ಮಂಗಳವಾರ, ಮಾರ್ಚ್ 9, 2021
18 °C
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಗೆ ದಿನಾಂಕ ಘೋಷಣೆ

ವಿವಿಧ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ

ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ವಿವಿಧ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ

ಚಿಕ್ಕಬಳ್ಳಾಪುರ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆಯಾಗುವುದನ್ನೇ ಕಾತರದಿಂದ ಕಾಯುತ್ತಿದ್ದ ರಾಜಕೀಯ ಪಕ್ಷಗಳು ಸೋಮವಾರ ದಿಢೀರನೇ ಕಾರ್ಯಪ್ರವೃತ್ತಗೊಂಡವು.ರಾಜ್ಯ ಚುನಾವಣೆ ಆಯುಕ್ತ ಪಿ.ಎನ್‌.ಶ್ರೀನಿವಾಸಾಚಾರಿ ಅವರು ಚುನಾವಣಾ ದಿನಾಂಕ ಘೋಷಿಸಿರುವುದು ಅತ್ತ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ, ಇತ್ತ ವಿವಿಧ ಪಕ್ಷಗಳ ಮುಖಂಡರು ಚುನಾವಣೆಯ ಲೆಕ್ಕಾಚಾರ ಆರಂಭಿಸಿದರು.ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿರುವ ವಿವಿಧ ಪಕ್ಷಗಳ ಮುಖಂಡರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾವ್ಯಾವ ಪಕ್ಷದಿಂದ ಯಾರ್‌್ಯಾರೂ ಸ್ಪರ್ಧಿಸುತ್ತಾರೆ ಎಂಬುದರಿಂದ ಆರಂಭಗೊಂಡು ಯಾರನ್ನು ಕಣಕ್ಕಿಳಿಸಿದರೆ ಸೂಕ್ತ ಮತ್ತು ಉಪಯುಕ್ತ ಎಂಬುವವರೆಗೆ ಪಕ್ಷದ ವಿವಿಧ ಮುಖಂಡರು ಮತ್ತು ಕಾರ್ಯಕರ್ತರಿಂದ ಮಾಹಿತಿ ಸಂಗ್ರಹಣೆ ನಡೆಸಿದ್ದಾರೆ. ಬಹುತೇಕ ಎಲ್ಲಾ ಕ್ಷೇತ್ರಗಳ ಸ್ಪರ್ಧಾ ಆಕಾಂಕ್ಷಿಗಳಿಂದ ಅರ್ಜಿ ಪಡೆದಿದ್ದಾರೆ.ಒತ್ತಡ, ಲಾಬಿ: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಯ ಒಂದೊಂದು ಕ್ಷೇತ್ರದಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಐದಾರು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅವರ ಪೈಕಿ ಯಾರನ್ನು ಆಯ್ಕೆ ಮಾಡಿ ಕಣಕ್ಕೆ ಇಳಿಸಬೇಕು ಎಂಬ ಇಕ್ಕಟ್ಟಿನ ಸ್ಥಿತಿಯಲ್ಲಿ ಪಕ್ಷಗಳ ನಾಯಕರು ಇದ್ದಾರೆ. ಕೆಲ ಆಕಾಂಕ್ಷಿಗಳು ರಾಜ್ಯವಲ್ಲದ ನಾಯಕರಿಂದಲೂ ಒತ್ತಡ ಹಾಕಿಸುತ್ತಿದ್ದಾರೆ.ಪಕ್ಷದ ನಾಯಕರಿಗೆ ಆಪ್ತರಿರುವವನ್ನು ಭೇಟಿಯಾಗುವುದು ಅಥವಾ ಅವರ ಸಂಬಂಧಿಕರ ಮೂಲಕ ಒತ್ತಡ ಹೇರುವುದು ಒಂದು ತಿಂಗಳಿನಿಂದ ನಡೆದಿದೆ. ಚುನಾವಣೆ ದಿನಾಂಕ ಯಾವುದೇ ಕ್ಷಣ ಘೋಷಣೆಯಾಗಬಹುದು ಎಂಬುದು ದೃಢವಾದ ಹಿನ್ನೆಲೆಯಲ್ಲಿ ಕೆಲ ಆಕಾಂಕ್ಷಿಗಳು ತಮ್ಮ ಸ್ವಪರಿಚಯಪತ್ರ ಮತ್ತು ಭಾವಚಿತ್ರ ಹಿಡಿದು ಪಕ್ಷಗಳ ನಾಯಕರನ್ನು ಭೇಟಿಯಾಗತೊಡಗಿದರು ಎಂದು ರಾಜಕೀಯ ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.ಯಾವುದೋ ಸಂದರ್ಭದಲ್ಲಿ ಉಪಕಾರ ಮಾಡಿದ್ದನ್ನು ಸ್ಮರಿಸುತ್ತ ಮತ್ತು ಪಕ್ಷದ ನಿಷ್ಠಾವಂತ ಕಾರ್ಯಕರ್ತನೆಂದು ನೆನಪಿಸುತ್ತ ಟಿಕೆಟ್ ತಮಗೆ ಮೀಸಲಿಡಬೇಕೆಂದು ಒತ್ತಡ ಹೇರುವುದನ್ನು ಕೆಲವರು ಮುಂದುವರಿಸಿದ್ದಾರೆ. ಆಯಾ ಕ್ಷೇತ್ರಗಳಲ್ಲಿನ ಜಾತಿ ಲೆಕ್ಕಾಚಾರ ಮತ್ತು ಸಮುದಾಯಗಳ ಬಲಾಬಲ ಆಧರಿಸಿ ತಮಗೆ ಟಿಕೆಟ್‌ ನೀಡಬೇಕೆಂದು ದುಂಬಾಲು ಬಿದ್ದಿದ್ದಾರೆ ಎಂದು ಅವರು ತಿಳಿಸಿದರು.