ಮಂಗಳವಾರ, ಮೇ 11, 2021
20 °C

ವೈದ್ಯರ ಕೊರತೆ; ತಾಯಂದಿರ ಯಾತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ತಾಯಂದಿರು ಮತ್ತು ಮಕ್ಕಳು ತೊಂದರೆ ಅನುಭವಿಸಿದ ಘಟನೆ ಗುರುವಾರ ನಗರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯಿತು.ಬಾಗೇಪಲ್ಲಿ, ಗೌರಿಬಿದನೂರು ಸೇರಿದಂತೆ ಬೇರೆ ತಾಲ್ಲೂಕುಗಳಿಂದ ಆಸ್ಪತ್ರೆಗೆ ಮಕ್ಕಳೊಂದಿಗೆ ಆಗಮಿಸಿದ್ದ ತಾಯಂದಿರು ಸಂಕಷ್ಟಕ್ಕೆ ಈಡಾಗಬೇಕಾಯಿತು. ಇಕ್ಕಟ್ಟಾದ ಸ್ಥಳದಲ್ಲಿ ಒಂದೇ ಕಡೆ ದೀರ್ಘಕಾಲದವರೆಗೆ ನಿಲ್ಲಲಾಗದೆ ಮತ್ತು ಕೂರಲಾಗದೆ ಆಯಾಸಗೊಳ್ಳಬೇಕಾಯಿತು.ಜಿಲ್ಲಾ ಆಸ್ಪತ್ರೆಯಲ್ಲಿ ಗುರುವಾರದಂದು ಮಾತ್ರವೇ ಸ್ಕ್ಯಾನಿಂಗ್ ಮತ್ತು ಶಿಶುಗಳಿಗೆ ಚುಚ್ಚುಮದ್ದು ಹಾಕುವ ಸೌಕರ್ಯ ಲಭ್ಯವಿರುವ ಕಾರಣ ಬೇರೆ ಬೇರೆ ತಾಲ್ಲೂಕುಗಳಿಂದ ಮಹಿಳೆಯರು ಬೆಳಿಗ್ಗೆಯೇ ಬಂದಿದ್ದರು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯಿಂದಾಗಿ ಬಹುತೇಕ ಮಂದಿಗೆ ಸ್ಕ್ಯಾನಿಂಗ್ ಸೌಲಭ್ಯ ದೊರೆಯಲಿಲ್ಲ. ಶಿಶುಗಳಿಗೆ ಸಕಾಲಕ್ಕೆ ಚುಚ್ಚುಮದ್ದು ದೊರಕಿಸಲು ಸಾಧ್ಯವಾಗಲಿಲ್ಲ.`ಬಿಸಿಲಲ್ಲಿ ಮಗುವಿಗೆ ಆಯಾಸವಾಗುತ್ತದೆ ಎಂದು ಆಸ್ಪತ್ರೆಗೆ ಬೇಗನೆ ಬಂದೆವು. ಆದರೆ ಇಲ್ಲಿ ನೋಡಿದರೆ, ನಮಗಿಂತ ಮುಂಚೆಯೇ ತುಂಬ ಜನ ಬಂದಿದ್ದಾರೆ. ಸಾಲಲ್ಲಿ ನಿಂತು ಮಗುವಿಗೆ ಚುಚ್ಚುಮದ್ದು ಹಾಕಿಸುವುದರಲ್ಲಿ ಸಾಕುಸಾಕಾಗುತ್ತದೆ. ಆಸ್ಪತ್ರೆಯ ಇಕ್ಕಟ್ಟಾದ ಸ್ಥಳದಲ್ಲಿ ಕೂತುಕೊಳ್ಳಲು ಕುರ್ಚಿಯ ಸೌಲಭ್ಯವೂ ಇಲ್ಲ.ಸೆಖೆಯಿಂದ ಮಗು ಅತ್ತರೆ, ಸುಮ್ಮನಿರಲು ಕಷ್ಟವಾಗುತ್ತದೆ. ವೈದ್ಯರು ಮಕ್ಕಳಿಗೆ ಸಕಾಲಕ್ಕೆ ಚುಚ್ಚುಮದ್ದು ನೀಡಿದರೆ, ಇಂತಹ ಸಮಸ್ಯೆಯೇ ಎದುರಾಗುತ್ತಿರಲಿಲ್ಲ~ ಎಂದು ಪುಷ್ಪಾ `ಪ್ರಜಾವಾಣಿ~ಗೆ  ತಿಳಿಸಿದರು.

`ಪ್ರತಿ ಗುರುವಾರ ಆಸ್ಪತ್ರೆಯಲ್ಲಿ ತಾಯಂದಿರು ಮತ್ತು ಮಕ್ಕಳ ದಟ್ಟಣೆ ದೃಶ್ಯ ಕಾಣಸಿಗುತ್ತದೆ. ಒಂದೆಡೆ ಮಕ್ಕಳು ಅಳುತ್ತಿದ್ದರೆ, ಮತ್ತೊಂದೆಡೆ ತಾಯಿಗೆ ತುಂಬ ಹೊತ್ತಿನವರೆಗೆ ನಿಲ್ಲಲು ಆಯಾಸ ಆಗುತ್ತಿರುತ್ತದೆ.ನಿಗದಿತ ಸಂಖ್ಯೆಯಲ್ಲಿ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿ ನೇಮಕಾತಿಯಾದರೆ, ಈ ರೀತಿ ಸಮಸ್ಯೆಯೇ ಇರುವುದಿಲ್ಲ. ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಈವರೆಗೆ ಭರವಸೆ ದೊರೆತಿದೆಯೇ ಹೊರತು ಅನುಷ್ಠಾನಗೊಂಡಿಲ್ಲ~ ಎಂದು ಆಸ್ಪತ್ರೆ ಸಿಬ್ಬಂದಿಯೊಬ್ಬರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.