ಸೋಮವಾರ, ಮೇ 16, 2022
29 °C

ವಿಮರ್ಶೆ: ಶಾಕುಂತಲ: ಹೊಸ ರಂಗನೋಟ

ಬಿ.ಸುರೇಶ Updated:

ಅಕ್ಷರ ಗಾತ್ರ : | |

‘ಕಾವ್ಯೇಷು ನಾಟಕಂ ರಮ್ಯಂ’ ಎಂಬುದು ಪ್ರಸಿದ್ಧ ಮಾತು. ಆದರೆ ನಾಟಕವೊಂದನ್ನು ಬರೆದು ಅದನ್ನು ಪ್ರದರ್ಶನ ಯೋಗ್ಯ ಕೃತಿಯಾಗಿಸುವುದು ಸುಲಭಸಾಧ್ಯವಲ್ಲ. ನಾಟಕ ಎಂಬ ಪ್ರಕಾರವೇ ಹಾಗೆ. ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಗಟ್ಟಿಗೊಳ್ಳುತ್ತಾ ಸಾಗುವ ಕಲೆ. ಹಾಗಾಗಿಯೇ ನಮ್ಮಲ್ಲಿ ನಾಟಕ ಪ್ರಕಾರದಲ್ಲಿ ಹೆಚ್ಚು ಕಾಲ ಉಳಿದುಕೊಂಡವರ ಸಂಖ್ಯೆಯೂ ಕಡಿಮೆ. ಆಧುನಿಕ ಕಾಲ ಎಂದು ಗುರುತಿಸಲಾಗುವ ಕಳೆದ ಮೂರು ದಶಕಗಳಲ್ಲಿ ಈ ಪ್ರಕಾರಕ್ಕೆ ಬಂದ ಸಾಹಿತಿಗಳ ಸಂಖ್ಯೆ ಗಣನೀಯವಾದರೂ, ಅವರು ಇದೇ ಪ್ರಕಾರದಲ್ಲಿ ಮುಂದುವರೆದದ್ದು ಕಡಿಮೆ. ಇನ್ನು ನಾಟಕದ ವಿಮರ್ಶೆಯಂತೂ ನಮ್ಮಲ್ಲಿ ಸಾಹಿತ್ಯದ ನೆಲೆಯಿಂದಲೇ ಆಗುವಂತಹದು. ಅದನ್ನು ಪ್ರದರ್ಶನದ ಗುಣದಿಂದ ಕಂಡ ವಿಮರ್ಶಕರು ವಿರಳ. ಹೀಗಾಗಿಯೇ ನಮ್ಮ ವಿಮರ್ಶೆಯ ಇತಿಹಾಸದಲ್ಲಿ ನಾಟಕ ಕುರಿತಂತೆ ದೊರೆವ ವಿವರಗಳು ಅತ್ಯಲ್ಪ. ಇಂತಹ ಸಂದರ್ಭದಲ್ಲಿ ಯಾರಾದರೂ ಹೊಸ ನಾಟಕ ಬರೆದಿದ್ದಾರೆ ಎಂದರೆ ಕಣ್ಣರಳಿಸಿ ನೋಡುವ ರಂಗಾಸಕ್ತರ ದಂಡೇ ನಮ್ಮಲ್ಲಿದೆ. ಇಂತಹ ಕಾಲಘಟ್ಟದಲ್ಲಿ ಜಯಶ್ರೀ ಹೆಗಡೆಯವರು ‘ಅಭಿನವ ಶಾಕಂತಲ’ ನಾಟಕವನ್ನು ಬರೆದಿದ್ದಾರೆ.ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಭಾರತದ ಅತ್ಯಂತ ಹೆಚ್ಚು ಚರ್ಚಿತ ಹಾಗೂ ಪ್ರದರ್ಶಿತ ನಾಟಕಗಳಲ್ಲಿ ಒಂದು. ಇಂದು ಸಂಸ್ಕೃತ ನಾಟಕಗಳನ್ನು ಕುರಿತು ಯಾವುದೇ ಮಾತಾಡುವವರು ಕಾಳಿದಾಸನ ಶಾಕುಂತಲೆಯನ್ನು ಗಮನಿಸದೆ ಮುಂದೆ ಸಾಗಲಾಗದು. ಈ ನಾಟಕದ ವಸ್ತುವನ್ನು, ರಂಗಕಟ್ಟಡವನ್ನು ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೇ ನಾಟಕದ ವಸ್ತುವನ್ನು ಜಯಶ್ರೀ ಸ್ತ್ರೀವಾದಿ ದೃಷ್ಟಿಕೋನದಿಂದ ನೋಡುವ ಪ್ರಯತ್ನವನ್ನು ತಮ್ಮ ನಾಟಕದಲ್ಲಿ ಮಾಡಿದ್ದಾರೆ.ಕಾಳಿದಾಸನ ‘ಶಾಕುಂತಲೆ’ಯಲ್ಲಿ ಯೌವನ ಕಾಲದ ವಿವರಗಳು, ದುಷ್ಯಂತನ ಪ್ರೇಮ ಮತ್ತು ಅಂತಿಮವಾಗಿ ಶಾಕುಂತಲೆಯ ದುರಂತ ಪ್ರಧಾನವಾದರೆ, ಜಯಶ್ರಿ ಅವರು ದುಷ್ಯಂತನ ಮೂರನೆಯ ರಾಣಿಯಾಗಿ ಶಾಕುಂತಲೆಯು ಸ್ಥಾಪಿತವಾದ ನಂತರದ ಸ್ಥಿತಿಯಿಂದ ಕತೆಯನ್ನು ಆರಂಭಿಸುತ್ತಾ, ಇಡಿಯ ಕತೆಯಲ್ಲಿ ಹೇಗೆ ಎಲ್ಲ ಹೆಂಗಸರೂ ಸೋತವರಾಗಿದ್ದಾರೆ ಎಂಬುದನ್ನು ಬಿಚ್ಚಿಡುತ್ತಾರೆ. ಇದು ಹೊಸ ಆಯಾಮ. ಈವರೆಗೆ ಶಾಕುಂತಲೆಯ ದೃಷ್ಟಿಯಿಂದ ಈ ಕತೆಯನ್ನು ನೋಡಿದ ಉದಾಹರಣೆಗಳಿಲ್ಲ. ವೈದೇಹಿ ಅವರ ಕತೆಯೊಂದರಲ್ಲಿ ಶಾಕುಂತಲೆ ತನ್ನ ಬದುಕನ್ನು ನೆನಪಿಸಿಕೊಳ್ಳುವ ವಿವರ ಬರುತ್ತದೆ.ಆ ಕತೆಯನ್ನೇ ಆಧರಿಸಿ ಏಕವ್ಯಕ್ತಿ ಪ್ರದರ್ಶನವಾಗಿ ‘ಅಲೆಗಳಲ್ಲಿ ಅಂತರಂಗ’ ಎಂಬ ನಾಟಕವೂ ಆಗಿದೆ. ಆದರೆ ಶಾಕುಂತಲೆಯು ರಾಣಿಯಾದ ಮೇಲೆ ಅನುಭವಿಸುವ ಸಂಕಟ-ಹತಾಶೆಗಳನ್ನು, ಅವಳ ಸುತ್ತ ಇರುವ ದುಷ್ಯಂತನ ಇನ್ನಿತರ ರಾಣಿಯರು ಮತ್ತು ದಾಸಿಯರ ಸಂಕಟಗಳನ್ನು, ಜೊತೆಗೆ ಆಶ್ರಮವಾಸಿಗಳಾಗಿರುವ ಶಾಕುಂತಲೆಯ ಬಾಲ್ಯಗೆಳತಿಯರ ಸಾಂಸಾರಿಕ ಜೀವನದ ಹಳವಂಡಗಳನ್ನು ಕುರಿತು ಚರ್ಚಿಸಿದ ನಾಟಕಗಳು ಬಂದೇ ಇಲ್ಲ. ಈ ಕಾರಣದಿಂದಾಗಿ ಶಾಕುಂತಲೋಪಖ್ಯಾನವನ್ನ ಹೊಸಕೋನದಿಂದ ನೋಡಿರುವ ಜಯಶ್ರೀ ಪ್ರಯತ್ನ ಮೆಚ್ಚುವಂತಿದೆ.