ವಿವಿಧ ಪಕ್ಷಗಳ ಸಿದ್ಧತೆ: ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಮತ್ತು ಸಿಪಿಎಂ ಪಕ್ಷಗಳ ನಾಯಕರು ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ಒಂದು ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಪ್ರಭಾವ ಪರಿಶೀಲಿಸುವುದಲ್ಲದೇ  ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದಲ್ಲಿ, ಯಾವುದೆಲ್ಲಾ ಸವಾಲು ಎದುರಿಸಬಹುದು ಎಂಬುದರ ಬಗ್ಗೆ ಅವಲೋಕನ ನಡೆಸಿದ್ದಾರೆ. ಕಳೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿಯನ್ನು ಅವರು ಹೊಂದಿದ್ದಾರೆ.ವಿಧಾನಸಭಾ ಉಪಾಧ್ಯಕ್ಷ ಎನ್‌.ಎಚ್‌.ಶಿವಶಂಕರ ರೆಡ್ಡಿ, ಶಾಸಕರಾದ ಡಾ. ಕೆ.ಸುಧಾಕರ್, ಎಸ್‌.ಎನ್‌.ಸುಬ್ಬಾರೆಡ್ಡಿ, ಜೆ.ಕೆ.ಕೃಷ್ಣಾರೆಡ್ಡಿ ಮತ್ತು ಎಂ.ರಾಜಣ್ಣ ಅವರು ಸಭೆ ನಡೆಸಿದ ಕಡೆಯಲೆಲ್ಲ ಸ್ಪರ್ಧಾ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಮುಖ್ಯಸ್ಥರೊಂದಿಗೆ ಚರ್ಚಿಸಿ ಟಿಕೆಟ್‌ ನೀಡುವುದರ ಬಗ್ಗೆ ಶಾಸಕರು ಭರವಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್‌ ಶಾಸಕರು ಮತ್ತು ಇಬ್ಬರು ಜೆಡಿಎಸ್‌ ಶಾಸಕರಿದ್ದು, ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಅವರಿಗೆ ಸವಾಲಾಗಿದೆ.ಜಿಲ್ಲೆಯಾದ್ಯಂತ ಅಂತಿಮ ಹಂತದ ಪೂರ್ವಸಿದ್ಧತಾ ಸಭೆಗಳನ್ನು ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ. ಟಿಕೆಟ್‌ಗಾಗಿ ತೀವ್ರ ಪೈಪೋಟಿಯಿದ್ದು ಎಲ್ಲರನ್ನೂ ಸಮಾಧಾನಪಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಟಿಕೆಟ್‌ ನೀಡುತ್ತೇವೆ ಎಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್‌ ತಿಳಿಸಿದರು.ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಕಾಂಗ್ರೆಸ್‌ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ತಕ್ಕ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸುತ್ತೇನೆ. ಕಳೆದ ಸಲಕ್ಕಿಂತ ಹೆಚ್ಚಿನ ಯಶಸ್ಸು ಗಳಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ಮುಖಂಡ ಅಗಲಗುರ್ಕಿ ಚಂದ್ರಶೇಖರ್ ತಿಳಿಸಿದರು.ಸಿಪಿಎಂ ವತಿಯಿಂದ ಜಿಲ್ಲಾ ಪಂಚಾಯಿತಿಯ 16 ಮತ್ತು ತಾಲ್ಲೂಕು ಪಂಚಾಯಿತಿಯ 44 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಚುನಾವಣೆ ಎದುರಿಸುತ್ತೇವೆ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.ತೀವ್ರ ಹೋರಾಟ ನಡೆಸುತ್ತೇವೆ: ಆಂಜನೇಯರೆಡ್ಡಿ

