ಮಂಗಳವಾರ, ಏಪ್ರಿಲ್ 13, 2021
23 °C

ವೀರೂ ಬಗ್ಗೆ ಇಂದು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ಅಹಮದಾಬಾದ್:  ವೀರೇಂದ್ರ ಸೆಹ್ವಾಗ್ ಗುರುವಾರ ಆಸ್ಟ್ರೇಲಿಯ ವಿರುದ್ಧದ ಮಹತ್ವದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಡುವರೇ ಎಂಬ ಪ್ರಶ್ನೆಗೆ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಂದ ಬುಧವಾರ ಸ್ಪಷ್ಟ ಉತ್ತರ ಸಿಗಲಿಲ್ಲ. ಬುಧವಾರ ಸಂಜೆ ಅಥವಾ ಗುರುವಾರ ಬೆಳಿಗ್ಗೆ ನಿರ್ಧರಿಸಲಾಗುವುದು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ವೀರೇಂದ್ರ ಸೆಹ್ವಾಗ್ ಚೆನ್ನೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ‘ಬಿ” ಗುಂಪಿನ ಲೀಗ್‌ನ ಕೊನೆಯ ಪಂದ್ಯದಲ್ಲಿ ಆಡಿರಲಿಲ್ಲ. ಅವರ ಮೊಳಕಾಲಿಗೆ ಅಲರ್ಜಿಯಿಂದ ತೊಂದರೆಯಾಗಿತ್ತು. ಸರ್ದಾರ ಪಟೇಲ್ ಕ್ರೀಡಾಂಗಣದಲ್ಲಿ ಅವರು ಮಂಗಳವಾರ ಹಾಗೂ ಬುಧವಾರ ಅಭ್ಯಾಸ ನಡೆಸಿದರಾದರೂ, ಆಸ್ಟ್ರೇಲಿಯ ವಿರುದ್ಧ ಆಡುವ ಬಗ್ಗೆ ಇನ್ನೂ ನಿರ್ಧರಿಸಿರಲಿಲ್ಲ.ವೀರೇಂದ್ರ ಸೆಹ್ವಾಗ್ ಅವರನ್ನು ಬಿಟ್ಟರೆ ಉಳಿದ ಎಲ್ಲ ಆಟಗಾರರಿಗೆ ಯಾವುದೇ ತೊಂದರೆ ಇಲ್ಲ ಎಂದೂ ದೋನಿ ಹೇಳಿದರು.

‘ಆಸ್ಟ್ರೇಲಿಯ ವಿರುದ್ಧ ಗೆಲ್ಲಲು ಮಾನಸಿಕ ಸ್ಥೈರ್ಯದ ಜೊತೆ ಕೌಶಲವೂ ಬೇಕು. ಅವರ ವಿರುದ್ಧ ಭಾರತ ಯಾವಾಗಲೂ ಚೆನ್ನಾಗಿ ಹೋರಾಡಿದೆ. ಈ ಸಲ ಗೆಲ್ಲಲು ಎಲ್ಲ ತಯಾರಿ ಮಾಡಿಕೊಂಡಿದ್ದೇವೆ. ಅವರ ವೇಗದ ದಾಳಿಯ ಬಗ್ಗೆ ನಮಗೇನೂ ಹೆದರಿಕೆ ಇಲ್ಲ. ಅವರನ್ನು ಮಣಿಸಲು ನಮ್ಮ ಆಟಗಾರರು ಸಿದ್ಧರಾಗಿದ್ದಾರೆ’ ಎಂದು ದೋನಿ ಹೇಳಿದರು.‘ಸಚಿನ್ ಅವರ ನೂರನೇ ಶತಕ ನೋಡಲು ನಾವೂ ಕಾಯುತ್ತಿದ್ದೇವೆ. ಅವರೇನೂ ದಾಖಲೆಗಾಗಿ ಆಡುವುದಿಲ್ಲ. ಈಗಾಗಲೇ ಟೂರ್ನಿಯಲ್ಲಿ ಎರಡು ಶತಕಗಳನ್ನು ಹೊಡೆದಿರುವ ಅವರಿಂದ ಗುರುವಾರ ಮತ್ತೊಂದು ಶತಕ ಬಂದರೆ ಅದು ತಂಡಕ್ಕೆ ಬಹಳ ಉಪಯೋಗವಾಗುತ್ತದೆ’ ಎಂದೂ ಅವರು ನುಡಿದರು.ಆಸ್ಟ್ರೇಲಿಯ ನಾಯಕ ರಿಕಿ ಪಾಂಟಿಂಗ್ ಕೂಡ ಸಚಿನ್ ತೆಂಡೂಲ್ಕರ್ ಅವರನ್ನು ಹೊಗಳಿದರು. ಆದರೆ ಅವರಿಗೆ ಶತಕ ಹೊಡೆಯಲು ಬಿಡದೇ ಔಟ್ ಮಾಡುತ್ತೇವೆ ಎಂದು ನಗುತ್ತ ಹೇಳಿದರು. ‘ಭಾರತ ವಿರುದ್ಧದ ಕ್ವಾರ್ಟರ್‌ಫೈನಲ್ ನಮಗೆ ದೊಡ್ಡ ಸವಾಲು. ದೋನಿ 30 ಓವರುಗಳನ್ನು ಸ್ಪಿನ್ನರುಗಳ ಕೈಲಿ ಮಾಡಿಸಿದರೆ, ನಾವು 30 ಓವರುಗಳನ್ನು ವೇಗದ ಬೌಲರುಗಳ ಕೈಲಿ ಮಾಡಿುತ್ತೇವೆ; ಎಂದು ಅವರು ಹೇಳಿದರು.‘ಇದು ಮಿನಿ ಫೈನಲ್ ಎಂದೇನೂ ನಾವು ಭಾವಿಸಿಲ್ಲ. ಆದರೆ ಈ ಹಂತದಲ್ಲಿ ಸೋತರೆ ನಿರಾಶೆಯಾಗುತ್ತದೆ” ಎಂದು ಹೇಳಿದ ಪಾಂಟಿಂಗ್, ‘ಈ ವಿಶ್ವ ಕಪ್ ನಂತರ ನಿವೃತ್ತಿಯಾಗುತ್ತೇನೆ’ ಎಂಬ ಸುದ್ದಿ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.