ಶನಿವಾರ, ಮೇ 8, 2021
27 °C
ನಿಯಂತ್ರಣಕ್ಕೆ ಬಾರದ ನಿಗೂಢ ಜ್ವರ

ವೆಂಕಟಗಿರಿಕೋಟೆಯಲ್ಲಿ ನೂರಾರು ಮಂದಿ ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳ ಗಡಿಯಲ್ಲಿರುವ ವೆಂಕಟಗಿರಿಕೋಟೆ ಗ್ರಾಮದಲ್ಲಿ ನಿಗೂಢ ವಿಷಮ ಜ್ವರ ಆವರಿಸಿಕೊಂಡಿದ್ದು, 200ಕ್ಕೂ ಹೆಚ್ಚು ಮಂದಿ ಜ್ವರದಿಂದ ಬಳಲುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರೆನ್ನದೇ ಬಹುತೇಕ ಮಂದಿ ಜ್ವರ ಮತ್ತು ತೀವ್ರತರವಾದ ಮೈಕೈ ನೋವಿನಿಂದ ನರಳುತ್ತಿದ್ದು, ಪ್ರಾಣಾಪಾಯಕ್ಕೆ ತುತ್ತಾಗುವ ಭೀತಿ ಎದುರಿಸುತ್ತಿದ್ದಾರೆ. ಕಳೆದ 15 ದಿನಗಳಿಂದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಚಿಕಿತ್ಸೆ ಮತ್ತು ಔಷಧಿ ನೀಡುತ್ತಿದ್ದರೂ ಜ್ವರ ಹರಡುವಿಕೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ.ಪ್ರತಿ ದಿನ ನೂರಕ್ಕೂ ಹೆಚ್ಚು ಮಂದಿ ಸಮೀಪದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವರು ಚಿಕ್ಕಬಳ್ಳಾಪುರ, ದೇವನಹಳ್ಳಿ ಮತ್ತು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ಮುಂದಾಗುತ್ತಿದ್ದಾರೆ. `ಎಷ್ಟೆಲ್ಲ ಗುಳಿಗೆ, ಔಷಧಿ ತೆಗೆದುಕೊಂಡರೂ ಜ್ವರ ಮಾತ್ರ ಕಡಿಮೆಯಾಗುತ್ತಿಲ್ಲ. ಮೊದಲಿಗೆ ಕೆಲವಷ್ಟು ಜನರಿಗೆ ಮಾತ್ರವೇ ಜ್ವರ ಕಾಣಿಸಿಕೊಂಡಿತ್ತು. ಆದರೆ ಈಗ ಗ್ರಾಮ ಪೂರ್ತಿ ಆವರಿಸಿಕೊಂಡಿದೆ. ಯಾರದ್ದೇ ಮನೆಗೆ ಭೇಟಿ ನೀಡಿದರೂ ಇಬ್ಬರು ಅಥವಾ ಮೂವರು ಜ್ವರಪೀಡಿತರು ಸಿಗುತ್ತಾರೆ' ಎಂದು ಗ್ರಾಮಸ್ಥರು ಆತಂಕದಿಂದ ಹೇಳುತ್ತಾರೆ.