ಶುಕ್ರವಾರ, ಫೆಬ್ರವರಿ 26, 2021
26 °C

ವಿಶಿಷ್ಟ ದುಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶಿಷ್ಟ ದುಷ್ಟ

ತಮ್ಮ ನಿರ್ದೇಶನದ `ದುಷ್ಟ~ ಚಿತ್ರವನ್ನು ಒಂದೇ ಸಾಲಿನಲ್ಲಿ ಬಣ್ಣಿಸಿ ಎಂದು ಕೇಳಿದರೆ ಎಸ್.ನಾರಾಯಣ್ ಹೇಳುವುದು- `ಇದು ವಿಶಿಷ್ಟ~.`ಇದರಲ್ಲಿದೆ ಹೊಸ ರೀತಿಯ ಪಾತ್ರಗಳ ಸೃಷ್ಟಿ. ಚಿತ್ರಕಥೆ ವಿಭಿನ್ನವಾದುದು. ಒಂದು ಕಾಲದ ಕಥೆಯನ್ನು ಇಂದಿನ ದಿನಮಾನಕ್ಕೆ ಒಗ್ಗಿಸಿರುವ ಸಾಹಸವಿದು~- ಹೀಗೆ ಸಾಗುತ್ತದೆ `ದುಷ್ಟ~ನ ಕುರಿತ ನಿರ್ದೇಶಕ ಎಸ್.ನಾರಾಯಣ್ ಅವರ ಬಣ್ಣನೆ.`ಚಿತ್ರದಲ್ಲಿ ಒಂದು ಚಿಕ್ಕ ಪಾತ್ರವೂ ಅದ್ಭುತವಾಗಿ ನಟಿಸಿದೆ. ನನ್ನ ಕಲ್ಪನೆಗೆ ಮೀರಿದ ಫಲಿತಾಂಶ ಸಿಕ್ಕಿದೆ. ಭದ್ರಾವತಿ ಸುತ್ತಮುತ್ತ ಚಿತ್ರೀಕರಣ ಮಾಡಿರುವುದರಿಂದ ಅಲ್ಲಿನ ಜನರಿಗೆ ಅಪಾರ ನಿರೀಕ್ಷೆ ಇದೆ. ವಾರಕ್ಕಿಂತ ಮುಂಚೆ ಟಿಕೆಟ್‌ಗೆ ಬೇಡಿಕೆ ಬಂದಿತ್ತು.ಇದು ಉತ್ಪ್ರೇಕ್ಷೆ ಎನಿಸಿದರೂ ನಿಜ. ಹಾಡುಗಳು ಜನಪ್ರಿಯವಾಗಿವೆ. ಹಾಡುಗಳು ಜನರಿಗೆ ಇಷ್ಟವಾದರೆ ಸಾಕು, ಚಿತ್ರ ಗೆಲ್ಲುವ ಸಣ್ಣ ಆಸೆ ನಮ್ಮಲ್ಲಿ ಮೂಡುತ್ತದೆ~ ಎಂದು ಹೇಳಿ ಉಸಿರು ಎಳೆದುಕೊಂಡರು ನಾರಾಯಣ್.`ದುಷ್ಟ~ನಿಗೆ ನಾಯಕಿ ಸುರಭಿ. ಅನುಭವಿ ನಟಿಯಂತೆ ನಟಿಸಿದ್ದಾರೆ. ನಾನು ಆ ಪಾತ್ರ ಬರೆಯುವಾಗ ಸಿಕ್ಕ ಖುಷಿ ಅವರ ಅಭಿನಯ ನೋಡಿದಾಗ ಮತ್ತಷ್ಟು ಹೆಚ್ಚಾಯಿತು. ಚಿತ್ರದ ಹೀರೊ ಪಂಕಜ್‌ಗೆ ಇದು ವಿಶೇಷ ಪಾತ್ರ.27-28 ವರ್ಷಗಳ ಹಿಂದೆ ನನ್ನೊಂದಿಗೆ ಒಡನಾಟ ಇಟ್ಟುಕೊಂಡಿದ್ದ ನನ್ನ ಗೆಳೆಯನ ಪಾತ್ರ ಅದು. ಅವನಂತೆ ಮಾತನಾಡುವ, ನಡೆಯುವ ಶೈಲಿಯನ್ನು ಪಂಕಜ್‌ಗೆ ಹೇಳಿ ಅಭ್ಯಾಸ ಮಾಡಿಸಿದ್ದೆ.

