ಬುಧವಾರ, ಮೇ 12, 2021
19 °C

ವಿವಿಗಳು ಜಾಗೃತಿ ಕೇಂದ್ರಗಳಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ವಿ.ವಿ.ಗಳು ಸ್ವತಂತ್ರ ಚಿಂತನೆ ಮತ್ತು ಬೌದ್ಧಿಕ ಸ್ವಾಭಿಮಾನದ ಜಾಗೃತಿ ಕೇಂದ್ರಗಳಾಗಬೇಕು~ ಎಂದು ವಿಧಾನಪರಿಷತ್ ಸದಸ್ಯ ಪ್ರೊ.ಪಿ.ವಿ.ಕೃಷ್ಣಭಟ್ ನುಡಿದರು.ಬೆಂಗಳೂರು ವಿಶ್ವವಿದ್ಯಾಲಯವು ನಗರದ ಸೆಂಟ್ರಲ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ `ಸಂಸ್ಕೃತಿ ಚಿಂತನ~ ಕಾರ್ಯಕ್ರಮದಲ್ಲಿ ವಿ.ವಿ.ಯ `ಅಪೂರ್ವ ಸಾಧಕರು~ ಮಾಲಿಕೆಯಡಿ ನೀಡಲಾದ ಚಿನ್ನದ ಪದಕ ಸ್ವೀಕರಿಸಿ ಮಾತನಾಡಿದ ಅವರು, `ಭಾರತವು 800-900 ವರ್ಷಗಳ ಪರಕೀಯರ ಆಳ್ವಿಕೆಯನ್ನು ಅನುಭವಿಸಿ ನಂತರ ಸ್ವತಂತ್ರವಾಯಿತು. ಇಂದು ಇಡೀ ಜಗತ್ತಿನಲ್ಲಿ ನಾಯಕತ್ವ ಸ್ಥಾನವನ್ನು ಪಡೆಯುವ ಹಂತದಲ್ಲಿದೆ.

ಅದಕ್ಕೆ ಕಾರಣ, ಪ್ರಾಚೀನ ಕಾಲದ ಭಾರತೀಯ ವಿಚಾರಧಾರೆಗಳ ತಳಹದಿ. ಆದರೆ ಇಂದು ಪ್ರತಿಯೊಂದನ್ನೂ ಪಶ್ಚಿಮದ ದೇಶಗಳಿಂದ ಪಡೆಯುವ, ಅವರ ಶೈಲಿಯನ್ನು ಅನುಕರಿಸುವ ಪರಿಸ್ಥಿತಿ ಬಂದಿದೆ. ಪಾಶ್ಚಾತ್ಯರಿಂದ ಒಳ್ಳೆಯದನ್ನು ಪಡೆದರೆ ತಪ್ಪೇನೂ ಇಲ್ಲ. ಆದರೆ ಎಲ್ಲದಕ್ಕೂ ಅವರತ್ತ ನೋಡುವುದು ಸರಿಯಲ್ಲ~ ಎಂದು ಹೇಳಿದರು.`ಸ್ವಾಮಿ ವಿವೇಕಾನಂದರು ಋಷಿ-ಮುನಿಗಳ ಚಿಂತನೆಗಳಿಂದ ಸಮೃದ್ಧವಾದ ಭಾರತೀಯ ಚಿಂತನೆಯನ್ನು, ಅದಾಗಲೇ ಬಹುದೊಡ್ಡ ದೇಶವಾಗಿದ್ದ ಅಮೆರಿಕದಲ್ಲಿ ಹರಡಿದರು. ಅಂಥ ಉತ್ಕೃಷ್ಟ ಪರಂಪರೆ ಹೊಂದಿದ ಭಾರತ ಇದೀಗ ಶಿಕ್ಷಣ, ಆರ್ಥಿಕ ನೀತಿ ಸೇರಿದಂತೆ ಪ್ರತಿಯೊಂದಕ್ಕೂ ಅತ್ತ ನೋಡುವುದು ಸರಿಯಲ್ಲ. ಆದ್ದರಿಂದಲೇ ವಿ.ವಿ.ಗಳು ಸ್ವತಂತ್ರ ಚಿಂತನೆಗಳನ್ನು ಬೆಳೆಸಿಕೊಳ್ಳುವ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸಬೇಕು~ ಎಂದರು.ಕುಲಪತಿ ಡಾ.ಎನ್.ಪ್ರಭುದೇವ್, `ವಿಶ್ವವಿದ್ಯಾಲಯಗಳು ಬರೀ ಶಿಕ್ಷಣ ನೀಡುವ ಕೇಂದ್ರಗಳಾಗಬಾರದು. ಅವು ಸಂಸ್ಕೃತಿಯನ್ನು ಪೋಷಿಸುವತ್ತ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಕಳೆದ ಐದು ತಿಂಗಳಿಂದ ಸಂಸ್ಕೃತಿ ಚಿಂತನವನ್ನು ಆಯೋಜಿಸಲಾಗುತ್ತಿದೆ~ ಎಂದರು.`ವಿ.ವಿ.ಯು ಪರೀಕ್ಷಾ ವಿಭಾಗವೂ ಸೇರಿದಂತೆ ಹಲವಾರು ವಿಭಾಗಗಳನ್ನು ಸುಧಾರಣೆ ತರುತ್ತಿದೆ. ಆದರೂ ಸಹ ಹಲವಾರು ಲೋಪ-ದೋಷಗಳಿವೆ. ಬರುವ ದಿನಗಳಲ್ಲಿ ಅವುಗಳನ್ನು ಪರಿಹರಿಸಲಾಗುವುದು~ ಎಂದು ಭರವಸೆ ನೀಡಿದರು.ಪ್ರಭಾರಿ ಕುಲಸಚಿವ ಡಾ.ಎನ್. ರಂಗಸ್ವಾಮಿ ಸ್ವಾಗತಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎ.ಪಿ.ಎಸ್.ಕಲೆ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಅಂಧ ವಿದ್ಯಾರ್ಥಿನಿಯರಿಂದ ಡೊಳ್ಳು ಕುಣಿತ ಮತ್ತು ವಿವೇಕಾನಂದ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಕರಗ ಮತ್ತು ಬೀಸು ಕಂಸಾಳೆ ಪ್ರದರ್ಶನ ನಡೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.