ಈ ನಾಟಕದಲ್ಲಿ ಮೂರು ಅಂಕಗಳಿವೆ. ಪ್ರತೀ ಅಂಕಕ್ಕೆ ಮೂರು ದೃಶ್ಯದಂತೆ ಒಂಬತ್ತು ದೃಶ್ಯಗಳಿವೆ. ಮೊದಲ ಅಂಕದಲ್ಲಿ ದುಷ್ಯಂತನ ಅರಮನೆಯಲ್ಲಿ ರಾಣಿಯಾಗಿರುವ ಶಾಕುಂತಲೆಯು ಅರಮನೆಯನ್ನು ತೊರೆದುಹೋಗುವ ನಿರ್ಧಾರಕ್ಕೆ ಬಂದಿದ್ದಾಳೆ.ಇದರ ಪರಿಣಾಮವಾಗಿ ದುಷ್ಯಂತ ಅನುಭವಿಸುವ ಸಂಕಟಗಳು, ಅವನ ಮಹಾರಾಣಿ ವಸುಮತಿ ಮತ್ತು ಶಾಕುಂತಲೆಯ ಮಾತು ಮತ್ತು ದುಷ್ಯಂತನ ಸ್ಥಿತಿಗೆ ಅವನ ಸ್ನೇಹಿತ ವಿಮರ್ಶಕ ಆದ ವಿದೂಷಕ ಪ್ರತಿಕ್ರಿಯಿಸುವ ವಿವರಗಳಿವೆ. ಎರಡನೆಯ ಅಂಕದಲ್ಲಿ ಕಣ್ವರ ಆಶ್ರಮದಲ್ಲಿರುವ ಶಾಕುಂತಲೆಯು ತನ್ನ ಗೆಳತಿಯರೊಡನೆ ಮಾತಾಡುತ್ತಾ ಹಳೆಯ ದಿನಗಳ ಜೊತೆಗೆ ತನ್ನ ಈಗಿನ ಸ್ಥಿತಿಯನ್ನು ಇಟ್ಟು ನೋಡುವ ವಿವರಗಳು, ಶಾಕುಂತಲೆ-ಕಣ್ವರು ಬದುಕು ತೆರೆದಿಟ್ಟ ಹಾದಿಯನ್ನು ಕುರಿತಂತೆ ಆಡುವ ಮಾತುಗಳು ಮತ್ತು ಶಾಕುಂತಲೆಯ ಮಗನನ್ನು ಆಶ್ರಮವಾಸಿಗಳು ಹೇಗೆ ನೋಡುತ್ತಾರೆ ಮತ್ತು ಅದೇ ಆಶ್ರಮವಾಸಿಗಳ ಜೀವನ ಹೇಗಿದೆ ಎಂಬ ಲೋಕ ಅನಾವರಣಗೊಳ್ಳುತ್ತದೆ. ಮೂರನೆಯ ಅಂಕದಲ್ಲಿ ದುಷ್ಯಂತನ ಎರಡನೆಯ ಹೆಂಡತಿ ತಾನು ಸಂಗೀತದಲ್ಲಿ ಮೈಮರೆಯುವುದು ಯಾಕೆ ಎಂಬ ಸತ್ಯವನ್ನು ಅರಹುವ ವಿವರ, ಅರಮನೆಯ ದಾಸಿಯರಲ್ಲಿನ ದಾಸ್ಯದ ಬದುಕಿನಿಂದ ಬಿಡುಗಡೆಯಾಗುವುದೆಂದು ಎಂಬ ಭಾವನೆಗಳು, ಶಾಕುಂತಲೆಯು ಅಂತಿಮವಾಗಿ ತನ್ನ ಮಗನ ಜೊತೆಗೆ ನಿಸರ್ಗದ ಕಡೆಗೆ ಸಾಗುವ ನಿರ್ಧಾರ ತೆಗೆದುಕೊಳ್ಳುವ ವಿವರ ಬರುತ್ತವೆ.