ಭಾನುವಾರ, ಜೂಲೈ 12, 2020
28 °C

ವಿಶ್ವಕಪ್ ಕ್ರಿಕೆಟ್: ಬೆಟ್ಟಿಂಗ್‌ಗೆ ಸುಗ್ಗಿಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವಕಪ್ ಆರಂಭಕ್ಕೆ 38 ದಿನಗಳು ಮಾತ್ರ ಬಾಕಿ. ಈಗಾಗಲೇ ಬೆಟ್ಟಿಂಗ್ ಪ್ರಿಯರು ಯಾವ ತಂಡದ ಮೇಲೆ ‘ಆಡಬೇಕು’ ಹಾಗೂ ಮತ್ತಾವ ಕ್ರಿಕೆಟ್ ಪಡೆಯ ಮೇಲೆ ‘ತಿನ್ನಬೇಕು’ ಎನ್ನುವ ಲೆಕ್ಕಾಚಾರ ಆರಂಭಿಸಿದ್ದಾರೆ. ಏಜೆಂಟ್‌ಗಳೂ ತಮ್ಮ ಬೆಟ್ಟಿಂಗ್ ಜಾಲದ ಬಲೆಯನ್ನು ಬಲವಾಗಿ ಹೆಣೆದುಕೊಳ್ಳತೊಡಗಿದ್ದಾರೆ.ಹಾಗಾಗಿ ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲಿ ಫೆಬ್ರುವರಿ 19ರಿಂದ ಏಪ್ರಿಲ್ 2ರವರೆಗೆ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ ಆಸಕ್ತರಿಗೆ ಹಾಗೂ ಬೆಟ್ಟಿಂಗ್ ಏಜೆಂಟ್‌ಗಳಿಗೆ ಸುಗ್ಗಿಯ ಕಾಲ. ಕೆಲವು ಏಜೆಂಟ್‌ಗಳು ಹೀಗೆ ಮಾಡಿ ಲಾಭ ಮಾಡುವತ್ತ ಗಮನ ನೀಡಿದ್ದರೆ; ಇನ್ನು ಕೆಲವರು ಲಾಭವೂ ಆಗಬೇಕು, ತಮ್ಮ ಮೂಲಕ ಬೆಟ್ಟಿಂಗ್ ಮಾಡಿದವರಿಗೂ ನಿರಾಸೆ ಆಗಬಾರದು ಎನ್ನುವ ವ್ಯವಹಾರ ಜ್ಞಾನದೊಂದಿಗೆ ಯೋಚಿಸುತ್ತಿದ್ದಾರೆ.ಬೆಟ್ಟಿಂಗ್ ಏಜೆಂಟ್ ನಾಗೇಶ (ಹೆಸರು ಬದಲಿಸಲಾಗಿದೆ) ತನ್ನ ಮೂಲಕ ಹಣ ತೊಡಗಿಸುವವರಿಗೆ ನಷ್ಟವಾಗಬಾರದು ಎಂದು ಬಯಸುತ್ತಾನೆ. ಆದ್ದರಿಂದಲೇ ಅವನು ‘ವಿಶ್ವಕಪ್ ಸಂದರ್ಭದಲ್ಲಿ ನೆಚ್ಚಿನ ತಂಡದ ಮೇಲೆ ಆಡುತ್ತಾ ಸಾಗುವುದೇ ಸೂಕ್ತ’ ಎಂದು ಹೇಳುತ್ತಾನೆ. ‘ಕೆಲವರು ಒಂದು ಕೈ ನೋಡೇಬಿಡೋಣ ಎನ್ನುವವರು ಇರುತ್ತಾರೆ ಅವರು ‘ಸೋಲುತ್ತದೆಂದು ಲೆಕ್ಕಾಚಾರ ಮಾಡಿದ ತಂಡದ ಮೇಲೆ ತಿನ್ನುತ್ತೇನೆಂದು ಧೈರ್ಯದಿಂದ ಹೇಳುತ್ತಾರೆ. ಆದರೂ ಅದು ರಿಸ್ಕ್. ಹಣ ಕಟ್ಟುವವರಿಗೂ ಅದು ಗೊತ್ತಿರುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ.‘ವಿಶ್ವಕಪ್ ಬರುತ್ತಿದೆ, ಸುಮಾರು ಎರಡೂವರೆ ತಿಂಗಳು ನನ್ನ ಮೂಲ ವೃತ್ತಿಗೆ ರಜೆ. ಮೊಬೈಲ್, ಪೇಪರ್, ಕ್ಯಾಲ್ಕೂಲೇಟರ್ ಹಿಡಿದು ಕುಳಿತುಬಿಡುತ್ತೇನೆ. ಬೆಂಗಳೂರಿನಲ್ಲಿಯೇ ಇದ್ದು ವ್ಯವಹಾರ ಮಾಡುವುದು ಕಿರಿಕಿರಿ.ಅದಕ್ಕೇ ಪಕ್ಕದ ಯಾವುದಾದರೂ ತಾಲ್ಲೂಕಿಗೆ ಹೋಗಿ ಹೋಟೆಲ್‌ನಲ್ಲಿ ರೂಮ್ ಮಾಡಿಕೊಂಡು ಬೆಟ್ಟಿಂಗ್ ಸ್ವೀಕರಿಸುತ್ತೇನೆ’ ಎಂದು ತಿಳಿಸುತ್ತಾನೆ ಇನ್ನೊಬ್ಬ ಏಜೆಂಟ್ ಜುನೈದ್  (ಹೆಸರು ಬದಲಿಸಲಾಗಿದೆ).ನೆಚ್ಚಿನ ತಂಡಗಳು:2011ರ ವಿಶ್ವಕಪ್‌ನಲ್ಲಿ ಫೇವರಿಟ್ ಯಾವುದೆಂದು ಉದ್ಯಾನನಗರಿಯ ನಾಲ್ವರು ಬೆಟ್ಟಿಂಗ್ ಏಜೆಂಟ್‌ಗಳನ್ನು ಕೇಳಿದರೆ ‘ನಮಗೆ ಮುಂಬೈನಿಂದ ಬಂದಿರುವ ಸಂದೇಶದಂತೆ ಹೇಳುವುದಾದರೆ ಮೊದಲ ಐದು ಸ್ಥಾನದಲ್ಲಿ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ಇವೆ’ ಎಂದು ಥಟ್ಟನೇ ಹೇಳುತ್ತಾರೆ. ‘ಇದು ಸದ್ಯದ ಲೆಕ್ಕಾಚಾರ, ವಿಶ್ವಕಪ್ ಆರಂಭದ ಹಿಂದಿನ ದಿನದ ಹೊತ್ತಿಗೆ ಈ ಕ್ರಮಾಂಕ ಬದಲಿ ಆದರೂ ಅಚ್ಚರಿಯಿಲ್ಲ’ ಎನ್ನುತ್ತಾನೆ ‘ಕೆಪಿಜೆ 1’ ಎಂದು ಗುರುತಿಸಿಕೊಂಡಿರುವ ಏಜೆಂಟ್.