 

ತೆರೆಯ ಮೇಲೆ ಪಂಕಜ್ ಬದಲು ನನಗೆ ನನ್ನ ಗೆಳೆಯನೇ ನನಗೆ ಕಾಣುತ್ತಿದ್ದಾನೆ.ಇದೊಂದು ಹೊಸ ಆಯಾಮದ ಚಿತ್ರ. ಇದು ಗೆದ್ದರೆ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಯಾಗುವುದು ಖಂಡಿತ~.`ಈ ಚಿತ್ರ ಬಿಡುಗಡೆಗೆ ಮುನ್ನ ಪಂಕಜ್‌ಗೆ ಅವಕಾಶಗಳು ಬರುತ್ತಿರುವುದು ತಂದೆಯಾಗಿ ನನಗೆ ಖುಷಿಯ ವಿಚಾರ. ಮೂವತ್ತಮೂರು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿರುವೆ. ಈ ಸಿನಿಮಾ ನೋಡಿ ನನ್ನ ಕಳೆದುಹೋಗಿರುವ ಗೆಳೆಯ ಸಿಗಬಹುದು. ಸಿಕ್ಕರೆ ಅವನನ್ನು ಎಲ್ಲರಿಗೂ ಪರಿಚಯಿಸುವಾಸೆ~ ಎಂದರು.

ನಾರಾಯಣ್ ಮಾತು ಮುಗಿಸಿದರು, ಉಳಿದುದನ್ನು ತೆರೆಯ ಮೇಲೆಯೇ ನೋಡಿ ಎನ್ನುವಂತೆ.ಪಂಕಜ್‌ಗೆ ಕೂಡ ಸಿನಿಮಾ ಬಗ್ಗೆ ನಿರೀಕ್ಷೆಗಳಿವೆ. ಚಿತ್ರದ ಥೀಮ್ ಚೆನ್ನಾಗಿದೆ ಎಂದು ಅವರಿಗೆ ಅನ್ನಿಸಿದೆ. ನನ್ನ ಅನುಭವಕ್ಕೆ ಈ ಪಾತ್ರ ದೊಡ್ಡದು ಎನ್ನುತ್ತಾ ಮಾತಿಗೆ ಮುಂದಾದ ಪಂಕಜ್- ` ಸಿನಿಮಾದಲ್ಲಿ ನನ್ನನ್ನು ನೋಡಿ ನಾನೇ ನಂಬದಾದೆ. ನನಗೆ ಪಾತ್ರವಷ್ಟೇ ಗೊತ್ತಿತ್ತು. ಕಥೆ ಯಾವ ಕಡೆಗೆ ಹರಿಯುತ್ತಿದೆ ಎಂಬ ಅರಿವು ಇರಲಿಲ್ಲ. ಈ ಚಿತ್ರದ ನಾಯಕ ನಾನಲ್ಲ. ತಾಂತ್ರಿಕವರ್ಗದವರು~ ಎಂದು ಪುಳಕಿತರಾದರು.ಚಂಚಲಾಕ್ಷಿಯಲ್ಲಿ ಕಣ್ಣುಗಳನ್ನು ಅತ್ತಿತ್ತ ಅಲ್ಲಾಡಿಸುತ್ತಿದ್ದ ಸುರಭಿ, `ಮೊದಲ ಸಿನಿಮಾದಲ್ಲಿಯೇ ಹಿರಿಯ ನಿರ್ದೇಶಕರ ಕೈಕೆಳಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ~ ಎಂದು ಸಂತಸ ವ್ಯಕ್ತಪಡಿಸಿದವರು.`ನಾನು ಮುಂದೆ ಹಲವು ಸಿನಿಮಾಗಳಲ್ಲಿ ನಟಿಸಬಹುದು. ಆದರೆ ಈ ಸಿನಿಮಾ ಎಂದೆಂದಿಗೂ ನನಗೆ ವಿಶೇಷವಾಗಿರುತ್ತದೆ. ನನ್ನನ್ನು ಪಾತ್ರಕ್ಕೆ ತಕ್ಕಂತೆ ರೂಪಿಸಿದ ನಾರಾಯಣ್ ಅವರಿಂದ ಕಲಿತದ್ದು ಬಹಳ~ ಎಂದು ಸುರಭಿ ಖುಷಿ ವ್ಯಕ್ತಪಡಿಸಿದರು. ಅಂದಹಾಗೆ, ಬೆಂಗಳೂರಿನಲ್ಲಿಯೇ ಎರಡನೇ ಪಿಯುಸಿ ಮುಗಿಸಿದ್ದರೂ ಈ ಚೆಲುವೆಗೆ ಕನ್ನಡ ಬರುವುದಿಲ್ಲ!

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.