ಮಂಗಳವಾರ, ಏಪ್ರಿಲ್ 20, 2021
29 °C

ವೇಳಾಪಟ್ಟಿ ಬದಲು: ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಣಿಗಲ್: ಕೊಠಡಿಗಳ ಕೊರತೆಯಿಂದ ತರಗತಿಗಳ ವೇಳಾಪಟ್ಟಿ ಬದಲಾಯಿಸಿರುವುದನ್ನು ವಿರೋಧಿಸಿ ಪ್ರಥಮ ದರ್ಜೆ ಕಾಲೇಜಿನ ಬಿಎ, ಬಿಎಸ್ಸಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟಿಸಿದರು.ತಾಲ್ಲೂಕಿನ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2012-13ನೇ ಸಾಲಿಗೆ 1,600ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದು ಕೊಠಡಿಗಳ ಕೊರತೆ ಹೆಚ್ಚಲು ಕಾರಣವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ವಾಣಿಜ್ಯ ವಿಭಾಗದವರಿಗೆ ಬೆಳಿಗ್ಗೆ 8.30ರಿಂದ 12.30ರ ವರೆವಿಗೆ ಹಾಗೂ ಬಿಎ, ಬಿಎಸ್ಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12.30ರಿಂದ 4.30ರ ವರೆಗೆ ಸಮಯ ನಿಗದಿಗೊಳಿಸಿ ವೇಳಾಪಟ್ಟಿ ಪ್ರಕಟಿಸಲಾಯಿತು.ಇದರಿಂದ ಆಕ್ರೋಶಗೊಂಡ ಬಿಎ, ಬಿಎಸ್ಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಕಾಲೇಜಿಗೆ ಬರುತ್ತಿದ್ದು, ಸಂಜೆ ವೇಳೆ ಊರಿಗೆ ತೆರಳಲು ಬಸ್ ಸೌಲಭ್ಯ ಇರುವುದಿಲ್ಲ. ಎಂದಿನಂತೆ ತರಗತಿ ನಡೆಸಬೇಕು ಎಂದು ಆಗ್ರಹಿಸಿದರು.ಪ್ರಭಾರಿ ಪ್ರಾಂಶುಪಾಲ ನರಸಿಂಹನ್ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು. ಈಗ ಇರುವ ವಿದ್ಯಾರ್ಥಿಗಳಿಗೆ ಅನುಗುಣವಾಗಿ ತರಗತಿ ನಡೆಸಲು 29 ಕೊಠಡಿ ಅವಶ್ಯಕತೆ ಇದ್ದು, ಕಾಲೇಜಿನಲ್ಲಿ 17 ಕೊಠಡಿ ಮಾತ್ರ ಲಭ್ಯವಿದೆ. ಪ್ರಸಕ್ತ ಸಾಲಿನ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಹೊರಬಿದ್ದ ನಂತರ ಪದವಿ ತರಗತಿಗಳಿಗೆ ದಾಖಲಾತಿ ಹೆಚ್ಚಾಗುವ ಸಂಭವ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ ಮೇರೆಗೆ ಪ್ರತಿಭಟನೆ ನಿಲ್ಲಿಸಿದರು.ಈ ಸಮಸ್ಯೆ ಪ್ರತಿ ವರ್ಷವೂ ಮುಂದುವರೆಯುತ್ತಿದ್ದು ಶೀಘ್ರ ಬಗೆಹರಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.