ವಿಧಾನ ಪರಿಷತ್‌ ಚುನಾವಣೆ ಪೂರ್ಣಗೊಂಡ ಕೂಡಲೇ ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರದಲ್ಲಿ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಬೃಹತ್‌ ನೀರಾವರಿ ಸಚಿವ ಎಂ.ಬಿ.ಪಾಟೀಲ್‌ ಅವರು ತಮ್ಮ ಮಾತು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸರ್ಕಾರ ನಿರ್ಲಕ್ಷ್ಯ ತೋರಿದಷ್ಟು ನಾವು ಹೋರಾಟ ತೀವ್ರಗೊಳಿಸುತ್ತೇವೆ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ತಿಳಿಸಿದರು.

ಕಳೆದ ವರ್ಷ ಸಭೆ ನಡೆಸಲು ಕೋರಿದಾಗ, ವಿಧಾನ ಪರಿಷತ್‌ ಚುನಾವಣೆ ನೀತಿ ಸಂಹಿತೆ ಚುನಾವಣೆ ನೆಪವೊಡ್ಡಿದರು. ಈಗ ಜಿಲ್ಲಾ ಮತ್ತು ತಾ.ಪಂ. ಚುನಾವಣೆ ನೀತಿ ಸಂಹಿತೆ ಘೋಷಣೆಯಾಗಿದ್ದು, ಸರ್ಕಾರ ಇದನ್ನು ನೆಪವಾಗಿಸಿಕೊಂಡು ಸಭೆ ಮುಂದೂಡಲಿದೆ. ಸರ್ಕಾರದ ಈ ರೀತಿಯ ನಡವಳಿಕೆ ಬಗ್ಗೆ ತೀವ್ರ ನೋವು ಮತ್ತು ಬೇಸರವಿದೆ. ಎಷ್ಟೇ ಸಮಸ್ಯೆ, ಸವಾಲು ಎದುರಾದರೂ ಎದೆಗುಂದದೇ ತೀವ್ರ ಹೋರಾಟ ಮುಂದುವರೆಸುತ್ತೇವೆ ಎಂದು ತಿಳಿಸಿದರು.ತಾಲ್ಲೂಕಿನ ಚದಲಪುರ ಬಳಿ ನಡೆದಿರುವ ಅನಿರ್ದಿಷ್ಟಾವಧಿ ಧರಣಿಯನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸುವವರೆಗೆ ಮತ್ತು ಸಮಸ್ಯೆ ಬಗೆಹರಿಸುವವರೆಗೆ ನಾವು ಹೋರಾಟ ಕೈಬಿಡುವುದಿಲ್ಲ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.