ಈಗಲೇ ವಿಶ್ವಕಪ್ ಚಾಂಪಿಯನ್ ಆಗುವ ತಂಡವನ್ನು ಗುರುತಿಸಿ ಬೆಟ್ಟಿಂಗ್ ಕಟ್ಟುವುದಕ್ಕೆ ಹಣ ಸ್ವೀಕರಿಸುವ ಪ್ರಕ್ರಿಯೆಯನ್ನು ಕೆಲವರು ಆರಂಭಿಸಿದ್ದಾರೆ. ಅವರ ಪ್ರಕಾರ ಭಾರತದ ಮೇಲೆ 1ರೂ.ಗೆ 50ರಿಂದ 95 ಪೈಸೆ. ಅದೇ ಆಸ್ಟ್ರೇಲಿಯಾಕ್ಕೆ 1ರೂ.ಗೆ ಎರಡೂವರೆ ರೂಪಾಯಿವರೆಗೆ ಲಾಭ. ಪಾಕ್ ಮೇಲೆ ಒಂದೂವರೆ ರೂ, ಇಂಗ್ಲೆಂಡ್ ಮೇಲೆ ಎರಡು ರೂ. ಆಸುಪಾಸಿನವರೆಗೆ ಲಾಭ. ಅದೇ ಕೀನ್ಯಾ, ಜಿಂಬಾಬ್ವೆ, ಕೆನಡಾ ಹಾಗೂ ಐರ್ಲೆಂಡ್ ತಂಡಗಳು ಸೆಮಿಫೈನಲ್ ತಲುಪುತ್ತವೆಂದು ಹಣ ತೊಡಗಿಸುವವರಿಗೆ ಒಂದು ರೂಪಾಯಿ ಸಾವಿರಾರು ರೂಪಾಯಿ ಆಗುವ ಸಾಧ್ಯತೆ ಇದೆ. ‘ಅಂಥ ರಿಸ್ಕ್ ಯಾರು ತೆಗೆದುಕೊಳ್ಳುತ್ತಾರೆ ಸಾರ್...?’ ಎಂದು ಡಾನ್ಸ್ ಬಾರ್ ಸಪ್ಲೈಯರ್ ಆಗಿದ್ದುಕೊಂಡೇ ಬೆಟ್ಟಿಂಗ್ ಏಜೆಂಟ್ ವ್ಯವಹಾರವನ್ನೂ ಮಾಡುವ ರಾಜು (ಹೆಸರು ಬದಲಿಸಲಾಗಿದೆ) ಮರು ಪ್ರಶ್ನೆ ಎಸೆಯುತ್ತಾನೆ!ಒಂದು ವಿಶೇಷವೆಂದರೆ ಈ ರಾಜು ವಿಶ್ವಕಪ್ ಆರಂಭಕ್ಕೆ ಒಂದು ವಾರವಿದ್ದಾಗ ಸಪ್ಲೈಯರ್ ಕೆಲಸ ಬಿಟ್ಟು ಮತ್ತೆ ವಿಶ್ವಕಪ್ ಮುಗಿದ ನಂತರ ಬೇರೊಂದು ಕಡೆ ಕೆಲಸ ಹುಡುಕುತ್ತಾನಂತೆ. ಚೆನ್ನಾಗಿ ಕಮೀಷನ್ ಬಂದರೆ; ಒಂದು ಬೈಕ್ ಕೊಳ್ಳುವುದು ಅವನ ಆಸೆ!

ಬೆಟ್ಟಿಂಗ್ ಆಸಕ್ತಿ: ಬೆಟ್ಟಿಂಗ್‌ನಲ್ಲಿ ಹಣ ತೊಡಗಿಸಲು ಆಸಕ್ತಿ ಹೊಂದಿದವರು ಈಗಾಗಲೇ ವಿಶ್ವಕಪ್ ವೇಳಾಪಟ್ಟಿಯನ್ನು ಹಿಡಿದುಕೊಂಡು ವಿಶ್ಲೇಷಣೆ ಮಾಡತೊಡಗಿದ್ದಾರೆ. ಗೆಲ್ಲುವ ನೆಚ್ಚಿನ ತಂಡಗಳ ಪಟ್ಟಿ ಮಾಡಿಕೊಂಡು ಒಂದೆಡೆ ಇಟ್ಟುಕೊಂಡು ಅವುಗಳ ಮೇಲೆ ‘ಆಡಬೇಕು’ ಎನ್ನುವ ಯೋಚನೆ ಮಾಡುತ್ತಿದ್ದರೆ, ಪ್ರತಿಯೊಂದು ಪಂದ್ಯದಲ್ಲಿ ಸೋಲಬಹುದು ಎಂದು ಮೇಲು ನೋಟಕ್ಕೆ ಅನಿಸಿ, ಅಚ್ಚರಿಯ ವಿಜಯ ಪಡೆಯುವ ಸಾಮರ್ಥ್ಯ ಇರುವ ತಂಡಗಳ ಮೇಲೆ ‘ತಿನ್ನುವ’ ವಿಚಾರ ನಡೆಸಿದ್ದಾರೆ.ಏನಿದು? ‘ಆಡುವುದು’- ‘ತಿನ್ನುವುದು’ ಎನ್ನುವ ಸವಾಲು ಮನದೊಳಗೆ ಏಳುವುದು ಸಹಜ. ‘ಆಡುವುದು’ ಹೆಚ್ಚು ಸುಲಭ. ಆದರೆ ‘ತಿನ್ನುವುದು’ ಕಷ್ಟ. ಆದರೆ ಇವೆರಡರಲ್ಲಿ ಅಧಿಕವಾಗಿ ಹಣ ಕಳೆದುಕೊಳ್ಳುವ ಅಪಾಯವಿರುವ ತಿನ್ನುವುದರಲ್ಲಿ. ಅದೃಷ್ಟದ ಬಲ ಇದ್ದರೆ ಇದೇ ಹೆಚ್ಚು ಲಾಭ ತರುತ್ತದೆ.‘ಆಡುವುದು’: ಸುಲಭವಾಗಿ ಹೇಳುವುದಾದರೆ ಪ್ರಬಲವಾದ ತಂಡವನ್ನು ಗುರುತಿಸಿಕೊಂಡು ಗೆಲ್ಲುತ್ತದೆ ಎನ್ನುವುದು, ಅದರ ಮೇಲೆ ಹಣವು ಪಣವೆಂದು ತಿಳಿಸುವುದೇ ‘ಆಡುವುದು’. ಉದ್ಯಾನಗರಿಯಲ್ಲಿ ಬೆಟ್ಟಿಂಗ್ ವ್ಯವಹಾರ ನಡೆಸುವ ಏಜೆಂಟ್‌ಗಳು ಬಳಸುವ ಭಾಷೆಯಿದು. ಹಣ ತೊಡಗಿಸುವ ವ್ಯಕ್ತಿ ಫೋನ್ ರಿಂಗಣಿಸಿ, ಏನು ಬೆಲೆ ಅಂತಾ ಕೇಳಿದರೆ ‘1ಕ್ಕೆ3 ಹಾಗೂ 1ಕ್ಕೆ 18’ ಎಂದು ಸಂಕ್ಷಿಪ್ತವಾಗಿ ಹೇಳುತ್ತಾನೆ. ಅಂದರೆ ಮೊದಲನೆಯದ್ದು ಗೆಲ್ಲುವ ನೆಚ್ಚಿನ ತಂಡದ ಮೇಲೆ ಒಂದು ರೂಪಾಯಿ ಕಟ್ಟಿದರೆ ಪ್ರತಿಯಾಗಿ ಸಿಗುವುದು 3 ರೂ. ಅದೇ ಪಂದ್ಯದಲ್ಲಿ ದುರ್ಬಲವೆನಿಸಿದ ತಂಡದ ಮೇಲೆ 1 ರೂ. ತೊಡಗಿಸಿ ಅದೇನಾದರೂ ಅಚ್ಚರಿಯ ವಿಜಯ ಸಾಧಿಸಿದರೆ 18 ರೂ. ಸಾಮಾನ್ಯವಾಗಿ ಗೆಲ್ಲುವ ತಂಡದ ಮೇಲಿನ ಲಾಭಾಂಶ ಕಡಿಮೆ. ಆದರೂ ಆಡುವುದರಲ್ಲಿ ‘ರಿಸ್ಕ್ ಫ್ರೀ’ ಎಂದು ಹೆಚ್ಚಿನವರ ಅಭಿಪ್ರಾಯ.