ಮಂಗಳವಾರ, ಜೂನ್ 22, 2021
23 °C

ವೈಚಾರಿಕತೆಯಿಂದ ಸಂಸ್ಕೃತಿ ಕಟ್ಟಿದ ಕಾಯ್ಕಿಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಪಾಶ್ಚಿಮಾತ್ಯದ `ಗಾಳಿಗೆ~ ತಮ್ಮನ್ನು ಸಂಪೂರ್ಣವಾಗಿ ತೆರೆದುಕೊಂಡಿದ್ದ ಡಾ. ಗೌರೀಶ ಕಾಯ್ಕಿಣಿ ಅವರು ತಮ್ಮದೇ ಆದ ವೈಚಾರಿಕತೆಗಳನ್ನು ಮಂಡಿಸುವ ಮೂಲಕ ಸಂಸ್ಕೃತಿಯನ್ನು ಕಟ್ಟಿ ಬೆಳೆಸಿದರು” ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ, ವಿಮರ್ಶಕ ಡಾ. ಎಂ.ಜಿ. ಹೆಗಡೆ ಹೇಳಿದರು.

 

ನಗರ ಕೇಂದ್ರ ಗ್ರಂಥಾಲಯ ಸಭಾಭವನದಲ್ಲಿ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು ಸೋಮವಾರ ಹಮ್ಮಿಕೊಂಡಿದ್ದ ಡಾ. ಗೌರೀಶ ಕಾಯ್ಕಿಣಿ ಜನ್ಮಶತಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.“ಧೀಮಂತ ಚೇತನವಾಗಿದ್ದ ಗೌರೀಶ ಕಾಯ್ಕಿಣಿಯವರು ಸೃಷ್ಟಿಸಿದ ವೈಚಾರಿಕತೆಗಳನ್ನೇ ಈಗಿನವರು ಪುನರುತ್ಥಾನ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಪರಿಸರದಲ್ಲಿ ಬೆಳೆದ ಕಾಯ್ಕಿಣಿ, ಆಧುನಿಕತೆಗೆ ತಮ್ಮನ್ನು ತೆರೆದುಕೊಂಡಿದ್ದರು. ಕೊನೆಯ ವರೆಗೂ ಆಧುನಿಕ ಶಿಕ್ಷಣದ ಅಗತ್ಯತೆಯನ್ನು ಪ್ರತಿಪಾದಿಸುತ್ತಿದ್ದರು” ಎಂದು ಹೇಳಿದರು.“ಸ್ವಾತಂತ್ರ್ಯ ಪೂರ್ವದಲ್ಲೇ ರೂಪುಗೊಂಡ ಚಿಂತನೆಗಳ ತಾಕಲಾಟದಲ್ಲಿ ಕಾಯ್ಕಿಣಿಯವರ ವೈಚಾರಿಕತೆ ಹುಟ್ಟಿಕೊಂಡಿತ್ತು. ಆದರೆ, 1950ರ ನಂತರ ಅವರ ವಿಚಾರಧಾರೆಗಳು ಕೃತಿ ರೂಪಗಳಲ್ಲಿ ಪ್ರಕಟಗೊಂಡವು” ಎಂದು ಡಾ. ಹೆಗಡೆ ವಿವರಿಸಿದರು.ಸಮಾರಂಭವನ್ನು ಉದ್ಘಾಟಿಸಿದ ಕವಿ ಡಾ. ಬಿ.ಎ. ಸನದಿ, “ಕಾಯ್ಕಿಣಿಯವರು ಬರೆದಂತಹ ವಿಚಾರವಂತ ಬರಹಗಳನ್ನು ಮತ್ತೆ ಯಾರೂ ಬರೆದಿಲ್ಲ. ಬಂಕಿಕೊಡ್ಲಿನಲ್ಲಿ ಮಾಸ್ತರಿಕೆ ಮಾಡಿದ ಅವರು ಸಾವಿರಾರು ಮಾಸ್ತರರನ್ನು ತಯಾರಿಸಿದರು. ಒಂದು ವಸ್ತುವನ್ನು ಹಿಡಿದರೆ, ಭಾರತೀಯ ಹಾಗೂ ಪಾಶ್ಚಿಮಾತ್ಯ ಹಿನ್ನೆಲೆಯಲ್ಲಿ ಅದನ್ನು ಅಧ್ಯಯನ ನಡೆಸಿ ಬರೆಯುತ್ತಿದ್ದರು” ಎಂದು ಹೇಳಿದರು.“ಕನ್ನಡ ಹಾಗೂ ಮರಾಠಿ ಭಾಷೆಗಳ ಶಬ್ದಗಳ ಆದಾನ- ಪ್ರದಾನಗಳನ್ನು ಹುಡುಕಿ ತೆಗೆದು ಅವುಗಳನ್ನು ಮಂಡಿಸುವ ಮೂಲಕ ಭಾಷಾ ಸಾಮರಸ್ಯವನ್ನು ಬೆಳೆಸುವಂತೆ ಕಾಯ್ಕಿಣಿಯವರು ನನಗೆ ಹಲವು ಬಾರಿ ಸಲಹೆ ನೀಡಿದ್ದರು. ಆದರೆ, ಇಂದಿಗೂ ನನ್ನಿಂದ ಈ ಕೆಲಸ ಆಗಿಲ್ಲ” ಎಂದು ಸನದಿ ಸನ್ಮರಿಸಿಕೊಂಡರು.ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಡಿ.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಜ್ಯೋತಿ ಹೊಸೂರ ವಹಿಸಿದ್ದರು. ಕವಿತಾ ಕುಸಗಲ್ ಭಾವಗೀತೆ ಹಾಡಿದರು. ಎ.ಎ. ಸನದಿ, ಬಿ.ಎಸ್. ಜಗಾಪೂರ, ಸಿ.ಎಂ. ಬೂದಿಹಾಳ ಹಾಜರಿದ್ದರು. ಡಾ. ಎಚ್.ಬಿ. ಕೋಲ್ಕಾರ ನಿರೂಪಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.