ಗುರುವಾರ , ಜೂನ್ 4, 2020
27 °C

ವೇಗಿಗಳ ಬೀಡು ಕರುನಾಡು...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ವೇಗಿಗಳ ಬೀಡು ಕರುನಾಡು...

ಯಶಸ್ಸು ಯಶಸ್ಸನ್ನು ಹಿಂಬಾಲಿಸುತ್ತದೆ ಎನ್ನುತ್ತಾರೆ...!

ಈ ಮಾತು ಕರ್ನಾಟಕದ ಕ್ರಿಕೆಟ್ ಪಾಲಿಗೆ ನಿಜ ಎನಿಸುತ್ತದೆ. ರಾಷ್ಟ್ರ ಕ್ರಿಕೆಟ್‌ಗೆ ರಾಜ್ಯದ ಕೊಡುಗೆ ಅದ್ಭುತ. ಅದರಲ್ಲೂ ಬೌಲಿಂಗ್‌ನಲ್ಲಿ ಆ ಪಾಲು ಮತ್ತಷ್ಟು ಹೆಚ್ಚು. ಆರಂಭದಲ್ಲಿ ಸ್ಪಿನ್ನರ್‌ಗಳಾದ ಇ.ಎ.ಎಸ್.ಪ್ರಸನ್ನ, ಬಿ.ಎಸ್.ಚಂದ್ರಶೇಖರ್, ಅನಿಲ್ ಕುಂಬ್ಳೆ, ಸುನಿಲ್ ಜೋಶಿ ಅಮೋಘ ಪ್ರದರ್ಶನದ ಮೂಲಕ ಇತಿಹಾಸ ಬರೆದಿದ್ದು ಗೊತ್ತೇ ಇದೆ.

 

ಹಾಗೇ, ವೇಗದ ಬೌಲಿಂಗ್‌ನಲ್ಲಿ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ದೊಡ್ಡ ಗಣೇಶ್ ಹಾಗೂ ಡೇವಿಡ್ ಜಾನ್ಸನ್ ಭಾರತ ತಂಡ ಪ್ರತಿನಿಧಿಸಿ ಮಿಂಚಿದ್ದರು.ಅವರು ನಡೆದ ಹಾದಿಯಲ್ಲಿ ಈಗ ಹೆಜ್ಜೆ ಇಡುತ್ತಿದ್ದಾರೆ ಪ್ರತಿಭಾವಂತ ವೇಗಿಗಳಾದ ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಎಸ್.ಅರವಿಂದ್. ದೇಶಿ ಕ್ರಿಕೆಟ್‌ನಲ್ಲಿ ಯಶಸ್ವಿ ಪ್ರದರ್ಶನ ತೋರುತ್ತಿರುವ ಈ ಬೌಲರ್‌ಗಳು ಭಾರತ ತಂಡದ ಭವಿಷ್ಯದ ತಾರೆಗಳು ಎನಿಸಿದ್ದಾರೆ.

 

ಅಷ್ಟು ಮಾತ್ರವಲ್ಲದೇ, ಶ್ರೀನಾಥ್, ವೆಂಕಿ, ಗಣೇಶ್ ಅವರ ಕಾಲ ಮತ್ತೆ ನೆನಪಾಗಲು ಕಾರಣರಾಗಿದ್ದಾರೆ. ಜೊತೆಗೆ ಪ್ರಸಾದ್, ಶ್ರೀನಾಥ್ ಹಾಗೂ ಕುಂಬ್ಳೆ ಮಾರ್ಗದರ್ಶನ ಇವರ ನೆರವಿಗೆ ಬರುತ್ತಿದೆ.

ಕರ್ನಾಟಕದಿಂದ 1996ರಲ್ಲಿ ರಾಹುಲ್ ದ್ರಾವಿಡ್ ಪದಾರ್ಪಣೆ ಮಾಡಿದ್ದರು.ಬಳಿಕ ಜೋಶಿ,  ಜಾನ್ಸನ್ (1996), ಗಣೇಶ್ (1997) ಹಾಗೂ ವಿಜಯ್ ಭಾರದ್ವಾಜ್ (1999) ಸ್ಥಾನ ಪಡೆದಿದ್ದರು. 2006ರಲ್ಲಿ ರಾಬಿನ್ ಉತ್ತಪ್ಪ ಸ್ಥಾನ ಗಿಟ್ಟಿಸಿದರಾದರೂ ಅದು ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್‌ಗೆ ಸೀಮಿತವಾಗಿತ್ತು.

