ಸೋಮವಾರ, ಜನವರಿ 27, 2020
27 °C

ವೇಶ್ಯಾವಾಟಿಕೆ: ನಾಲ್ವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವೇಕನಗರದ ಈಜಿಪುರದ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.ಕಾರವಾರದ ಜಿತೇಂದ್ರ ಚುಂಚನ್‌ಕರ್ (23), ನೀಲಸಂದ್ರದ ಪ್ರದೀಪ (21), ಆಸ್ಟಿನ್‌ಟೌನ್‌ನ ರಾಜು (22), ನೇಪಾಳದ ಸೋನುತಾಪ (23) ಬಂಧಿತರು. ಆರೋಪಿಗಳಿಂದ 17,500 ರೂಪಾಯಿ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಆರೋಪಿಗಳಾದ ನಾರಾಯಣ ಮತ್ತು ಅಬ್ದುಲ್ ರೆಹಮಾನ್ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಹೃದಯಾಘಾತ: ಪೊಲೀಸ್ ಕಾನ್‌ಸ್ಟೇಬಲ್ ಸಾವು

ಪೆರೇಡ್‌ನಲ್ಲಿ ಭಾಗವಹಿಸಿದ್ದ ಕಾನ್‌ಸ್ಟೇಬಲ್ ಒಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪಡೆ (ದಕ್ಷಿಣ) ಮೈದಾನದಲ್ಲಿ ಗುರುವಾರ ನಡೆದಿದೆ.ಅಶೋಕನಗರ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ್ (37) ಮೃತಪಟ್ಟವರು. ಸಂಚಾರ ಪೂರ್ವ ವಿಭಾಗದ ಸಿಬ್ಬಂದಿಯ ವಾರದ ಪೆರೇಡ್ ಬೆಳಿಗ್ಗೆ ಏಳು ಗಂಟೆಗೆ ನಡೆಯುತ್ತಿತ್ತು. ಸುಮಾರು 600 ಸಿಬ್ಬಂದಿ ಪಾಲ್ಗೊಂಡಿದ್ದರು. ಪೆರೇಡ್ ಮುಕ್ತಾಯ ಹಂತದಲ್ಲಿದ್ದಾಗ ಜನಾರ್ದನ್ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.1997ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ್ದ ಜನಾರ್ದನ್, ಆಡುಗೋಡಿ ಸಂಚಾರ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು.ಮೂರು ತಿಂಗಳ ಹಿಂದೆಯಷ್ಟೇ ಅವರು ಅಶೋಕನಗರ ಸಂಚಾರ ಠಾಣೆಗೆ ವರ್ಗಾವಣೆಗೊಂಡಿದ್ದರು.ಅವಿವಾಹಿತರಾಗಿದ್ದ ಜನಾರ್ದನ್ ವಿವೇಕನಗರದ ಆಸ್ಟಿನ್‌ಟೌನ್‌ನಲ್ಲಿ ನೆಲೆಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮಹಿಳೆ ಸಾವು

ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿನಗರದ ಬಾಲಕೃಷ್ಣ ರಂಗಮಂದಿರದ ಸಮೀಪ ಬುಧವಾರ ರಾತ್ರಿ ನಡೆದಿದೆ.ರಾಜರಾಜೇಶ್ವರಿನಗರದ ಐಡಿಯಮ್ ಹೋಮ್ಸ ಬಡಾವಣೆ ನಿವಾಸಿಯಾಗಿದ್ದ ಡಾ. ಮಾಲಿನಿ (60) ಮೃತಪಟ್ಟವರು. ಮಾಲಿನಿ ಅವರು ಮಗಳು ನಾಗನಿಭಾ ಅವರ ಜತೆ ಔಷಧ ಅಂಗಡಿಗೆ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದಿದೆ. ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮಾಲಿನಿ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಕಾರು ಚಾಲಕ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಮಾಲಿನಿ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿಚಕ್ರ ವಾಹನ ಓಡಿಸುತ್ತಿದ್ದ ನಾಗನಿಭಾ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬ್ಯಾಟರಾಯನಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಜೂಜಾಟ: ಬಂಧನ

ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಗಾಂಧಿನಗರದ ಮನೆಯಲ್ಲಿ ಜೂಜಾಡುತ್ತಿದ್ದ ಹನ್ನೆರಡು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜೆ.ಪಿ. ನಗರದ ಶಾಖಾಂಬರಿನಗರದ ಶಿವರಾಜ್ (42), ಬಿಟಿಎಂ ಮೊದಲನೇ ಹಂತದ ರಫಿ (38), ಶ್ರೀರಾಮಪುರದ ಅಶೋಕ್ (37), ವೆಂಕಟೇಶ್ (50), ಶ್ರೀರಾಮ್ (47), ಗಾಂಧಿನಗರದ ಬಾಬು (29), ರಾಜೇಶ್ (25), ರಾಜರಾಜೇಶ್ವರಿನಗರದ ಪ್ರಕಾಶ್ (35), ದೇವರಜೀವನಹಳ್ಳಿಯ ಪುಟ್ಟಸ್ವಾಮಿ (49) ಮತ್ತು ಮಲ್ಲೇಶ್ವರದ ಎಂ.ಕೆ. ರಾಜು (52) ಬಂಧಿತರು. ಆರೋಪಿಗಳಿಂದ ಒಂದು ಲಕ್ಷ ರೂ., ಹನ್ನೆರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಆಭರಣ ಅಪಹರಣ

ವೃದ್ಧೆಯ ಗಮನ ಬೇರೆಡೆ ಸೆಳೆದ ದುಷ್ಕರ್ಮಿಗಳು 125 ಗ್ರಾಂ ಚಿನ್ನದ ಆಭರಣ ದೋಚಿ ಪರಾರಿಯಾಗಿರುವ ಘಟನೆ ಜಯನಗರದ 9ನೇ ಬ್ಲಾಕ್‌ನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ.ಜೆ.ಪಿ. ನಗರದ ನಿವಾಸಿ ನಾಗವೇಣಿ (62) ಆಭರಣ ಕಳೆದುಕೊಂಡವರು. ಅವರು ಕೆಲಸದ ನಿಮಿತ್ತ ಜಯನಗರಕ್ಕೆ ಬಂದಿದ್ದರು. ಖಾಸಗಿ ಬ್ಯಾಂಕ್‌ವೊಂದರ ಎಟಿಎಂ ಎದುರು ನಿಂತಿದ್ದಾಗ ಬಂದ ಇಬ್ಬರು ದುಷ್ಕರ್ಮಿಗಳು ಪೊಲೀಸರೆಂದು ಪರಿಚಯಿಸಿಕೊಂಡು `ಇದೇ ರಸ್ತೆಯಲ್ಲಿ ಮುಂದೆ ಕೊಲೆಯಾಗಿದೆ. ಆದ್ದರಿಂದ ಆಭರಣಗಳನ್ನು ಬಿಚ್ಚಿಟ್ಟುಕೊಳ್ಳಿ~ ಎಂದಿದ್ದಾರೆ. ಇದನ್ನು ನಂಬಿದ ನಾಗವೇಣಿ ಅವರು ಎಲ್ಲ ಆಭರಣಗಳನ್ನು ಬಿಚ್ಚಿದ ನಂತರ ನೋಡುವುದಾಗಿ ಅವುಗಳನ್ನು ಪಡೆದುಕೊಂಡ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)