ವಿಮರ್ಶಕ ಒಕ್ಕಣ್ಣ ಆಗಬಾರದು: ಮಾಲಗತ್ತಿ

7

ವಿಮರ್ಶಕ ಒಕ್ಕಣ್ಣ ಆಗಬಾರದು: ಮಾಲಗತ್ತಿ

Published:
Updated:

ಶಿವಮೊಗ್ಗ: ಕೃತಿಯ ವಿಮರ್ಶೆ ಒಂದು ಸಮಾಜದ, ರಾಜ್ಯದ, ರಾಷ್ಟ್ರದ ವಿಮರ್ಶೆಯು ಹೌದು. ವರ್ತಮಾನದಲ್ಲಿರುವ ವಿಮರ್ಶಕರು ಭೂತವನ್ನು ಗ್ರಹಿಸಿ, ಭವಿಷ್ಯತ್ ಕಟ್ಟಿಕೊಡಬೇಕು. ವಿಮರ್ಶೆ ಒಕ್ಕಣ್ಣ ಆಗಬಾರದು ಎಂದು ಲೇಖಕ ಪ್ರೊ.ಅರವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು.ಕರ್ನಾಟಕ ಸಾಹಿತ್ಯ ಅಕಾಡೆಮಿ, ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಸಹಯೋಗದಲ್ಲಿ ಶಂಕರಘಟ್ಟದ ಜ್ಞಾನಸಹ್ಯಾದ್ರಿಯಲ್ಲಿ ಏರ್ಪಡಿಸಿದ್ದ `ಸಮಕಾಲೀನ ವಿಮರ್ಶೆ - ಸಾಂಸ್ಕೃತಿಕ ಬಿಕ್ಕಟ್ಟು~ ಕುರಿತು ಯುವ ಲೇಖಕರ ಐದು ದಿನಗಳ ವಿಮರ್ಶಾ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಂಗಳವಾರ ಅವರು ಮಾತನಾಡಿದರು.ವಿಮರ್ಶೆಯ ಅಸ್ತಿತ್ವ ಕೃತಿಯ ಒಳಗಡೆಯೇ ಇರುತ್ತದೆ. ಕನ್ನಡದಲ್ಲಿ ನಿಜವಾದ ವಿಮರ್ಶೆ ಆರಂಭವಾಗಿದ್ದೇ ಕುವೆಂಪು ಅವರು ಬರೆದ `ಶೂದ್ರತಪಸ್ವಿ~ ಕೃತಿಗೆ ಮಾಸ್ತಿ ಅವರು ಮಂಡಿಸಿದ ವಾಗ್ವಾದಗಳಿಂದ ಎನ್ನಬಹುದು. ನವೋದಯ ವಿಮರ್ಶೆ ರಸ ವಿಮರ್ಶೆಯಷ್ಟೇ ಅಲ್ಲ, ಅಲ್ಲಿ ರಸಾಸ್ವಾದನೆ, ಭಿನ್ನ ಚಿಂತನೆಗಳಿವೆ. ನವ್ಯ ವಿಮರ್ಶೆ ಬಾಡಿಗೆ ಚಿಂತನೆಗಳನ್ನು ಹೊತ್ತು ತಂದಿದೆ. ಈ ಬಾಡಿಗೆ ಚಿಂತನೆಗಳು ಮುಂದೆ ಸ್ವತಂತ್ರ ಚಿಂತನೆಗೆ ಅವಕಾಶ ಮಾಡಿಕೊಟ್ಟಿವೆ ಎಂದು ವಿಶ್ಲೇಷಿಸಿದರು.ದಲಿತ-ಬಂಡಾಯದ ಚಿಂತನ ಕ್ರಮವೇ ಕನ್ನಡ ಸಾಹಿತ್ಯ ವಿಮರ್ಶಾಕ್ಷೇತ್ರಕ್ಕೆ ಸ್ವತಂತ್ರದ ಅಸ್ತಿತ್ವವನ್ನು ತಂದುಕೊಟ್ಟಿದೆ. `ಇಕ್ರಲಾ ಒದ್ರಿಲಾ~ ಎಂಬಂತಹ ಬೈಗುಳ ಶಬ್ದಕ್ಕೂ ಚಾರಿತ್ರಿಕ ಹಿನ್ನೆಲೆಯಿದೆ. ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಯಾವುದು ಜೀವಂತವಾಗಿರುತ್ತದೋ ಅದಕ್ಕೆ ವಿರೋಧಗಳಿರುತ್ತವೆ. ದಲಿತ ಬಂಡಾಯ ವಿಮರ್ಶೆ ಸೀಮಾತೀತ ವಿಮರ್ಶೆಯಾಗಿರುತ್ತದೆ ಎಂದರು.ಕಮ್ಮಟದ ನಿರ್ದೇಶಕರಾದ ಡಾ.ರಾಜಪ್ಪ ದಳವಾಯಿ, ಡಾ.ಬಿ.ಎಂ. ಪುಟ್ಟಯ್ಯ, ಅಕಾಡೆಮಿಯ ರಿಜಿಸ್ಟ್ರಾರ್ ಡಾ.ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಕನ್ನಡ ಭಾರತಿಯ ನಿರ್ದೇಶಕ ಪ್ರೊ.ಸಣ್ಣರಾಮ ಅಧ್ಯಕ್ಷತೆ ವಹಿಸಿದ್ದರು.ವಿವಿಯ ಪ್ರಸಾರಾಂಗದ ನಿರ್ದೇಶಕ ಡಾ.ಜಿ. ಪ್ರಶಾಂತ ನಾಯಕ  ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಾ.ಶಿವಾನಂದ ಕೆಳಗಿನಮನಿ ಸ್ವಾಗತಿಸಿದರು. ಡಾ.ಸಿ.ಎಸ್. ಶಿವಕುಮಾರ ಚಲ್ಯ ಪ್ರಾರ್ಥಿಸಿದರು. ಸಿ. ಶ್ವೇತಾ ಹಾಗೂ ವಿ.ಜಿ. ರುದ್ರೇಶ್ ಕಾರ್ಯಕ್ರಮ ನಿರೂಪಿಸಿದರು. ಡಾ.ಬಿ.ಇ. ಕುಮಾರಸ್ವಾಮಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry