ಶನಿವಾರ, ಮೇ 21, 2022
26 °C

ವಿವಿಧ ರಾಜ್ಯಗಳ ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಯುಪಿಎ ಸರ್ಕಾರದ ಉದ್ದೇಶಿತ ಭೂ ಸ್ವಾಧೀನ ಪುನರ್ವಸತಿ ಹಾಗೂ ಬೀಜ ಮಸೂದೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಾವಿರಾರು ರೈತರು ಮಂಗಳವಾರ ಜಂತರ್ ಮಂತರ್ ಬಳಿ ಸಮಾವೇಶ ನಡೆಸಿದರು.ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕೃಷಿ ವಿರೋಧಿ ನೀತಿಗಳಿಂದ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ರೈತ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದ ಮುಖಂಡರು ಆರೋಪಿಸಿಸಿದರು.ಸಾರ್ವಜನಿಕ ಉದ್ದೇಶದ ನೆಪದಲ್ಲಿ ಸರ್ಕಾರ ರೈತರ    ಜಮೀನು ಕಸಿದುಕೊಳ್ಳುತ್ತಿದೆ. ಸ್ವಾಧೀನಪಡಿಸಿಕೊಂಡ ಭೂಮಿಗೆ ಸೂಕ್ತ ಪರಿಹಾರ ಕೊಡುತ್ತಿಲ್ಲ. ನೆಲೆ ಕಳೆದುಕೊಂಡ ರೈತರಿಗೆ  ಪುನರ್ವಸತಿ ಕಲ್ಪಿಸುತ್ತಿಲ್ಲ ಎಂದು ದೂರಿದರು.ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಭೂ ಸ್ವಾಧೀನ ಮತ್ತು ಪುನರ್ವಸತಿ ಮಸೂದೆ ಅಸಮರ್ಪಕವಾಗಿದೆ. ರೈತರ ಜಮೀನು ವಶಪಡಿಸಿಕೊಳ್ಳುವ ಮುನ್ನ ಯಾವ ಉದ್ದೇಶಕ್ಕೆ ಎಂಬುದನ್ನು ಬಹಿರಂಗ ಮಾಡಬೇಕು. ಭೂಮಿ ಕೊಡುವ ಅಥವಾ ಬಿಡುವ ಅಧಿಕಾರ ಅಂತಿಮವಾಗಿ ರೈತರ ಕೈಯಲ್ಲೇ ಇರಬೇಕು ಎಂದು ಆಗ್ರಹಿಸಿದರು.ಭೂಮಿ ಬಿಟ್ಟುಕೊಡುವ ರೈತರ ಪುನರ್ವಸತಿ ಯೋಜನೆಯನ್ನು ಸಮರ್ಪಕವಾಗಿ ವಿವರಿಸಬೇಕು. ಸರ್ಕಾರ ನಿಗದಿ ಮಾಡುವ ದರದ ಬದಲಿಗೆ ಮುಕ್ತ ಮಾರುಕಟ್ಟೆ ಬೆಲೆಯನ್ನು ಭೂಮಿಗೆ ಕೊಡಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು. ಕೃಷಿ ಪ್ರಧಾನ ದೇಶದಲ್ಲಿ ರೈತರ ಹಿತ ಕಾಯಬೇಕಾದ ಸರ್ಕಾರ ಉದ್ಯಮಿಗಳ ಉದ್ಧಾರಕ್ಕೆ ಮುಂದಾಗಿದೆ ಎಂದು ರೈತರು ಆರೋಪ ಮಾಡಿದರು.ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಭಾರತೀಯ ಕಿಸಾನ್ ಸಂಘಟನೆ ಅಧ್ಯಕ್ಷ ಅಜಮೇರ್‌ಸಿಂಗ್ ಲಾಖೋವಾಲ್, ಪ್ರಧಾನ ಕಾರ್ಯದರ್ಶಿ ಯದವೀರ್‌ಸಿಂಗ್, ನರೇಶ್ ಟಿಕಾಯತ್, ರಾಕೇಶ್ ಟಿಕಾಯತ್, ಶೇತ್ಕರಿ ಸಂಘಟನೆ ಅಧ್ಯಕ್ಷ ವಿಜಯ ಜವಾಂದಿಯಾ, ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ತಮಿಳುನಾಡು ರೈತ ಸಂಘಟನೆಯ ಸೆಲ್ವ ಮುತ್ತು ಮೊದಲಾದವರು ಮಾತನಾಡಿದರು. ರೈತ ಮುಖಂಡರಾದ ಚುಕ್ಕಿ ನಂಜುಂಡಸ್ವಾಮಿ, ಬೂದನೂರು ಶಿವರಾಂ ಮತ್ತಿತರರು ಹಾಜರಿದ್ದರು.ಬೀಜ ಸಂರಕ್ಷಣೆ ರೈತರ ಹಕ್ಕು. ಜೈವಿಕ ಸಂಪತ್ತನ್ನು ಮಾರಾಟಕ್ಕೆ ಇಟ್ಟಿರುವ ಈ ಮಸೂದೆ ಕೈ ಬಿಡಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತರಾಧಾರಿತ ಬೀಜ ಬ್ಯಾಂಕ್ ಸ್ಥಾಪಿಸುವ ಮಸೂದೆ ಜಾರಿಯಾಗಬೇಕು. ಕುಲಾಂತರಿ ತಳಿಗಳನ್ನು ನಿಷೇಧಿಸಬೇಕು.ಕೃಷಿ ವೇತನ ಆಯೋಗ ರಚಿಸಬೇಕು. ನೈಸರ್ಗಿಕ ಕೃಷಿಗೆ ಸಹಾಯಧನ ಕೊಡಬೇಕು. ಸರ್ಕಾರ ಸಹಿ ಮಾಡಿರುವ ಎಲ್ಲ ಮುಕ್ತ ವಾಣಿಜ್ಯ ಒಪ್ಪಂದಗಳಿಂದ ಹಿಂದೆ ಸರಿಯಬೇಕು ಎಂದು ರೈತ ಮುಖಂಡರು ಆಗ್ರಹಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.