ಬುಧವಾರ, ಜನವರಿ 29, 2020
24 °C
ಜಿಲ್ಲೆಯಾದ್ಯಂತ ರೈತ ದಿನಾಚರಣೆ: ಚೌಧರಿ ಚರಣ್‌ಸಿಂಗ್‌ ಸಂಸ್ಮರಣೆ

ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈಜ್ಞಾನಿಕ ಕೃಷಿ ಪದ್ಧತಿ ಅನುಸರಿಸಲು ಸಲಹೆ

ಹಾಸನ: ‘ರೈತರ ಬಗ್ಗೆ ನಿಜವಾದ ಕಾಳಜಿ ಇಟ್ಟುಕೊಂಡು ಅವರ ಶ್ರೇಯಸ್ಸಿಗಾಗಿ ದುಡಿದ ಮುಖಂಡರಲ್ಲಿ ದಿವಂಗತ ಚೌಧರಿ ಚರಣ್ ಸಿಂಗ್ ಪ್ರಮುಖರು. ಇಂಥ ನಾಯಕರನ್ನು ಸ್ಮರಿಸುವುದು ನಮ್ಮ ಕರ್ತವ್ಯ’ ಎಂದು  ಶಾಸಕ   ಎಚ್.ಡಿ. ರೇವಣ್ಣ ನುಡಿದರು.ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಕಂದಲಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಅನುಗನಾಳಿನ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸಂಶೋಧನಾ ಟ್ರಸ್ಟ್‌ಗಳ ಆಶ್ರಯದಲ್ಲಿ ಸೋಮವಾರ ತಾಲ್ಲೂಕಿನ ಬೋಗಾರ ಹಳ್ಳಿಯಲ್ಲಿ ಏರ್ಪಡಿಸಿದ್ದ ರೈತ ದಿನಾಚರಣೆ ಹಾಗೂ ಸಾವಯವ ಕೃಷಿ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ಈಚೆಗೆ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುವುದಿಲ್ಲ. ಜೊತೆಗೆ ಬಿತ್ತನೆ ಬೀಜ, ಗೊಬ್ಬರ ದೊರಕದೆ ರೈತ ವ್ಯವಸಾಯವನ್ನು ತ್ಯಜಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ರೈತರಿಗೆ ಬಡ್ಡಿ ರಹಿತ ಸಾಲ ನೀಡುವ ಬಗ್ಗೆ ಚಿಂತನೆ ನಡೆಸಬೇಕು. ಜೊತೆಗೆ  ಬೆಳೆಗಳಿಗೆ ಉತ್ತಮ ಬೆಲೆ ದೊರಕುವಂತೆ ನೋಡಿಕೊಳ್ಳಬೇಕು’ ಎಂದರು.ಕೃಷಿ ಮಹಾ ವಿದ್ಯಾಲಯದ ಡೀನ್ ಡಾ.ಎಲ್. ಮಂಜುನಾಥ್ ಮಾತನಾಡಿ, ‘ಚೌದರಿ ಚರಣ ಸಿಂಗ್ ಆರು ತಿಂಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡಿದ್ದರೂ, ಆ ಅವಧಿಯಲ್ಲೇ ನಬಾರ್ಡ್‌ ಸ್ಥಾಪನೆಗೆ ಕಾರಣೀಭೂತರಾದರು. ಹಿಂದೆ ಒಕ್ಕಲುತನದಲ್ಲಿ ಇಡೀ ಕುಟುಂಬ ಉದ್ಯೋಗ ಮಾಡುತ್ತಿತ್ತು, ಇಂದು ಒಕ್ಕಲುತನದಿಂದ ಕುಟುಂಬ ಪೋಷಣೆ ಕಷ್ಟವಾಗಿ ಜನರು ವಲಸೆ ಹೋಗುವಂತಾಗಿದೆ’ ಎಂದರು.ಜಿಲ್ಲಾ ಪಂಚಾಯತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಣಗೌಡ,  ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹನುಮೇಗೌಡ, ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕ ಡಾ.ಬಿ.ಎಸ್. ಬಸವರಾಜು, ಡಾ.ಚನ್ನಕೇಶವ, ಅನುಗನಾಳಿನ ಬಿ.ಸಿ.ಆರ್.ಟಿ. ಕಾರ್ಯದರ್ಶಿ ಕೃಷ್ಣಮೂರ್ತಿ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ನಾಗರಾಜು, ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೆಟ್ಟಿ ಮುಂತಾದವರು ಮಾತನಾಡಿದರು.ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಕೆ.ಜೆ. ಕಾಂತರಾಜು, ಡಾ.ಎಚ್.ಕೆ. ಪಂಕಜಾ ಮುಂತಾದವರು ಉಪಸ್ಥಿತರಿದ್ದರು.

ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲಾ ಸ್ವಾಗತಿಸಿದರು. ಡಾ.ಮಂಜುನಾಥಸ್ವಾಮಿ ನಿರೂಪಿಸಿ, ವಂದಿಸಿದರು.ವೈಜ್ಞಾನಿಕ ಕೃಷಿಗೆ ಸಲಹೆ

ಅರಕಲಗೂಡು:
ರೈತರು  ವೈಜ್ಞಾನಿಕ ರೀತಿಯಲ್ಲಿ ಬೇಸಾಯ ನಡೆಸಿದಾಗ ಹೆಚ್ಚಿನ ಇಳುವರಿ ಪಡೆದು ಕೃಷಿಯನ್ನು ಲಾಭದಾಯಕ ಆಗಿಸಿಕೊಳ್ಳಬಹುದು ಎಂದು ಕೃಷಿ ಅಧಿಕಾರಿ ಇಮ್ತಿಯಾಜ್‍ ತಿಳಿಸಿದರು.ತಾಲ್ಲೂಕಿನ ಕಡುವಿನ ಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಕೃಷಿ ಹಾಗೂ ಮಣ್ಣಿನ  ಸಂರಕ್ಷಣೆ ಕುರಿತು ಮಾಹಿತಿ ನೀಡಿದ ಅವರು ಲಘುಪೊಷಕಾಂಶಗಳನ್ನು ತಜ್ಞರ ಸಲಹೆಯಂತೆ ಬಳಸಿ ಭೂಮಿಯ ಫಲವತ್ತತೆ ಹೆಚ್ಚಿಸಿದಾಗ ಗುಣಮಟ್ಟದ ಬೆಳೆ ಬೆಳೆಯಬಹುದು ಎಂದರು. ಆತ್ಮಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಕೆ.ಎಂ. ದರ್ಶನ್ ಇಲಾಖೆಯಿಂದ ರೈತರಿಗೆ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಬಸವೇಶ್ವರ ಪುರುಷ ಸಂಘದ ಸದಸ್ಯರು, ಕೃಷಿ ಅನುವುಗಾರರಾದ ಲೋಕನಾಥ್, ಗಂಗಾಧರ್, ಅರಣ, ರೈತಮುಖಂಡ ಪಾರ್ಥಕುಮಾರ್‍ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಆಧುನಿಕ ಕೃಷಿ ಪದ್ಧತಿ ಬಳಸಲು ಸಲಹೆ