‘ತಿನ್ನುವುದು’: ಅದೃಷ್ಟ ತಮ್ಮೊಂದಿಗೆ ಎನ್ನುವವರು ಸೋಲುವ ತಂಡದ ಮೇಲೆ ರಿಸ್ಕ್ ತೆಗೆದುಕೊಂಡು ‘ತಿನ್ನುತ್ತೇನೆ’ ಎಂದು ಹೇಳುತ್ತಾರೆ. ಪಂದ್ಯವೊಂದರಲ್ಲಿ ದುರ್ಬಲ ಹಾಗೂ ಸೋಲುತ್ತದೆ ಎನ್ನುವಂಥದರ ಮೇಲೆ ಹಣ ಕಟ್ಟುವುದೇ ತಿನ್ನುವುದು. ಇಲ್ಲಿ ಮಿತಿ ಇರುವುದಿಲ್ಲ. ಲಾಭವು ಬಂಪರ್ ಬಹುಮಾನದಂತೆ.ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಹಾಗೂ ಐರ್ಲೆಂಡ್ ಆಡಿದ ಪಂದ್ಯ ಇದಕ್ಕೆ ಸರಿಯಾದ ಉದಾಹರಣೆ. ಅಲ್ಲಿ ಪಾಕ್ ಬಲಾಢ್ಯ ತಂಡ. ಐರ್ಲೆಂಡ್ ಗೆಲ್ಲುತ್ತದೆಂದು ಯಾರೂ ನಿರೀಕ್ಷಿಸಿರುವುದಿಲ್ಲ. ಆದರೆ ಐರ್ಲೆಂಡ್ ಮೇಲೆ ತಿನ್ನುತ್ತೇನೆ ಎಂದು ಹಣ ತೊಡಗಿಸಿದ್ದವನಿಗೆ ಅಂದು ಭಾರಿ ಲಾಭ ಆಗಿರುತ್ತದೆಂದು ಖಂಡಿತ ಹೇಳಬಹುದು.ಹೀಗೆ ಎಲ್ಲ ಸಂದರ್ಭದಲ್ಲಿ ಆಗುತ್ತದೆಂದು ಹೇಳಲಾಗದು. ಆದ್ದರಿಂದ ‘ತಿನ್ನುವುದು ಕಷ್ಟ’ ಎಂದು ಕ್ರಿಕೆಟ್ ಬೆಟ್ಟಿಂಗ್ ಆಸಕ್ತರು ಸಹಜವಾಗಿಯೇ ಹೇಳುತ್ತಾರೆ.ಹಣತೊಡಗಿಸುವವರನ್ನು ಆಕರ್ಷಿಸಲು ಆಫರ್‌ಗಳು!


 ಕಳೆದ ವಿಶ್ವಕಪ್ ಸಂದರ್ಭದಲ್ಲಿ ಪಂದ್ಯವೊಂದರ ಮೇಲೆ ಐವತ್ತು ಹಾಗೂ ಅದಕ್ಕಿಂತ ಹೆಚ್ಚು ಮೊತ್ತವನ್ನು ತೊಡಗಿಸುವವರಿಗೆ ಏಜೆಂಟ್‌ಗಳು ವಿಶಿಷ್ಟವಾದ ಆಫರ್‌ಗಳನ್ನು ನೀಡಿದ್ದರು. ಹಣ ತೊಡಗಿಸಿದ ಪಂದ್ಯ ನಡೆಯುವ ದಿನ ಪಂಚತಾರಾ ಹೋಟೆಲ್‌ನಲ್ಲಿ ಕೋಣೆ ಜೊತೆಗೆ ಬೆಡಗಿಯೊಬ್ಬಳ ಕಂಪೆನಿಯನ್ನು ನೀಡುವ ಆಮಿಷವೊಡ್ಡಿದ್ದರು. ಇದು ಬೇಡ ಎಂದವರಿಗೆ ಐಶಾರಾಮಿ ಕ್ಲಬ್ ಇಲ್ಲವೇ ರೆಸಾರ್ಟ್‌ನಲ್ಲಿ ಟೇಬಲ್ ಬುಕ್ಕಿಂಗ್ ಹಾಗೂ ಸಂಪೂರ್ಣ ಬಿಲ್ ಪಾವತಿ ಮಾಡುವ ಭರವಸೆಯನ್ನು ನೀಡಲಾಗಿತ್ತು.