯ ಗುಡ್ಡವ' ದಾಟುತ್ತಾ ಪಕ್ಕಾ ಲೌಕಿಕನಾಗಿ ನಿಜವಾಗಿಬಿಡುತ್ತಾನೆ. ಜಾತ್ರೆಯಲ್ಲಿನ ಶಿವನ ಪಕ್ಕಾ ಲೌಕಿಕ ಬದುಕು, ಕಷ್ಟ, ಸುಖ, ನೋವು, ನಲಿವುಗಳು ನಿರೂಪಕಿಯ ಎದುರು ತೆರೆದುಕೊಳ್ಳುತ್ತದೆ.ಲೋಕಸಹಜ ಹಸಿವು, ಕಾಯಿಲೆ, ಬಾಡಿದ ಮುಖ, ಬಸಿದ ದುಃಖ - ಒಂದೇ? ಎರಡೇ?! `ಗಣಪ ಹಸಿದಿರುವುದಕ್ಕೆ, ಗಿರಿಜೆಗೆ ಕಾಯಿಲೆಯಾಗಿರುವುದಕ್ಕೆ' ಆತ ಅಳುತ್ತಿದ್ದಾನೆ. ಮತ್ತೊಬ್ಬರ ಎದುರು ಕೈ ಒಡ್ಡಿ ನಿಂತಿದ್ದಾನೆ. ಜಾತ್ರೆಯಲ್ಲಿರುವ ಲೌಕಿಕಶಿವನ  `ನಿಜ' ಇದು. ಹೆಂಡತಿ, ಮಗನ ಸಲುವಾಗಿ ಆತ ಭಿಕ್ಷೆ ಬೇಡುತ್ತಿದ್ದಾನೆ.`ಭಿಕ್ಷಾಟನೆ' `ಪರ'ಶಿವನ ಬಹಳ ದೊಡ್ಡ ಅಸ್ಮಿತೆ. ಇಹಪರಗಳೆರಡರಲ್ಲಿಯೂ ಎಲ್ಲಕ್ಕೂ, ಎಲ್ಲರಿಗೂ, ಎಲ್ಲವನ್ನೂ ನೀಡಬಲ್ಲ `ಪರ'ಶಿವ `ಮಹಾಭಿಕ್ಷುಕ'. ಜಾತ್ರೆಯ ಶಿವನೂ ಭಿಕ್ಷುಕ. ಬೇಡುವ ಕ್ರಿಯೆ ಸುಲಭ, ಸರಳದ್ದಲ್ಲ. `ಬೇಡುವ ವ್ಯಕ್ತಿ ಹತ್ತಿಗಿಂತಲೂ ಹಗುರ' ಎಂದು ಸಂಸ್ಕೃತದ ಸುಭಾಷಿತವೊಂದು ನುಡಿಯುತ್ತದೆ. ಮನುಷ್ಯನ ಗರ್ವವನ್ನು ಸಂಪೂರ್ಣವಾಗಿ ತೊಡೆದುಹಾಕುವ ಮಹಾ ಕಾರ್ಯವದು. ತಿರಿಯುವ ಕಾರ್ಯದಲ್ಲಿ ನಿರತನಾಗಿರುವ `ಪರ'ಶಿವ ಗರ್ವರಹಿತನಾಗಿರುವುದರಿಂದಲೇ ಮಂಗಳಮಯನಾಗಿದ್ದಾನೆ.

ತನ್ನ ಹೆಂಡತಿ, ಮಕ್ಕಳಿಗಾಗಿ ನಿರೂಪಕಿಯೆದುರು ಕೈ ಒಡ್ಡಿ ನಿಂತಿರುವ ಲೌಕಿಕಶಿವ ಆಕೆಯಲ್ಲಿ ಮೂಡಿಸುವ ಪ್ರಶ್ನೆ ಮತ್ತು ಅಚ್ಚರಿಗಳು ಅನನ್ಯವಾದುವು; `ಹೆಂಡತಿ ಮಕ್ಕಳಿಗಾಗಿ ಶಿವನಲ್ಲದೆ ಭವಿ ಅಳುವನೆ?!'ಸವಿತಾ, ಅತ್ಯಂತ ಸೂಕ್ಷ್ಮವಾಗಿ, ಕಲಾತ್ಮಕವಾಗಿ ತಮ್ಮ ಕವಿತೆಯಲ್ಲಿ ಇಹಪರಗಳೆರಡನ್ನೂ ಬೆಸೆಯುವ ಪರಿ ಇದು. ಭವಿಯಾಗಿರುವ ಲೌಕಿಕಶಿವ, ಹೆಂಡತಿ ಮಕ್ಕಳಿಗಾಗಿ ಕಣ್ಣೀರು ಹಾಕಿ ಮತ್ತೊಬ್ಬರ ಮುಂದೆ ಬೊಗಸೆ ಒಡ್ಡುವಾಗ `ಪರ'ಶಿವನೇ ಆಗಿಬಿಡುವ ಪ್ರಕ್ರಿಯೆ ಇದು. ಭಕ್ತ-ಭವಿ ಕುರಿತಂತೆ ಶರಣರಲ್ಲಿ ಬಹಳವೇ ಮಹತ್ತ್ವದ ಚರ್ಚೆಗಳು ನಡೆದಿವೆ. ಇಲ್ಲಿ ಅದು, ಪುರುಷನ, ಹೆಂಡತಿ ಮಕ್ಕಳಿಗಾಗಿ `ಅಳುವ' ಕ್ರಿಯೆಯಲ್ಲಿ ಗುರುತಾಗುತ್ತಿದೆ. `ಅಳುವ ಗಂಡಸನ್ನು ನಂಬಬಾರದೆಂದು' ನಂಬಿ ನಡೆಯುತ್ತಿರುವ ಸಮಾಜದಲ್ಲಿ ನಿಂತು, ಹೆಂಡತಿ, ಮಕ್ಕಳಿಗಾಗಿ ಅಳುವ ಗಂಡಸೇ ಶಿವನಾಗುವ ಪ್ರಕ್ರಿಯೆಯನ್ನು ಕವಿತೆ ಎತ್ತಿಹಿಡಿಯುತ್ತದೆ. `ಅಳು' ದೌರ್ಬಲ್ಯವಲ್ಲ. ಪ್ರೀತಿ, ಮಮತೆ, ದಯೆ, ಕಾರುಣ್ಯಗಳ ಒಟ್ಟುರೂಪ!