ಗ್ರಾಮದ ಗಂಗಾಭವಾನಿ (ಅಂಬೇಡ್ಕರ್) ಕಾಲೋನಿಯೊಂದರಲ್ಲೇ ನೂರಕ್ಕೂ ಹೆಚ್ಚು ಜ್ವರಪೀಡಿತರಿದ್ದು, ಒಂದೆರಡು ವರ್ಷದ ಮಕ್ಕಳಿಗೂ ಜ್ವರ ಕಾಡುತ್ತಿದೆ. ಬಹುತೇಕ ಕೂಲಿಕಾರ್ಮಿಕರೇ ವಾಸವಿರುವ ಈ ಕಾಲೋನಿಯಲ್ಲಿ ಸಂಪೂರ್ಣ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಇವತ್ತು ಯಾರಿಗೆ ಜ್ವರ ಬರುತ್ತದೆ ಎಂಬ ಆತಂಕದಲ್ಲೇ ಒಂದೊಂದೇ ದಿನವನ್ನು ಕಳೆಯುತ್ತಿದ್ದಾರೆ. `ಕುಟುಂಬದ ಒಬ್ಬ ಸದಸ್ಯರಿಗೆ ಇವತ್ತು ಜ್ವರ ಬಂದರೆ, ಇನ್ನೆರಡು ದಿನಗಳಲ್ಲಿ ಮಕ್ಕಳು ಸೇರಿದಂತೆ ಕುಟುಂಬದ ಇತರೆ ಸದಸ್ಯರಿಗೂ ಜ್ವರ ಬರುತ್ತದೆಯೆಂದೇ ಅರ್ಥ' ಎನ್ನುತ್ತಾರೆ ಗ್ರಾಮಸ್ಥರು.`ನೂರಾರು ಜನರಲ್ಲಿ ದಿಢೀರನೇ ಜ್ವರ ಕಾಣಿಸಿಕೊಳ್ಳಲು ಏನು ಕಾರಣವೆಂಬುದು ಗೊತ್ತಾಗುತ್ತಿಲ್ಲ. ಚಿಕುನ್‌ಗುನ್ಯಾ ರೀತಿಯಲ್ಲೇ ಜ್ವರ ಮತ್ತು ಮೈಕೈ ನೋವು ಕಾಡುತ್ತಿದೆ. ಒಂದು ಹೆಜ್ಜೆ ನಡೆದಾಡಲು ಆಗುವುದಿಲ್ಲ. ಹಾಸಿಗೆಯಿಂದ ಮೇಲೆ ಏಳಲು ಆಗುವುದಿಲ್ಲ. ನಮ್ಮ ಗ್ರಾಮದಲ್ಲಿ ವಾಸವಿರುವ ಬಹಳಷ್ಟು ಮಂದಿ ಜ್ವರದಿಂದ ಬಳಲುತ್ತಿದ್ದು, ಕೆಲಸಕ್ಕೆ ಹೋಗಿಲ್ಲ. ದುಡಿಮೆಯಿಲ್ಲದೇ ಮತ್ತು ಗುಣಮುಖವೂ ಆಗದೇ ಗ್ರಾಮಸ್ಥರೆಲ್ಲ ಕಂಗಾಲು ಆಗಿದ್ದಾರೆ. ಇದು ಯಾವ ಜ್ವರ ಮತ್ತು ಏಕಕಾಲಕ್ಕೆ ನೂರಾರು ಜನರಿಗೆ ಏಕೆ ಬಂತು ಎಂಬುದರ ಬಗ್ಗೆ ವೈದ್ಯರು ಸಹ ಸರಿಯಾಗಿ ಮಾಹಿತಿ ಕೊಡುತ್ತಿಲ್ಲ' ಎಂದು ಗ್ರಾಮಸ್ಥ ವೆಂಕಟೇಶ್ `ಪ್ರಜಾವಾಣಿ'ಗೆ ತಿಳಿಸಿದರು.`ಕಳೆದ 15 ದಿನಗಳಿಂದ ಬಹಳಷ್ಟು ಜನರಿಗೆ ಜ್ವರ ಕಾಡುತ್ತಿದ್ದರೂ ಯಾರೂ ಜನಪ್ರತಿನಿಧಿ ಅಥವಾ ವೈದ್ಯರಾಗಲಿ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ವಿಷಯ ತಿಳಿದ ನಂತರ ಸ್ಥಳೀಯ ಶಾಸಕರು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿದರು. ಆದರೆ ಜ್ವರ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಎಷ್ಟೇ ಮುಂಜಾಗ್ರತಾ ಕ್ರಮ ವಹಿಸಿದರೂ ಜ್ವರ ಹರಡುವುದು ನಿಲ್ಲುತ್ತಿಲ್ಲ. ಇವತ್ತು ನನ್ನ ಒಂದು ವರ್ಷದ ಮಗಳಿಗೆ ಜ್ವರ ಬಂದಿದ್ದು, ನನಗೆ ದಿಕ್ಕೇ ತೋಚದಂತಾಗಿದೆ. ಇಲ್ಲಿನ ಜ್ವರಪೀಡಿತರನ್ನು ನೋಡಿದರೆ, ಗ್ರಾಮವನ್ನೇ ಬಿಟ್ಟು ಹೋಗಬೇಕಂತ ಅನ್ನಿಸುತ್ತದೆ' ಎಂದು ಅವರು ನೊಂದು ಹೇಳಿದರು.ಜ್ವರಪೀಡಿತರಿಗೆ ಚಿಕಿತ್ಸೆ ನೀಡಲೆಂದೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಬೆಳಿಗ್ಗೆಯಿಂದ ಸಂಜೆಯವರೆಗೆ ಗ್ರಾಮದಲ್ಲೇ ಬೀಡುಬಿಟ್ಟಿದ್ದಾರೆ. ಆದರೆ ಚಿಕಿತ್ಸೆಗೆಂದು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಿಗೆ ಹೋಗುತ್ತಿರುವ ಜ್ವರಪೀಡಿತರು ಪ್ರತಿ ದಿನ 500 ರಿಂದ 700 ರೂಪಾಯಿ ಖರ್ಚು ಮಾಡುತ್ತಿದ್ದಾರೆ. `ಜ್ವರ ಹರಡಿರುವುದನ್ನೇ ನೆಪ ಮಾಡಿಕೊಂಡಿರುವ ಕೆಲ ಕ್ಲಿನಿಕ್‌ಗಳ ವೈದ್ಯರು ಜ್ವರಪೀಡಿತರಿಂದ ದುಬಾರಿ ವೈದ್ಯಕೀಯ ಶುಲ್ಕ ಪಡೆಯುತ್ತಿದ್ದಾರೆ. ಉದ್ದನೆಯ ಚೀಟಿ ಬರೆದುಕೊಟ್ಟು ಇಂತಿಷ್ಟು ಖರ್ಚು ಎಂದು ಹೇಳಿಕೊಂಡು 500 ರಿಂದ 700 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ' ಎಂದು ಗ್ರಾಮಸ್ಥರು ದೂರುತ್ತಾರೆ.ನಿಗೂಢ ಜ್ವರ: `ಈ ಜ್ವರವನ್ನು ಚಿಕುನ್‌ಗುನ್ಯಾ ಅಥವಾ ಡೆಂಗೆ ಎಂಬುದನ್ನು ನಿಖರವಾಗಿ ಹೇಳಲಾಗುತ್ತಿಲ್ಲ. ಇದೊಂದು ರೀತಿಯ ವೈರಸ್ ಜ್ವರ. ಈಡಿಸ್ ಸೊಳ್ಳೆ ಕಚ್ಚುವುದರಿಂದ ಜ್ವರ ಹರಡುತ್ತದೆ. ಜ್ವರ ಪೀಡಿತರ ರಕ್ತಮಾದರಿಗಳನ್ನು ಬೆಂಗಳೂರಿನ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ (ಪಿಎಚ್‌ಐ) ಕಳುಹಿಸಿಕೊಟ್ಟಿದ್ದೇವೆ. ಅಲ್ಲಿಂದ ಇನ್ನೂ ವರದಿ ಬಂದಿಲ್ಲ. ಅಲ್ಲಿಂದ ವರದಿ ಬಂದ ನಂತರವಷ್ಟೇ ಇದು ಯಾವ ಜ್ವರವೆಂದು ಸ್ಪಷ್ಟವಾಗಿ ಹೇಳಲು ಸಾಧ್ಯವಾಗುತ್ತದೆ' ಎಂದು ಕಾರಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಯದುಪತಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.