ಬೇಲೂರು:
‘ದೇಶದ ಬೆನ್ನೆಲುಬಾಗಿರುವ ರೈತರಿಗೆ ಸರ್ಕಾರ ಈಗ ನೀಡುತ್ತಿರುವ ಸೌಲಭ್ಯಗಳ ಜೊತೆಗೆ ಮತ್ತಷ್ಟು ಹೊಸ ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಬೇಕು’ ಎಂದು ಶಾಸಕ ವೈ.ಎನ್‌. ರುದ್ರೇಶ್‌ಗೌಡ ಹೇಳಿದರು.ಇಲ್ಲಿನ ಕೃಷಿ ಇಲಾಖೆ ವತಿಯಿಂದ ಸೋಮವಾರ ಏರ್ಪಡಿಸಿದ್ದ ‘ರೈತರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರಿಗೆ ಬಹುಮುಖ್ಯವಾಗಿ ನೀರಾವರಿ ಸೌಲಭ್ಯದ ಅವಶ್ಯಕತೆಯಿದೆ. ಸರ್ಕಾರ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಗಳನ್ನು ಕೈಗೊಂಡು ರೈತರ ಜಮೀನಿಗೆ ನೀರು ಹರಿಸಿದರೆ ರೈತರು ಸೌಲಭ್ಯಕ್ಕಾಗಿ ಸರ್ಕಾರದ ಮುಂದೆ ಕೈಒಡ್ಡದೆ ಸ್ವಾವಲಂಬಿಗಳಾಗುತ್ತಾರೆ ಎಂದರು.ರೈತರು ಬೆಳೆದ ಭತ್ತ ಮತ್ತು ಮೆಕ್ಕೆಜೋಳದ ಬೆಳೆಗಳಿಗೆ ಸರ್ಕಾರ ಬೆಂಬಲ ಬೆಲೆ ನೀಡುತ್ತಿದೆ. ಇದರ ಜೊತೆಗೆ ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆ ನೀಡಿದರೆ ರೈತರ ಬದುಕು ಹಸನಾಗುತ್ತದೆ. ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ರೈತರು ಕೃಷಿ ಇಲಾಖೆಯಿಂದ ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಆಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹೆಚ್ಚಿನ ಇಳುವರಿ ಪಡೆಯಲು ತಿಳಿಸಿದರು.ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಮಂಜುನಾಥ್‌ ಮಾತನಾಡಿ, ಕೇಂದ್ರ ಸರ್ಕಾರ ಆತ್ಮ ಯೋಜನೆಯಡಿ ರೈತರಿಗೆ ನೀಡುತ್ತಿರುವ ಸೌಲಭ್ಯಗಳನ್ನು ಕೃಷಿ ಇಲಾಖೆ ಸಮರ್ಪಕವಾಗಿ ವಿತರಣೆ ಮಾಡಲು ಕ್ರಮ ಕೈಗೊಳ್ಳ ಬೇಕು. ಯಗಚಿ ಜಲಾಶಯದಿಂದ ತಾಲ್ಲೂಕಿನ ಹಳೇಬೀಡು–ಮಾದಿಹಳ್ಳಿ ಹೋಬಳಿಗಳಿಗೆ ನೀರು ಹರಿಸುವ ಕಾಮಗಾರಿ ತ್ವರಿತವಾಗಿ ನಡೆಯುವಂತೆ ಶಾಸಕರು ಗಮನಹರಿಸ ಬೇಕೆಂದು ಒತ್ತಾಯಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ಮಹದೇವಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಡಿ. ಚಂದ್ರೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸುಮಿತ್ರಾ ರುದ್ರಯ್ಯ, ಕಮಲಾ ಚನ್ನಪ್ಪ, ಪವಿತ್ರಾ, ರೈತ ಮುಖಂಡರಾದ ಚನ್ನೇಗೌಡ, ಕುಮಾರ್‌, ವಿರೂಪಾಕ್ಷ, ಆತ್ಮ ಯೋಜನಾಧಿಕಾರಿ ಮಲ್ಲೇಶ್‌, ಸಹಾಯಕ ಕೃಷಿ ನಿರ್ಧೇಶಕ ನಾಗೇಂದ್ರ ಪ್ರಸಾದ್‌ ಇದ್ದರು. ತಾಲ್ಲೂಕಿನಲ್ಲಿ ಉತ್ತಮ ಭತ್ತದ ಇಳುವರಿ ಬೆಳೆದ ರೈತ ಬಿ.ಸಿ. ಮೋಹನ್‌ಕುಮಾರ್‌ ಮತ್ತು ದಾಕ್ಷಾಯಿಣಿ ಅವರನ್ನು ಸನ್ಮಾನಿಸಲಾಯಿತು.ಹೈಬ್ರಿಡ್‌ ಭತ್ತ ಬೆಳೆಯಲು ಸಲಹೆ

ಚನ್ನರಾಯಪಟ್ಟಣ
: ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಧಿಕ ಇಳುವರಿ ನೀಡುವ ಹೈಬ್ರಿಡ್‌ ಭತ್ತ  ಬೆಳೆಯಬೇಕು ಎಂದು ಶಾಸಕ ಸಿ.ಎನ್‌. ಬಾಲಕೃಷ್ಣ ಹೇಳಿದರು.ತಾಲ್ಲೂಕಿನ ಹಿರೀಬಿಳ್ತಿ ಗ್ರಾಮದಲ್ಲಿ ಸೋಮವಾರ ಮಾಜಿ ಉಪಪ್ರಧಾನಿ ಜಗಜೀವನರಾಂ ಸ್ಮರಣಾರ್ಥ ಏರ್ಪಡಿಸಿದ್ದ ರೈತ ದಿನಾಚರಣೆ ಹಾಗೂ ಹೈಬ್ರಿಡ್‌ ಭತ್ತದ ಕ್ಷೇತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಬೆಳೆ ಬೆಳೆಯುವ ಬಗ್ಗೆ ರೈತರು ಕೃಷಿ ವಿಜ್ಞಾನಿಗಳ ಸಲಹೆ ಪಡೆಯಬೇಕು. ಕೃಷಿ ಇಲಾಖೆಯಲ್ಲಿ ಲಭ್ಯ ಇರುವ ಸವಲತ್ತು ಪಡೆದುಕೊಳ್ಳಬೇಕು ಎಂದರು.

