ಬುಧವಾರ, ಮೇ 12, 2021
24 °C
ಮೊದಲ ಹತ್ತು ಓವರ್‌ಗಳ ಆಟ ಮಹತ್ವದ್ದು: ದೋನಿ

`ವಿಶೇಷ ಯೋಜನೆ ರೂಪಿಸಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಂ: ಲೀಗ್ ಹಂತದಲ್ಲಿ ತೋರಿದ ಅದೇ ರೀತಿಯ ಆಟವನ್ನು ಫೈನಲ್‌ನಲ್ಲಿಯೂ ಪುನರಾವರ್ತಿಸುವುದಾಗಿ ಹೇಳಿರುವ ಮಹೇಂದ್ರ ಸಿಂಗ್ ದೋನಿ, `ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಯಾವುದೇ ವಿಶೇಷ ಯೋಜನೆ ರೂಪಿಸಿಲ್ಲ' ಎಂದಿದ್ದಾರೆ.`ಲೀಗ್ ಹಂತದಲ್ಲಿ ಪಾಕಿಸ್ತಾನದ ಎದುರು ಹಾಗೂ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ತೋರಿದ ಅದೇ ರೀತಿಯ ಆಟ ಆಡುವೆವು. ಇಂಗ್ಲೆಂಡ್ ವಿರುದ್ಧದ ಫೈನಲ್‌ಗಾಗಿ ವಿಶೇಷ ಯೋಜನೆ ಸಿದ್ಧಪಡಿಸಿಲ್ಲ' ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ಹೇಳಿದರು. ಫೈನಲ್ ಪಂದ್ಯದ ಮೊದಲ ಹತ್ತು ಓವರ್‌ಗಳ ಆಟ ಉಭಯ ತಂಡಗಳ ಪಾಲಿಗೆ ಮಹತ್ವದ್ದಾಗಿದೆ ಎಂದು ದೋನಿ ಇದೇ ವೇಳೆ ತಿಳಿಸಿದರು. `ಬ್ಯಾಟಿಂಗ್ ಅಥವಾ ಬೌಲಿಂಗ್‌ನಲ್ಲಿ ಉತ್ತಮ ಆರಂಭ ಲಭಿಸುವುದು ಅಗತ್ಯ. ಬೌಲಿಂಗ್ ಮಾಡುವ ಅವಕಾಶ ಲಭಿಸಿದರೆ, ಆರಂಭದಲ್ಲೇ ಒಂದೆರಡು ವಿಕೆಟ್ ಪಡೆದರೆ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಹೇರಬಹುದು. ಆ ಮೂಲಕ ಎದುರಾಳಿಗಳನ್ನು ಸಣ್ಣ ಮೊತ್ತಕ್ಕೆ ನಿಯಂತ್ರಿಸಲು ಸಾಧ್ಯ' ಎಂದು ನುಡಿದರು.`ಅದೇ ರೀತಿ ಮೊದಲು ಬ್ಯಾಟ್ ಮಾಡಿದರೆ ಆರಂಭದಲ್ಲಿ ವಿಕೆಟ್ ಕಳೆದುಕೊಳ್ಳಬಾರದು. ಹೆಚ್ಚಿನ ವಿಕೆಟ್‌ಗಳು ಕೈಯಲ್ಲಿದ್ದರೆ ಬಳಿಕ ವೇಗವಾಗಿ ರನ್ ಗಳಿಸಲು ಸಾಧ್ಯ' ಎಂದು `ಮಹಿ' ತಿಳಿಸಿದರು. ಇಂಗ್ಲೆಂಡ್‌ನ ವೇಗದ ಬೌಲರ್‌ಗಳು ಒಡ್ಡುವ ಸವಾಲನ್ನು ಮೆಟ್ಟಿನಿಲ್ಲಲು ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಜ್ಜಾಗಿದ್ದಾರೆ ಎಂದು ರಾಂಚಿಯ ಈ ಬ್ಯಾಟ್ಸ್‌ಮನ್ ಹೇಳಿದರು. `ಇಂಗ್ಲೆಂಡ್ ಅತ್ಯುತ್ತಮ ತಂಡ. ಅದರಲ್ಲೂ ಬೌಲರ್‌ಗಳು ಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ನಮ್ಮ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅದ್ಭುತ ಫಾರ್ಮ್‌ನಲ್ಲಿರುವುದು ಸಕಾರಾತ್ಮಕ ಅಂಶ. ಮಾತ್ರವಲ್ಲ, ಅವರು ಟೂರ್ನಿಯಲ್ಲಿ ವಿಶ್ವದ ಶ್ರೇಷ್ಠ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದಾರೆ' ಎಂದರು.ಸ್ಪಿನ್ನರ್‌ಗಳಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಹೊಂದಾಣಿಕೆಯಿಂದ ಬೌಲ್ ಮಾಡುತ್ತಿರುವುದು ಸಂತಸದ ಸಂಗತಿ ಎಂದು ದೋನಿ ನುಡಿದರು. `ಅವರಿಬ್ಬರು ಜೊತೆಯಾಗಿ ಎದುರಾಳಿಗಳನ್ನು ಕಾಡುತ್ತಾರೆ. ಜಡೇಜ ಒಂದು ಬದಿಯಿಂದ ಶಿಸ್ತಿನ ಬೌಲಿಂಗ್ ಮಾಡಿ ಒತ್ತಡ ಹೇರಿದರೆ, ಮತ್ತೊಂದು ಬದಿಯಲ್ಲಿ ಬೌಲ್ ಮಾಡುವ ಅಶ್ವಿನ್ ವಿಕೆಟ್ ಪಡೆಯುತ್ತಾರೆ. ಅದೇ ರೀತಿ ಅಶ್ವಿನ್ ಒತ್ತಡ ಹೇರಿದ ಸಂದರ್ಭ ಜಡೇಜ ವಿಕೆಟ್ ಪಡೆಯುವರು' ಎಂದರು.

ಭಾರತ ನೆಚ್ಚಿನ ತಂಡ: ಭಾರತವು ಚಾಂಪಿಯನ್ಸ್ ಟ್ರೋಫಿ ಗೆಲ್ಲುವ `ನೆಚ್ಚಿನ ತಂಡ' ಎಂದು ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಹೇಳಿದರು. `ಆದರೆ ಫೈನಲ್ ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡುವುದು ನಮ್ಮ ಗುರಿ' ಎಂದು ಅವರು ಇದೇ ವೇಳೆ ತಿಳಿಸಿದರು.`ನಾವು ಯಾವುದೇ ಪ್ರಮುಖ ಏಕದಿನ ಟ್ರೋಫಿ ಜಯಿಸಿಲ್ಲ ನಿಜ. ಪ್ರಶಸ್ತಿಯ ಬರವನ್ನು ಈ ಬಾರಿ ನೀಗಿಸಕೊಳ್ಳುವ ವಿಶ್ವಾಸವಿದೆ' ಎಂದು ಈ ಆರಂಭಿಕ ಬ್ಯಾಟ್ಸ್‌ಮನ್ ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.