ಬೆಟ್ಟಿಂಗ್ ಮಾಡಿದ ಹಣಕ್ಕೆ ಲಾಭ ಬರಲಿ-ಮುಳುಗಿಯಾದರೂ ಹೋಗಲಿ; ಪಂದ್ಯ ಮುಗಿದ ನಂತರ ಬೆಲೆಯುಳ್ಳ ಒಂದು ಉಡುಗೊರೆಯ ಆಶ್ವಾಸನೆ ಕೊಡಲಾಗಿತ್ತು. ನೀಡಿದ ಭರವಸೆಯಂತೆ ನಡೆದುಕೊಳ್ಳುವುದು ಬೆಟ್ಟಿಂಗ್ ಏಜೆಂಟ್‌ಗಳ ನಿಯತ್ತು! ಹೀಗೆಂದು ಒಬ್ಬ ಏಜೆಂಟ್ ವಿವರ ನೀಡಿದ್ದು ವಿಶೇಷ.ಬೆಲೆ ನಿಗದಿ ಮಾಡುವ ‘ಗ್ಯಾಂಗ್’ಗಳು

ಬೆಂಗಳೂರಿನಲ್ಲಿ ಬೆಟ್ಟಿಂಗ್ ವ್ಯವಹಾರದಲ್ಲಿ ಮೂರು ಗ್ಯಾಂಗ್‌ಗಳು ಪ್ರಬಲವಾಗಿ ಕೆಲಸ ಮಾಡುತ್ತಿವೆ. ಆದರೆ ಅವೆಲ್ಲವೂ ಮುಂಬೈ ಮೂಲದ ಭೂಗತ ಜಗತ್ತಿನ ನಂಟು ಹೊಂದಿದ್ದವು ಎನ್ನುವುದರಲ್ಲಿ ಅನುಮಾನವಿಲ್ಲ. ಒಂದು ಜಾಲವನ್ನು ನಿಯಂತ್ರಿಸುವುದು ‘ಡಿ’ ಗುಂಪು; ಅದು ದಾವೂದ್ ಶಿಷ್ಯರದ್ದು. ಇನ್ನೊಂದು ಗುಂಪಿನ ಮೇಲೂ ಮುಂಬೈನಿಂದಲೇ ನಿಯಂತ್ರಣವಿದೆ ಎನ್ನಲಾಗುತ್ತದೆ. ಆ ಬಗ್ಗೆ ಏಜೆಂಟ್‌ಗಳು ಅನುಮಾನದಿಂದಲೇ ಒಂದು ಕಾಲದಲ್ಲಿ ಅರುಣ್ ಗಾವ್ಳಿ ಜೊತೆಗಿದ್ದವರು ಎಂದು ಹೇಳುತ್ತಾರೆ. ಇನ್ನೊಂದು ಸ್ಥಳೀಯವಾಗಿ ಪ್ರಬಲವಾಗಿರುವ ರೌಡಿಗಳದ್ದು. ಬೆಟ್ಟಿಂಗ್ ಹಣವನ್ನು ವಸೂಲಿ ಮಾಡುವ ತಾಕತ್ತು ಇರುವಂಥವರು ಮಾತ್ರ ಈ ವ್ಯವಹಾರ ನಡೆಸಲು ಸಾಧ್ಯ. ಏಜೆಂಟ್‌ಗಳು ಸಂಪರ್ಕ ಕೊಂಡಿ ಮಾತ್ರ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.