ಮಂಗಳವಾರ, ಏಪ್ರಿಲ್ 13, 2021
30 °C

ವಿಶೇಷ ನ್ಯಾಯಾಲಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ಗಳಿಸಿ ಆರು ದಶಕಗಳು ಕಳೆದರೂ ದೇಶದ ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮತೋಲನದಲ್ಲಿ ಇನ್ನಷ್ಟು ಹೆಚ್ಚಾಗಿರುವುದು ರಾಷ್ಟ್ರೀಯ ಹಿನ್ನಡೆ. ಶತಮಾನಗಳ ಕಾಲದಿಂದ ಅವಕಾಶವಂಚಿತವಾಗಿದ್ದ ಜನಸಮುದಾಯಕ್ಕೆ ರಾಷ್ಟ್ರ ಜೀವನದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲು ಕಲ್ಪಿಸಿದ ಮೀಸಲಾತಿ ಎಂಬ ಅವಕಾಶ ಪರಿಶಿಷ್ಟ ವರ್ಗಕ್ಕೆ  ಆಶಾದೀಪವಾಗಿದ್ದರೂ ಅದು ನಿಗದಿತ ಅವಧಿಯಲ್ಲಿ ಉದ್ದೇಶಿತ ಗುರಿಯನ್ನು ಸಾಧಿಸಲಿಲ್ಲ.ಆಡಳಿತ ವ್ಯವಸ್ಥೆಯ ಈ ವೈಫಲ್ಯವೇ ಪರಿಶಿಷ್ಟವರ್ಗಕ್ಕೆ ಕಲ್ಪಿಸಿದ್ದ ಮೀಸಲಾತಿಯನ್ನು ಮುಂದುವರಿಸಬೇಕಾಯಿತಲ್ಲದೆ, ಇನ್ನಿತರ ದುರ್ಬಲ ವರ್ಗಗಳಿಗೂ ವಿಸ್ತರಿಸಲು ಕಾರಣವಾಯಿತು. ಪರಿಶಿಷ್ಟ ವರ್ಗ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ರಂಗದಲ್ಲಿ ಕಲ್ಪಿಸಿದ ಮೀಸಲಾತಿ ಸಾಮಾಜಿಕ ವ್ಯವಸ್ಥೆಯಲ್ಲಿ ಸಮತೋಲನ ತರುವುದಕ್ಕಿಂತಲೂ ಈ ವಿಶೇಷ ವರ್ಗದ ವಿರುದ್ಧ ತೀವ್ರ ಅಸಹನೆಗೆ ನೆಪವಾಯಿತು.ಅದರಲ್ಲಿಯೂ ಪರಿಶಿಷ್ಟ ವರ್ಗವನ್ನು ಸಹ ಮಾನವರೆಂದು ಒಪ್ಪಿಕೊಳ್ಳದಷ್ಟು ಕ್ರೂರವಾಗಿದ್ದ ಭಾರತೀಯ ಸಮಾಜ ತನ್ನ ಅಸಹನೆಯನ್ನು ಹಿಂಸೆ, ದಬ್ಬಾಳಿಕೆ ಮತ್ತು ಕ್ರೂರವರ್ತನೆಗಳ ಮೂಲಕ ವ್ಯಕ್ತಪಡಿಸತೊಡಗಿದ್ದು ಸರ್ಕಾರಗಳಿಗೆ ಸವಾಲಾಗಿ ಈ ಸಂಬಂಧದಲ್ಲಿ ಕಠಿಣ ಕಾಯ್ದೆಗಳು ಬರಬೇಕಾಯಿತು.  ಪರಿಶಿಷ್ಟರ ವಿರುದ್ಧ ನಡೆಯುವ ಯಾವುದೇ ಬಗೆಯ ದೌರ್ಜನ್ಯಗಳಿಗೆ ಜಾಮೀನುರಹಿತ ವಾರೆಂಟ್ ನೀಡುವಂಥ ಬಿಗಿ ಕಾಯ್ದೆಗಳನ್ನು ರೂಪಿಸಿದ್ದರೂ ಪರಿಸ್ಥಿತಿಯಲ್ಲಿ ಹೆಚ್ಚಿನ ಬದಲಾವಣೆಗಳು ಆಗಿಲ್ಲ.