ಶನಿವಾರ, ಜನವರಿ 18, 2020
25 °C

ವಿವಾದಗಳ ಮೂಲಕ ಜನಪ್ರಿಯತೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿವಾದಗಳ ಮೂಲಕ ಜನಪ್ರಿಯತೆ ಬಯಸುವ ಇಂದಿನ ಕಾಲದಲ್ಲಿ ಕಲೆ, ಇತಿಹಾಸದಂತಹ ವಸ್ತುಗಳನ್ನು ಬರಹಕ್ಕೆ ಆಯ್ದುಕೊಳ್ಳುವ ಪ್ರಯತ್ನ ಉತ್ತಮವಾದದ್ದು~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಹೇಳಿದರು.ನಗರದ ರಾಜಭವನದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮಂಗಳವಾರ ವಿಕ್ರಮ್ ಸಂಪತ್ ಅವರ `ವಾಯ್ಸ ಆಫ್ ದಿ ವೀಣಾ: ಎಸ್. ಬಾಲಚಂದರ್, ಎ ಬಯೋಗ್ರಫಿ~ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡಿದರು.`ವರ್ಣಮಯ ವ್ಯಕ್ತಿತ್ವದ ಕಲಾವಿದ ಬಾಲಚಂದರ್ ಅವರ ಜೀವನದ ಬಗ್ಗೆ ತಿಳಿಸುವ ಈ ಪುಸ್ತಕದ ನಿರೂಪಣಾ ಶೈಲಿ ಅಮೋಘವಾಗಿದೆ. ವಿವಾದಗಳಿಂದ ಜನಪ್ರಿಯತೆ ಬಯಸದೇ ತಮ್ಮದೇ ಭಿನ್ನ ವಸ್ತು ಹಾಗೂ ಮಾರ್ಗವನ್ನು ರೂಪಿಸಿಕೊಂಡಿರುವ ವಿಕ್ರಮ್ ಸಂಪತ್ ಅವರ ಪರಿಶ್ರಮ ಪುಸ್ತಕದ ಮೂಲಕ ಸಾರ್ಥಕವಾಗಿದೆ. ಸಾಕಷ್ಟು ಅಧ್ಯಯನ, ಸಂಶೋಧನೆಗಳಿಲ್ಲದೇ ಇಂತಹ ಪುಸ್ತಕ ರಚನೆ ಸಾಧ್ಯವಿಲ್ಲ. ಇಂತಹ ಪುಸ್ತಕ ರಚನೆ ಸವಾಲಿನ ಕೆಲಸ~ ಎಂದು ಅವರು ನುಡಿದರು.`ಸಂಗೀತ ಮನಸ್ಸಿಗೆ ಶಾಂತಿ, ನೆಮ್ಮದಿಗಳನ್ನು ನೀಡುವ ಪಾರಮಾರ್ಥಿಕ ಅನುಭವ. ಸಂಗೀತ ಸಾಧಕರ ಜೀವನದ ಬಗ್ಗೆ ತಿಳಿಯಲು ಜೀವನ ಚರಿತ್ರೆಗಳ ಕೊರತೆ ಇದೆ. ಅಂತಹ ಕೊರತೆ ತುಂಬಿಸುವ ಕೆಲಸ ಇಂತಹ ಪುಸ್ತಕಗಳ ರಚನೆಯಿಂದ ಆಗುತ್ತಿದೆ. ದಿನದಲ್ಲಿ ಎಷ್ಟೇ ಜಂಜಡಗಳಿದ್ದರೂ ಪ್ರತಿದಿನ ಬೆಳಿಗ್ಗೆ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಸುಪ್ರಭಾತ ಹಾಗೂ ಭೀಮಸೇನ್ ಜೋಶಿ ಅವರ ಗಾಯನ ಕೇಳದೇ ನನ್ನ ದಿನ ಪ್ರಾರಂಭವಾಗುವುದೇ ಇಲ್ಲ. ಸಂಗೀತ ಹಾಗೂ ಬರಹ ಎರಡೂ ಬದುಕಿನ ದೊಡ್ಡ ಸಾಧನೆಗಳು~ ಎಂದು ಅವರು ಅಭಿಪ್ರಾಯ ಪಟ್ಟರು.ಹಿರಿಯ ಚಿತ್ರನಟಿ ಸಾಹುಕಾರ್ ಜಾನಕಿ ಮಾತನಾಡಿ, `ನನ್ನ ಹರೆಯದ ದಿನಗಳಲ್ಲಿ ಬಾಲಚಂದರ್ ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ದೊರೆಯಿತು. ನಾನು ನಟಿಸಿದ ಸುಮಾರು 385 ಚಿತ್ರಗಳಲ್ಲಿ ಅವರ ನಿರ್ದೇಶನದಲ್ಲಿ ನಟಿಸಿದ ಚಿತ್ರಗಳು ನನಗೆ ಹೆಚ್ಚು ತೃಪ್ತಿ ತಂದಿವೆ. ಅವರು ವೀಣಾ ವಾದಕರಾಗಿ, ಚಲನಚಿತ್ರ ನಿರ್ದೇಶಕರಾಗಿ ಮಾಡಿದ ಸಾಧನೆ ಮಹತ್ವದ್ದು. ಈ ಪುಸ್ತಕ ಅವರ ಜೀವನವನ್ನು ಬರಹದಲ್ಲಿ ಹಿಡಿದಿಡುವ ಪ್ರಯತ್ನ~ ಎಂದರು.ಸಮಾರಂಭದಲ್ಲಿ ಪುಸ್ತಕದ ಲೇಖಕ ವಿಕ್ರಮ್ ಸಂಪತ್, ಸಂಗೀತ ವಿದುಷಿಯರಾದ ನೀಲಾ ರಾಮಗೋಪಾಲ್, ಜಯಂತಿ ಕುಮರೇಶ್, ಅಂತರರಾಷ್ಟ್ರೀಯ ಸಂಗೀತ ಮತ್ತು ಕಲಾ ಸಂಸ್ಥೆಯ ಉಪಾಧ್ಯಕ್ಷೆ ಪ್ರೇಮಾ ಭಕ್ತವತ್ಸಲಾ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)