ಕಾರೇಕೆರೆ ಕೃಷಿ ಮಹಾವಿದ್ಯಾಲಯದ ಸಹಪ್ರಾಧ್ಯಾಪಕ ಡಾ.ಭೈರಪ್ಪ ಮಾತನಾಡಿ, ಭತ್ತ ಬೆಳೆಯುವ ಕುರಿತು ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಿದರು.ಜಿಲ್ಲಾ ಪಂಚಾಯಿತಿ ಸದಸ್ಯ ಶಿವಶಂಕರ್‌ಕುಂಟೆ ಇದ್ದರು. ರೈತ ಸಂಪರ್ಕಾಧಿಕಾರಿ ಎಚ್‌.ಜಿ. ಜಗದೀಶ್‌ ಸ್ವಾಗತಿಸಿದರೆ, ಆತ್ಮಯೋಜನೆಯ ತಾಂತ್ರಿಕ ವ್ಯವಸ್ಥಾಪಕ ಗುರುದತ್ ವಂದಿಸಿದರು.ಕೃಷಿಗೆ ಚರಣ್‌ಸಿಂಗ್‌ ಕೊಡುಗೆ ಅಪಾರ’

ಹೊಳೆನರಸೀಪುರ
: ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್‌ಸಿಂಗ್‌ ಅವರು ಕೃಷಿ ಉತ್ಪನ್ನಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಿ ಭೂ ಸುಧಾರಣೆ ಕಾಯ್ದೆಗೆ ಹಲವಾರು ಸುಧಾರಣೆಗಳನ್ನು ತಂದು ದೇಶದ ರೈತರಿಗೆ ಅತ್ಯುತ್ತಮ ಕೊಡುಗೆಗಳನ್ನು ನೀಡಿದರು.ಆದ್ದರಿಂದ ಅವರ ಜನ್ಮದಿನಾಚರಣೆಯನ್ನು ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್‌ ಹೇಳಿದರು. ಸೋಮವಾರ ತಾಲ್ಲೂಕಿನ ಹಡವನಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ರೈತರ ದಿನಾಚರಣೆ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.ಪ್ರಾಥಮಿಕ ಕೃಷಿ ಪತ್ತಿನ ಬ್ಯಾಂಕಿನ ಅಧ್ಯಕ್ಷ ದೇವರಾಜು ಮಾತನಾಡಿ ಎಲ್ಲರಿಗಿಂತ ರೈತರ ಜೀವನ ಉತ್ತಮ.  ಆದರೆ ಕಲೆವೊಮ್ಮೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ರೈತರು ಸಂಕಷ್ಟಕ್ಕೆ ಸಿಲುಕಿದಾಗ ಕೃಷಿ ಪತ್ತಿನ ಸಹಕಾರ ಬ್ಯಾಂಕ್‌ ಅವರ ಕೈ ಹಿಡಿಯುತ್ತದೆ.  ರೈತರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿ ಬ್ಯಾಂಕಿನಿಂದ ಇನ್ನೂ ಹೆಚ್ಚಿನ ಸಹಕಾರ ಹಾಗೂ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ತಿಳಿ ಹೇಳಿದರು. ಸಾವಯವ ಕೃಷಿಕ ಹೊಯ್ಸಳ ಎಸ್‌. ಅಪ್ಪಾಜಿ ಮಾತನಾಡಿ ರೈತರು ತಮ್ಮ ಜಮೀನಿಗೆ ಹೆಚ್ಚು ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಕೆ. ಸುಜಾತಾ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮದ ನಿಂಗೇಗೌಡ, ಹುಚ್ಚೇಗೌಡ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ರಾಗಿ ಬೆಳೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಾದೇಶ, ಮಹದೇವಯ್ಯ, ಕಾಳಮ್ಮ ಅವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಿದರು.

ಪ್ರತಿಕ್ರಿಯಿಸಿ (+)