ಗುರುವಾರ , ಮೇ 19, 2022
20 °C

`ವಿಮಾ ಕೇತ್ರಕ್ಕೆ ವಿದೇಶಿ ಬಂಡವಾಳ: ಅವೈಜ್ಞಾನಿಕ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಗ್ರಾಹಕರ ವಿಶ್ವಾಸಾರ್ಹತೆ ಗಳಿಸಿರುವ ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳಾದ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಹಾಗೂ ಜಿಐಸಿಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದಲ್ಲಿ ದೇಶದ ಜನತೆಗೆ ಭಾರಿ ಅಪಾಯ ಕಾದಿದೆ ಎಂದು ವಿಮಾ ನೌಕರರ ಸಂಘ (ಎಐಐಇಎ ಸಂಯೋಜಿತ) ರಾಯಚೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಎಂ.ರವಿ ತಿಳಿಸಿದರು.ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕೇಂದ್ರದ ಈ ಅವೈಜ್ಞಾನಿಕ ನಿಲುವಿನ ವಿರುದ್ಧ ಜನಾಂದೋಲನ ರೂಪಿಸಲಾಗುತ್ತಿದೆ ಎಂದರು.ಲಾಭದಲ್ಲಿರುವ ಹಾಗೂ ವಿಮಾ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎಲ್‌ಐಸಿ ಹಾಗೂ ಜಿಐಸಿ ಸಂಸ್ಥೆಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಹುನ್ನಾರ ನಡೆಯುತ್ತಿದೆ. ಇದು ಸಾರ್ವಜನಿಕ ಉದ್ದಿಮೆಗಳನ್ನು ದುರ್ಬಲಗೊಳಿಸುವ ಹುನ್ನಾರವಾಗಿದೆ. ಈ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ವೈಜ್ಞಾನಿಕ ನಿಲುವನ್ನು ಕೇಂದ್ರ ಸರ್ಕಾರ ಪ್ರಕಟಪಡಿಸಬೇಕಿದೆ ಎಂದು ಅವರು ಕೋರಿದರು.1999ರಲ್ಲಿ ವಿಮಾ ವಲಯದ ಖಾಸಗೀಕರಣ ಕ್ರಮ ಕೈಗೊಂಡ ನಂತರ ಇಂದಿಗೂ ಭಾರತೀಯ ಜೀವ ವಿಮಾ ನಿಗಮವು ದೇಶದ ವಿಮಾ ಕ್ಷೇತ್ರದಲ್ಲಿ ಪಾಲಿಸಿ ಮಾರಾಟದಲ್ಲಿ ಶೇ 82 ಮತ್ತು ಪ್ರೀಮಿಯಂ ಆದಾಯದಲ್ಲಿ ಶೇ 74ರಷ್ಟು ಮಾರುಕಟ್ಟೆ ಹಿಡಿತ ಸಾಧಿಸಿದೆ. ಎಲ್‌ಐಸಿಯ ಈಗಿನ ಒಟ್ಟು ಆಸ್ತಿ ರೂ 16 ಲಕ್ಷ ಕೋಟಿಯಾಗಿದ್ದು,   11ನೇ ಪಂಚವಾರ್ಷಿಕ ಯೋಜನೆಗೆ ಜನರಿಂದ ಉಳಿತಾಯ ರೂಪದಲ್ಲಿ ಸಂಗ್ರಹಿಸಿದ ಹಣದಲ್ಲಿ ರೂ 7.04 ಲಕ್ಷ ಕೋಟಿಯನ್ನು ಸರ್ಕಾರಕ್ಕೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣ ಕೆಲಸಕ್ಕೆ ಕೈಜೋಡಿಸಿದೆ ಎಂದು ಅವರು ವಿವರಿಸಿದರು.ಎಲ್‌ಐಸಿಯು ದಾವೆಗಳ ಇತ್ಯರ್ಥದಲ್ಲಿ ಶೇ 99.51ರಷ್ಟು ಸಾಧನೆ ಮಾಡಿದೆ. ಶೇ 98.95ರಷ್ಟು ಮರಣ ಹೊಂದಿದ ದಾವೆಗಳ ಪಾವತಿ ಮಾಡಿದ್ದು, ವಿಮಾ ವಲಯದಲ್ಲೇ ದೊಡ್ಡ ಸಾಧನೆ ಎನ್ನಬಹುದಾಗಿದೆ. ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳೂ ಉತ್ತಮ ವ್ಯವಹಾರ ದಾಖಲಿಸುತ್ತಿವೆ. ದೇಶದ  ಕ್ಲಿಷ್ಟಕರ ಆರ್ಥಿಕ ಪರಿಸ್ಥಿತಿ ಮತ್ತು ಆಂತರಿಕ ಉಳಿತಾಯದ ದರ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲೂ  ರಾಷ್ಟ್ರೀಕೃತ ವಿಮಾ ರಂಗದ ಈ ಸಾಧನೆ ಅತ್ಯಂತ ಗಮನಾರ್ಹವಾಗಿದೆ. ಜಾಗತಿಕ ಮಟ್ಟದಲ್ಲಿ ವಿಮಾ ಮಾರುಕಟ್ಟೆಯಲ್ಲಿ ಕುಸಿತ ಕಂಡುಬಂದರೂ ಎಲ್‌ಐಸಿ ಮತ್ತು ಜಿಐಸಿ ಸಂಸ್ಥೆಳು ಶ್ಲಾಘನೀಯ ಕೆಲಸ ಮಾಡಿವೆ ಎಂದು ಅವರು ಹೇಳಿದರು.ಇತ್ತೀಚೆಗೆ ನಡೆದ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ವಿಮೆ, ರಕ್ಷಣಾ, ದೂರ ಸಂಚಾರ ಮತ್ತಿತರ 12 ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲು ನಿರ್ಧರಿಸಲಾಗಿದೆ.ಅರವಿಂದ ಮಾಯಾರಾವ್ ಸಮಿತಿ ಶಿಫಾರಸಿನ ಪ್ರಕಾರ ದೇಶದ ಸೂಕ್ಷ್ಮ ಹಾಗೂ ಆಯಕಟ್ಟಿನ ವಲಯಗಳಾದ ರಕ್ಷಣಾ, ದೂರ ಸಂಚಾರ ಹಾಗೂ ವಿಮಾ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿ, ಪಾಲುದಾರಿಕೆ ಹೆಚ್ಚಿಸಿದಲ್ಲಿ ದೇಶದ ಸುರಕ್ಷತೆ ಹಾಗೂ ಆರ್ಥಿಕ ಸ್ವಾವಲಂಬನೆಗೆ ಮಾರಕವಾಗಲಿದೆ ಎಂಬ ಅಂಶ ಇದೆ.ವಿದೇಶಿ ನೇರ ಬಂಡವಾಳವು ಭಾರತಕ್ಕೆ ಹರಿದು ಬರಲು ಅನುಮತಿ ನೀಡಿರುವುದು ವಿದೇಶಿ ಹಣಕಾಸು ಬಂಡವಾಳವನ್ನು ತೃಪ್ತಿ ಪಡಿಸಲು ತೆಗೆದುಕೊಂಡ ಕ್ರಮವಾಗಿದೆ. ಇದರಿಂದ ಹಾನಿಯೇ ಹೆಚ್ಚಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ವಿಮಾ ಕ್ಷೇತ್ರದಲ್ಲಿ ಈಗಾಗಲೇ ಶೇ 26ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ಇದೆ. ಇದನ್ನು ಶೇ 49ಕ್ಕೆ ಹೆಚ್ಚಿಸಲು ಸರ್ಕಾರ ತೀವ್ರ ಪ್ರಯತ್ನ ನಡೆಸಿದೆ. ವಿಮಾ ಕ್ಷೇತ್ರ ಖಾಸಗೀಕರಣಕ್ಕೆ ಒಳಗಾಗಿ 13 ವರ್ಷ ಕಳೆದರೂ ಅಂತಹ ದೊಡ್ಡ ಸಾಧನೆ ಕಂಡುಬಂದಿಲ್ಲ. ಸಂಸತ್‌ನ ಸ್ಥಾಯಿ ಸಮಿತಿ ಈಗಾಗಲೇ ಈ ಕುರಿತು ತನ್ನ ಅಭಿಪ್ರಾಯ ತಿಳಿಸಿ, ವಿಮಾ ವಲಯದಲ್ಲಿ ಇನ್ನೂ ಅಧಿಕ ಪ್ರಮಾಣದ ವಿದೇಶಿ ಬಂಡವಾಳ ಹೂಡಿಕೆಯ ಮಿತಿಯ  ಹೆಚ್ಚಳ ಅಗತ್ಯವಿಲ್ಲ ಎಂದು ಹೇಳಿದ್ದರೂ ಮುಂದಿನ ಮಳೆಗಾಲದ ಅಧಿವೇಶನದಲ್ಲಿ ಎಫ್‌ಡಿಐ ಮಿತಿ ಹೆಚ್ಚಿಸುವ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.ಇದನ್ನು ವಿರೋಧಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಬಹುದೊಡ್ಡ ಜನಾಂದೋಲನ ರೂಪಿಸಲಾಗುವುದು. ಸರ್ಕಾರ ತನ್ನ ನೀತಿಯಿಂದ ಹಿಂದಕ್ಕೆ ಸರಿಯದೇ ಹೋದರೆ ರಾಷ್ಟ್ರೀಯ ಮುಷ್ಕರಕ್ಕೂ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು. ಎಸ್.ಕೆ ಗೀತಾ, ಶ್ರೀಧರ್, ಎಸ್.ಅಬ್ದುಲ್ ಖಾದರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.