ಹೀಗೆ ಒಂದು ಕತೆಯಲ್ಲಿ ಪಾತ್ರವಾಗುವ ಎಲ್ಲಾ ಮನಸ್ಸುಗಳ ಒಳಗಿನ ಹತಾಶೆಗಳು, ತಲ್ಲಣಗಳು ಮತ್ತು ಪ್ರಶ್ನೆಗಳನ್ನು ಮಾತಿನಿಂದಲೇ ಬಿಚ್ಚಿಡುವ ಪ್ರಯತ್ನವನ್ನು ಜಯಶ್ರೀ ಮಾಡಿದ್ದಾರೆ. ಇಲ್ಲಿ ಮಾತು ಪ್ರಧಾನವಾಗಿ ದೃಶ್ಯ ಶಕ್ತಿ ಕಡಿಮೆಯಾಗಿದೆ ಎಂಬುದೊಂದು ಕೊರತೆಯಾಗಿ ಕಾಣುತ್ತದೆ. ಆದರೆ ಶಕ್ತ ನಟರ ಸಮೂಹವೊಂದರ ಕೈಗೆ ಇಂತಹ ಕೃತಿ ಸಿಕ್ಕರೆ ಇದು ಅಪರೂಪದ ರಂಗಕೃತಿಯೂ ಆಗಬಲ್ಲದು ಎನಿಸುತ್ತದೆ.

ಜಯಶ್ರೀ ಅವರು ಆಧುನಿಕ ನಾಟಕಕಾರರ ಹಾಗೆ ಒಂದು ಉತ್ಕರ್ಷದತ್ತ ಸಾಗುವ ಕಥನ ಕ್ರಮವನ್ನು ಬಳಸಿಲ್ಲ. ಬದಲಿಗೆ ವಿಭಿನ್ನ ಪಾತ್ರಗಳ ಭಾವಗಳ ರಂಗೋಲಿಯನ್ನು ಬಿಡಿಸಿದ್ದಾರೆ. ಹೀಗಾಗಿ ನಾಟಕವೊಂದಕ್ಕೆ ಇರಬೇಕಾದ ಮಂದ್ರದಿಂದ ಸ್ಥಾಯಿಗೆ ಸಾಗುವ ಗುಣ ಇಲ್ಲಿ ಕಾಣದು. ಇದು ಮೊದಲ ಓದಲ್ಲಿ ‘ಹೀಗೇಕೆ?’ ಎನಿಸಿದರೂ, ‘ಹೀಗೇಕೆ ಇರಬಾರದು?’ ಎಂಬ ಪ್ರಶ್ನೆಯನ್ನೂ ಹುಟ್ಟಿಸುವ ಕ್ರಮ. ಈ ಕ್ರಮದಿಂದಾಗಿ ಕೆಲವು ಪಾತ್ರಗಳು ಅಗತ್ಯಕ್ಕಿಂತ ಹೆಚ್ಚು ಮಾತಾಡಿಬಿಡುತ್ತವೆ. ವಿದೂಷಕ ಮತ್ತು ಭಾಗವತರಿಬ್ಬರೂ ‘ಮಾತಾಡುವ ಪ್ರೀತಿ’ಯಲ್ಲಿ ಸಿಕ್ಕಿಬಿಡುತ್ತಾರೆ. ಈ ಪಾತ್ರಗಳೆರಡೂ ಧಾರವಾಡೀ ಕನ್ನಡದಲ್ಲಿ ಮಾತಾಡುತ್ತಾರೆ ಎಂಬುದನ್ನೂ ಗಮನಿಸಬಹುದು. ಈ ಅತೀ ಮಾತಿನಿಂದಾಗಿ ಹಲವು ದೃಶ್ಯಗಳು ಅಗತ್ಯಕ್ಕಿಂತ ಲಂಬಿತವಾಗಿವೆ. ಇದೇ ‘ಮಾತಿನ ಪ್ರೀತಿ’ ಅನೇಕ ದೃಶ್ಯಗಳಲ್ಲಿ ಶಾಕುಂತಲೆಯ ಪಾತ್ರಕ್ಕೂ ಇದೆ. ವಿಶೇಷವಾಗಿ ನಾಟಕದ ಅಂತಿಮ ದೃಶ್ಯದಲ್ಲಿ ಶಾಕುಂತಲೆ ಅತ್ಯಂತ ಸೂಕ್ಷ್ಮ ವಿವರಗಳನ್ನು ಬಿಚ್ಚಿಡುತ್ತಾಳೆ. ಆದರೆ ಆ ಮಾತುಗಳು ವಾಕ್ಯದಿಂದ ವಾಕ್ಯಕ್ಕೆ ಅರಳುವ ಬದಲು ಹಿಗ್ಗುತ್ತವೆ. ಹೀಗಾಗಿ ಶಾಕುಂತಲೆಯ ಪಾತ್ರದ ಸ್ಥಾಯೀ ಭಾವದ ಸುತ್ತ ಸಂಚಾರೀ ಭಾವಗಳ ಸಂತೆಯು ನೆರೆದು ಅನುಭೂತಿ ಸೃಷ್ಟಿಗೆ ತೊಡಕಾಗುತ್ತದೆ. ಇಂತಹ ಸಣ್ಣಪುಟ್ಟ ಅವಗುಣಗಳ ನಡುವೆಯೂ ಜಯಶ್ರೀ ಅವರ ಈ ಪ್ರಯತ್ನ ಅಭಿನಂದನಾರ್ಹ.‘ನಮ್ಮೊಂದಿಗೆ ಈ ನೆಲವಿದೆ. ಈ ಆಕಾಶವಿದೆ. ಈ ನಕ್ಷತ್ರಗಳು ದಾರಿ ತೋರಿದತ್ತ ನಾವು ಹೋಗುವೆವು. ಭಾವನೆಗಳೆ ನನ್ನನ್ನು ಕಟ್ಟಿಹಾಕದಿರಿ. ನನ್ನನ್ನು ಹಿಂದಕ್ಕೆ ಎಳೆಯಬೇಡಿ. ನನ್ನ ಮಗುವಿನ ಕಾಣದ ಭವಿಷ್ಯವೇ, ಧೈರ್ಯ ಕೊಡು. ಕಾಣದ ಬದುಕೇ, ಧೈರ್ಯ ಕೊಡು. ಕನಸುಗಳೇ, ಕೈಹಿಡಿದುಕೊಳ್ಳಿ. ಇಲ್ಲಿ ಉಳಿಯುವುದು ಕಣ್ಣೀರಿನ ಕೊಳ ಮಾತ್ರವೇ? ಬದುಕು ಭಗ್ನಗೊಂಡ ಅವಶೇಷ ಮಾತ್ರವೇ? ಇಲ್ಲ. ಆ ನಿರಾಕುಲ ಪ್ರೀತಿ ಇಲ್ಲಿ ಉಳಿಯಬೇಕು. ನಿಷ್ಠೆ ನಲುಗಕೂಡದು. ನಂಬುಗೆ ಸೋಲಕೂಡದು. ಈ ದಾರಿಯ ಗುರಿ ಸಿಂಹಾಸನವಲ್ಲ. ಅಂತಿಮವಾದದ್ದು ಪ್ರಭುತ್ವವೇ ಅಲ್ಲವೇ ಅಲ್ಲ. ಈ ಹೊಳೆಯ ದಡದಲ್ಲಿ ತೂಗುವ ಬಿದಿರ ಕೊಳಲಾಗಬೇಕು. ಮುಗಿಯದ ಹಾಡಿಗೆ ದನಿಯಾಗಬೇಕು’ ಎನ್ನುವ ಶಾಕುಂತಲೆಯ ಮಾತಿನ ಮೂಲಕ ನಾಟಕವನ್ನು ಮುಗಿಸುವ ಜಯಶ್ರೀ ಹೆಗಡೆಯವರ ತುಡಿತ ಈ ಮಾತುಗಳಲ್ಲಿಯೇ ಸ್ಪಷ್ಟವಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.