ಸೋಮವಾರ, ಮೇ 10, 2021
28 °C

ವಿರೋಧ ಪಕ್ಷದ ನಾಯಕರ ಮಾತು ಮೀರಿ ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ವಿರೋಧ ಪಕ್ಷದ ನಾಯಕರ ಮಾತನ್ನೂ ಮೀರಿ ಕಾಂಗ್ರೆಸ್ ಸದಸ್ಯರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆಯಿತು.ಸಭೆ ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಕಾಂಗ್ರೆಸ್‌ನ ಮುನಿರತ್ನ, `ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಹೊಸ ಟೆಂಡರ್ ಪ್ರಕ್ರಿಯೆ ನಡೆಸಲು ಏಕೆ ವಿಳಂಬ ಮಾಡಲಾಗುತ್ತಿದೆ. ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ಕಾರಣ ಜನರ ನಿಂದನೆಗೆ ಗುರಿಯಾಗಬೇಕಾಗಿದೆ.

 

ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತೆ ಅಧಿಕಾರಿಗಳೇ ಗುತ್ತಿಗೆದಾರರಿಗೆ ಹೇಳುತ್ತಾರೆ. ಯಾರ ಒತ್ತಡಕ್ಕೆ ಮಣಿದು ಇದನ್ನು ಮುಂದೂಡಲಾಗುತ್ತಿದೆ ಎಂಬುದು ಬಹಿರಂಗವಾಗಬೇಕು. ಈ ಬಗ್ಗೆ ನನಗೆ ಉತ್ತರ ನೀಡಬೇಕು~ ಎಂದು ಆಗ್ರಹಿಸಿದರು.ಆಗ ಮೇಯರ್ ಪಿ. ಶಾರದಮ್ಮ, `ಈ ಬಗ್ಗೆ ನಂತರ ಆಯುಕ್ತರು ಪ್ರತಿಕ್ರಿಯೆ ನೀಡಲಿದ್ದಾರೆ~ ಎಂದರು. ಆದರೆ, ಇದಕ್ಕೆ ಒಪ್ಪದ ಮುನಿರತ್ನ, ತಕ್ಷಣವೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು. ಅಲ್ಲದೆ, ಮೇಯರ್ ಪೀಠದ ಮುಂಭಾಗ ಕುಳಿತು ಪ್ರತಿಭಟನೆ ನಡೆಸಿದರು. ಆಗ ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್ ಮನವೊಲಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೆಲ ನಿಮಿಷಗಳ ಬಳಿಕ ಮುನಿರತ್ನ ತಮ್ಮ ಸ್ಥಾನದಲ್ಲಿ ಕುಳಿತರು.ಸ್ವಲ್ಪ ಹೊತ್ತಿನ ನಂತರ ಕಾಂಗ್ರೆಸ್ ಸದಸ್ಯ ಮಲ್ಲೇಶ್, `ಪಾಲಿಕೆಗೆ 4,000 ಮಂದಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸರ್ಕಾರ 13-01-2010ರಂದೇ ಸೂಚನೆ ನೀಡಿದ್ದರೂ ಈವರೆಗೆ ನೇಮಕ ನಡೆದಿಲ್ಲ. ಆ ಮೂಲಕ ಈ ವರ್ಗದ ಜನರಿಗೆ ಅನ್ಯಾಯ ಮಾಡಲಾಗಿದೆ. ಈವರೆಗೆ ನೇಮಕ ಮಾಡದಿರಲು ಕಾರಣವೇನು ಎಂಬುದನ್ನು ಸಭೆಗೆ ತಿಳಿಸಬೇಕು~  ಎಂದು ಒತ್ತಾಯಿಸಿದರು.ತಕ್ಷಣವೇ ಇದಕ್ಕೆ ಉತ್ತರ ನೀಡಬೇಕು ಎಂದು ಮಲ್ಲೇಶ್ ಒತ್ತಾಯಿಸಿದರೂ ಮೇಯರ್ ಸ್ಪಂದಿಸಲಿಲ್ಲ. ಇದನ್ನು ಖಂಡಿಸಿ ಅವರು ಮೇಯರ್ ಪೀಠದ ಮುಂಭಾಗ ಪ್ರತಿಭಟನೆ ನಡೆಸಲು ಮುಂದಾದರು.ಇದಕ್ಕೆ ಬೆಂಬಲ ಸೂಚಿಸಿದ ಇತರೆ ಸದಸ್ಯರಾದ ರಾಜೇಂದ್ರನ್, ಲೋಕೇಶ್, ವಿಜಯನ್, ಸಂಪತ್‌ರಾಜ್ ಅವರು ಧರಣಿ ಕುಳಿತರು. ಆಗಲೂ ಉದಯಶಂಕರ್ ಅವರು ಮನವೊಲಿಸಲು ಯತ್ನಿಸಿದರೂ ಸದಸ್ಯರು ಸ್ಪಂದಿಸಲಿಲ್ಲ. ಕೆಲ ಹೊತ್ತಿನ ಬಳಿಕ ಅವರು ಧರಣಿ ಹಿಂಪಡೆದರು.