 

11 ವರ್ಷಗಳ ಅವಧಿಯಲ್ಲಿ ಯಾರೊಬ್ಬರೂ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ. ಆದರೆ ಮಿಥುನ್ 2010ರಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದರು. ಕೆಲವೇ ದಿನಗಳಲ್ಲಿ ವಿನಯ್ ಏಕದಿನ ತಂಡ ಪ್ರವೇಶಿಸಿದರು. ಈಗ ಅರವಿಂದ್ ಸ್ಥಾನ ಗಿಟ್ಟಿಸಿದ್ದಾರೆ. ಕೊನೆಗೂ ಕರ್ನಾಟಕದ ಕ್ರಿಕೆಟಿಗರತ್ತ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯರ ಕಣ್ಣು ಹರಿಯುತ್ತಿದೆ ಎನ್ನುವುದಕ್ಕೆ ಈ ಬೆಳವಣಿಗೆಗಳು ಸಾಕ್ಷಿ. ಆಯ್ಕೆದಾರರ ಕಣ್ಣು ಬಿದ್ದಿದೆ ಎನ್ನುವುದಕ್ಕಿಂತ ಅವರ ದೃಷ್ಟಿಯನ್ನು ತಮ್ಮತ್ತ ಸೆಳೆಯುತ್ತಿದ್ದಾರೆ ಎನ್ನಬಹುದು!`ಈ ವರ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇರಲಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ನಾನು ಪಕ್ಕೆಲುಬು ನೋವಿನಿಂದ ಚೇತರಿಸಿಕೊಂಡಿದ್ದೆ. ಹಾಗಾಗಿ ದೇಶಿ ಕ್ರಿಕೆಟ್‌ನಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ತೋರಿ ಮುಂದಿನ ವರ್ಷ ಸ್ಥಾನ ಪಡೆಯುವ ಗುರಿ ನನ್ನದಾಗಿತ್ತು.

 

ಅದೇನೇ ಇರಲಿ, ಸಿಕ್ಕಿರುವ ಅವಕಾಶವನ್ನು ಸವಾಲಾಗಿ ಸ್ವೀಕರಿಸಿದ್ದೇನೆ. ಅದರಲ್ಲಿ ಯಶಸ್ವಿಯಾಗುವ ಭರವಸೆ ಇದೆ~ ಎಂದು ಅರವಿಂದ್ `ಪ್ರಜಾವಾಣಿ~ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.2009-10ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಫೈನಲ್ ತಲುಪಲು ವಿನಯ್, ಮಿಥುನ್ ಹಾಗೂ ಅರವಿಂದ್ ಕಾರಣ. ಈ ವೇಗಿಗಳ ನೆರವಿನಿಂದ 2010-11ರ ಟೂರ್ನಿಯಲ್ಲಿ ರಾಜ್ಯ ತಂಡ ಸೆಮಿಫೈನಲ್ ಪ್ರವೇಶಿಸಿತ್ತು.

