ಬುಧವಾರ, ಜೂನ್ 16, 2021
23 °C

ವಿಶ್ವಕರ್ಮ ಪ್ರತಿಷ್ಠಾನ ಸ್ಥಾಪಿಸಿ: ಕಂಬಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಕರ್ಮ ಪ್ರತಿಷ್ಠಾನ ಸ್ಥಾಪಿಸಿ: ಕಂಬಾರ

ಬೆಂಗಳೂರು: `ನನ್ನ ಸಾಹಿತ್ಯ ಸೇವೆಗಾಗಿ ನನ್ನ ಸಮುದಾಯದ ಜನರೇ ನನ್ನನ್ನು ಸನ್ಮಾನಿಸಿದ್ದು ತೃಪ್ತಿ ತಂದಿದೆ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಹೇಳಿದರು.ನಗರದಲ್ಲಿ ಭಾನುವಾರ ಗಾಯತ್ರಿ ವಿಶ್ವಕರ್ಮ ಸಮಾಜವು ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, `ನನಗೆ ಜ್ಞಾನಪೀಠ ಪುರಸ್ಕಾರ ಬಂದಾಗ ನಾಡಿನ ಅನೇಕ ಕಡೆಗಳಲ್ಲಿ ಸನ್ಮಾನ ನಡೆಯಿತು. ಆದರೆ ನನ್ನ ಸಮುದಾಯದ, ನನ್ನ ಜನರೇ ನನ್ನನ್ನು ಸನ್ಮಾನಿಸಿರುವುದು ನನಗೆ ತೃಪ್ತಿ ತಂದಿದೆ. ಬೇರೆಯವರಿಗಿಂತಲೂ ನಮ್ಮ ಮನೆಯ ಮಂದಿ ನಮ್ಮನ್ನು ಗುರುತಿಸಿದಾಗ ಸಂತಸ ಹೆಚ್ಚಾಗುತ್ತದೆ~ ಎಂದು ಅವರು ಭಾವುಕರಾದರು.`ನಾನು ಇಂದು ಏನಾದರೂ ಸಾಧಿಸಿದ್ದೇನೆ ಎಂದರೆ ಅದಕ್ಕೆ ಕಾರಣ ನನ್ನ ಗುರುಗಳು. ನನಗೆ ಸಿಕ್ಕ ಗುರುಗಳು ಬೇರೆ ಯಾರಿಗೂ ಸಿಕ್ಕಿರಲಾರರು. ಚಿಕ್ಕಂದಿನಲ್ಲಿ ಕೃಷ್ಣಮೂರ್ತಿ ಪುರಾಣಿಕರು, ನಂತರದ ದಿನಗಳಲ್ಲಿ ಎ.ಕೆ.ರಾಮಾನುಜನ್ ಹಾಗೂ ಬೂಸನೂರಮಠ ಅವರಂಥಾ ಗುರುಗಳು ಸಿಕ್ಕಿದ್ದು ನನ್ನ ಅದೃಷ್ಟ. ಇವರ ಶಿಷ್ಯನಾಗಿ ನಾನು ಸಾಕಷ್ಟು ಕಲಿತಿದ್ದೇನೆ~ ಎಂದರು.`ವಿಶ್ವಕರ್ಮರ ವೃತ್ತಿ ವಿಶಿಷ್ಟವಾದುದು. ಇದು ಸಾವಿರಾರು ವರ್ಷಗಳ ಹಿಂದಿನಿಂದಲೂ ಬೆಳೆಯುತ್ತಾ ಬಂದಿರುವ ವಿಶಿಷ್ಟ ತಂತ್ರಜ್ಞಾನ ಕೌಶಲ. ಆದರೆ ಸಾಮಾಜಿಕ ಪರಿವರ್ತನೆಯ ಕಾರಣದಿಂದ ವಿಶಿಷ್ಟವಾದ ಈ ವೃತ್ತಿಗಳಿಂದಲೇ ಸಮುದಾಯದ ಜನರು ವಿಮುಖರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

 

