ಗುರುವಾರ , ಜನವರಿ 30, 2020
22 °C
ಉಡುಪಿ: ವಿದ್ಯಾರ್ಥಿಗಳ ಪ್ರತಿಭಟನೆ

ವೃತ್ತಿಶಿಕ್ಷಣ ಸಂಸ್ಥೆ ಕಾಯ್ದೆ ಜಾರಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ವೃತ್ತಿಪರ ಕೋರ್ಸ್‌ಗಳ ಪ್ರವೇಶ ಮತ್ತು ಶುಲ್ಕ ನಿಗದಿ ಸಂಬಂಧ 2006ರಲ್ಲಿ ರೂಪಿಸಿದ್ದ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆ ಜಾರಿಗೊಳಿಸುವುದನ್ನು ವಿರೋಧಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದ ಸರ್ವೀಸ್‌ ಬಸ್‌ ನಿಲ್ದಾಣದ ಎದುರು ಬುಧವಾರ ಪ್ರತಿಭಟನೆ ನಡೆಸಿದರು.ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ವೃತ್ತಿ ಶಿಕ್ಷಣ ವಂಚಿತರನ್ನಾಗಿ ಮಾಡುವ ಹುನ್ನಾರ­ವನ್ನು ಸರ್ಕಾರ ಮಾಡುತ್ತಿದೆ. ದುರ್ಬಲ ವರ್ಗದ­ವರಿಗೆ ಸಾಮಾಜಿಕ ನ್ಯಾಯ ಒದಗಿಸಲು ವಿಫಲ­ವಾಗುವ ಮತ್ತು ಶೈಕ್ಷಣಿಕ ಹಕ್ಕನ್ನು ಮೊಟಕು­ಗೊಳಿಸುವ ಸರ್ಕಾರದ ನೀತಿ ಖಂಡನೀಯ. ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಈ ಕಾಯ್ದೆ ಜಾರಿಯಾದರೆ ಪ್ರಸ್ತುತ ಸರ್ಕಾರಿ ಕೋಟದಲ್ಲಿರುವ ಎಂಜಿನಿಯರಿಂಗ್‌ನ ಶೇ45, ವೈದ್ಯಕೀಯದ ಶೇ40 ಮತ್ತು ದಂತ ವೈದ್ಯಕೀಯ ಶೇ35ರಷ್ಟು ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಖಾಸಗಿ ಅನುದಾನರಹಿತ ಕಾಲೇಜಿನಲ್ಲಿ ಒಂದೇ ಒಂದು ಸರ್ಕಾರಿ ಕೋಟದ ಸೀಟು ಇರುವುದಿಲ್ಲ. ಕಾಮೆಡ್‌– ಕೆ ನಡೆಸುವ ಪರೀಕ್ಷೆಯ ಬಗ್ಗೆ ಹಲವು ದೂರುಗಳಿವೆ. ಇನ್ನೂ ಉಳಿದ ಸೀಟುಗಳ ಭರ್ತಿಗೂ ಪರೀಕ್ಷೆ ನಡೆಸಲು ಕಾಮೆಡ್‌– ಕೆ ಅವಕಾಶ ನೀಡುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.ಪ್ರವೇಶ ಶುಲ್ಕದ ಮೇಲೆ ಸರ್ಕಾರಕ್ಕೆ ನಿಯಂ­ತ್ರಣ ತಪ್ಪುವುದರಿಂದ ಖಾಸಗಿ ಕಾಲೇಜು­ಗಳು ಬೇಕಾಬಿಟ್ಟಿಯಾಗಿ ಶುಲ್ಕ ವಸೂಲಿ ಮಾಡು­ತ್ತವೆ. ಹೊರ ರಾಜ್ಯದ ವಿದ್ಯಾರ್ಥಿಗಳೂ ಪ್ರವೇಶ ಪರೀಕ್ಷೆ ಬರೆಯುವುದರಿಂದ ರಾಜ್ಯದ ವಿದ್ಯಾರ್ಥಿ­ಗಳಿಗೆ ಅನಾನುಕೂಲವಾಗಲಿದೆ. ಆಯಾ ಕಾಲೇಜುಗಳ ಮೂಲ ಸೌಕರ್ಯಕ್ಕೆ ಅನುಗುಣ­ವಾಗಿ ಶುಲ್ಕ ನಿಗದಿಯಾಗುವುದರಿಂದ ಏಕರೂಪತೆ ಇಲ್ಲದಂತಾ­ಗುತ್ತದೆ ಎಂದರು.ಖಾಸಗಿ ಕಾಲೇಜುಗಳ ಈ ಮೊದಲು ವಾಮ ಮಾರ್ಗದಲ್ಲಿ ಲಕ್ಷಾಂತರ ರೂಪಾಯಿಗೆ ಸೀಟು ಮಾರಾಟ ಮಾಡಿಕೊಳ್ಳುತ್ತಿದ್ದವು. ಈ ಕಾಯ್ದೆ ಜಾರಿಗೆ ಬಂದರೆ ಕಾನೂನುಬದ್ಧವಾಗಿಯೇ ಸೀಟು ಮಾರಾಟ ಮಾಡಲು ಅವಕಾಶ ಸಿಗಲಿದೆ. ಬಡ ಪ್ರತಿಭಾವಂತರು ಅವಕಾಶದಿಂದ ವಂಚಿತರಾಗ­ಲಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.ಎಬಿವಿಪಿಯ ನಗರ ಕಾರ್ಯದರ್ಶಿ ಅಭಿಷೇಕ್‌ ರಾವ್‌, ನಗರದ ವಿವಿಧ ಕಾಲೇಜಿನ ವಿದ್ಯಾರ್ಥಿ­ಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)