ಪರ್ಸನ್ನು ತೆಗೆದು ನೋಟೊಂದನ್ನು ನಿರೂಪಕಿ `ರುದ್ರನೊಡ್ಡಿದ ಬೊಗಸೆ'ಯಲ್ಲಿ ಇರಿಸುತ್ತಾರೆ. ಇಲ್ಲಿ ಬರುವ `ರುದ್ರ' ಮುಖ್ಯಪದ. ಬೇಡುತ್ತಿದ್ದಾರೆಂಬ ಮಾತ್ರಕ್ಕೆ, ಅಳುತ್ತಿದ್ದಾರೆಂಬ ಮಾತ್ರಕ್ಕೆ ಈ ಶಿವನಿರಬಹುದು, ಆ ಶಿವನಿರಬಹುದು ದುರ್ಬಲರಲ್ಲ. ಅವರಿಗಿರುವ ಅಗಾಧ ಶಕ್ತಿ `ರುದ್ರ' ಪದದಲ್ಲಿ ಸಾಂದ್ರವಾಗಿ ಕಾಣಿಸಿಕೊಳ್ಳುತ್ತದೆ. ದಕ್ಷಯಜ್ಞ, ದಾಕ್ಷಾಯಿಣಿಯ ಸಾವು, ಆ ಸಾವಿನ ನೋವಿನಲ್ಲಿ ದಕ್ಷನನ್ನು ಸಂಹರಿಸಲು `ಪರ'ಶಿವ ತಾಳಿದ `ರುದ್ರ' ರೂಪದ ಮೂಲದಲ್ಲಿಯೂ ಹೆಂಡತಿ ಕುರಿತಾದ ಅದಮ್ಯ ಪ್ರೀತಿಯೇ ಇದೆ. ಆ ಪ್ರೀತಿ ತಾಳಬಹುದಾದ ಅದಮ್ಯ ಶಕ್ತಿಯ ಸಂಕೇತವಾಗಿದ್ದಾನೆ `ರುದ್ರ'.ತನ್ನ ಬೊಗಸೆಗೆ ನೋಟು ಬಿದ್ದ ತಕ್ಷಣ ಲೌಕಿಕರುದ್ರ `ಮಿಂಚಂತೆ ಹೊಳದು, ತಳಾಂಗು ತದಿಗಿಣ ತೋಂ' ಎಂದು, `ನಾಟ್ಯಮಾಡಿ ನಟರಾಜನ ಭಂಗಿಯಲ್ಲಿ, ಅರ್ಧ ನಿಮೀಲಿತ ನೇತ್ರನಾಗಿ ನಿಂತುಬಿಟ್ಟಾಗ ಆ ಶಿವ, ಈ ಶಿವರಿಬ್ಬರೂ ಒಂದೇ ಆಗಿಬಿಡುತ್ತಾರೆ! ಇಹ-ಪರಗಳ ನಡುವಿನ ಗೆರೆ, `ಪರ'ಶಿವ, ಜಾತ್ರೆಯಲ್ಲಿನ ಶಿವರ ನಡುವಿನ ಗೆರೆ ತಟ್ಟನೆ ಅಳಿದು ಹೋಗುವ ದಿವ್ಯಕ್ಷಣವದು.

`ಜಾತ್ರೆಯಲ್ಲಿ ಶಿವ' ಕವಿತೆಯ ಶೀರ್ಷಿಕೆಯೂ ಸಾರ್ಥಕವಾದುದೆ! `ಪರ'ಶಿವನಿಂದ ಜಾತ್ರೆಯ ಶಿವನಿಗೆ ಮಹತ್ತ್ವ ಬಂದುದಲ್ಲ. ಜಾತ್ರೆಯ ಶಿವನಿಂದ `ಪರ'ಶಿವ ಮಾನ್ಯತೆ ಗಳಿಸಿಕೊಳ್ಳುತ್ತಾನೆ. `ಪರ'ಶಿವ, ಲೌಕಿಕಶಿವರಿಬ್ಬರೂ ಏಕೀಭವಿಸಿದ ವಿನೂತನ ಶಿವನ `ಸಾಕ್ಷಾತ್ಕಾರ'ದೊಂದಿಗೆ ಕವಿತೆ ಪೂರ್ಣಗೊಳ್ಳುತ್ತದೆ. ಸದ್ದೇ ಇಲ್ಲದೆ, ಬದುಕು ಕಟ್ಟಿಕೊಳ್ಳಬೇಕಾದ ಮಾನವೀಯ ಘನತೆಯ ಸ್ವರೂಪವೊಂದನ್ನು ನಿರೂಪಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.