ಪರಿಶಿಷ್ಟರ ವಿರುದ್ಧ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಆರಂಭದ ಹಂತದಲ್ಲಿ ಅಪರಾಧಿಗಳನ್ನು ಬಂಧನಕ್ಕೆ ಒಳಪಡಿಸುವ ಪ್ರಕ್ರಿಯೆ ಚುರುಕಾಗಿ ನಡೆಯುತ್ತದೆ. ಆದರೆ, ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ. ಸೂಕ್ತ ಸಾಕ್ಷ್ಯ ಸಲ್ಲಿಕೆಯ ಕೊರತೆಯಿಂದ ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೇ ಹೆಚ್ಚು. ಪ್ರಕರಣಗಳನ್ನು ದಾಖಲಿಸುವ ಪೊಲೀಸರು ಸಾಕ್ಷ್ಯ ಸಂಗ್ರಹಕ್ಕೂ ಆಸಕ್ತಿ ವಹಿಸಿದರೆ ದೌರ್ಜನ್ಯ ಪ್ರಕರಣಗಳು ಶಿಕ್ಷೆಯಲ್ಲಿ ಮುಕ್ತಾಯಗೊಳ್ಳುತ್ತವೆ.ವಿಚಾರಣೆಗಳು ಕೂಡ ಬೇಗ ನಡೆಯುವುದಿಲ್ಲ. ಈ ಪರಿಸ್ಥಿತಿಯಲ್ಲಿ ಸುಧಾರಣೆ ತರಲು ರಾಜ್ಯ ಸರ್ಕಾರ ಇಂಥ ಪ್ರಕರಣಗಳ ವಿಚಾರಣೆಗೆ ಜಿಲ್ಲಾ ಮಟ್ಟದಲ್ಲಿ ವಿಶೇಷ ನ್ಯಾಯಾಲಯಗಳನ್ನು ತೆರೆಯಲು ನಿರ್ಧರಿಸಿರುವುದು ಮೆಚ್ಚುವ ಅಂಶ. ಪರಿಶಿಷ್ಟರ ವಿರುದ್ಧ ದೌರ್ಜನ್ಯ ಪ್ರಕರಣಗಳು ಹೆಚ್ಚಿಗೆ ಉಳಿದಿರುವ ಏಳು ಜಿಲ್ಲೆಗಳಲ್ಲಿ ವಿಶೇಷ ನ್ಯಾಯಾಲಯಗಳು ಅಸ್ತಿತ್ವಕ್ಕೆ ಬರುವುದು ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ನೆರವಾಗುವ ಅಂಶ. ಈ ನ್ಯಾಯಾಲಯಗಳಿಗೆ ಅಗತ್ಯದ ಸಿಬ್ಬಂದಿ ಹಾಗೂ ಪೂರಕ ವ್ಯವಸ್ಥೆಯನ್ನು ಕಲ್ಪಿಸುವುದು ಸರ್ಕಾರದ ಹೊಣೆ.ಈಗಿರುವ ನ್ಯಾಯಾಲಯಗಳಿಗೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರ ಉತ್ಸುಕತೆ ತೋರುತ್ತಿಲ್ಲವೆಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳು ಕಾಲಕಾಲಕ್ಕೆ ಸರ್ಕಾರಕ್ಕೆ ಎಚ್ಚರಿಕೆ ನೀಡುವಂಥ ಪರಿಸ್ಥಿತಿ ಇದೆ. ಸರ್ಕಾರ ಈ ವಿಶೇಷ ನ್ಯಾಯಾಲಯಗಳ ವಿಚಾರದಲ್ಲಿಯೂ ಇಂಥ ನಿರಾಸಕ್ತಿಯನ್ನು ಪ್ರದರ್ಶಿಸಿದರೆ ಪ್ರಯೋಜನವಿಲ್ಲ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇರುವ ಸಾಮಾಜಿಕ ನ್ಯಾಯ ಸಮಿತಿ ಹೆಚ್ಚು ಕ್ರಿಯಾಶೀಲವಾಗಿದ್ದರೆ ಪರಿಶಿಷ್ಟರ ವಿರುದ್ಧ ದೌರ್ಜನ್ಯ ಪ್ರಕರಣಗಳು ನಡೆಯದಂತೆ ತಡೆಯುವುದು ಸಾಧ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.