ಭಾನುವಾರ, ಮೇ 22, 2022
28 °C

ವಿರೋಧಿಸಲೇ ಬೇಕು... ಯಾಕೆಂದರೆ

ಶಿವಸುಂದರ್, ಬೆಂಗಳೂರು. Updated:

ಅಕ್ಷರ ಗಾತ್ರ : | |

ಇಪ್ಪತ್ತೈದು ವರ್ಷಗಳ ಹಿಂದೆ ವಿಶ್ವ ಕನ್ನಡ ಸಮ್ಮೇಳನ ನಡೆದಿತ್ತು. ಈ 25 ವರ್ಷಗಳಲ್ಲಿ 20,000ಕ್ಕೂ ಹೆಚ್ಚು ಕನ್ನಡಿಗ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಜನವಿರೋಧಿ ಅಭಿವೃದ್ಧಿ ಮಾದರಿಯಿಂದಾಗಿ ಈ ಸಮ್ಮೇಳನವನ್ನು ಉದ್ಘಾಟಿಸಲಿರುವ ಇನ್‌ಫೋಸಿಸ್ ನಾರಾಯಣಮೂರ್ತಿಗಳು ಪ್ರತಿನಿಧಿಸುವ ಕರ್ನಾಟಕ ಮಾತ್ರ ಕಣ್ಣುಕುಕ್ಕುವಷ್ಟು ಅಭಿವೃದ್ಧಿಯಾಗಿದೆ. ಅವರನ್ನೇ ವಿಶ್ವ ಕನ್ನಡ ಸಮ್ಮೇಳನದ ಉದ್ಘಾಟಕರನ್ನಾಗಿ ಕರೆಯುವುದರ ಹಿಂದೆಯೂ ಇದೇ ಜನವಿರೋಧಿ ಚಿಂತನಾ ಧಾರೆಗಳೇ ಕೆಲಸ ಮಾಡುತ್ತಿವೆ.ನಾರಾಯಣಮೂರ್ತಿಗಳು ಸಾಫ್ಟ್‌ವೇರ್ ಸಾಮ್ರಾಜ್ಯವನ್ನು ಕಟ್ಟಿ ದೇಶವಿದೇಶಗಳಲ್ಲಿ ಕನ್ನಡದ ಕೀರ್ತಿಯನ್ನು ಪಸರಿಸಿದರು ಎಂಬುದು ಮಾಧ್ಯಮ ಪ್ರೇರಿತ ನಂಬಿಕೆ. ವಿದೇಶಗಳಲ್ಲಿ ಮೂರ್ತಿಯವರಿಂದ ಗೊತ್ತಾಗಿರುವುದು ಬೆಂಗಳೂರೇ ಹೊರತು ಕರ್ನಾಟಕವಲ್ಲ, ಕನ್ನಡವೂ ಅಲ್ಲ. ಸಾಫ್ಟ್‌ವೇರ್ ಮೂಲಕ ಅಗ್ಗದ ಬೆಲೆಗೆ ನಮ್ಮ ಪ್ರತಿಭೆಗಳನ್ನು ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಾಡಿಗೆ ಕೊಡುತ್ತಾರೆಂಬ ಕಾರಣಕ್ಕಾಗಿಯೇ ನಾರಾಯಣಮೂರ್ತಿಗಳು ಅವರ ಕಣ್ಮಣಿ.ಡಾಲರ್‌ಗೂ ರೂಪಾಯಿಗೂ ಇರುವ ಅಜಗಜಾಂತರ ವ್ಯತ್ಯಾಸವೇ ಅವರ ಲಾಭದ ಮೂಲ. ಅದಕ್ಕೆಂದೇ ಅವರು ರೂಪಾಯಿ ಗಟ್ಟಿಯಾಗದ ನೀತಿಗಳನ್ನು ಪ್ರತಿಪಾದಿಸುತ್ತಾ ಭಾರತವನ್ನು ಆಮದುದಾರರ ಶಾಶ್ವತ ದಾಸ್ಯದಲ್ಲಿಡಲು ಪ್ರಯತ್ನಿಸುತ್ತಾರೆ. ಹೀಗೆ ಜಾಗತೀಕರಣದ ಕಾಲಘಟ್ಟದಲ್ಲಿ ಇಡೀ ಆರ್ಥಿಕತೆಯ ಮೇಲೆ ನಾಡವರ ಸಾರ್ವಭೌಮತೆಯೇ ಇಲ್ಲವಾಗುವಂತೆ ಮಾಡುತ್ತಿರುವವರು ನಾಡಿನ ಕಣ್ಮಣಿ ಹೇಗಾಗುತ್ತಾರೆ?ಇನ್ಫೋಸಿಸ್ ನಾರಾಯಣಮೂರ್ತಿಗಳಂಥ ಭಾರತದ ಬೃಹತ್ ಉದ್ಯಮಿಗಳು ಅತಿ ಹೆಚ್ಚು ಲಾಭ ಮಾಡಲು ಸಾಧ್ಯವಾಗಿರುವುದು ಪ್ರಭುತ್ವದ ಜನವಿರೋಧಿ ನೀತಿಗಳಿಂದಾಗಿ. ಸರ್ಕಾರ ಕಳೆದ ಬಜೆಟ್ಟಿನಲ್ಲಿ ನಾರಾಯಣಮೂರ್ತಿಗಳು ಸಂಕೇತಿಸುವ 20 ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಗೆ 5 ಲಕ್ಷ ಕೋಟಿ ರೂಪಾಯಿಗಳ ತೆರಿಗೆಯನ್ನು ಮಾಫಿ ಮಾಡಿತು. ಆದರೆ ರೈತರಿಗೆ ಲಾಭದ ಬೆಲೆ ನೀಡಲು ಸಂಪನ್ಮೂಲದ ಕೊರತೆ ಎಂದು ನೆಪವೊಡ್ಡಿತು. ಆದ್ದರಿಂದಲೇ ಈ ದೇಶದಲ್ಲಿ ಏಕಕಾಲದಲ್ಲಿ ಇನ್ಫೋಸಿಸ್‌ಗಳು ಸಾವಿರಾರು ಕೋಟಿ ತ್ರೈಮಾಸಿಕ ಲಾಭ ಘೋಷಿಸುತ್ತವೆ. ಅದೇ ಸಮಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಮ್ಮ ಅಭಿವೃದ್ಧಿ ಮಾದರಿಯ ಕರಾಳ ಮುಖವಿದು.

-

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.