ಸಮುದಾಯದ ಜನರು ಹಾಗೂ ಸರ್ಕಾರ ಎಚ್ಚೆತ್ತು ಈ ವೃತ್ತಿಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ಕಲೆಗಳ ಕಲಿಕೆಗೆ ಅನುಕೂಲವಾಗುವಂತೆ ಸರ್ಕಾರ ಪ್ರತ್ಯೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಬೇಕು. ವಿಶ್ವಕರ್ಮ ಜನಾಂಗದ ಏಳಿಗೆಗಾಗಿ ಸರ್ಕಾರವು ವಿಶ್ವಕರ್ಮ ಪ್ರತಿಷ್ಠಾನವನ್ನು ಸ್ಥಾಪಿಸಬೇಕು~ ಎಂದು ಅವರು ಒತ್ತಾಯಿಸಿದರು.ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, `ಸಮುದಾಯವನ್ನೂ ಮೀರಿ ಬೆಳೆದವರು ಚಂದ್ರಶೇಖರ ಕಂಬಾರರು. ಅವರ ಸಾಹಿತ್ಯ ಕೊಡುಗೆ ಅಮೂಲ್ಯವಾದುದು. ವಿಶ್ವಕರ್ಮ ಸಮುದಾಯದ ಜನರು ಕೇವಲ ತಮ್ಮ ವೃತ್ತಿಗಷ್ಟೇ ಸೀಮಿತಗೊಳ್ಳದೇ ಹೆಚ್ಚು ವಿದ್ಯಾವಂತರಾಗುವ ಮೂಲಕ ಉನ್ನತ ಹುದ್ದೆಗಳನ್ನು ಪಡೆಯಬೇಕು. ಗಾಯತ್ರಿ ವಿಶ್ವಕರ್ಮ ಸಮುದಾಯಕ್ಕಾಗಿ ಅಗರದ ಬಳಿ ಹತ್ತು ಎಕರೆ ಜಮೀನು ಮಂಜೂರು ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು~ ಎಂದರು.`ವಿಶ್ವಕರ್ಮ ಸಮುದಾಯದ ಜನರು ಹೆಚ್ಚು ತೀಕ್ಷ್ಣ ಮತಿಗಳು ಹಾಗೂ ಬುದ್ಧಿಗ್ರಾಹಿಗಳು. ಸಮಾಜದ ಅನೇಕ ಕ್ಷೇತ್ರಗಳಲ್ಲಿ ಸಮುದಾಯದ ಜನರ ಕಾಣಿಕೆ ಇದೆ. ಸಮುದಾಯದ ಜನರು ತಮ್ಮ ಏಳಿಗೆಗಾಗಿ ಹೆಚ್ಚು ಹೆಚ್ಚು ಪ್ರಯತ್ನಿಸಬೇಕು. ಸಮುದಾಯದ ಸಾಂಪ್ರದಾಯಿಕ ಜ್ಞಾನವನ್ನು ಉಪಯೋಗಿಸಿಕೊಂಡು ಬೆಳೆಯಲು ಜನರು ಮುಂದಾಗಬೇಕು~ ಎಂದು ಅವರು ಕರೆ ನೀಡಿದರು.ಲೋಕಸಭೆಯ ಮಾಜಿ  ಕಾರ್ಯದರ್ಶಿ ಪಿ.ಡಿ.ಟಿ. ಆಚಾರ್ಯ ಮಾತನಾಡಿ, `ಪ್ರಾದೇಶಿಕ ಭಾಷೆಗಳಲ್ಲಿ ಅಮೂಲ್ಯವಾದ ಸಾಹಿತ್ಯ ನಿರ್ಮಾಣವಾಗುತ್ತಿದ್ದರೂ ಅದು ಹೊರಗಿನ ಜಗತ್ತಿಗೆ ಹೆಚ್ಚು ತಿಳಿಯುತ್ತಿಲ್ಲ. ಬೂಕರ್, ನೊಬೆಲ್ ಪ್ರಶಸ್ತಿಗಳನ್ನು ಪಡೆದವರ ಕೃತಿಗಳೇ ಹೆಚ್ಚು ಜನಪ್ರಿಯತೆ ಪಡೆಯುತ್ತವೆ. ಪ್ರಾದೇಶಿಕ ಭಾಷೆಯ ನಮ್ಮ ಸಮುದಾಯದ ಸಾಹಿತಿಯೊಬ್ಬರು ಜ್ಞಾನಪೀಠ ಪುರಸ್ಕಾರಕ್ಕೆ ಭಾಜನರಾಗಿರುವುದು ಹೆಮ್ಮೆಯ ವಿಚಾರ~ ಎಂದು ಅವರು ಹೇಳಿದರು.ಸಮಾರಂಭದಲ್ಲಿ ಕಂಬಾರರು ತಮ್ಮ `ಮರೆತೇನೆಂದರ ಮರೆಯಲಿ ಹೆಂಗ ಮಾವೋತ್ಸೆ ತುಂಗ~ ಕವಿತೆಯನ್ನು ಹಾಡಿದರು.ನಗರದ ಶಂಕರ ಅದ್ವೈತ ಕುಟೀರದ ಕರುಣಾಕರ ಸ್ವಾಮೀಜಿ, ರಾಜ್ಯಸಭೆಯ ಮಾಜಿ ಸದಸ್ಯೆ ಬಿಂಬಾ ರಾಯ್ಕರ್, ಹೈಕೋರ್ಟ್‌ನ ನ್ಯಾಯಮೂರ್ತಿ ಇಂದ್ರಕಲಾ, ಸಮಾಜದ ಎಸ್.ಮಾಳಿಗಾಚಾರ್, ಪಿ.ಎನ್. ಶ್ರೀನಿವಾಸಾಚಾರ್  ಸೇರಿದಂತೆ ಸಮಾಜದ ಮತ್ತಿತರರು  ಉಪಸ್ಥಿತರಿದ್ದರು.`ಹೈಕಮಾಂಡ್‌ಗೆ ಬಿಟ್ಟ ವಿಚಾರ~


ಸಮಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, `ಯಡಿಯೂರಪ್ಪ ಆರೋಪ ಮುಕ್ತರಾಗಿದ್ದಾರೆ. ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೋ, ಬೇಡವೋ ಎಂಬ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಹೇಳಿದರು.`ಉಡುಪಿ-ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಯಡಿಯೂರಪ್ಪ ಅವರು ಪಾಲ್ಗೊಂಡರೆ ಸದಾನಂದ ಗೌಡರಿಗೆ ಮುಜುಗರವಾಗುವ ಪರಿಸ್ಥಿತಿಯೇನೂ ನಿರ್ಮಾಣವಾಗುವುದಿಲ್ಲ. ರಾಜಕೀಯದಲ್ಲಿ ತಾತ್ಕಾಲಿಕ ಭಿನ್ನಾಭಿಪ್ರಾಯಗಳು ಸಾಮಾನ್ಯ~ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.