ಬುಧವಾರ, ಮೇ 18, 2022
23 °C

ವಿಶ್ವಶಾಂತಿ ಮಹಾಯಜ್ಞಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕೋಡಿ:  ಇಲ್ಲಿಯ ಆದಿನಾಥ ದಿಗಂಬರ ಜೈನ ಮಂದಿರ ಟ್ರಸ್ಟ್ ಹಮ್ಮಿಕೊಂಡಿರುವ ಕಲ್ಪದ್ರುಮ ಮಹಾಮಂಡಲ ಆರಾಧನೆ ಮತ್ತು ವಿಶ್ವಶಾಂತಿ ಮಹಾಯಜ್ಞ ಗುರುವಾರ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು.

ಪಟ್ಟಣದ ಆರ್.ಡಿ. ಕಾಲೇಜಿನ ಆವರಣದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಕಿರುವ ಭವ್ಯ ಮಂಟಪದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಆರಂಭಗೊಂಡವು. ಇದಕ್ಕೂ ಮುನ್ನ ಆರಾಧನೆಯ ಇಂದ್ರ-ಇಂದ್ರಾಣಿ (ಯಜಮಾನ ದಂಪತಿ)ಯಾದ ಬಾಳಾಸಾಹೇಬ ಸಂಗ್ರೋಳೆ ಮತ್ತು ನಿರ್ಮಲಾ ದಂಪತಿಯನ್ನು ರಾಜೀವ ನಗರದಿಂದ ಅದ್ದೂರಿ ಮೆರವಣಿಗೆ ಮೂಲಕ ಆದಿನಾಥ ದಿಗಂಬರ ಜೈನ ಮಂದಿರಕ್ಕೆ ಸ್ವಾಗತಿಸಿ, ಅಲ್ಲಿಂದ ಮತ್ತೆ ಮೆರವಣಿಗೆ ಮೂಲಕ ಕಾರ್ಯಕ್ರಮದ ಮಂಟಪಕ್ಕೆ ಕರೆತರಲಾಯಿತು. ಮೆರವಣಿಗೆಯಲ್ಲಿ ಆನೆ, ಕುದುರೆ, ಆಕರ್ಷಕ ಬೊಂಬೆಗಳು ಹಾಗೂ ವಿವಿಧ ವಾದ್ಯವೃಂದಗಳು ಗಮನ ಸೆಳೆದವು.

ನಂತರ ಸಹಕಾರ ಮಹರ್ಷಿ ಶಾಂತಪ್ಪಣ್ಣ ಮಿರಜಿ ಧ್ವಜಾರೋಹಣ ನೇರವೇರಿಸಿದರು. ಯಶವಂತ ರೋಖಡೆ ಮಂಟಪ ಪೂಜೆ  ಸಲ್ಲಿಸಿದರು. ಶೀಲಾ ಮತ್ತು ಶಾಂತಿನಾಥ ಮೆಕ್ಕಳಕಿ ದಂಪತಿ ಸಮವಶರಣ ಸ್ಥಾಪನೆ ನೇರವೇರಿಸಿದರು. ಆದಿತ್ಯಶ್ರೀ ಮಾತಾಜಿ, ಆರ್ಯಿಕಾ ಅಪೂರ್ವಶ್ರೀ ಮಾತಾಜಿ, ಆರ್ಯಿಕಾ ದಿಶಾಶ್ರೀ ಮಾತಾಜಿ, ಆರ್ಯಿಕಾ ದೀಪ್ತಿಶ್ರೀ ಮಾತಾಜಿ ಸಾನ್ನಿಧ್ಯ ವಹಿಸಿದ್ದರು.

ತೀರ್ಥಂಕರ ಭಗವಾನರ ಅಭಿಷೇಕ, ಶಾಂತಿಧಾರಾ, ಸಕಲೀಕರಣ, ಇಂದ್ರಪ್ರತಿಷ್ಠಾ, ಮಂಡಲ ಪ್ರತಿಷ್ಠಾ, ಮಹಾಮಂಡಲ ಪೂಜಾ ವಿಧಾನಗಳು ಹಾಗೂ ಲಘುನಾಟಕ (ದಿವ್ಯಧ್ವನಿ) ಪ್ರದರ್ಶನ ನಡೆಯಿತು.

ಬ್ರಹ್ಮಚಾರಿ ರಾಜೇಶ ಭೈಯ್ಯಾ, ಟ್ರಸ್ಟ್ ಅಧ್ಯಕ್ಷ ವರ್ಧಮಾನ ಸದಲಗೆ, ಸಚಿನ್ ಮೆಕ್ಕಳಕಿ, ಪಿ.ಎ. ದಿನಕರ, ಪ್ರವೀಣ ಘೋಸರವಾಡೆ, ರಂಜೀತ ಸಂಗ್ರೋಳೆ, ಸುಭಾಷ ರೋಖಡೆ, ಲಕ್ಷ್ಮಿಕಾಂತ ಶೆಟ್ಟಿ, ಚಂದ್ರಕಾಂತ ಲಗಾರೆ, ಸುಭಾಷ ಕಾಗೆ, ಬಿ.ಡಿ. ನಸಲಾಪುರೆ, ಎಂ.ಎ. ಮಾಲಗಾಂವೆ, ಡಾ.ಪದ್ಮರಾಜ ಪಾಟೀಲ ಸೇರಿದಂತೆ ಸಹಸ್ರಾರು ಜನ ಶ್ರಾವಕ-ಶ್ರಾವಕಿಯರು ಪಾಲ್ಗೂಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.