ಸೋಮವಾರ, ಏಪ್ರಿಲ್ 19, 2021
23 °C

ವಿ. ಎಸ್.ಗೆ ಸೀಟು: ಶೀಘ್ರ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರ, (ಪಿಟಿಐ): ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳ ಮುಖ್ಯಮಂತ್ರಿ ವಿ. ಎಸ್. ಅಚ್ಯುತಾನಂದನ್ ಅವರನ್ನು ಕಣಕ್ಕಿಳಿಸಬೇಕೇ ಎನ್ನುವುದರ ಕುರಿತು ಸಿಪಿಐ(ಎಂ) ಮಂಗಳವಾರ ತಡರಾತ್ರಿ ಸಭೆ ಸೇರಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.ವಿ.ಎಸ್. ಅಚ್ಯುತಾನಂದನ್ ಅವರ ಸ್ಪರ್ಧೆ ಒಂದು ಸೂಕ್ಷ್ಮ ವಿಷಯವಾಗಿದ್ದು ಕಳೆದ ವಾರ ದೆಹಲಿಯಲ್ಲಿ ಸೇರಿದ್ದ ಪಾಲಿಟ್ ಬ್ಯೂರೋ ಮತ್ತು ಕೇಂದ್ರ ಸಮಿತಿ ಈ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪಕ್ಷದ ರಾಜ್ಯ ಘಟಕಕ್ಕೆ ತಿಳಿಸಿತ್ತು.ಈ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯ ಸಚಿವಾಲಯ ಈ ಕುರಿತು ಚರ್ಚಿಸಿ ಅಭಿಪ್ರಾಯವನ್ನು ರಾಜ್ಯ ಸಮಿತಿಗೆ ತಿಳಿಸಿಲಿದೆ ಎಂದು ಸಿಪಿಐ(ಎಂ) ಮೂಲಗಳು ತಿಳಿಸಿವೆ.ಕೆಲವು ಭ್ರಷ್ಟಾಚಾರ ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿ ವಿ.ಎಸ್ ತೋರಿಸಿದ ಮುತುವರ್ಜಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತಲ್ಲದೆ ಯುಡಿಎಫ್ ವಿರುದ್ಧದ ಸೆಣಸಾಟದಲ್ಲಿ ಅಚ್ಯುತಾನಂದನ್ ಅವರೂ ಇರಲಿ ಎಂದು ಪಕ್ಷದಲ್ಲಿನ ಅವರ ವಿರೋಧಿಗಳೂ ಚಿಂತಿಸುವಂತೆ ಮಾಡಿದೆ.

ಚುನಾವಣಾ ಕಣದಲ್ಲಿ ಹಿರಿಯರ ಸೆಣಸಾಟ

ತಿರುವನಂತಪುರ. (ಐಎಎನ್‌ಎಸ್): ರಾಜಕೀಯದ ವಿಷಯ ಬಂದಾಗ ಬಹುಷಃ ಕೇರಳದಲ್ಲಿ ಅಭ್ಯರ್ಥಿಗಳಿಗೆ ವಯಸ್ಸು ತಡೆಯಾಗದು ಎಂದೇ ಹೇಳಬಹುದು. ವಯಸ್ಸಿನ ವಿಚಾರಕ್ಕೆ ಬಂದಾಗ ಇಲ್ಲಿ ಪಕ್ಷ ಭೇದ ಇಲ್ಲ ಎಂದರೂ ತಪ್ಪಿಲ್ಲ.

