ಮಂಗಳವಾರ, ಮೇ 11, 2021
21 °C

ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 121ನೇ ಜನ್ಮ ದಿನಾಚರಣೆಯನ್ನು ನಗರದ ವಿವಿಧೆಡೆ ಶನಿವಾರ ಆಚರಿಸಲಾಯಿತು. ವೈವಿಧ್ಯಮಯ ಕಾರ್ಯಕ್ರಮಗಳಿಂದ ಇಡೀ ನಗರ ಹೊಸ ಬಗೆಯ ರಂಗು ಪಡೆದಿತ್ತು. ನಗರದೆಲ್ಲೆಡೆ ಉತ್ಸಾಹ, ಉಲ್ಲಾಸ ವ್ಯಕ್ತವಾಯಿತು.ದಲಿತ ಸಂಘರ್ಷ ಸಮಿತಿ, ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಜನ್ಮದಿನಾಚರಣೆ, ವಿಚಾರ ಸಂಕಿರಣ, ಮೆರವಣಿಗೆ, ರ‌್ಯಾಲಿಗಳನ್ನು ನಡೆಸಲಾಯಿತು. ದಲಿತರ ಜಾಗೃತಿ ಮೂಡಿಸುವ ಕಾರ್ಯಗಳು ನಡೆದವು.ದಲಿತ ಸಂಘರ್ಷ ಸಮಿತಿ:  ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ ಸ್ಥಾಪಿತ) ರಾಜ್ಯ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಿಂದ ವಿಧಾನಸೌಧದ ಸಮೀಪದ ಡಾ. ಅಂಬೇಡ್ಕರ್ ಪ್ರತಿಮೆ ವರೆಗೂ ದ್ವಿಚಕ್ರಗಳ ಜಾಗೃತಿ ರ‌್ಯಾಲಿ ನಡೆಸಲಾಯಿತು.

 

ಒಂಬತ್ತು ರಾಷ್ಟ್ರೀಯ ಹಬ್ಬಗಳ ಸಂದರ್ಭ ಮಾಂಸ ಮಾರಾಟ ನಿಷೇಧ ಮಾಡಿರುವ ಕ್ರಮವನ್ನು ಪ್ರತಿಭಟಿಸಿ ಪುರಭವನದ ಮುಂದೆ ಮಾಂಸದೂಟ, ಬಿರಿಯಾನಿ ಭೋಜನ ಏರ್ಪಡಿಸಿ ಸಾರ್ವಜನಿಕರಿಗೆ ಮಾಂಸದೂಟ ಬಡಿಸಲಾಯಿತು. ದಸಂಸ ರಾಜ್ಯ ಘಟಕ ಅಧ್ಯಕ್ಷ ಎನ್. ಮೂರ್ತಿ ನೇತೃತ್ವ ವಹಿಸಿದ್ದರು.ಬೆಂಗಳೂರು ವಿವಿ:  ವಿವಿ ಜ್ಞಾನಭಾರತಿ ಆವರಣದ ಆಡಳಿತ ಕಚೇರಿಯ ಮುಂಭಾಗ ನಡೆದ ಸಮಾರಂಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಕುಲಪತಿ ಡಾ.ಎನ್. ಪ್ರಭುದೇವ್ ಮಾಲಾರ್ಪಣೆ ಮಾಡಿದರು.ಕುಲಸಚಿವ ಡಾ.ಬಿ.ಸಿ. ಮೈಲಾರಪ್ಪ, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಮುಕುಡಪ್ಪ, ವಿವಿಯ ವಿತ್ತಾಧಿಕಾರಿ ಡಾ.ಎನ್. ರಂಗಸ್ವಾಮಿ, ಸಿಂಡಿಕೇಟ್ ಸದಸ್ಯರಾದ ಡಾ.ಕೆ.ವಿ.ಆಚಾರ್ಯ, ಡಾ.ಟಿ. ಎಚ್. ಶ್ರೀನಿವಾಸಮೂರ್ತಿ ಇದ್ದರು.ವಾಟಾಳ್ ಪಕ್ಷ: `ರಾಜ್ಯದ ಎಲ್ಲ ಮತದಾರರಿಗೆ ಉಚಿತವಾಗಿ ಸಂವಿಧಾನದ ಕನ್ನಡ ಪ್ರತಿ ದೊರಕುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು~ ಎಂದು ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದರು.  ಅಂಬೇಡ್ಕರ್ ಅವರ 121ನೇ ಜನ್ಮ ದಿನಾಚರಣೆ ಅಂಗವಾಗಿ ವಾಟಾಳ್ ಪಕ್ಷದ ವತಿಯಿಂದ ನಗರದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.ಜೋಡಿ ಕುದುರೆ ಸಾರೋಟ್‌ನಲ್ಲಿ ಸಂವಿಧಾನದ ಜೊತೆಯಲ್ಲಿ ಅಂಬೇಡ್ಕರ್ ಭಾವಚಿತ್ರ ಇಟ್ಟು ಮೈಸೂರು ಬ್ಯಾಂಕ್ ವೃತ್ತದಿಂದ ಮೆರವಣಿಗೆ ಹೊರಟು ಅವೆನ್ಯೂ ರಸ್ತೆ, ಚಿಕ್ಕಪೇಟೆ, ಬಳೆಪೇಟೆ ಮಾರ್ಗವಾಗಿ ಕೆಂಪೇಗೌಡ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ನಡೆಯಿತು. ಚುನಾವಣಾ ಭ್ರಷ್ಟಾಚಾರ ತಡೆಯಬೇಕು ಎಂದು ಆಗ್ರಹಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ಡಂಗೂರ ಸಾರಿ ತಮಟೆ ಬಾರಿಸಿ ಮೂಲಕ ಚಳವಳಿ ನಡೆಸಲಾಯಿತು.ಎಬಿವಿಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜ್ಯ ಕಾರ್ಯಾಲಯದ ವತಿಯಿಂದ ನಡೆದ ಕಾರ್ಯಕ್ರಮವನ್ನು ಎಬಿವಿಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎನ್. ರವಿಕುಮಾರ್ ಉದ್ಘಾಟಿಸಿದರು. `ಅಂಬೇಡ್ಕರ್ ಒಂದು ಕುಟುಂಬದ, ಜಾತಿ, ರಾಜ್ಯ ಹಾಗೂ ಭಾಷೆಯ ಸ್ವತ್ತು ಅಲ್ಲ. ಅವರು ತೋರಿಸಿದ ದಾರಿಯಲ್ಲಿ ನಾವು ಸಾಗಬೇಕು~ ಎಂದರು.ಬೆಂಗಳೂರು ವಿಭಾಗದ ಸಂಘಟನಾ ಕಾರ್ಯದರ್ಶಿ ಸಂತೋಷ ರೆಡ್ಡಿ, ರಾಜ್ಯ ಸಹ ಕಾರ್ಯದರ್ಶಿ ಪುಷ್ಪಾ, ಬಾಲಾಜಿ, ವಿದ್ಯಾರ್ಥಿ ಮುಖಂಡರಾದ ರಘು, ಮಹೇಶ್, ಭಾರದ್ವಾಜ್, ನವೀನ್, ಸುರೇಶ್ ಉಪಸ್ಥಿತರಿದ್ದರು.ಯುವ ಕಾಂಗ್ರೆಸ್:  ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಘಟಕದ ವತಿಯಿಂದ ವಿಜಯನಗರ ಬಸ್ ನಿಲ್ದಾಣದ ಬಳಿ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು. ಈ ಸಂದರ್ಭ ಜನರಿಗೆ ಸಿಹಿತಿಂಡಿ ಹಂಚಲಾಯಿತು. ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಎಚ್.ಎನ್. ಗೌತಮ್, ಶ್ರೀನಾಥ್ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.