ಶನಿವಾರ, ಮೇ 28, 2022
26 °C
ಸ್ಥಳೀಯ ಸಂಸ್ಥೆ ಚುನಾವಣೆ: ಖರ್ಚಿನ ವಿವರ ನೀಡದ 337 ಅಭ್ಯರ್ಥಿಗಳು

ವೆಚ್ಚದ ವಿವರ ನೀಡದಿದ್ದರೆ ಅನರ್ಹತೆ: ಚಿಕ್ಕಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: `ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳ 1,776 ಅಭ್ಯರ್ಥಿಗಳ ಪೈಕಿ 337 ಅಭ್ಯರ್ಥಿಗಳು ಇನ್ನೂ ಖರ್ಚಿನ ಲೆಕ್ಕ ನೀಡಿಲ್ಲ. ಅಂತಿಮ ನೋಟಿಸ್‌ಗೂ ವಿವರ ನೀಡದಿದ್ದರೆ ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ಅನರ್ಹಗೊಳಿಸಲಾಗುವುದು' ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಿ.ಆರ್. ಚಿಕ್ಕಮಠ ಎಚ್ಚರಿಸಿದರು.ಆಲಮಟ್ಟಿಯಲ್ಲಿ ಸೋಮವಾರ ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರರ ಸಭೆ ನಡೆಸಿದ ಅವರು ಈ ಮಾಹಿತಿ ನೀಡಿದರು.`ಚುನಾವಣೆಗೆ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ತಾವು ಚುನಾವಣೆಗೆ ಮಾಡಿರುವ ವೆಚ್ಚದ ಮಾಹಿತಿ ಸಲ್ಲಿಸುವುದು ಕಡ್ಡಾಯ. ಈಗಾಗಲೇ ನೀಡಿರುವ ನೋಟಿಸ್‌ಗೆ ಉತ್ತರ ನೀಡದವರಿಗೂ ಮತ್ತೊಮ್ಮೆ ನೋಟಿಸ್ ಜಾರಿ ಮಾಡಬೇಕು. ಅವರಿಂದ ಉತ್ತರ ಪಡೆದು ಇದೇ 30ರ ಒಳಗಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು' ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.`ಚುನಾವಣಾ ಅಧಿಕಾರಿಗಳು ನೀಡುವ ನೋಟಿಸ್‌ಗೆ ಅಭ್ಯರ್ಥಿಗಳು ಸಮರ್ಪಕ ಉತ್ತರ ನೀಡದಿದ್ದರೆ, ಅಂತಿಮವಾಗಿ ರಾಜ್ಯ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗುತ್ತದೆ. ಅದಕ್ಕೂ ಉತ್ತರಿಸದಿದ್ದರೆ ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಅವರನ್ನು ಅನರ್ಹಗೊಳಿಸುವ ಅಧಿಕಾರ ಆಯೋಗಕ್ಕಿದೆ' ಎಂದರು.`ಆಯೋಗ ಅಂತಹ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನ, ಅಧಿಕಾರಿಗಳು ಪ್ರಕ್ರಿಯೆ ಲೋಪವಾಗದಂತೆ ಸಮರ್ಪಕವಾಗಿ ನೋಟಿಸ್ ಜಾರಿ ಮಾಡಬೇಕು' ಎಂದು ಸಲಹೆ ನೀಡಿದರು.`ವಿಜಾಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿದ್ದ 890 ಅಭ್ಯರ್ಥಿಗಳಲ್ಲಿ 130 ಅಭ್ಯರ್ಥಿಗಳು  ಖರ್ಚಿನ ಲೆಕ್ಕ ನೀಡಿಲ್ಲ. ಲೆಕ್ಕಪತ್ರ ನೀಡದ ಎಲ್ಲ ಅಭ್ಯರ್ಥಿಗಳು ಸೋತವರೇ ಆಗಿದ್ದಾರೆ' ಎಂದು ವಿಜಾಪುರ ಜಿಲ್ಲಾಧಿಕಾರಿ ಶಿವಯೋಗಿ ಕಳಸದ ಮಾಹಿತಿ ನೀಡಿದರು.`ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 886 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಅವರಲ್ಲಿ 207 ಅಭ್ಯರ್ಥಿಗಳು ಲೆಕ್ಕ ನೀಡಿಲ್ಲ. ಅವರಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದೆ' ಎಂದು ಬಾಗಲಕೋಟೆ ಜಿಲ್ಲಾಧಿಕಾರಿ ಎಂ. ಕುಂಜಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.