.

ಹೊಸ `ಸಂಪ್ರದಾಯ~

ಬಿಬಿಎಂಪಿಯಲ್ಲಿ ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಸುವ ಸಲುವಾಗಿ ವಿಷಯ ಸಂಬಂಧಿ ಸಭೆ ನಡೆಸಲಾಗುತ್ತದೆ. ಆದರೆ ಈ ಸಭೆಯಲ್ಲಿ ವಿಷಯ ಮಂಡಿಸಿ ಅನುಮೋದನೆ ಪಡೆದ ಬಳಿಕ ಚರ್ಚೆಗೆ ಅವಕಾಶ ನೀಡುವ ಹೊಸ `ಸಂಪ್ರದಾಯ~ವನ್ನು ಬಿಜೆಪಿ ಆಡಳಿತ ಆರಂಭಿಸಿದೆ.ಪಾಲಿಕೆಯಲ್ಲಿ ಬುಧವಾರ ನಡೆದ ಸಭೆಯಲ್ಲೂ ಇದೇ ರೀತಿ ನಡೆಯಿತು. ಹಲವು ಗಂಭೀರ ವಿಷಯಗಳನ್ನು ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರು ಮಂಡಿಸುತ್ತಿದ್ದಂತೆ ಗಂಗಬೈರಯ್ಯ ಅವರು ಅನುಮೋದಿಸಿರುವುದಾಗಿ ಘೋಷಿಸುತ್ತಿದ್ದರು. ತಕ್ಷಣವೇ ಮೇಯರ್ ಅನುಮೋದನೆ ನೀಡಿದರು.ನಂತರ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ ಈ ಬಗ್ಗೆ ಚರ್ಚೆ ನಡೆಸಬೇಕು ಎಂದಾಗ ಚರ್ಚೆಗೆ ಮುಂದಾಗುತ್ತಿದ್ದರು. ಆದರೆ ಮೊದಲೇ ಅನುಮೋದನೆ ನೀಡಿದ್ದರಿಂದ ಹೆಚ್ಚಿನ ಚರ್ಚೆ ನಡೆಯಲಿಲ್ಲ.  ಹಲವು ವಿಷಯ ಸಂಬಂಧಿ ಸಭೆಗಳಲ್ಲಿ ಆಡಳಿತ ಪಕ್ಷ ಇದೇ ತಂತ್ರ ಅನುಸರಿಸುತ್ತಿದೆ. ಇದಕ್ಕೆ ವಿರೋಧ ಪಕ್ಷಗಳು ಮಾತ್ರವಲ್ಲ, ಬಿಜೆಪಿಯ ಹಿರಿಯ ಸದಸ್ಯರಲ್ಲೇ ಅಸಮಾಧಾನವಿದೆ. ಸ್ಪಷ್ಟ ಬಹುಮತವಿದ್ದರೂ ಈ ರೀತಿಯ ವರ್ತನೆ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.