ಎಡಗೈ ಮಧ್ಯಮ ವೇಗದ ಬೌಲರ್ ಅರವಿಂದ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 20 ಪಂದ್ಯಗಳಿಂದ 68 ಕಬಳಿಸಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ್ದರೂ ಅವರ ಪ್ರತಿಭೆಯನ್ನು ಯಾರೂ ಗುರುತಿಸಿರಲಿಲ್ಲ.ಆದರೆ ಐಪಿಎಲ್ ಎಂಬ ಚುಟುಕು ಕ್ರಿಕೆಟ್ ಅವರ ಜೀವನವನ್ನೇ ಬದಲಾಯಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುವ ಅವರು ಐಪಿಲ್ ನಾಲ್ಕನೇ ಅವತರಣಿಕೆಯಲ್ಲಿ 21 ವಿಕೆಟ್ ಪಡೆದಿದ್ದರು. ಇದು ಆಯ್ಕೆದಾರರ ಗಮನ ಸೆಳೆಯಿತು.ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಉದಯೋನ್ಮುಖ ಆಟಗಾರರ ತಂಡದಲ್ಲಿ ಅರವಿಂದ್ ಸ್ಥಾನ ಪಡೆದಿದ್ದರು. ಆದರೆ ಸಿದ್ಧತಾ ಶಿಬಿರದ ವೇಳೆ ಪಕ್ಕೆಲುಬು ನೋವು ಕಾಣಿಸಿಕೊಂಡಿದ್ದರಿಂದ ಆ ಪ್ರವಾಸಕ್ಕೆ ತೆರಳಿರಲಿಲ್ಲ.   `ವಿನಯ್, ಮಿಥುನ್ ಹಾಗೂ ಅರವಿಂದ್ ಭರವಸೆಯ ವೇಗಿಗಳು. ರಾಜ್ಯ ರಣಜಿ ತಂಡದ ಯಶಸ್ಸಿಗೆ ಕಾರಣ ಈ ಮೂರು ಮಂದಿ ಬೌಲರ್‌ಗಳು. ಅವರ ನಡುವೆ ಅತ್ಯುತ್ತಮ ಹೊಂದಾಣಿಕೆ ಇದೆ~ ಎನ್ನುತ್ತಾರೆ ಮಾಜಿ ವೇಗಿ ಜಾವಗಲ್ ಶ್ರೀನಾಥ್.ಬೀದಿಗಳಲ್ಲಿ ಪಕ್ಕದ ಮನೆಯ ಸ್ನೇಹಿತರೊಂದಿಗೆ ಟೆನಿಸ್ ಬಾಲ್ ಕ್ರಿಕೆಟ್ ಆಡಿಕೊಂಡಿದ್ದ ಹುಡುಗ ಇಷ್ಟು ಬೇಗ ಈ ಎತ್ತರಕ್ಕೆ ಬೆಳೆಯಲು ಅವರ ಕಠಿಣ ಪ್ರಯತ್ನ ಕಾರಣ.ಗಾಯದ ಸಮಸ್ಯೆಗಳು ಅವರ ಕನಸಿನ ಹಾದಿಗೆ ಅಡ್ಡಿಯಾಗಲಿಲ್ಲ. ಅದಕ್ಕೆ ಕಾರಣ ಕ್ರಿಕೆಟ್ ಮೇಲಿನ ಪ್ರೀತಿ. ಆ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ ಈಗ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.`ಐಪಿಎಲ್ ಕ್ರಿಕೆಟ್ ನನ್ನ ಜೀವನದ ಟರ್ನಿಂಗ್ ಪಾಯಿಂಟ್. ಅತ್ಯುತ್ತಮ ಆಟಗಾರರ ನಡುವೆ ಮಿಂಚಲು ಅದು ನನಗೆ ವೇದಿಕೆಯಾಯಿತು. ಹಿರಿಯ ಹಾಗೂ ಶ್ರೇಷ್ಠ ಆಟಗಾರರೊಡನೆ ಬೆರೆಯಲು ನೆರವಾಯಿತು. ಅವರ ಮಾರ್ಗದರ್ಶನ ಸ್ಥಿರ ಪ್ರದರ್ಶನ ತೋರಲು ಸಹಾಯವಾಗಿದೆ~ ಎಂದು ಅರವಿಂದ್ ನುಡಿಯುತ್ತಾರೆ.ಜಹೀರ್, ಇಶಾಂತ್, ಎಸ್.ಶ್ರೀಶಾಂತ್ ಗಾಯಗೊಂಡು ಹೊರಗುಳಿದಿರುವ ಕಾರಣ ಯುವ ವೇಗಿಗಳಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಇಂಗ್ಲೆಂಡ್ ಎದುರಿನ ಇತ್ತೀಚಿನ ಸರಣಿಯಲ್ಲಿ ಸೋತು ಸುಣ್ಣವಾಗಿರುವ ಭಾರತದ ಮುಂದೆ ಈಗ ದೊಡ್ಡ ಸವಾಲಿದೆ.

 

ಈ ಸರಣಿಯಲ್ಲಿ ಅರವಿಂದ್ ಸಹಪಾಠಿ ವಿನಯ್ ಕೂಡ ಆಡಲಿದ್ದಾರೆ. 10 ವರ್ಷಗಳ ಬಳಿಕ ರಾಷ್ಟ್ರ ತಂಡದಲ್ಲಿ ರಾಜ್ಯದ ಇಬ್ಬರು ವೇಗಿಗಳು ಕಾಣಿಸಿಕೊಂಡಿದ್ದಾರೆ. 2001ರಲ್ಲಿ ಶ್ರೀನಾಥ್ ಹಾಗೂ ವೆಂಕಿ ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟಿಗೆ ಆಡಿದ್ದರು.ಏಕದಿನ ಕ್ರಿಕೆಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಸ್ಥಾನ ಪಡೆದಿರುವ ಅರವಿಂದ್ ಈ ಅವಕಾಶವನ್ನು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬ ಕುತೂಹಲ ಈಗ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ... 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.