75 ಕ್ಕೂ ಹೆಚ್ಚು ಹರೆಯದ ಹಲವು ಹಿರಿಯ ವ್ಯಕ್ತಿಗಳು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಯುತ್ತಿರುವುದು ಎಲ್ಲರ ಆಸಕ್ತಿಗೆ ಕಾರಣವಾಗಿದೆ.ಭಾರತದ ರಾಜಕಾರಣದಲ್ಲೇ ಅತ್ಯಂತ ಹೆಚ್ಚು ವಯಸ್ಸಿನ ಮಹಿಳಾ ರಾಜಕಾರಣಿ ಎನ್ನಲಾದ ಕೆ. ಆರ್. ಗೌರಿ, ಇದೀಗ 91 ರ ಹರೆಯದಲ್ಲೂ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.ಇವರೊಬ್ಬರೇ ಅಲ್ಲ, 87ರ ಹರೆಯದ ಅಚ್ಯುತಾನಂದನ್ ಅವರು ಇನ್ನೂ ಪಕ್ಷದ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ. 78ರ ಹರೆಯದ ಸಿಪಿಐ (ಎಂ)ನ ಪಾಲೋಳಿ ಮೊಹಮ್ಮದ್ ಕುಟ್ಟಿ ಅವರು ಸ್ಪರ್ಧೆಯಿಂದ ದೂರ ಇರಲು ಬಯಸಿದ್ದರೂ ಕೂಡ ಪಕ್ಷ ಅದಕ್ಕೆ ಸಮ್ಮತಿಸಲಾರದು. ಏಕೆಂದರೆ ಮುಸ್ಲಿಂ ಪ್ರಾತಿನಿಧ್ಯದ ಮಲಪ್ಪುರಂ ವಿಧಾನಸಭಾ ಕ್ಷೇತ್ರದಲ್ಲಿ ಕುಟ್ಟಿ ಅವರ ಬದಲು ಹೊಸ ವ್ಯಕ್ತಿಯನ್ನು ಕಣಕ್ಕಿಳಿಸುವುದೆಂದರೆ ಪಕ್ಷಕ್ಕೆ ಅದು ಅದೃಷ್ಟದ ಪರೀಕ್ಷೆಯಾದೀತು.ಹಾಗೆ ನೋಡಿದಲ್ಲಿ 1967 ರಿಂದ ಪಾಲಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಅಜೇಯರಾಗಿರುವ ಕೇರಳ ಕಾಂಗ್ರೆಸ್ (ಎಂ)ನ ಮುಖಂಡ ಕೆ, ಎಂ. ಮಾಣಿ, ಈ ಬಾರಿಯೂ  ಸ್ಪರ್ಧಿಸುವುದು ಖಚಿತವಾಗಿದೆ.ಏಳು ಬಾರಿ ಶಾಸಕರಾಗಿ ಆರಿಸಿ ಬಂದಿರುವ 75ರ ಹರೆಯದ ಕಾಂಗ್ರೆಸ್‌ನ ಆರ್ಯಾಡನ್ ಮೊಹಮದ್ ಅವರು ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಕೂಡ ಈ ಬಾರಿಯೂ ಅವರಿಗೆ ನಿಲಂಬೂರ್ ಕ್ಷೇತ್ರದಲ್ಲಿ ಟಿಕೆಟ್ ದೊರೆಯುವುದು ಖಚಿತವಾಗಿದೆ.ಆದರೆ ಇಂಥ ಘಟನೆಗಳು ಕೇರಳ ವಿಧಾನಸಭಾ ಇತಿಹಾಸದಲ್ಲಿ ಹೊಸತೇನಲ್ಲ. ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರಣ್ ತನ್ನ 92ನೇ ವಯಸ್ಸಿನಲ್ಲಿ ನಿಧನರಾಗುವವರೆಗೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. ಅಂತೆಯೇ ಸುಧೀರ್ಘ ಕಾಲ ಸಿಪಿಐ(ಎಂ) ಅನ್ನು ಮುನ್ನಡೆಸಿದ್ದ ಮಾಜಿ ಮುಖ್ಯಮಂತ್ರಿ ಇ.ಎಂ.ಎಸ್. ನಂಬೂದಿರಿಪ್ಪಾಡ್ ಅವರು 89 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು. ಇನ್ನುಳಿದಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಜಿ.ಎಂ.ಬನಾತ್‌ವಾಲಾ ಅವರು ತನ್ನ 74 ನೇ ವಯಸ್ಸಿನವರೆಗೂ ರಾಜಕಾರಣದಲ್ಲಿ ಸಕ್ರಿಯರಾಗೇ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.